Homeಮುಖಪುಟಅಂಬೇಡ್ಕರ್‌ವಾದಿ ಒಲವಿನ ಸಮಾಜವಾದಿ ಬಂಡಾಯಗಾರ ಚಂಪಾ

ಅಂಬೇಡ್ಕರ್‌ವಾದಿ ಒಲವಿನ ಸಮಾಜವಾದಿ ಬಂಡಾಯಗಾರ ಚಂಪಾ

- Advertisement -
- Advertisement -

ಹಾವೇರಿ ಜಿಲ್ಲಾ ಹತ್ತೀಮತ್ತೂರಿನ ಜವಾರಿತನ, ಅವರ ಗುಣವಾಗಿತ್ತು. ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಇಂಗ್ಲಿಷ್ ಸಾಹಿತ್ಯದ ತಿಳಿವಳಿಕೆಯನ್ನು ಗಳಿಸಿಕೊಂಡರಾದರೂ ಕನ್ನಡ ಭಾಷೆಯ ಮೂಲಕ ಬಂದ ಸಂವೇದನೆ ಅವರಲ್ಲಿ ಎಳ್ಳಷ್ಟೂ ಮುಕ್ಕಾಗಿರಲಿಲ್ಲ. ಬದುಕಿನ ಕೊನೆಯ ದಶಕಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ನೆಲೆನಿಂತರಾದರೂ ಅವರ ವ್ಯಕ್ತಿತ್ವದ ಆಂತರ್ಯದಲ್ಲಿ ಧಾರವಾಡದ ಶಾಲ್ಮಲೆ ಹರಿಯುತ್ತಲೇ ಇದ್ದಳು.

ಚಂಪಾ, ನುಡಿದರಾದರೆ ತಂಬೂರಿಯ ತಂತಿ ಮಿಡಿದಂತಲ್ಲ, ಒರಳು ನುಲಿದಂತೆ, ಆಡಿದರಾದರೆ ಮಾತು ಹಸಿಗೋಡೆಗೆ ಹರಳು ನಾಟಿದಂತೆ. ಅವರು ಬರೆದರು. ಮಾತಾಡಿದರು. ಸಂಘಟನೆ ಕಟ್ಟಿದರು. ರಾಜ್ಯ ಸುತ್ತಿದರು. ಗೆಳೆಯರೊಂದಿಗೆ ಗುದ್ದಾಡಿದರು. ಏನೇನೋ ಕಾರಣಕ್ಕೆ ಒದ್ದಾಡಿದರು. ಒಟ್ಟಿನಲ್ಲಿ ಅವರು, ಅವರಂತೆಯೇ ಬಾಳಿದರು. ಚಂಪಾ, ಪ್ರತಿಯೊಂದು ನಡೆನುಡಿಗಳಲ್ಲಿ ವಿಶಿಷ್ಟತೆಯನ್ನು ದಾಖಲಿಸಿದರು.

ಚಂದ್ರಶೇಖರ್ ಪಾಟೀಲರ ತಾಯಿ ಮುರಿಗೆವ್ವ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನವರು. ತಂದೆ ಕೆಸರಳ್ಳಿಯ ಕುಲಕರ್ಣಿ ಮನೆತನದವರು. ಅಪ್ಪನ ಹೆಸರು ಬಸಯ್ಯ ಎಂದಿದ್ದರೆ, ಅಜ್ಜನ ಹೆಸರು ಮಣ್ಣಯ್ಯ, ಮುತ್ತಜ್ಜನ ಹೆಸರು ಕಲ್ಲಯ್ಯ ಎಂದಿತ್ತಂತೆ. “ಹಂಗಾಗಿ ನಮ್ಮ ಮನೆತನ ಅಂದ್ರೆ, ಕಲ್ಲು ಮಣ್ಣು, ಬಯಲು, ಹಿಂಗ ನೆಲದ ಮನೆತನ” ಎನ್ನುತ್ತಿದ್ದರು. ಜಾತಿಯಿಂದ ಜಂಗಮರು, ಹತ್ತು ಹನ್ನೆರಡು ಎಕರೆ ಜಮೀನಿನ ಜಮೀನ್ದಾರರು. ಹೇಳ್ಕೊಳಾಕ ಗೌಡರು ಅಷ್ಟಾ, ಬದುಕಬೇಕಾಗಿತ್ತು ಅಂದ್ರಾ ದುಡೀಲೇ ಬೇಕಿತ್ತು” ಅಂಥಾ ಕುಟುಂಬ. ಹೈಸ್ಕೂಲು ಶಿಕ್ಷಣವನ್ನ ಹಾವೇರಿಯಲ್ಲಿ ಮುಗಿಸಿ, ಎಸ್.ಎಸ್.ಎಲ್.ಸಿ.ಯಲ್ಲಿ ರ್‍ಯಾಂಕ್ ಪಡೆದು, ನಂತರದ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು.

ಧಾರವಾಡದಲ್ಲಿ ತಮಗಿಂತ ಒಂದು ವರ್ಷವಷ್ಟೇ ಜೂನಿಯರ್ ಆಗಿದ್ದ ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜು ಮತ್ತು ಬಿ.ಟಿ.ದೇಸಾಯಿಯವರ ಜೊತೆಗೂಡಿ ’ಕಮಲ ಮಂಡಲ’ ಕಟ್ಟಿಕೊಂಡು ’ಭೃಂಗನಾದ’ ಎಂಬ ಸಂಕಲನವನ್ನು ಪಿ.ಯು.ಸಿ. ದಿನಗಳಲ್ಲೇ ಪ್ರಕಟಿಸಿದ್ದರು. ಪ್ರಿನ್ಸಿಪಾಲರಾಗಿದ್ದ ವಿ.ಕೃ.ಗೋಕಾಕ್ ಅವರಿಂದ ಪಾಠ ಕೇಳಿಸಿಕೊಂಡು ಇಂಗ್ಲಿಷ್ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿಕೊಂಡರು. 1962ರಲ್ಲಿ ಫಸ್ಟ್ ರ್‍ಯಾಂಕ್ ಪಡೆದು, ಎಂ.ಎ. ಫಲಿತಾಂಶ ಬಂದ ಮರುದಿನದಿಂದಲೇ ತಾವು ವಿದ್ಯಾರ್ಥಿಯಾಗಿದ್ದ ಕರ್ನಾಟಕ ಕಾಲೇಜಿನಲ್ಲೇ ಇಂಗ್ಲಿಷ್ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ಈ ನಡುವೆ ’ಬಾನುಲಿ’, ’ಮದ್ಯಬಿಂದು’, ’ಹತ್ತೊಂಬತ್ತು ಕವನಗಳು’ ಸಂಕಲನಗಳನ್ನು ಪ್ರಕಟಿಸಿ 1964ರಲ್ಲಿ ಆರಂಭಿಸಿದ್ದೇ ’ಸಂಕ್ರಮಣ’. ಬಳಿಕ 1968ರಲ್ಲಿ ಕರ್ನಾಟಕ ಕಾಲೇಜಿನಿಂದ ಹೈದರಾಬಾದ್‌ಗೆ ’ಡೆಪ್ಯೂಟ್’ ಆಗಿ, ’ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಇಂಗ್ಲಿಷ್’ ಸಂಸ್ಥೆಯಲ್ಲಿ ’ಡಿಪ್ಲೊಮೋ ಇನ್ ಇಂಗ್ಲಿಷ್ ಸ್ಟಡೀಸ್’ ಮಾಡಿ, ಫಸ್ಟ್ ರ್‍ಯಾಂಕ್ ಪಡೆದರು. ಈ ಮೂಲಕ ಬ್ರಿಟಿಷ್ ಕೌನ್ಸಿಲ್‌ನಿಂದ ಸ್ಕಾಲರ್‌ಶಿಪ್ ಪಡೆದು 1972ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯಕ್ಕೆ ಹೋಗಿ, ಧಾರವಾಡಕ್ಕೆ ಮರಳಿ ವಿಶ್ವವಿದ್ಯಾಲಯದ ಅಧ್ಯಾಪಕನಾಗಿ ಬಡ್ತಿ ಪಡೆದರು. ಅದು 1969ರಿಂದ 1996ರ ವರೆಗಿನ ಸುದೀರ್ಘ ವೃತ್ತಿ ಬದುಕು.

ಇಂಗ್ಲೆಂಡಿಗೆ ಹೋಗುವ ಮೊದಲೇ, ಚಂಪಾ ’ಕೊಡೆಗಳು’, ’ಆಪ್ಪ’, ‘ಕುಂಟಾಕುಂಟಾ ಕುರವತ್ತಿ’, ’ಹಾವು ಬಂತು’, ’ಗುರ್ತಿನವರು’ ನಾಟಕಗಳನ್ನು ಬರೆದಿದ್ದರು. ಇಂಗ್ಲೆಂಡಿನಲ್ಲಿ ಕುಳಿತು ’ಗೋಕರ್ಣದ ಗೌಡಶಾನಿ’, ’ಕತ್ತಲ ರಾತ್ರಿ’ಗಳನ್ನು ಬರೆದರು. ವಿದೇಶದಿಂದ ಮರಳಿದ ಬಳಿಕ ದೇಶವಾಸ್ತವ ಅವರನ್ನು ಚಳವಳಿಗಾರನನ್ನಾಗಿ ಮಾಡಿತು. ನವ್ಯಕವಿ ಚಂಪಾ ರೂಪಿಸುತ್ತಿದ್ದ ಸಂಕ್ರಮಣ ಪತ್ರಿಕೆಯೇ ಅವರನ್ನು ’ಬಂಡಾಯ’ಕ್ಕೆ ಪರಿವರ್ತಿಸಿತು. ನಂಜುಂಡಸ್ವಾಮಿಯವರನ್ನು ಮೊದಲುಗೊಂಡು, ಲಂಕೇಶ್, ದೇವನೂರು, ತೇಜಸ್ವಿ, ಶಂಕ್ರಪ್ಪ ಇವರುಗಳ ಬರೆಹಗಳು ಪತ್ರಿಕೆಯ ಸಂಪಾದಕನನ್ನೇ ತಿದ್ದಿದವು. ಸಮಾಜವಾದಿ ಯುವಜನ ಸಭಾದ ಚಟುವಟಿಕೆಗಳು ಚಂಪಾ ಅವರಲ್ಲಿ ಚಳವಳಿಯ ಬದ್ಧತೆಯನ್ನು ದಟ್ಟವಾಗಿಸಿದವು.

ಸಮಾಜವಾದಿ ಚಳವಳಿಯ ಎಂ.ಡಿ.ನಂಜುಂಡಸ್ವಾಮಿ ಮಾದರಿಯ ಸಮರ್ಥ ವಾಹಕರಾಗಿದ್ದರು ಚಂಪಾ. ಸಾಯಿಬಾಬಾನ ಚಿತ್ರಕ್ಕೆ ಅಸಹ್ಯದ ಅಲಂಕಾರ ಮಾಡಿ ಮೆರವಣಿಗೆ ಮಾಡುವುದು, ಪದವಿಪತ್ರಗಳನ್ನು
ಹರಿದೊಗೆಯುವುದು, ಘಟಿಕೋತ್ಸವದ ಗೌನು ಹರಿದು ಬಿಸಾಡುವುದು, ಈ ಬಗೆಯ ’ಉಗ್ರ’ ಗಾಂಧಿವಾದಿ ಪ್ರತಿಭಟನೆಗಳು ಈ ಮಾದರಿಗೆ ಉದಾಹರಣೆಯಾಗಿದ್ದವು.

’ಜಾತಿ ವಿನಾಶ’ದ ಕಾರಣಕ್ಕಾಗಿ, ಬ್ರಾಹ್ಮಣ್ಯವನ್ನು ವಿರೋಧಿಸುವುದು, ಅಂತರ್ಜಾತಿ ವಿವಾಹ ಆಗುವುದು ಅಥವಾ ಮಾಡಿಸುವುದು ಇವೆಲ್ಲಾ ಈ ಚಳವಳಿಯ ಚಟುವಟಿಕೆಗಳಾದವು. ಸಮಾಜವಾದಿ ಯುವಜನ ಸಭಾ ಈ ಚಳವಳಿಯ ಹಿಂದಿನ ಪ್ರೇರಕ ಸಂಘಟನೆಯಾಗಿತ್ತು.

1972ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ’ವಿಮರ್ಶೆಯ ನೆಲೆಬೆಲೆ’ ವಿಚಾರ ಸಂಕಿರಣ, ಚಂಪಾ ಅವರ ಸಾಹಿತ್ಯಿಕ ಚಳವಳಿಯ ಸುಳಿವುಗಳನ್ನು ಹೊರಹೊಮ್ಮಿಸಿದ ಆರಂಭಿಕ ಬಿಂದು. ಈ ವಿಚಾರಸಂಕಿರಣದಲ್ಲಿ ಅವರು ರಾಜ್ಯದ ಪ್ರಸಿದ್ಧ ಪತ್ರಿಕೆಯಾದ ಪ್ರಜಾವಾಣಿಯು ಬ್ರಾಹ್ಮಣ ಲೇಖಕರ ಹಿಡಿತದಲ್ಲಿದೆ ಎಂದು ಟೀಕಿಸುವ ಮೂಲಕ ಈ ಪತ್ರಿಕೆಗೆ ಬಹಿಷ್ಕಾರ ಹಾಕಲು ಕರೆ ನೀಡಿದ್ದರು. ಈ ಕರೆ ವಿಫಲವಾಗಲಿಲ್ಲ. ಆ ವರ್ಷದ ಪ್ರಜಾವಾಣಿ ವಿಶೇಷಾಂಕದಲ್ಲಿ ಬ್ರಾಹ್ಮಣೇತರ ಲೇಖಕರು ತಮ್ಮ ಬರೆಹಗಳನ್ನು ನೀಡದೇ ಬಹಿಷ್ಕರಿಸಿದ್ದರಿಂದ ಆ ವರ್ಷದ ಸಂಚಿಕೆ ಪ್ರಕಟವಾಗದಿರುವಂತೆ ಮಾಡುವಲ್ಲಿ ಚಂಪಾರ ಹೇಳಿಕೆ ಯಶಸ್ವಿಯಾಗಿತ್ತು. ಬ್ರಾಹ್ಮಣ್ಯದ ವೈಚಾರಿಕ ಪ್ರತಿರೋಧಕ್ಕೆ ಕರ್ನಾಟಕದಲ್ಲಿ ಪರಂಪರೆಯೇ ಇರುವುದಾದರೂ ಆಧುನಿಕ ಸಂದರ್ಭದಲ್ಲಿ ಅದನ್ನು ವಿಸ್ತರಿಸುವಲ್ಲಿ ಪ್ರಧಾನಪಾತ್ರ ವಹಿಸಿದವರು ಚಂಪಾ ಎನ್ನಲೇಬೇಕು. ಚಂಪಾರವರ ಈ ಮಾತು ಸಾಹಿತ್ಯಿಕ ವಲಯದಲ್ಲಿ ಸಂಚಲನವನ್ನೇ ಹುಟ್ಟುಹಾಕಿ ಬರಹಗಾರರ ನಡುವೆ ಬ್ರಾಹ್ಮಣ ಮತ್ತು ಬ್ರಾಹ್ಮಣೇತರರೆಂಬ ಧ್ರುವೀಕರಣಕ್ಕೆ ಕಾರಣವಾಯಿತು ಮಾತ್ರವಲ್ಲ ನಂತರದ ಕೆಲವೇ ದಿನಗಳಲ್ಲಿ ’ಬರಹಗಾರರ ಒಕ್ಕೂಟ’ದ ಪರಿಕಲ್ಪನೆ ಮೊಳಕೆಯೊಡೆದ ಸನ್ನಿವೇಶ ಆದಾಗಿತ್ತು ಎಂಬುದನ್ನೂ ಚಾರಿತ್ರಿಕವಾಗಿ ಗುರುತಿಸಲು ಸಾಧ್ಯವಾಗಬೇಕು. ಬರಹಗಾರರ ಒಕ್ಕೂಟದ ಸ್ಥಾಪನೆ ನಿಶ್ಚಿತವಾಗಿಯೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಒಂದು ಮೈಲಿಗಲ್ಲು ಎನ್ನಲೇಬೇಕು. ವಿಚಾರಕ್ರಾಂತಿಗೆ ಕರೆನೀಡಿದ್ದ ರಾಷ್ಟ್ರಕವಿ ಕುವೆಂಪು ಅವರೇ ಈ ಒಕ್ಕೂಟವನ್ನು ಉದ್ಘಾಟಿಸಿದ್ದು, ಈ ಒಕ್ಕೂಟದ ಆಶಯ ಚಿಂತನೆಗಳಿಗೆ ದೊರೆತ ಬಹುದೊಡ್ಡ ಮಾನ್ಯತೆಯೇ ಆಗಿತ್ತು. ಕುವೆಂಪು ಅವರು ಉದ್ಘಾಟಿಸಿದ ಒಕ್ಕೂಟಕ್ಕೆ ಜಿ.ಎಸ್.ಶಿವರುದ್ರಪ್ಪ ಮೊದಲ ಅಧ್ಯಕ್ಷರಾಗಿದ್ದರೆ, ಚಂಪಾ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎಂಬುದು ಚಂಪಾ ಆ ಹೊತ್ತು ವಹಿಸಿದ್ದ ಚಾರಿತ್ರಿಕ ಪಾತ್ರ ಎಂಥದ್ದು ಎಂಬುದನ್ನು ಮನವರಿಕೆ ಮಾಡಿಕೊಡುತ್ತದೆ. ಬರಹಗಾರರ ಒಕ್ಕೂಟವೇನೋ ಬಹುಕಾಲ ಬಾಳಲಿಲ್ಲವಾದರೂ ಅದು ನಂತರದಲ್ಲಿ ’ಬಂಡಾಯ ಸಾಹಿತ್ಯ ಸಂಘಟನೆ’ಯ ಹುಟ್ಟಿಗೆ ಕಾರಣವಾಗಿ ತನ್ನ ಅಸ್ತಿತ್ವವನ್ನು ಪರಿವರ್ತಿಸಿಕೊಂಡಿತು. ಬಂಡಾಯದ ಸಂದರ್ಭದಲ್ಲಂತೂ ಚಂಪಾ ಪಾತ್ರ ಎದ್ದು ಕಾಣುವಂಥಾದ್ದು.

ಚಂಪಾ ಬರಗೂರು ಜೋಡಿ ಎತ್ತುಗಳಂತೆ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಲು ದುಡಿದರು. ಆದರೆ ಆ ಜೋಡಿನಲ್ಲಿಯೂ ಇದ್ದ ತತ್ವಭೇದ ಅಲ್ಲಿಯೂ ನಡಿಗೆಯನ್ನು ಆಮಟ್ಟಿಗೆ ಕಡಿತಗೊಳಿಸಿತು. ಹಾಗೆ ನೋಡಿದರೆ ಸಾಹಿತ್ಯ ಸಂಘಟನೆಯ ಸಮಾಜವಾದಿ, ಮಾರ್ಕ್ಸ್‌ವಾದಿ, ಅಂಬೇಡ್ಕರ್‌ವಾದಿ, ಗಾಂಧಿವಾದಿ ಚಿಂತನೆಗಳ ಸಂಗಮಸ್ಥಳವಾಗಿ, ಮಹಾವೇದಿಕೆಯಾಗಿ ಚರಿತ್ರೆಯನ್ನೇ ಸೃಷ್ಟಿಸಿದ್ದು, ಭಾರತದ ಸೈದ್ಧಾಂತಿಕ ಮೈತ್ರಿಗಳ ಚರಿತ್ರೆಯಲ್ಲಿಯೇ ಒಂದು ಅತ್ಯುತ್ತಮ ಉದಾಹರಣೆಯಾಗಿತ್ತು. ಇಷ್ಟಾಗಿಯೂ ಬರಗೂರರನ್ನು ಮಾರ್ಕ್ಸ್‌ವಾದಿ, ತಾನು ಸಮಾಜವಾದಿ ಎಂದೇ ಕರೆದು ಕರೆಯಿಸಿಕೊಂಡರು ಚಂಪಾ. ಬಂಡಾಯದಲ್ಲಿ ಮಾರ್ಕ್ಸ್‌ವಾದಿಗಳ ಮೇಲುಗೈ ಆಗಿರುವ ಬಗ್ಗೆ ತೆಗೆದ ಅಪಸ್ವರ, ಮಾರ್ಕ್ಸ್‌ವಾದಿಗಳಿಂದ ಅಂತರ ಕಾಪಾಡಿಕೊಳ್ಳಬೇಕೆಂಬ ಅಂಬೇಡ್ಕರ್‌ವಾದಿಗಳ ’ಎಚ್ಚರ’ದ ಪರಿಣಾಮವಾಗಿ ದಲಿತ ಸಾಹಿತ್ಯ ಎಂಬ ಧಾರೆ ಹೊರಹೊಮ್ಮಿದ್ದನ್ನು ಮರೆಯಲಾಗದು. ಈ ಬಗೆಯ ಬೆಳವಣಿಗೆಗಳ ಪರಿಣಾಮವಾಗಿ ’ಬಹುತ್ವ’ದ ಸಾಮಾನ್ಯ ವೇದಿಕೆಯು ’ಭಿನ್ನತೆ’ಯ ಅಂಗಳವಾಗಿ ಮಾರ್ಪಾಡಾಗುವುದಕ್ಕೆ ಕಾರಣವಾದವು. ಚಂಪಾ ಈ ವಿದ್ಯಮಾನಗಳ ಕೇಂದ್ರದಲ್ಲಿ ಪ್ರಮುಖರಾಗಿದ್ದರು.

ಮೂಲತಃ ಸಮಾಜವಾದಿಯಾಗಿದ್ದ ಚಂದ್ರಶೇಖರ ಪಾಟೀಲರ ಸೈದ್ಧಾಂತಿಕ ನೆಲೆ ಲೋಹಿಯಾವಾದವೇ ಆಗಿದ್ದರೂ ಅವರು ಲೋಹಿಯಾರನ್ನೂ ವಿಮರ್ಶೆಗೊಳಪಡಿಸಿದ್ದರು. ಹಲವು ವಿಷಯಗಳಲ್ಲಿ ’ತಕರಾರು’ಗಳನ್ನೂ, ಭಿನ್ನ ಅಭಿಪ್ರಾಯಗಳನ್ನೂ ಹೊಂದಿದ್ದರು. ಇದು ಆಂತರಿಕ ವಿಮರ್ಶಾಪ್ರಜ್ಞೆಯ ಪರಿಣಾಮವಾಗಿತ್ತು. ಸಮಾಜವಾದಿ ಚಳುವಳಿಯ ಸ್ಥಾಪಕರಲ್ಲೊಬ್ಬರಾದ ಜಯಪ್ರಕಾಶ್ ನಾರಾಯಣ ಅವರ ತುರ್ತು ಪರಿಸ್ಥಿತಿ ಕಾಲದ ರಾಜಕೀಯ ನಿಲುವುಗಳನ್ನು ಅದು ’ಸ್ಟ್ರಾಟಜಿಕ್ ಮಿಸ್ಟೇಕ್’ ಆಗಿತ್ತು. ಎಂದೇ ಚಂಪಾ ವಿಶ್ಲೇಷಿಸುತ್ತಾರೆ. ಆರ್.ಎಸ್.ಎಸ್ ಕೇಂದ್ರದ ಮತೀಯವಾದಿ ಸಿದ್ಧಾಂತವು ದೈತ್ಯ ರಾಜಕೀಯ ಶಕ್ತಿಯಾಗಿ ಬಲಗೊಂಡ ಹಿನ್ನೆಲೆಯಲ್ಲಿ ಜೆ.ಪಿ.ಯವರ ತಪ್ಪು ಅಂದಾಜು ಅದಕ್ಕೆ ಕಾರಣವಾಗಿದ್ದನ್ನು ಸರಿಯಾಗಿಯೇ ಗುರುತಿಸುತ್ತಾರೆ.

ಲೋಹಿಯಾ ಕೇಂದ್ರದ ಸಮಾಜವಾದಿಯಾಗಿದ್ದ ಚಂಪಾ, “ತಾತ್ವಿಕ ಖಚಿತತೆಯಲ್ಲಿ ಅಂಬೇಡ್ಕರರೇ ಲೋಹಿಯಾಗಿಂತ ಹೆಚ್ಚು ಪ್ರಸ್ತುತ” ಎನ್ನಲು ಮುಜುಗರ ಪಡುವುದಿಲ್ಲ. “ಇಂದಿಗೂ ಭಾರತದ ಸಮಾಜ ಕುರಿತಂತೆ ಅಂಬೇಡ್ಕರರ ವಿಶ್ಲೇಷಣೆಯೇ ಸರಿಯಾದದ್ದು ಎನ್ನುವ ಒಲವು ಅವರ ಸೈದ್ಧಾಂತಿಕ ಚಲನೆಯು ಲೋಹಿಯಾವಾದದಿಂದ ಅಂಬೇಡ್ಕರ್‌ವಾದದತ್ತ ಸಾಗಿದ್ದನ್ನು ಸೂಚಿಸುತ್ತದೆ. “ಅಂಬೇಡ್ಕರ್ ತನ್ನ ಜನರ ಉದ್ಧಾರ ಬಹಳ ಮುಖ್ಯ ಎಂದು ರಿಸ್ಕ್ ತೆಗೆದುಕೊಂಡರು, ಆ ರಿಸ್ಕ್ ತೆಗೆದುಕೊಳ್ಳುವ ಪರಿಸ್ಥಿತಿ ಲೋಹಿಯಾರಿಗೆ ಇರಲಿಲ್ಲ” ಎಂದು ವಿಶ್ಲೇಷಿಸುವಲ್ಲಿ ಅವರು ಸ್ವನಿರ್ಮಿತ ಸೈದ್ಧಾಂತಿಕ ಚೌಕಟ್ಟುಗಳನ್ನು ಪ್ರಜ್ಞಾಪೂರ್ವಕವಾಗಿ ಮೀರುವುದು ವ್ಯಕ್ತವಾಗುತ್ತದೆ.

ಗಾಂಧಿವಾದದ ವಿಷಯದಲ್ಲಿಯೂ ಚಂಪಾ ಅವರದು ನಿಷ್ಠುರದ ದನಿ. “ಗಾಂಧಿಯದು ಮೂಲತಃ ಹಿಂದೂ ಮನಸ್ಥಿತಿ, ಆದರೆ ಅವರಲ್ಲಿ ಉದಾರತನವಂತೂ ಇತ್ತು. ಸಮಾನತೆ ಇರಬೇಕು, ಅಸ್ಪೃಶ್ಯತೆ ಹೋಗಬೇಕು ಎಂದು ಹೇಳುತ್ತಿದ್ದರು. ಆದರೆ ಆ ಪ್ರಜ್ಞೆಯೇ ಸಮಸ್ಯಾತ್ಮಕವಾದದ್ದು, ಚಾತುರ್ವಣ್ಯ ಇರಲಿ, ಅಸ್ಪೃಶ್ಯತೆ ಹೋಗಲಿ ಎನ್ನುವುದು ಮೂರ್ಖತನ, ಬೇರು ಇರಲಿ ಟೊಂಗೆ ಕಡೆಯಿರಿ ಎಂದಹಾಗೆ” ಎನ್ನುವುದು ಗಾಂಧಿ ನಿಲುವನ್ನು ಕುರಿತ ಅವರ ನಿಷ್ಠುರದ ಪ್ರತಿಕ್ರಿಯೆ.

“ನನ್ನ ವಿರುದ್ಧ ನಾನಾ ಬಂಡಾಯ ಏಳ್ಳೇಕು. ನನ್ನ ಮೂಲ ಸೈದ್ಧಾಂತಿಕ ಅಡಿಪಾಯ ಅಂತಂದ್ರ ಆದಾ” ಎನ್ನುವ ಚಂಪಾ, “ಬ್ರಾಹ್ಮಣರು ಬ್ರಾಹ್ಮಣ ಪುರೋಹಿತಶಾಹಿಯ ವಿರುದ್ಧ, ಲಿಂಗಾಯತರು ಲಿಂಗಾಯತ ಪುರೋಹಿತಶಾಹಿಯ ವಿರುದ್ಧ ಹೀಗೇ…ಒಕ್ಕಲಿಗರು…” ಎನ್ನುವ ಮೂಲಕ ಒಳಬಂಡಾಯದ ಪ್ರತಿಪಾದಕರೂ ಆಗಿದ್ದರು. ಹಾಗೆಂದೇ ಅವರು ಬೆಂಗಳೂರಿನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಮಟ್ಟದ ಸಮ್ಮೇಳನವನ್ನು ವಿರೋಧಿಸಿ, ವೀರಶೈವ ಗೆಳೆಯ ಕಾರ್ಯಕರ್ತರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಚಂಪಾ ಹುಟ್ಟು ಹಾಕಿದ ಘೋಷಣೆ ಅವರ ತಾತ್ವಿಕ ಖಚಿತತೆಯನ್ನು ಸ್ಪಷ್ಟಪಡಿಸುತ್ತದೆ. ಅದು: “ವೀರಶೈವರಿಗೆ ಧಿಕ್ಕಾರ, ಬಸವಣ್ಣನವರಿಗೆ ಜಯವಾಗಲಿ” ಎಂಬುದಾಗಿತ್ತು.

ಜಾತಿವಿನಾಶ ಕುರಿತಂತೆ, ತಾತ್ವಿಕವಾಗಿ ಗಾಂಧಿ ಮತ್ತು ಲೋಹಿಯಾರಿಗಿಂತ ಅಂಬೇಡ್ಕರರ ಚಿಂತನೆ-ಮಾದರಿಗಳೇ ಹೆಚ್ಚು ಸರಿಯಾದವುಗಳು ಎಂಬ ಖಚಿತ ನಿಲುವನ್ನು ಚಂಪಾ ತಾಳುತ್ತಾರೆ. ಹಾಗೆ ಹೇಳುತ್ತಲೇ, “ಹಿಂದೂ ಆಗಿ ಹುಟ್ಟೀನಿ, ಹಿಂದೂ ಆಗಿ ಸಾಯಲ್ಲ ಅಂದ ಅಂಬೇಡ್ಕರರ ಸಂಕಟ ನನಗಿಲ್ಲ. ಯಾಕಂದ್ರ ವೀರಶೈವ ಅಥವಾ ಲಿಂಗಾಯತ ಧರ್ಮದಲ್ಲಿ ಇದ್ದಂತಹ ಮನುಷ್ಯಾ ನಾನು, ಹಂಗಾಗಿ ನಾನು ಹಿಂದೂ ಅಲ್ಲ” ಎನ್ನುತ್ತಾರೆ. ಈ ಚರ್ಚೆಯ ಮುಂದುವರಿಕೆಯಲ್ಲಿ, “ನಾನು ಹಿಂದೂ ಅಲ್ಲ. ಆದ್ರೆ ಈ ವೀರಶೈವರು ಅಥವಾ ಲಿಂಗಾಯತರು ಹಿಂದೂ ಧರ್ಮದ ಭಾಗ ಅಂತಾ ಯಾರಾದ್ರೂ ಸುಪ್ರೀಂ ಕೋರ್ಟಿನಿಂದ ತೀರ್ಪು ಕೊಟ್ಟರೆ, ಅವತ್ತಾ ನಾನು ಆ ಧರ್ಮಾನೂ ಬಿಟ್ಟುಬಿಡ್ತೀನಿ, ಇದರ ಹಂಗೂ ಬ್ಯಾಡ” ಎಂದು “ಧರ್ಮ”ದ ಹಂಗು ಹರಿದುಕೊಳ್ಳುತ್ತಾರೆ.

ಕನ್ನಡ ಭಾಷಾ ಚಳವಳಿಯನ್ನು ಬಲಪಡಿಸುವಲ್ಲಿ ಚಂಪಾ ವಹಿಸಿದ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಗೋಕಾಕ್ ಚಳವಳಿಯ ಪ್ರಧಾನ ನಾಯಕತ್ವವೇ ಅವರದಾಗಿತ್ತು.
ಗೋಕಾಕ್ ಚಳವಳಿಗೆ ಡಾ.ರಾಜಕುಮಾರ್ ಅವರನ್ನು ಕರೆತರುವಲ್ಲಿ ಅವರ ಪ್ರಯತ್ನವಿತ್ತು. ಆ ನಂತರದಲ್ಲಿ ರಾಜ್ಯದಲ್ಲಿ ಭಾಷಾ ಚಳವಳಿಗೆ ಭಾಷಾಭಿಮಾನ ಮಾತ್ರವಲ್ಲದ ಭಾಷಿಕ ಸಾಂಸ್ಕೃತಿಕತೆಯ ನೆಲೆಯಲ್ಲಿ ಚಳವಳಿಯನ್ನು ಕಟ್ಟುವಲ್ಲಿ ಅವರ ಪ್ರಯತ್ನ ಇದ್ದೇ ಇತ್ತು. ಅಷ್ಟೇ ಅಲ್ಲ, ಕನ್ನಡ ಭಾಷಾ ಚಳವಳಿಯು ಎಂದಿಗೂ ಭಾಷಾಂಧವಾಗದಂತೆ ರೂಪಿಸುವಲ್ಲಿಯೂ ಚಂಪಾ ಕೊಡುಗೆ ನೀಡಿದರು. ಕನ್ನಡ ಧ್ವಜದ ಬಣ್ಣಗಳಿಗೆ ಸಂಬಂಧಿಸಿದಂತೆ ಅವರು ಹೇಳುವಾಗ ಈ ಬಣ್ಣಗಳಿಗೆ ಅರಿಷಿಣ ಕುಂಕುಮ ಇತ್ಯಾದಿ ಯಾವ ಸಾಂಕೇತಿಕ ಅರ್ಥಗಳೂ ಇಲ್ಲ, ಅದೊಂದು ವಿನ್ಯಾಸವಷ್ಟೇ ಎನ್ನುವಲ್ಲಿ, ಹಾಗೂ “ಭುವನೇಶ್ವರಿಯ ಪರಿಕಲ್ಪನೆಯನ್ನು ತಾತ್ವಿಕವಾಗಿ ನಾನು ಒಪ್ಪಲ್ಲ” ಎನ್ನುವಲ್ಲಿ ಅವರಿಗಿದ್ದ ಖಚಿತ ತಿಳಿವಳಿಕೆ ಸಾಮಾನ್ಯವಾದುದೇನಲ್ಲ.

ಬಿ.ಪೀರ್‌ಬಾಷ

ಬಿ.ಪೀರ್‌ಬಾಷ
ಕವಿ, ಲೇಖಕ ಮತ್ತು ಹೋರಾಟಗಾರರಾದ ಬಿ. ಪೀರ್ ಭಾಷರವರು ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯವರಾಗಿದ್ದು ಸದ್ಯ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನೆಲೆಸಿದ್ದಾರೆ‌. ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆಯ ಜೊತೆಗೆ ಹಲವಾರು ಜನಪರ ಚಳವಳಿಗಳಲ್ಲಿ ಸಕ್ರಿಯರಾಗಿದ್ದಾರೆ. ಅಕ್ಕ ಸೀತಾ ನಿನ್ನಂತೆ ನಾನೂ ಶಂಕಿತ ಅವರ ಪ್ರಸಿದ್ದ ಕವನ ಸಂಕಲನವಾಗಿದೆ.


ಇದನ್ನೂ ಓದಿ: ದೇವಸ್ಥಾನಗಳ ಮೇಲೆ ಸರ್ಕಾರದ ನಿಯಂತ್ರಣ ಕೊನೆ ಮಾಡುವ ಹುನ್ನಾರದ ಸುತ್ತ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...