ಪರಿಷ್ಕತ ಪಠ್ಯ ಪುಸ್ತಕದಿಂದ ತಮ್ಮ ಹೆಸರು ತೆಗೆಯುವಂತೆ ರಾಜಕೀಯ ಚಿಂತಕರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್ ಅವರು ಸೋಮವಾರ ಎನ್‌ಸಿಇಆರ್‌ಟಿಗೆ ಪತ್ರ ಬರೆದಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆಯಿಂದ ತಮ್ಮನ್ನು ಹೊರಗಿಟ್ಟ ಬಳಿಕವೂ, ಪರಿಷ್ಕೃತ ಪುಸ್ತಕದ ಲೇಖಕರ ಪಟ್ಟಿಯಲ್ಲಿ ಹೆಸರು ಇರುವುದಕ್ಕೆ ಇಬ್ಬರೂ ಆಕ್ಷೇಪ ವ್ಯಕ್ತಪಡಿಸಿದ್ದು, ಹೆಸರು ಕೈ ಬಿಡದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
“ರಾಜಕೀಯವಾಗಿ ಪಕ್ಷಪಾತದ ನಿಲುವು ಹೊಂದಿರುವ, ಶೈಕ್ಷಣಿಕವಾಗಿ ಅಸಮರ್ಥನೀಯ ಹಾಗೂ ಶಿಕ್ಷಣಶಾಸ್ತ್ರೀಯವಾಗಿ ನಿಷ್ಕ್ರಿಯವಾಗಿರುವ ರಾಜಕೀಯ ವಿಜ್ಞಾನದ ಪಠ್ಯಗಳನ್ನು ಸಮರ್ಥಿಸಿಕೊಳ್ಳುವ ಉದ್ದೇಶದಿಂದ ತಮ್ಮ ಹೆಸರನ್ನು ಎನ್‌ಸಿಇಆರ್‌ಟಿ ಬಳಸಿಕೊಳ್ಳುವುದು ಬೇಕಿಲ್ಲ” ಎಂದು ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ರಾಜ್ಯಶಾಸ್ತ್ರ ಪಠ್ಯಪುಸ್ತಕಗಳ ಮಾಜಿ ಮುಖ್ಯ ಸಲಹೆಗಾರರಾದ ಪಾಲ್ಶಿಕರ್ ಮತ್ತು ಯಾದವ್ ಅವರು ಕಳೆದ ವರ್ಷ ಪುಸ್ತಕಗಳಿಂದ ತಮ್ಮ ಹೆಸರು ಕಿತ್ತು ಹಾಕುವಂತೆ ಕೋರಿದ್ದರು. ಒಮ್ಮೆ ಹೆಮ್ಮೆಯ ಪ್ರತೀಕವಾಗಿದ್ದ ಪಠ್ಯಪುಸ್ತಕಗಳು ಇಂದು ಮುಜುಗರಕ್ಕೆ ಮೂಲವಾಗುತ್ತಿವೆ. ನಮ್ಮ ಆಕ್ಷೇಪಗಳ ಹೊರತಾಗಿಯೂ, ಪರಿಷ್ಕೃತ ಪಠ್ಯಗಳಲ್ಲಿ ನಮ್ಮ ಹೆಸರನ್ನು ಮುಖ್ಯ ಸಲಹೆಗಾರರು ಎಂದು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ಪಠ್ಯಪುಸ್ತಕಗಳ ಪರಿಷ್ಕೃತ ಆವೃತ್ತಿಯಲ್ಲೂ ಯಾದವ್ ಮತ್ತು ಪಾಲ್ಶಿಕರ್ ಅವರನ್ನು ಮುಖ್ಯ ಸಲಹೆಗಾರರನ್ನಾಗಿ ಉಲ್ಲೇಖಿಸಲಾಗಿದೆ.
ಎನ್‌ಸಿಆರ್‌ಟಿಯ 12 ತರಗತಿಯ ರಾಜ್ಯಶಾಸ್ತ್ರ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಬಾಬ್ರಿ ಮಸೀದಿಯನ್ನು ಬಾಬ್ರಿ ಮಸೀದಿ ಎನ್ನದೆ, ‘ಮೂರು ಗುಮ್ಮಟಗಳ ರಚನೆ’ ಎಂದು ಉಲ್ಲೇಖಿಸಿದೆ. ಇದು ಇತ್ತೀಚೆಗೆ ವಿವಾದಕ್ಕೆ ಕಾರಣವಾಗಿದೆ.
ಪರಿಷ್ಕೃತ ಪುಸ್ತಕದಲ್ಲಿ ಗುಜರಾತ್‌ನ ಸೋಮನಾಥದಿಂದ ಅಯೋಧ್ಯೆಯವರೆಗೆ ಬಿಜೆಪಿ ನಡೆಸಿದ ರಥಯಾತ್ರೆ, ಬಾಬ್ರಿ ಮಸೀದಿ ಧ್ವಂಸ, ಕರ ಸೇವಕರ ಪಾತ್ರ, ಮಸೀದಿ ಧ್ವಂಸದ ನಂತರದ ಕೋಮುಗಲಭೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ಮತ್ತು ಅಯೋಧ್ಯೆಯಲ್ಲಿ ನಡೆದ ಘಟನೆಗಳ ಪಠ್ಯಗಳನ್ನು ಕೈ ಬಿಡಲಾಗಿದೆ.
ಇದನ್ನೂ ಓದಿ : ವಯನಾಡ್‌ನಿಂದ ಪ್ರಿಯಾಂಕಾ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧಾರ: ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಳ್ಳಲಿರುವ ರಾಹುಲ್ ಗಾಂಧಿ


