Homeಅಂಕಣಗಳುಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ಗೌರಿ ಕಾರ್ನರ್: ಓರ್ವ ಜನಪರ ನ್ಯಾಯಮೂರ್ತಿಯವರನ್ನು ಕುರಿತು

ತಮ್ಮ ವೃತ್ತಿಜೀವನದ ಉದ್ದಕ್ಕೂ ಜಸ್ಟೀಸ್ ಷಾ ಅವರು ಸಾರ್ವಜನಿಕ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ, ಸಾರ್ವಜನಿಕ ಮತ್ತು ಪ್ರಭುತ್ವ ಹಿತಾಸಕ್ತಿಗಳ ನಡುವಿನ ಸಂಘರ್ಷದಲ್ಲಿ ನಿಸ್ಸಂದೇಹವಾಗಿ ಸಾರ್ವಜನಿಕ ಹಿತಾಸಕ್ತಿಯ ಪರವಾಗಿಯೇ ನಿಂತರು.

- Advertisement -
- Advertisement -

ನಮ್ಮ ಸುತ್ತಲೂ ಈಗ ಎಲ್ಲವೂ ಗಬ್ಬೆದ್ದು ನಾರುತ್ತಿರುವಾಗ, ಓರ್ವ ಪ್ರಾಮಾಣಿಕ ಮತ್ತು ಜನಪರ ನ್ಯಾಯಮೂರ್ತಿಯ ಮನಮುಟ್ಟುವ ಕತೆ ಹೇಳಿದರೆ, ಈ ದೇಶದ ಭವಿಷ್ಯದ ಬಗ್ಗೆ ನಮ್ಮಲ್ಲಿ ಇನ್ನೂ ಉಳಿದಿರುವ ಆಶಾಕಿರಣಗಳು ಜೀವಂತವಾಗಿರಲು ನೆರವಾಗುತ್ತದೆ ಎನಿಸುತ್ತಿದೆ.

ಅವರ ಹೆಸರು ಜಸ್ಟಿಸ್ ಅಜಿತ್ ಪ್ರಕಾಶ್ ಷಾ. ಇತ್ತೀಚಿನತನಕ ದೆಹಲಿ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಷಾ ಅವರು ಮೊನ್ನೆ ನಿವೃತ್ತಿ ಹೊಂದಿದಾಗ ಅವರಿಗೆ ವಿದಾಯ ಸೂಚಿಸಲು, ಧನ್ಯವಾದಗಳನ್ನು ಹೇಳಲು ಸಂಪ್ರದಾಯದಂತೆ ಕೋರ್ಟಿನ ಇತರೆ ನ್ಯಾಯಾಧೀಶರು ಮತ್ತು ವಕೀಲರು ಮಾತ್ರ ಹಾಜರಾಗಿರಲಿಲ್ಲ. ಬದಲಾಗಿ ಅದೆಷ್ಟೋ ಜನಸಾಮಾನ್ಯರು, ನೂರಾರು ಪ್ರಗತಿಪರರು, ಜನಪರ ಹೋರಾಟಗಾರರೂ ಭಾಗಿಯಾಗಿ ಅವರನ್ನು ಬೀಳ್ಕೊಟ್ಟರು.

ನಮ್ಮ ದೇಶದಲ್ಲಿ ನೂರಾರು ನ್ಯಾಯಾಧೀಶರಿರುವಾಗ ಇವರು ಮಾತ್ರ ಇಷ್ಟು ಸ್ಪೆಷಲ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ಜಸ್ಟೀಸ್ ಷಾ ಅವರು ನೀಡಿದ ಬಹಳಷ್ಟು ತೀರ್ಪುಗಳೇ ಕಾರಣ ಎನ್ನಬಹುದು.

ದೆಹಲಿಯ ಸೌಂದರ್ಯಕ್ಕೆ ಅಲ್ಲಿನ ಭಿಕ್ಷುಕರು ಕಪ್ಪುಚುಕ್ಕೆಯಂತಿದ್ದಾರೆ ಎಂದು ಇತ್ತೀಚೆಗೆ ದೆಹಲಿ ಸರ್ಕಾರ ಅವರೆಲ್ಲರನ್ನು ಹಿಡಿದು ಅವರವರ ಮೂಲ ರಾಜ್ಯಗಳಿಗೆ ವಾಪಸ್ಸು ಕಳುಹಿಸಬೇಕೆಂದು ನಿರ್ಧರಿಸಿತು. ಈ ನಿರ್ಧಾರವನ್ನು ಕುರಿತ ವರದಿಗಳು ಪತ್ರಿಕೆಗಳಲ್ಲೂ ಪ್ರಕಟಗೊಂಡವು. ಆದರೆ ದೆಹಲಿ ಸರ್ಕಾರದ ಈ ಕ್ರಮ ಅಮಾನವೀಯವೆಂದು ಕೆಲವರು ಕೋರ್ಟಿನ ಮೆಟ್ಟಿಲೇರಿದರು. ಆ ದೂರಿನ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಅವರು ದೆಹಲಿ ಸರ್ಕಾರದ ವಿರುದ್ಧ ತೀರ್ಪಿತ್ತರು. ಅಷ್ಟೇ ಅಲ್ಲ, ಆ ತೀರ್ಪಿನಲ್ಲಿ “ಭಿಕ್ಷೆ ಬೇಡುವುದು ಅಪರಾಧವಲ್ಲ. ಭಿಕ್ಷುಕರು ಅಪರಾಧಿಗಳಲ್ಲ. ಅಪರಾಧಿಗಳು ನಗರದಲ್ಲಿ ಬಿಂದಾಸಾಗಿ ನೆಲೆಸಬಹುದಾದರೆ ಅಪರಾಧಿಗಳಲ್ಲದ ಮುಗ್ಧ ಭಿಕ್ಷುಕರನ್ನೇಕೆ ನಗರದಿಂದ ಹೊರದಬ್ಬಬೇಕು? ಭಿಕ್ಷುಕರನ್ನು ಬಲವಂತವಾಗಿ ಹೊರದಬ್ಬುವುದು ಮಾನವೀಯತೆ ವಿರೋಧಿ ಅಪರಾಧ” ಎಂದು ಹೇಳಿದರು.

ಕಳೆದ ತಿಂಗಳಲ್ಲಿ ಇಡೀ ಉತ್ತರ ಭಾರತದಾದ್ಯಂತ ಮೈಕೊರೆಯುವ ಚಳಿಯಿಂದ ತತ್ತರಿಸಿ ನೂರಾರು ಜನರು ಸತ್ತುಹೋದರು. ದೆಹಲಿಯಲ್ಲಂತೂ ಉಷ್ಣಾಂಶವು ನಾಲ್ಕು ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯಿತು. ಅಂತಹ ಪರಿಸ್ಥಿತಿ ಇರುವಾಗಲೂ ದೆಹಲಿ ಸರ್ಕಾರ ಪುಶಾ ರಸ್ತೆಯಲ್ಲಿರುವ ಬಡಜನರ ಗುಡಿಸಲುಗಳನ್ನು ಧ್ವಂಸ ಮಾಡಿ ಅವರನ್ನು ಬೀದಿಪಾಲು ಮಾಡಿತು. ಕಾರಣ ಇಷ್ಟೇ: ಇನ್ನು ಹತ್ತು ತಿಂಗಳುಗಳಲ್ಲಿ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಗಳು ನಡೆಯಲಿದ್ದು, ಈ ಕ್ರೀಡಾಕೂಟಕ್ಕೆ ದೇಶವಿದೇಶಗಳಿಂದ ಬರುವ ಜನ ನಮ್ಮ ಬಡವರ ಗುಡಿಸಲುಗಳನ್ನು ನೋಡಿದರೆ ’ಮಹಾನ್’ ಭಾರತಕ್ಕೆ ಅವಮಾನವಾಗುತ್ತದೆ ಎಂದು. ಹಾಗಾಗಿ ಜೆಸಿಬಿ ಯಂತ್ರಗಳನ್ನು ಕಳುಹಿಸಿ ಆ ಗುಡಿಸಲುಗಳನ್ನು ನೆಲಸಮ ಮಾಡಿ ದಹಲಿಯ ’ಅಂದ’ವನ್ನು ಹೆಚ್ಚಿಸಿದರು. ಬಡತನ ನಿರ್ಮೂಲನೆ ಬಗ್ಗೆ ಇದು ಅಲ್ಲಿನ ಸರ್ಕಾರದ ಸೂತ್ರ.

ಹೀಗೆ ಬಡವರ ಗುಡಿಸಲುಗಳನ್ನು ಧ್ವಂಸ ಮಾಡಿ ಅವರನ್ನೆಲ್ಲ ಚಳಿಗಾಲದಲ್ಲಿ ಬೀದಿ ಪಾಲು ಮಾಡಿದ್ದರ ಕುರಿತೂ ಪತ್ರಿಕೆಗಳು ವರದಿ ಮಾಡಿದವು. ಅದನ್ನು ನೋಡಿದ್ದೇ ತಡ ಜಸ್ಟೀಸ್ ಷಾ ಅವರು ಯಾವ ಅರ್ಜಿಗೂ ಕಾಯದೇ “ಯಾರ್‍ಯಾರ ಗುಡಿಸಲುಗಳನ್ನು ನೆಲಸಮ ಮಾಡಲಾಗಿದೆಯೋ ಅವರೆಲ್ಲರಿಗೂ ಕೂಡಲೇ ಮನಕಟ್ಟಿಸಿಕೊಡಬೇಕು” ಎಂದು ದೆಹಲಿ ಮುನಿಸಿಪಲ್ ಕಾರ್ಪೋರೇಷನ್‌ಗೆ ಆದೇಶ ಕೊಟ್ಟರು.

ತಮ್ಮ ವೃತ್ತಿಜೀವನದ ಉದ್ದಕ್ಕೂ ಜಸ್ಟೀಸ್ ಷಾ ಅವರು ಸಾರ್ವಜನಿಕ ಮತ್ತು ಬಂಡವಾಳಶಾಹಿ ಹಿತಾಸಕ್ತಿಗಳ ನಡುವೆ, ಸಾರ್ವಜನಿಕ ಮತ್ತು ಪ್ರಭುತ್ವ ಹಿತಾಸಕ್ತಿಗಳ ನಡುವಿನ ಸಂಘರ್ಷದಲ್ಲಿ ನಿಸ್ಸಂದೇಹವಾಗಿ ಸಾರ್ವಜನಿಕ ಹಿತಾಸಕ್ತಿಯ ಪರವಾಗಿಯೇ ನಿಂತರು. ಕಳೆದ ವರ್ಷದ ಕೊನೆಯ ಭಾಗದಲ್ಲಿ ಅಪೊಲೋ ಆಸ್ಪತ್ರೆ ಮತ್ತು ಸರ್ಕಾರೇತರ ಸಂಘಟನೆಯ ನಡುವೆ ಹನ್ನೆರಡು ವರ್ಷಗಳಿಂದ ನಡೆಯುತ್ತಿದ್ದ ವ್ಯಾಜ್ಯದ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಅವರು ಒಂದು ಮಹತ್ವಪೂರ್ಣ ತೀರ್ಪನ್ನಿತ್ತರು. “ಆರೋಗ್ಯ ಎಂಬುದು ಒಂದು ಮೂಲಭೂತ ಹಕ್ಕು. ಅದನ್ನು ಯಾರೂ ನಿರಾಕರಿಸುವಂತಿಲ್ಲ ಎಂದು ಆದೇಶ ಕೊಟ್ಟರಲ್ಲದೇ, ಅಪೊಲೋ ಆಸ್ಪತ್ರೆಯ ಶೇ.33ರಷ್ಟು ಹಾಸಿಗೆಗಳನ್ನು ಹಾಗೂ ಹೊರರೋಗಿ ಸೇವೆಯ ಶೇ.44ರಷ್ಟು ಹಾಸಿಗೆಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸಬೇಕೆಂದು ತಾಕೀತು ಮಾಡಿದರು.

ಅವರು ದಹಲಿಯ ಮುಖ್ಯ ನ್ಯಾಯಾಧೀಶರಾಗುವ ಮುನ್ನ ಮುಂಬೈ ಹೈಕೋರ್ಟಿನ ನ್ಯಾಯಮೂರ್ತಿಗಳಾಗಿದ್ದಾಗಲೂ ಮಹತ್ವದ ತೀರ್ಪುಗಳನ್ನು ನೀಡಿದ್ದರು. ಉದಾಹರಣೆಗೆ “ಯಾವುದೇ ರಾಜಕೀಯ ಪಕ್ಷ ಬಂದ್ ಕರೆನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಏಕೆಂದರೆ ಅದು ಮುಂಬೈ ಜನತೆಯ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುತ್ತದೆ” ಎಂದಿದ್ದ ಅವರು, ಬಲವಂತದ ಬಂದ್ ಆಚರಿಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಬಿಜೆಪಿ ಮತ್ತು ಶಿವಸೇನೆಗೆ ಇಪ್ಪತ್ತು ಲಕ್ಷ ರೂಪಾಯಿಗಳ ದಂಡ ವಿಧಿಸಿದ್ದರು. ಜೊತೆಗೆ ಆ ಹಣ ಸಾರ್ವಜನಿಕ ಅಭಿವೃದ್ಧಿಗೆ ಬಳಕೆ ಆಗಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿದ್ದರು.

ಒಮ್ಮೆ ಪಂಜಾಬ್‌ನ ಭಯೋತ್ಪಾದನೆಯ ಕುರಿತ ಚಲನಚಿತ್ರವನ್ನು ಮತ್ತು ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಆನಂದ್ ಪಟವರ್ಧನ್‌ರ ’ರಾಮ್ ಕೆ ನಾಮ್’ ಸಾಕ್ಷ್ಯಚಿತ್ರವನ್ನು ದೂರದರ್ಶನ ಪ್ರಸಾರ ಮಾಡದಂತೆ ಮಹಾರಾಷ್ಟ್ರ ಸರ್ಕಾರ ಷಡ್ಯಂತ್ರ ನಡೆಸಿತ್ತು. ಅದನ್ನು ತೀವ್ರವಾಗಿ ಖಂಡಿಸಿದ ಜಸ್ಟೀಸ್ ಷಾ ಅವರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ತೀರ್ಪಿತ್ತು ಆ ಎರಡೂ ಚಿತ್ರಗಳ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದ್ದರು.

ಅವರ ಇನ್ನೊಂದು ತೀರ್ಪು 30 ಅಮಾಯಕ ಮುಟ್ಟಪುಟ್ಟ ಮಕ್ಕಳಿಗೆ ಹೊಸ ಪ್ರಪಂಚವನ್ನು ತೆರೆದಿತ್ತು. ಮುಂಬೈನ ಬೈಖಲಾ ಜೈಲಿನಲ್ಲಿ ಮೂವತ್ತು ಪುಟ್ಟ ಮಕ್ಕಳು ತಮ್ಮ ತಾಯಂದಿರೊಂದಿಗೆ ಇದ್ದರು. ಅವರಲ್ಲಿ ಬಹುತೇಕರು ಎಂದೂ ಜೈಲುಕೋಣೆಯ ಆಚೆಗಿನ ಪ್ರಪಂಚವನ್ನೇ ನೋಡಿರಲಿಲ್ಲ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಜಸ್ಟೀಸ್ ಷಾ ಜೈಲು ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ನಿರ್ಮಿಸಲಾಗಿರುವ ಕ್ವಾಟ್ರಸ್ ಬಳಿಯೇ ಈ ಮಕ್ಕಳಿಗೂ ಓದುವುದಕ್ಕೆ ಅಂಗನವಾಡಿ ತೆರೆಯಬೇಕೆಂದೂ, ಜೈಲು ಆಡಳಿತ ವರ್ಗವೇ ಈ ಮಕ್ಕಳಿಗೆ ಆಟದ ಸಾಮಗ್ರಿಗಳನ್ನು, ಪೀಠೋಪಕರಣಗಳನ್ನು ಒದಗಿಸಬೇಕೆಂದೂ, ಮಕ್ಕಳಿಗೆ ಕಲಿಸುವುದಕ್ಕಾಗಿ ಬರುವ ಟೀಚರ್‌ಗಳಿಗೆ ಸಂಬಳವನ್ನು ಸರ್ಕಾರ ಭರಿಸಬೇಕೆಂದೂ ತೀರ್ಪಿತ್ತಿದ್ದರೆಂದರೆ ಅವರದ್ದು ಅದೆಂಥ ಸಂವೇದನಾಶೀಲ ಮನಸ್ಸಿರಬೇಕು ಯೋಚಿಸಿ.

ಜಸ್ಟೀಸ್ ಷಾ ಅವರು ಮದ್ರಾಸ್ ಹೈಕೋರ್ಟಿನಲ್ಲಿ ಎರಡು ವರ್ಷಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದಾಗಲೂ ಅವರು ಕೌಟುಂಬಿಕ ನ್ಯಾಯಾಲಯದಲ್ಲಿ ಮಕ್ಕಳ ಕೇಂದ್ರವನ್ನು, ಜಿಲ್ಲಾ ಕೇಂದ್ರಗಳಲ್ಲಿ ಸಂಧಾನ ಕೇಂದ್ರಗಳನ್ನು ಹಾಗೂ ನ್ಯಾಯಾಧೀಶರಿಗಾಗಿ ವಿಕೇಂದ್ರೀಕೃತ ತರಬೇತಿ ಶಿಬಿರಗಳನ್ನು ಸ್ಥಾಪಿಸುವ ಮೂಲಕ ನ್ಯಾಯಾಂಗ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸುಧಾರಣಾ ಕ್ರಮಗಳಿಗೆ ಪ್ರಯತ್ನಿಸಿದ್ದರು.

ಷಾ ಅವರು ನೀಡಿದ ತೀರ್ಪುಗಳಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಸಾರ್ವಜನಿಕ-ಮಾಧ್ಯಮ ಚರ್ಚೆಗೆ ಗ್ರಾಸವಾಗಿದ್ದು ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 377 ಪ್ರಕಾರ ಸಲಿಂಗಕಾಮ ಅಪರಾಧವಲ್ಲ ಎಂಬ ಚಾರಿತ್ರಿಕ ತೀರ್ಪು. ನೂರೈವತ್ತು ವರ್ಷಗಳಿಂದ ಭಾರತದಲ್ಲಿ ಸಲಿಂಗಕಾಮದ ಮೇಲೆ ಹೇರಿರುವ ನಿರ್ಬಂಧ ವಾಸ್ತವದಲ್ಲಿ ತಾರತಮ್ಯದಿಂದ ಕೂಡಿದ್ದರಿಂದ ಅದು ಪ್ರಜೆಗಳ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ತೀರ್ಪಿನಲ್ಲಿ ಹೇಳಿದ್ದರು. ಹೀಗೆ ಈ ಚಾರಿತ್ರಿಕ ತೀರ್ಪಿನ ಮೂಲಕ ಜಸ್ಟೀಸ್ ಷಾ ಅವರು ಲೈಂಗಿಕ ವಿಚಾರವು ವ್ಯಕ್ತಿಯೊಬ್ಬನ/ಳ ವೈಯಕ್ತಿಕ ಆಯ್ಕೆಗೆ ಸಂಬಂಧಪಟ್ಟ ವಿಚಾರ ಎಂಬ ಮೂಲಭೂತ ವ್ಯಕ್ತಿಸ್ವಾತಂತ್ರ್ಯವನ್ನು, ಪ್ರಜಾತಾಂತ್ರಿಕ ನಿಲುವನ್ನು ಎತ್ತಿಹಿಡಿದಿದ್ದರು.

ಇಷ್ಟೊಂದು ಜನಪರವಾಗಿದ್ದ, ಪ್ರಗತಿಪರವಾಗಿದ್ದ, ನ್ಯಾಯಮೂರ್ತಿಯಾಗಿ ನಿಜಕ್ಕೂ ನ್ಯಾಯ ಒದಗಿಸುತ್ತಿದ್ದ ಜಸ್ಟೀಸ್ ಷಾ ಅವರಿಗೆ ಸುಪ್ರೀಂಕೋರ್ಟಿನ ನ್ಯಾಯಾಧೀಶರಾಗುವುದಕ್ಕೆ ಎಲ್ಲಾ ಅರ್ಹತೆಗಳಿದ್ದರೂ ಅವರನ್ನು ಆ ಸ್ಥಾನಕ್ಕೆ ಯಾರೂ ಪರಿಗಣಿಸಲೇ ಇಲ್ಲ. ಅದರ ಬಗ್ಗೆ ಜಸ್ಟೀಸ್ ಷಾ ಹೀಗೆ ಹೇಳಿದ್ದಾರೆ: “ನನಗೆ ಆಗಿರುವ ನೋವನ್ನು ಬಚ್ಚಿಟ್ಟು ನನಗೆ ನೋವೇ ಆಗಿಲ್ಲ ಎಂದು ನಾನು ನಾಟಕ ಮಾಡುವುದಿಲ್ಲ. ನೋವು ಆಗಿದ್ದು ನಿಜ. ಆದರೆ ಆ ನೋವು ನ್ಯಾಯಕ್ಕಾಗಿನ ನನ್ನ ಬದ್ಧತೆಯನ್ನು ಎಂದೂ ಕಡಿಮೆ ಮಾಡಲಿಲ್ಲ. ಈಗ ನನ್ನ ಮಟ್ಟಿಗದು ಮುಗಿದ ಅಧ್ಯಾಯ. ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯೇ ದೋಷಪೂರಿತವಾಗಿದೆ. ಅಮೆರಿಕ, ಬ್ರಿಟನ್‌ಗಳಂಥ ಮುಂದುವರಿದ ದೇಶಗಳಲ್ಲಿ ನ್ಯಾಯಾಧೀಶರ ನೇಮಕ ಬಹಳ ಮುಕ್ತವಾಗಿ, ಪಾರದರ್ಶಕವಾಗಿ ನಡೆಯುತ್ತದೆ. ಆದರೆ ನಮ್ಮಲ್ಲಿ ಅದು ಮುಚ್ಚಿದ ಕೋಣೆಯೊಳಗೆ ನಡೆಯುತ್ತದೆ. ಇದು ಬದಲಾಗಬೇಕು.”

(ಮಾರ್ಚ್ 3, 2010ರಂದು ಗೌರಿಯವರು ಬರೆದ ಕಂಡಹಾಗೆ ಅಂಕಣದ ಆಯ್ದ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಮರೆಮಾಚಿದ ಇತಿಹಾಸದ ಬಗ್ಗೆ….

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...