ಕೇರಳದ ತ್ರಿಶೂರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಲಯಾಳಂ ಸುದ್ದಿ ವಾಹಿನಿ ‘ರಿಪೋರ್ಟರ್ ಟಿವಿ’ಯ ಬ್ಯೂರೋ ಕಚೇರಿ ಮೇಲೆ ಶುಕ್ರವಾರ (ಆ.29) ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಯುವ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರ ಬಗ್ಗೆ ಚಾನೆಲ್ ವರದಿ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಚಾನೆಲ್ ಮತ್ತು ಅದರ ವರದಿಗಾರರ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಚಾನೆಲ್ ಲೋಗೋ ಹೊಂದಿರುವ ಪೋಸ್ಟರ್‌ಗಳ ಮೇಲೆ ಮಸಿ ಸುರಿದಿದ್ದಾರೆ ಎಂದು ವರದಿ ಹೇಳಿದೆ.
ಘಟನೆಯನ್ನು ಖಂಡಿಸಿರುವ ರಿಪೋರ್ಟರ್ ಟಿವಿ, ‘ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದಿದೆ. ಪೊಲೀಸರಿಗೆ ಮತ್ತು ಕೇರಳ ಮುಖ್ಯಮಂತ್ರಿಗೆ ದೂರು ನೀಡಿದೆ.
ರಾಹುಲ್ ಮಾಂಕೂಟತ್ತಿಲ್ ಅವರ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ್ದು ಎನ್ನಲಾದ ಹಲವಾರು ಆಡಿಯೋ ಕ್ಲಿಪ್‌ಗಳನ್ನು ರಿಪೋರ್ಟರ್ ಟಿವಿ ಪ್ರಸಾರ ಮಾಡಿತ್ತು.
ಮಹಿಳೆಯೊಬ್ಬರಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿ ಮಾತನಾಡಿದ್ದ ಆಡಿಯೋ ಕ್ಲಿಪ್ ಒಂದನ್ನು . ಆಗಸ್ಟ್ 21 ರಂದು ಚಾನೆಲ್ ಪ್ರಸಾರ ಮಾಡಿತ್ತು. ಆ ಆಡಿಯೋ ಕ್ಲಿಪ್‌ನಲ್ಲಿದ್ದ ಪುರುಷನ ಧ್ವನಿ ರಾಹುಲ್ ಅವರದ್ದು ಎನ್ನಲಾಗಿದೆ.
ಚಾನೆಲ್ ಪ್ರಸಾರ ಮಾಡಿದ್ದ ಆಡಿಯೋ ಕೇರಳದಲ್ಲಿ ಸಂಚಲನ ಸೃಷ್ಟಿಸಿದ್ದು, ಸ್ವಪಕ್ಷದವರಿಂದಲೇ ರಾಹುಲ್ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ಕೊನೆಗೆ ರಾಹುಲ್ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದರು.
ತನ್ನ ಕಚೇರಿ ಮೇಲಿನ ದಾಳಿಗೆ ಸಂಬಂಧಿಸಿದಂತೆ ರಿಪೋರ್ಟರ್ ಟಿವಿ ಪ್ರಸಾರ ಮಾಡಿರುವ ವಿಡಿಯೋದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ಕೆಲ ವ್ಯಕ್ತಿಗಳು ಸುದ್ದಿ ವಾಹಿನಿಯ ವಾಹನದ ಮೇಲೆ ತಮ್ಮ ಪಕ್ಷದ ಧ್ವಜವನ್ನು ಇರಿಸಿ ಘೋಷಣೆಗಳನ್ನು ಕೂಗಿ, ನಂತರ ಕಚೇರಿಯ ಪ್ರವೇಶದ್ವಾರದಲ್ಲಿ ಪೋಸ್ಟರ್ ಮೇಲೆ ಮಸಿ ಸುರಿದಿರುವುದನ್ನು ನೋಡಬಹುದು.
“ರಾಹುಲ್ ಅವರನ್ನು ಬೆಂಬಲಿಸುವ ಕೆಲ ಕಾಂಗ್ರೆಸ್ ಕಾರ್ಯಕರ್ತರು ಈ ಕೃತ್ಯ ಎಸಗಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಎಲ್ಲರೂ ಈ ಕೃತ್ಯವನ್ನು ಬೆಂಬಲಿಸಿಲ್ಲ. ಕೆಲವು ಯುವ ನಾಯಕರನ್ನು ಹೊರತುಪಡಿಸಿ, ಪಕ್ಷದೊಳಗಿನ ಹಿರಿಯ ನಾಯಕರು ಇದನ್ನು ಬೆಂಬಲಿಸುವುದಿಲ್ಲ ಎಂದು ನಮಗೆ ತಿಳಿದು ಬಂದಿದೆ” ಎಂದು ರಿಪೋರ್ಟರ್ ಟಿವಿಯ ಸಂಪಾದಕ ಡಾ. ಅರುಣ್ ಕುಮಾರ್ ಹೇಳಿದ್ದಾರೆ.
ಚಾನೆಲ್ ಪ್ರಕಾರ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಿಥುನ್ ಮೋಹನ್, ತ್ರಿಶೂರ್ ಜಿಲ್ಲಾ ಉಪಾಧ್ಯಕ್ಷ ವಿಷ್ಣು ಚಂದ್ರನ್, ತ್ರಿಶೂರ್ ವಿಧಾನಸಭಾ ಅಧ್ಯಕ್ಷ ಕೆ. ಸುಮೇಶ್ ಮತ್ತು ಸೌರಾಗ್, ನಿಖಿಲ್ ದೇವ್, ಅಮಲ್ ಜೇಮ್ಸ್ ಸೇರಿದಂತೆ ಇತರು ದಾಳಿಯಲ್ಲಿ ಭಾಗಿಯಾಗಿದ್ದಾರೆ.
ಬ್ಯಾಂಕ್ ಕ್ಯಾಂಟೀನ್‌ನಲ್ಲಿ ಬೀಫ್ ನಿಷೇಧಿಸಿದ ಬಿಹಾರ ಮೂಲದ ಮ್ಯಾನೇಜರ್; ಸಿಬ್ಬಂದಿಗಳಿಂದ ಪ್ರತಿಭಟನೆ


