Homeಮುಖಪುಟಭಾರತದಲ್ಲಿ ಮೀಸಲಾತಿ ಇತಿಹಾಸ: ನಾಲ್ವಡಿಯವರು ರಚಿಸಿದ್ದ ಮಿಲ್ಲರ್ ಸಮಿತಿಗೆ 100 ವರ್ಷ

ಭಾರತದಲ್ಲಿ ಮೀಸಲಾತಿ ಇತಿಹಾಸ: ನಾಲ್ವಡಿಯವರು ರಚಿಸಿದ್ದ ಮಿಲ್ಲರ್ ಸಮಿತಿಗೆ 100 ವರ್ಷ

ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ ಒಂದು ಅಧ್ಯಯನ ಎಂಬ ಹೊಸ ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಅವರು ಬರೆದಿದ್ದಾರೆ.

- Advertisement -
- Advertisement -

ಅಂತರಾಷ್ಟ್ರೀಯ ಖ್ಯಾತಿಯ ಕರ್ನಾಟಕದ ಭೂವಿಜ್ಞಾನಿ ಬಿ.ಪಿ.ರಾಧಾಕೃಷ್ಣ (೧೯೧೮-೨೦೧೨) ಅವರು ತಮ್ಮ ತಂದೆ ಬಿ.ಪುಟ್ಟಯ್ಯನವರ (೧೮೭೯-೧೯೪೪) ಬಗ್ಗೆ ನನ್ನ ತಂದೆ (೧೯೪೯) ಎಂಬ ಪುಸ್ತಕವನ್ನು ರಚಿಸಿದ್ದಾರೆ. ಪುಟ್ಟಯ್ಯನವರು ಮೈಸೂರು ಸಂಸ್ಥಾನದ ಆಡಳಿತದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದವರು. ಪ್ರಿಂಟಿಂಗ್ ತಂತ್ರಜ್ಞಾನವನ್ನು ಇಂಗ್ಲೆಂಡ್‌ನಲ್ಲಿ ಕಲಿತು ಬಂದಿದ್ದ ಪುಟ್ಟಯ್ಯನವರು ಸರ್ಕಾರಿ ಮುದ್ರಣಾಲಯದ ಮುಖ್ಯಸ್ಥರಾಗಿ ನೇತೃತ್ವವಹಿಸಿ ಹಲವು ವರ್ಷ ಮುನ್ನಡೆಸಿದವರು. ಪುಟ್ಟಯ್ಯನವರ ಬಗ್ಗೆ ಹಲವು ವಿಷಯಗಳನ್ನು ಕಟ್ಟಿಕೊಡುವ ಈ ಪುಸ್ತಕದ ಒಂದು ಅಧ್ಯಾಯ ಬ್ರಾಹ್ಮಣ ಅಬ್ರಾಹ್ಮಣ ವಾದ ಎಂಬುದು.

ದಕ್ಷಿಣದಲ್ಲಿ ನಡೆದ ಬ್ರಾಹ್ಮಣೇತರ ಚಳವಳಿಯ ಬಗ್ಗೆ ಪ್ರಸ್ತಾಪಿಸುವ ಲೇಖಕರು, ಜಾತಿ ಮತದ ಹೆಸರಿನಲ್ಲಿ ಅಲ್ಪಸಂಖ್ಯಾತರಾಗಿದ್ದರೂ ಪ್ರಬಲರಾಗಿದ್ದ ಬ್ರಾಹ್ಮಣವರ್ಗದವರಿಂದ ಬಹುಸಂಖ್ಯಾತರಿಗೆ ಆಗುತ್ತಿದ್ದ ಅನ್ಯಾಯವನ್ನು ತಂದೆ ಬಲ್ಲವರಾಗಿದ್ದರು. ಸ್ವಂತವಾಗಿ ಅದರ ಕಹಿಯನ್ನುಂಡಿದ್ದರು ಎಂದು ಉಲ್ಲೇಖಿಸುತ್ತಾರೆ. ಹಾಗೆಯೇ ರಾಧಾಕೃಷ್ಣ ಅವರು ಕೆಲಸದ ಮೇಲೆ ತಮ್ಮ ಮೇಲಧಿಕಾರಿ ಮತ್ತು ಗುಮಾಸ್ತರ ಜೊತೆಗೆ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿದಾಗ ರಾತ್ರಿ ಅಲ್ಲೇ ಕಳೆಯುವ ಅನಿವಾರ್ಯತೆ ಉಂಟಾಗಿ, ಅಲ್ಲಿ ಒಬ್ಬ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಬೇಕಾದ ಪರಿಸ್ಥಿತಿ ಒದಗಿದ್ದನ್ನು ಮತ್ತು ಅಲ್ಲಿ ಆದ ಅಪಮಾನವನ್ನು ಕೂಡ ದಾಖಲಿಸುತ್ತಾರೆ. ಅವರ ಮೇಲಧಿಕಾರಿ ಮತ್ತು ಗುಮಾಸ್ತರಿಗೆ ನಡುಮನೆಯಲ್ಲಿ ಊಟ ಹಾಕಿ ಇವರಿಗೆ ವರಾಂಡದಲ್ಲಿ ಎಲೆ ಹಾಕುವ ಸನ್ನಿವೇಶವನ್ನು ದುಃಖದಿಂದ ಬರೆದುಕೊಂಡರೂ, ಮೀಸಲಾತಿ ವಿಷಯದಲ್ಲಿ ರಾಧಾಕೃಷ್ಣ ಅವರು ನಿಲುವು ವಿಕಸನ ಹೊಂದಿರುವುದೇ ಇಲ್ಲ.

ಅದೇ ಅಧ್ಯಾಯದಲ್ಲಿ ಅವರು ಬರೆಯುವಂತೆ ಬ್ರಾಹ್ಮಣನಿಗೆ ಹೇಗೊ ಇತರರಿಗೂ ಸಮಾಜದಲ್ಲಿ ಸರಿಯಾದ ಸ್ಥಾನಮಾನಗಳು ದೊರೆಯಲಿ ಎನ್ನುವುದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಹೀಗೆ ಪ್ರಯತ್ನಪಟ್ಟವರಲ್ಲಿ ನನ್ನ ತಂದೆಯೂ ಒಬ್ಬರು. ಆದರೆ ಇವರೆಲ್ಲ ಪಟ್ಟ ಪ್ರಯತ್ನ ಸರಕಾರದಲ್ಲಿ ಹೆಚ್ಚು ಕೆಲಸ ಗಳಿಸುವ ಕಡೆಗೇ ಕೂಲಿತು. ಇಂಥ ವ್ಯತ್ಯಾಸಗಳಿಗೆ ಮೂಲವಾದ ಮನಸಿನ ಭಾವನೆಗಳನ್ನು ನಿವಾರಣೆಮಾಡುವ ಪ್ರಯತ್ನ ಆಗಲೂ ನಡೆಯಲಿಲ್ಲ. ಈಗಲೂ ನಡೆಯುತ್ತಿಲ್ಲ. ಹಿಂದುಳಿದ ಕೋಮಿನವರು, ನಾವು ಹಿಂದುಳಿದವರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆಯೇ ವಿನಹ ಆ ಹೆಸರು ತೊಡೆದು ಹೋಗುವಂತೆ ಪ್ರಯತ್ನ ಪಡುತ್ತಿಲ್ಲ. ಆಡಳಿತದಲ್ಲಿ ಮೊದಲು ಬ್ರಾಹ್ಮಣರಿಗೆ ನೌಕರಿ ಸುಲಭವಾಗಿ ದೊರೆಯುತ್ತಿದ್ದ ಕಡೆ ಈಗ ಅಬ್ರಾಹ್ಮಣರಿಗೆ ದೊರೆಯುತ್ತಿದೆ. ಶಾಲೆಗಳಲ್ಲಿ ಕಾಲೇಜುಗಳಲ್ಲಿ ಕೂಡ ಸ್ಥಳ ಕೊಡುವಾಗ ಇಷ್ಟು ಜನ ಲಿಂಗಾಯಿತರಿಗೆ, ಇಷ್ಟು ಒಕ್ಕಲಿಗರಿಗೆ, ಇಷ್ಟು ಕುರುಬರಿಗೆ ಎಂದು ಮತಮತದ ಲೆಕ್ಕ ನಡೆಯುತ್ತಿದೆ. ಈ ಲೆಕ್ಕಾಚಾರದಲ್ಲಿ, ಮೇಧಾಶಕ್ತಿ ಬುದ್ಧಿವಂತಿಕೆ ಮೂಲೆಪಾಲಾಗಿಬಿಟ್ಟಿದೆ. ಈ ರೀತಿ ನಡೆಯುವುದು ಅನ್ಯಾಯ ಎಂದು ನನ್ನ ಮನಸ್ಸು ಹೇಳುತ್ತದೆ. ಆದರೆ ನನಗೆ ತಪ್ಪಾಗಿ ತೋರುವುದು ನನ್ನ ತಂದೆಗೆ ಆ ರೀತಿ ತೋರಲಿಲ್ಲ. ಸರಕಾರದಲ್ಲಿ, ಶಾಲಾ ಕಾಲೇಜುಗಳಲ್ಲಿ ಅಧ್ಯಾಪಕ ವರ್ಗದಲ್ಲಿ ಹೆಚ್ಚು ಮಂದಿ ಬ್ರಾಹ್ಮಣೇತರರಿಗೆ ಅವಕಾಶವನ್ನು ದೊರಕಿಸಿಕೊಡುವ ಪ್ರಯತ್ನಕ್ಕೆ ಅವರು ಬೆಂಬಲ ಕೊಟ್ಟರು. ತಾವೂ ಬಹುವಾಗಿ ಶ್ರಮಿಸಿದರು. ಮತದ ಹೆಸರಿನಲ್ಲಿ ನಡೆಯುವ ನಾನು ಮೇಲು ನೀನು ಕೀಳು ಎಂದೆನಿಸುವ ಅನ್ಯಾಯ ಹೋಗಲಾಡಿಸಲು ಸರಕಾರದಲ್ಲಿ ಹೆಚ್ಚು ನೌಕರಿ ಸಂಪಾದಿಸಿಕೊಟ್ಟ ಮಾತ್ರದಿಂದ ಆಗಲಿಲ್ಲ. ಈ ಬಗೆಯ ಪ್ರಯತ್ನದಿಂದ ಹಿಂದಿದ್ದ ಅನ್ಯಾಯ ಹೋಗುವುದಿಲ್ಲ. ಒಂದಿದ್ದ ಕಡೆ ಎರಡು ಹುಟ್ಟಿಕೊಳ್ಳುತ್ತದೆ. ಬ್ರಾಹ್ಮಣ ಅಬ್ರಾಹ್ಮಣರಲ್ಲಿ ವಿದ್ವೇಷ ಮಾತ್ರ ಹೆಚ್ಚುತ್ತದೆ. ಎಂದು ಹೇಳಿಕೊಳ್ಳುತ್ತಾರೆ.

ಶೂದ್ರರಲ್ಲಿ ವಿದ್ಯಾವಂತರಾಗಿ ಒಳ್ಳೆಯ ಕೆಲಸ ಹಿಡಿಯುತ್ತಿದ್ದವರಲ್ಲಿ ಇನ್ನೂ ಎರಡನೇ ಪೀಳಿಗೆಗೆ ಸೇರಿದ್ದ ರಾಧಾಕೃಷ್ಣ ಅವರ ಈ ಧೋರಣೆಗೆ ಏನು ಕಾರಣ ಇರಬಹದು? ಅವರ ತಂದೆಯೇ ತಾರತಮ್ಯವನ್ನು ಅನುಭವಿಸಿ ಹಿಂದುಳಿದವರ ಪ್ರಾತಿನಿಧ್ಯಕ್ಕೆ ಹೋರಾಡಿದ್ದವರು. ರಾಧಾಕೃಷ್ಣ ಅವರೇ ವೈಯಕ್ತಿಕ ನೆಲೆಯಲ್ಲಿ ಕೆಲವು ತಾರತಮ್ಯ ಅನುಭವಿಸಿರುವುದನ್ನು ದಾಖಲಿಸಿದ್ದಾರೆ. ಇಂತಹ ಸಮಯದಲ್ಲಿ ತಮಗಿಂತಲೂ ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ಆಗಿದೆ ಅವರ ಪ್ರಾತಿನಿಧ್ಯ ಇನ್ನೂ ಬಾಕಿ ಉಳಿದಿದೆ ಎಂಬ ತಿಳುವಳಿಕೆ ಕಳೆದುಕೊಂಡದ್ದು ಏಕೆ ಮತ್ತು ಹೇಗೆ? ತಮ್ಮ ತಂದೆಗಿಂತಲೂ, ಪ್ರಾತಿನಿಧ್ಯ ಸಮತೋಲನಕ್ಕೆ ದುಪ್ಪಟ್ಟು ದುಡಿಯಬೇಕಿದ್ದ ರಾಧಾಕೃಷ್ಣ ಅವರು ಮೀಸಲಾತಿಯಿಂದ ಮೇಧಾಶಕ್ತಿ ಬುದ್ಧಿವಂತಿಕೆ ಮೂಲೆಪಾಲಾಗಿಬಿಟ್ಟಿದೆ. ಈ ರೀತಿ ನಡೆಯುವುದು ಅನ್ಯಾಯ ಎಂದು ನನ್ನ ಮನಸ್ಸು ಹೇಳುತ್ತದೆ ಎಂದು ಒತ್ತಿ ಹೇಳುತ್ತಿರುವುದೇಕೆ? (ಮತ್ತೊಂದು ಅಧ್ಯಾಯದಲ್ಲಿ ಅಂದಿನ (೧೯೧೯-೨೦) ಸಿವಿಕ್ ಸೊಸೈಟಿ ಪಂಚಮರ ಶಿಕ್ಷಣಕ್ಕೆ ಪ್ರಯತ್ನ ಪಟ್ಟಿದ್ದು, ಆ ಸಂಘದ ಉಪಾಧ್ಯಕ್ಷರಾಗಿದ್ದ ಸಿ.ಆರ್.ರೆಡ್ಡಿ ಅವರು ಶ್ರಮಿಸಿದ್ದನ್ನೂ ನೆನಪಿಸಿಕೊಂಡಿದ್ದಾರೆ)

ನನ್ನ ತಂದೆ ಪುಸ್ತಕದ ಮತ್ತೊಂದು ಸೋಜಿಗದ ಸಂಗತಿ ಎಂದರೆ ಈ ಪುಸ್ತಕಕ್ಕೆ ಡಿ.ವಿ.ಗುಂಡಪ್ಪ ಅವರಿಂದ ಮುನ್ನುಡಿಯನ್ನು ಬರೆಸಿರುವುದು. ಡಿವಿಜಿ ಅವರು ಬಹಳ ನಾಜೂಕಿನಿಂದ, ತಮ್ಮ ಮುನ್ನುಡಿಯಲ್ಲಿ ಪುಟ್ಟಯ್ಯನವರ ಬಗ್ಗೆ ಬರೆಯುವುದಕ್ಕಿಂತಲೂ, ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸುವುದಕ್ಕಿಂತಲೂ, ರಾಧಾಕೃಷ್ಣ ಅವರು ಅನುಭವಿಸಿದ ಜಾತೀಯ ನಿಂದನೆಗೆ ಕನಿಷ್ಠ ಬೇಸರವನ್ನು ವ್ಯಕ್ತಪಡಿಸದೆ, ಮುನ್ನುಡಿಯ ಆರೇಳು ಪುಟಗಳನ್ನು ವರ್ಣಾಶ್ರಮ ಮತ್ತು ಬ್ರಾಹ್ಮಣರ ಸಮರ್ಥನೆಗೆ ಬಳಸಿಕೊಂಡಿದ್ದಾರೆ. ಸರ್ಕಾರದ ಉದ್ಯೋಗಗಳೂ ಅಧಿಕಾರ ಪದವಿಗಳೂ ದೇಶ ಸಮಸ್ತಕ್ಕೂ ಸೇರಿದವು. ಆ ಉದ್ಯೋಗ ಪದವಿಗಳ ಕರ್ತವ್ಯ ನಿರ್ವಾಹದಲ್ಲಿ ತೋರುವ ವಿಚಕ್ಷಣೆ ಅವಿಚಕ್ಷಣೆಗಳ ಫಲಾಫಲಗಳನ್ನು ದೇಶೀಯರೆಲ್ಲರೂ ಅನುಭವಿಸಬೇಕಾಗುತ್ತದೆ. ಆದ ಕಾರಣ ಅಧಿಕಾರಿಗಳ ಹಂಚಿಕೆಯಲ್ಲಿ ಯಾವ ಯಾವ ಜಾತಿಗೆ ಎಷ್ಟೆಷ್ಟು ಸೇರಿತು ಎಂಬ ಪ್ರಶ್ನೆ ಎಷ್ಟೇ ನ್ಯಾಯವಾದದ್ದಾದರೂ, ಅದಕ್ಕಿಂತ ಮುಖ್ಯವಾದದ್ದು ದೇಶಕಾರ್ಯಗಳ ನಿರ್ವಾಹ ಹೇಗೆ ಸಾಗುತ್ತಿದೆ ಎಂಬುದು. ಬ್ರಾಹ್ಮಣೇತರರ ಹಿತ ಹಕ್ಕುಗಳು ಊರ್ಜಿತವಾಗಬೇಕೆಂಬುದು ಎಲ್ಲರೂ ಒಪ್ಪುವ ತತ್ವವೇ ಸರಿ. ಆದರೆ ಬೇರೆ ಬೇರೆ ಜಾತಿ ಕೋಮುಗಳ ಹಕ್ಕು ಹಿತಗಳ ಯೋಚನೆಯಲ್ಲಿ ದೇಶಕಾರ್ಯದ ವಿಚಕ್ಷಣೆ ಕೆಡುವ ಹಾಗಿದ್ದಲ್ಲಿ, ನಮ್ಮ ಮೊದಲನೆಯ ಗಮನ ಕಾರ್ಯದಕ್ಷತೆಯ ಕಡೆಗೇ ಹೋಗಬೇಕಲ್ಲವೇ? ಸರಕಾರದ ಆಡಳಿತಗಳಲ್ಲಿ ಶಾಸ್ತ್ರಜ್ಞಾನ, ಕಾರ್ಯಸಾಮರ್ಥ್ಯ, ಅನುಭವ – ಇವುಗಳಿಗೆ ಬೆಲೆಯುಂಟೆ, ಇಲ್ಲವೆ? ಇಂತಹ ಮೀಸಲಾತಿ ವಿರೋಧಿ ಅಪಾಯಕಾರಿ ವಾದವನ್ನು (೧೯೪೯ರಲ್ಲಿ ಈ ಪುಸ್ತಕ ಪ್ರಕಟವಾದಾಗ) ಡಿವಿಜಿ ಅವರು ಮಾಡಿದ್ದು ಮೊದಲೇನೂ ಅಲ್ಲ. ಅದಕ್ಕೆ ೩೦ ವರ್ಷಗಳ ಹಿಂದೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮುಂದಾಳತ್ವದಲ್ಲಿ ಪ್ರಾರಂಭವಾಗಿದ್ದ, ಹಿಂದುಳಿದ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗಗಳನ್ನು ಒದಗಿಸಲು ಮುಂದುಮಾಡಿದ್ದ ಸುಧಾರಣೆಗೂ ಡಿವಿಜಿ ಅವರನ್ನು ಸೇರಿಸಿದಂತೆ ಒಂದು ವರ್ಗ-ಸಮುದಾಯದ ಮುಖಂಡರು ಇಂತಹ ವಿಚಾರಶೂನ್ಯ ಕಾರಣಗಳನ್ನು ನೀಡಿ ತಡೆಯಲು ಬೃಹತ್ತಾಗಿ ಪಿತೂರಿ ಮಾಡಿದ್ದರು ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪೀಠಿಕೆಯನ್ನು ಹಾಕಬೇಕಾಯಿತು.

ತಮ್ಮ ತಂದೆಯವರ ಸುಧಾರಣಾ ಕಾರ್ಯಗಳಿಂದ ಪ್ರಭಾವಿತರಾಗಿ ತಮಗೆ ಅನಾಯಾಸವಾಗಿ ಬಂದಿದ್ದ ಸವಲತ್ತುಗಳನ್ನು ಅರ್ಥ ಮಾಡಿಕೊಂಡು ತಮಗಿಂತಲೂ ಹಿಂದುಳಿದವರ ಸವಲತ್ತುಗಳಿಗೆ ಹೋರಾಡುವ ಮನೋಭಾವಕ್ಕಿಂತಲೂ, ಇಂತಹ ಸುಧಾರಣೆಗಳನ್ನು ಅಂದಿನಿಂದಲೂ ವಿರೋಧಿಸಿಕೊಂಡು ಬಂದಿದ್ದ ಡಿವಿಜಿ ಅಂತಹವರ ಧೋರಣೆಯನ್ನು ರಾಧಾಕೃಷ್ಣ ಅಂತಹ ಹಲವು ವಿದ್ಯಾವಂತರು ಏಕೆ ತಮ್ಮದಾಗಿಸಿಕೊಂಡರು ಎಂಬಂತಹ ಸಂಗತಿಗಳಿಗೆ ಒಂದು ಮಟ್ಟದ ಉತ್ತರ ದೊರೆಯಬೇಕು ಅಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ (೧೮೮೪-೧೯೪೦) ಸಮಯದಲ್ಲಿ ಸ್ಥಾಪಿತವಾದ ಮಿಲ್ಲರ್ ಸಮಿತಿ ಮತ್ತು ಅದು ನೀಡಿದ ವರದಿ ಮತ್ತದರ ಅನುಷ್ಠಾನಕ್ಕೆ ಒಂದು ವರ್ಗ-ಸಮುದಾಯದ ಮುಖಂಡರು ತೋರಿದ ತೀವ್ರ ವಿರೋಧವನ್ನು ಅರ್ಥ ಮಾಡಿಕೊಳ್ಳುವ ಅಗತ್ಯ ಇದೆ. ಸಮಾನತೆಗೆ ಇಡೀ ದೇಶದಲ್ಲಿ (ಸ್ವಾತಂತ್ರ್ಯಪೂರ್ವದಲ್ಲಿ ಹಲವು ಸಂಸ್ಥಾನಗಳು) ನಡೆದ ಕೆಲವೇ ಮೊದಲ ಪ್ರಯತ್ನಗಳಲ್ಲಿ ಒಂದಾಗಿದ್ದ ಮಿಲ್ಲರ್ ಸಮಿತಿ ಶಿಫಾರಸ್ಸುಗಳ ಬಗ್ಗೆ ಕನ್ನಡ ನಾಡಿನಲ್ಲಿ ಆಗಿರುವ ಚರ್ಚೆಗಳು ಬೆರಳೆಣಿಕೆಯಷ್ಟು. ಇತಿಹಾಸಜ್ಞ ಎಸ್.ಚಂದ್ರಶೇಖರ್ ಅಂತಹವರು ಇದರ ಬಗ್ಗೆ ಹಲವು ಪ್ರಬಂಧಗಳನ್ನು ಬರೆದಿದ್ದರೂ ಅವುಗಳು ಜನಸಾಮಾನ್ಯರ ಸ್ಮೃತಿಯ ಮಟ್ಟಕ್ಕೆ ಇಳಿಯುವಂತೆ ಆಗಿಲ್ಲ. ತಮ್ಮ ಹಿತರಕ್ಷಣೆಯನ್ನು ಮಾತ್ರ ಆದ್ಯತೆಯನ್ನಾಗಿಸಿಕೊಂಡು ಅಂದು ಮಿಲ್ಲರ್ ಸಮಿತಿ ಶಿಫಾರಸ್ಸುಗಳನ್ನು ತಡೆಯಲು, ಹಳಿ ತಪ್ಪಿಸಲು ಯಾವ ವರ್ಗ-ಸಮುದಾಯ ಪಿತೂರಿ ನಡೆಸಿತ್ತೋ, ಅದರ ಬಗೆಗಿನ ವಿಚಾರ ಹೆಚ್ಚು ಚರ್ಚೆ ಆಗದಂತೆ ಇಂದಿನವರೆಗೂ ನೋಡಿಕೊಂಡಿಲ್ಲವೇ?

ಇಂತಹ ಹಲವು ಪ್ರಶ್ನೆಗಳನ್ನು ಚರ್ಚಿಸಿ ಹೆಚ್ಚಿನ ಸಂಶೋಧನೆಗೆ-ಅಧ್ಯಯನಕ್ಕೆ ಇಂಬುನೀಡುವ ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ ಒಂದು ಅಧ್ಯಯನ ಎಂಬ ಹೊಸ ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಟಿ.ಆರ್.ಚಂದ್ರಶೇಖರ್ ಅವರು ಬರೆದಿದ್ದಾರೆ.

ಡಾ.ಟಿ.ಆರ್.ಚಂದ್ರಶೇಖರ್

ಪುಸ್ತಕದ ಮೊದಲ ಭಾಗ ಸ್ವತಂತ್ರಪೂರ್ವ ಭಾರತದ ವಿವಿಧ ಭಾಗಗಳಲ್ಲಿ (ಹಲವು ರಾಜಸಂಸ್ಥಾನಗಳಲ್ಲಿ) ನಡೆದ ಸಮಾನತೆಯ ಮತ್ತು ಘನತೆಯ ಚಳವಳಿಗಳ ಅವಲೋಕನ ಇದೆ. ಮಹಾತ್ಮ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ, ಸಾಹು ಮಹಾರಾಜ್, ನಾರಾಯಣ ಗುರು, ಜಸ್ಟೀಸ್ ಪಾರ್ಟಿ ಮತ್ತು ಪೆರಿಯಾರ್ ಅವರುಗಳು ಕೈಗೊಂಡ ಸುಧಾರಣೆಗಳನ್ನು ಸಂಕ್ಷಿಪ್ತ ಅಧ್ಯಾಯಗಳಲ್ಲಿ ಕಟ್ಟಿಕೊಡಲಾಗಿದೆ. ಇತಿಹಾಸದಲ್ಲಿ ಬೇಕೆಂತಲೇ ಉಪೇಕ್ಷಿಸಲಾಗಿರುವ, ಜನರ ನಡುವೆ ಜನಪ್ರಿಯರಾಗಿರುವ ಹಲವು ವ್ಯಕ್ತಿಗಳ ಧೋರಣೆಗಳ ಪ್ರಶ್ನೆಯನ್ನು ಈ ಭಾಗದಲ್ಲಿ ಚಂದ್ರಶೇಖರ್ ಅವರು ಎತ್ತಿಕೊಂಡಿದ್ದಾರೆ. ಫುಲೆ ಮತ್ತು ಸತ್ಯಶೋಧಕ ಸಮಾಜದ ಸುಧಾರಣೆಗೆ ವಿಷ್ಣುಶಾಸ್ತ್ರಿ ಚಿಪುಲ್ಕರ್ ಮತ್ತು ಬಾಲಗಂಗಾಧರ ತಿಲಕ ಅವರುಗಳು ಒಡ್ಡಿದ ಪ್ರತಿರೋಧ ಇಂದು ಎಷ್ಟು ಜನರಿಗೆ ತಿಳಿದಿದೆ? ತಿಲಕ್ ಅವರು ವರ್ಣಾಶ್ರಮ ಧರ್ಮದ ಪ್ರಬಲ ಪ್ರತಿಪಾದಕರಾಗಿದ್ದರು. ಅವರ ಪ್ರಕಾರ ವರ್ಣಾಶ್ರಮ ಧರ್ಮವು ರಾಷ್ಟ್ರೀಯ ಧರ್ಮ. ಜಾತಿ ವಿನಾಶವೆಂದರೆ ರಾಷ್ಟ್ರೀಯತೆಯ ನಾಶ ಎಂಬುದು ಬಾಲ ಗಂಗಾಧರ ತಿಲಕರ ನಂಬಿಕೆಯಾಗಿತ್ತು. ತಿಲಕ್ ಮತ್ತು ಚಿಪುಲ್ಕರ್ ಅವರು ಜ್ಯೋತಿರಾವ ಫುಲೆ ಅವರನ್ನು ರಾಷ್ಟ್ರದ್ರೋಹಿ ಎಂದು ಕರೆದಿದ್ದರು ಎಂದು ತಿಳಿಸುವ ಮೂಲಕ ತಿಲಕ್ ಅವರ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿರದ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಾರೆ.

ಕರ್ನಾಟಕದಲ್ಲಿ ತಿಲಕ್ ಅವರ ಕೇಸರಿ ಪತ್ರಿಕೆಯನ್ನು ಅನುಸರಿಸಿ ಸೀತಾರಾಮಶಾಸ್ತ್ರಿ ಅವರು ನಡೆಸುತ್ತಿದ್ದ ವೀರಕೇಸರಿ ಪತ್ರಿಕೆ, ಅದು ಓದುಗರಲ್ಲಿ ಮೂಡಿಸುತ್ತಿದ್ದ ಸಂಪ್ರದಾಯವಾದಿ ಪ್ರತಿಗಾಮಿ ತಿಳುವಳಿಕೆಯ ಪ್ರಸ್ತಾಪವೂ ಬರುತ್ತದೆ. ಇಂತಹ ವಿರೋಧಗಳ ನಡುವೆ ಮಹದೇವ ಗೋವಿಂದ ರಾನಡೆ ಅಂತಹ ಸುಧಾರಕರ ಸಹಾಯದಿಂದ ಜ್ಯೋತಿರಾವ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಇವರುಗಳ ಪರಿಶ್ರಮದಿಂದ ಮಹಾರಾಷ್ಟ್ರದಲ್ಲಿ ಹಿಂದುಳಿದ ಮತ್ತು ದಲಿತ ಮಕ್ಕಳಿಗಾಗಿ ಶಾಲೆಗಳು ತೆರೆದುಕೊಂಡ ಮಹತ್ವದ ಸಂಗತಿಗಳು ಅಂಕಿಅಂಶಗಳೊಂದಿಗೆ ದಾಖಲಾಗಿವೆ.

ಕಾಲಪ್ರವಾಹದಲ್ಲಿ ಮಹಾಪುರುಷರನ್ನು ನಿರ್ಮಿಸುವುದರಲ್ಲಿ ಇತಿಹಾಸ ಕೆಲಸ ಮಾಡಿರುವ ರೀತಿ ವಿಚಿತ್ರ. ಎಷ್ಟೋ ನಿಜ ಸುಧಾರಕರ ವ್ಯಕ್ತಿತ್ವಗಳು ಇತ್ತೀಚೆಗಷ್ಟೇ ಮುನ್ನಲೆಗೆ ಬರುತ್ತಿವೆ. ಇಂದು ಕಲಿಯುವ ಮಕ್ಕಳಿಗೆ ನಾರಾಯಣ ಗುರು, ಸಾಹು ಮಹರಾಜ್ ಅವರ ಪಾಠಗಳು ಎಷ್ಟು ದಕ್ಕಿವೆ? ಇತ್ತೀಚಗೆ ಬಹಳ ಚರ್ಚೆಯಾಗುತ್ತಿರುವ ಇನ್ನೊಂದು ಸಂಗತಿಯ ಹಿನ್ನೆಲೆಯಲ್ಲೂ ಇದನ್ನು ಗಮನಿಸಬೇಕು. ಮೈಸೂರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ವೈಭವೀಕರಿಸಿ, ಅವರ ದಿವಾನಗಿರಿಯಲ್ಲದೇ ಅದರ ಆಚೆಗಿನ ಸುದೀರ್ಘ ಅವಧಿಯಲ್ಲೂ ಹಲವಾರು ಸುಧಾರಣೆಗಳಿಗೆ ಕಾರಣವಾಗಿದ್ದ ನಾಲ್ವಡಿ ಅವರ ಹೆಸರು ಹಿಂದಕ್ಕೆ ಬಿದ್ದಿರುವುದು ಹೇಗೆ? ಇಂತಹ ಪ್ರಶ್ನೆಗಳಿಗೆ ಇತಿಹಾಸದ ಸಂಗತಿಗಳನ್ನು ಇನ್ನಷ್ಟು ನಿಖರ ಅಂಕಿಅಂಶಗಳಿಂದ ಮರುಕಟ್ಟುವ ಕೆಲಸಗಳಿಂದ, ಅವುಗಳನ್ನು ಜನಪ್ರಿಯಗೊಳಿಸುವುದರಿಂದ ಉತ್ತರ ಕಂಡುಕೊಳ್ಳಬೇಕಿದೆ. ಅಂತಹ ಪ್ರಯತ್ನ ಸದರಿ ಪುಸ್ತಕದಲ್ಲಿ ಆಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್

ಹಲವು ಸಂಸ್ಥಾನಗಳಲ್ಲಿ ಬಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವೆ ನೌಕರಿಗಳಲ್ಲಿ, ಶಿಕ್ಷಣದಲ್ಲಿ ಇದ್ದ ಭಾರಿ ಕಂದಕವನ್ನು ಸಾಬೀತುಪಡಿಸುವ ಅಂಕಿಅಂಶಗಳ ಹಲವು ಕೋಷ್ಟಕಗಳು ಪುಸ್ತಕದಲ್ಲಿ ಹಾಯ್ದಹೋಗುತ್ತವೆ. ಇಂತಹ ಪರಿಸ್ಥಿತಿ ಹಿಂದುಳಿದವರಿಗೆ ಪ್ರಾತಿನಿಧ್ಯ ನೀಡುವ ಅಗತ್ಯವನ್ನು ಸೃಷ್ಟಿ ಮಾಡಿತ್ತು ಎಂಬ ಅಂಶವನ್ನು ತಿಳಿವಿನ ಕೊರತೆ ಇರುವ ಮೀಸಲಾತಿ ವಿರೋಧಿಗಳಿಗೂ ಅರ್ಥವಾಗುವ ಶೈಲಿಯಲ್ಲಿ ದತ್ತಾಂಶಗಳ ಜೊತೆಗೆ ನಿರೂಪಿಸಲಾಗಿದೆ.

ಇವತ್ತು ನಡೆಯುತ್ತಿರುವ ಮೀಸಲಾತಿ ವಿರೋಧಗಳ ಚರ್ಚೆಗಳಿಗೂ ಅಂದು ಮಿಲ್ಲರ್ ಸಮಿತಿಯ ಶಿಫಾರಸ್ಸುಗಳನ್ನು ವಿರೋಧಿಸಿ ನಡೆದ ಹೋರಾಟಕ್ಕೂ ಹಲವು ಸಾಮ್ಯತೆಗಳನ್ನು ಗುರುತಿಸುವ ಲೇಖಕರು, ಅಂದು ಮಿಲ್ಲರ್ ಆಯೋಗ ರಚಿಸಿದಾಗ ಕೂಡ ಅದರಲ್ಲಿಯ ಪ್ರಾತಿನಿಧ್ಯದಲ್ಲಿಯೂ ಕೊರತೆಯಿತ್ತು (ಒಬ್ಬ ಕ್ರಿಶ್ಚಿಯನ್, ಇಬ್ಬರು ಬ್ರಾಹ್ಮಣರು, ಒಬ್ಬ ಮುಸ್ಲಿಂ, ಒಬ್ಬ ಒಕ್ಕಲಿಗ ಮತ್ತು ಒಬ್ಬ ಲಿಂಗಾಯತ), ಯಾವ ಮಹಿಳೆಯರು ಇರಲಿಲ್ಲ ಎಂದು ಗುರುತಿಸುವ ಇತಿಹಾಸಕಾರ್ತಿ ಜಾನಕಿ ನಾಯರ್ ಅವರ ಮಾತುಗಳನ್ನೂ ಲೇಖಕರು ಪ್ರಮುಖವಾಗಿ ದಾಖಲಿಸುತ್ತಾರೆ.

ಹಿಂದುಳಿದ ವರ್ಗಗಳು ವ್ಯಾಖ್ಯಾನ ಆದ ಬಗೆ, ಪ್ರಾತಿನಿಧ್ಯದ ವ್ಯಾಖ್ಯಾನ, ಉದ್ಯೋಗಕ್ಕೆ ಶಿಫಾರಸ್ಸುಗಳು, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಸಮಿತಿಯ ಶಿಫಾರಸ್ಸುಗಳು ಇವೆಲ್ಲವನ್ನೂ ಚರ್ಚಿಸಿ, ಸಮಿತಿ ವರದಿಗೆ ಬಂದ ವಿರೋಧಕ್ಕೆ ದೊಡ್ಡ ಭಾಗ ಮೀಸಲಾಗಿದೆ. ಅಂದು ಆಡಳಿತ ಇಲಾಖೆಗಳ ಮುಖ್ಯಸ್ಥರಾಗಿದ್ದವರೆಲ್ಲಾ ಬ್ರಾಹ್ಮಣರೇ ಎಂಬುದು ಒಂದು ಮುಖ್ಯ ಅಂಶವಾದರೆ, ೧೮೧೮ರಿಂದ ೧೯೧೮ರವರೆಗೆ ಆಳಿದ ದಿವಾನರುಗಳೆಲ್ಲಾ ಬ್ರಾಹ್ಮಣರಾಗಿದ್ದು ಎರಡನೇ ಮುಖ್ಯ ಅಂಶವಾಗಿತ್ತು.

ಅಂದು ಶಿಕ್ಷಣ ಆಡಳಿತಾಧಿಕಾರಿಯಾಗಿದ್ದ ಸಿ.ಆರ್.ರೆಡ್ಡಿ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಅಧಿಕಾರಿಯೂ ಮಿಲ್ಲರ್ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಲಿಲ್ಲ ಎಂಬ ರಾಮಕೃಷ್ಣ ಎಂಬುವವರ ಹೇಳಿಕೆಯನ್ನು ದಾಖಲಿಸುವ ಪುಸ್ತಕ ಮಿಲ್ಲರ್ ಸಮಿತಿ ಸುಧಾರಣೆಗಳ ವಿರುದ್ಧ ಮತ್ತು ದಿವಾನಗಿರಿಯ ಮೇಲಿದ್ದ ಏಕಸ್ವಾಮ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಬ್ರಾಹ್ಮಣರು ಅಸಮಾಧಾನಗೊಂಡಿದ್ದರು ಎಂಬ ಜೇಮ್ಸ್ ಮೇನರ್ ಅವರ ಅಧ್ಯಯನವನ್ನು ವ್ಯಾಖ್ಯಾನಿಸಿ – ವಿರೋಧಕ್ಕೆ ಮುಖ್ಯವಾದ ಮೂರನೇ ಕಾರಣವನ್ನು ದಾಖಲಿಸುತ್ತಾರೆ ಸಂಸ್ಥಾನದ ಬಹಳಷ್ಟು ಪ್ರಮುಖ ಪತ್ರಿಕೆಗಳೆಲ್ಲವೂ ಬ್ರಾಹ್ಮಣರ ವಶದಲ್ಲಿದ್ದವು. ಎಂ.ವೆಂಕಟಕೃಷ್ಣಯ್ಯ, ತಿ.ತಾ.ಶರ್ಮ, ಪಿ.ಆರ್.ರಾಮಯ್ಯ ಇವರೆಲ್ಲ ತಮ್ಮ ಪತ್ರಿಕೆಗಳಲ್ಲಿ ಮಿಲ್ಲರ್ ಸಮಿತಿ ವರದಿಗೆ ಮತ್ತು ಮೀಸಲಾತಿ ಬಗ್ಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದ್ದರು ಎಂದು ಲೇಖಕರು ದಾಖಲಿಸುತ್ತಾರೆ.

ಡಿವಿಜಿ ಅವರು ಮಿಲ್ಲರ್ ಸಮಿತಿ ಶಿಫಾರಸ್ಸು ಅಂಗೀಕಾರವಾಗಿದ್ದು ವಿವಾದದ ವಿಷಯ ಎಂದು ಅಸಮಾಧಾನ ತೋರಿದ್ದು, ಶುದ್ಧತೆ- ಮಡಿ ಇತ್ಯಾದಿಗಳನ್ನು ಮುಂದು ಮಾಡಿ ವಾದ ಪ್ರಸ್ತುತಪಡಿಸಿ ಹಲವು ಬ್ರಾಹ್ಮಣ ಪತ್ರಕರ್ತರು ತೋರಿಸಿರುವ ಉಗ್ರ ವಿರೋಧದ ಕರಾಳ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತಾರೆ.

ಎಂ.ವಿಶ್ವೇಶ್ವರಯ್ಯನವರು ಶಿಫಾರಸ್ಸುಗಳನ್ನು ವಿರೋಧಿಸಿದ್ದು, ಅವರು ದಿವಾನ ಹುದ್ದೆ ತೊರೆದದ್ದು, ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸದಂತೆ ದಿವಾನ ಮಿರ್ಜಾ ಇಸ್ಮಾಯಿಲ್ ಅವರಿಗೆ ತಡೆ ಒಡ್ಡಲು ಗಣಪತಿ ಗಲಭೆ (೧೯೨೮) ಮಾಡಿಸಿ ಅವರ ವಿರುದ್ಧ ಪಿತೂರಿ ಮಾಡಿದ್ದು ಹೀಗೆ ಹಲವು ಸಂಗತಿಗಳನ್ನು ಓದುಗರ ಮುಂದೆ ಚಂದ್ರಶೇಖರ್ ಅವರು ತಮ್ಮ ಅಧ್ಯಯನದ ಮೂಲಕ ತೆರೆದಿಡುತ್ತಾರೆ.

ಸಮಿತಿಯ ಭಾಗವಾಗಿದ್ದ ಎಂ.ಬಸವಯ್ಯನವರು ಅಕಾಲಿಕ ಮರಣ (೧೯೨೦) ಮತ್ತು ಸಿ.ಆರ್.ರೆಡ್ಡಿ ಅವರು ೧೯೨೧ರಲ್ಲಿ ಕರ್ನಾಟಕ ತೊರೆದಿದ್ದು ಹಿಂದುಳಿದವರ ಸುಧಾರಣಾ ಚಳವಳಿಗೆ ಭಾರಿ ಹಿನ್ನಡೆಯುಂಟುಮಾಡಿದವು ಎಂದು ಗುರುತಿಸುವ ಲೇಖಕರು, ಸಮಿತಿಯ ಶಿಫಾರಸ್ಸುಗಳ ಅನುಷ್ಠಾನ ೨೦ರ ದಶಕದಲ್ಲಿಯೆ ಪರಿಣಾಮ ಬೀರದಿದ್ದರೂ, ೪೦ರ ಹೊತ್ತಿಗೆ ಅದರ ಸ್ಪಷ್ಟ ಫಲಗಳು ಗೋಚರಿಸಿದ್ದನ್ನು ದಾಖಲಿಸುತ್ತಾರೆ. ಹಾಗೆಯೇ ಬ್ರಾಹ್ಮಣ ಪತ್ರಕರ್ತರು ಮತ್ತು ಅಧಿಕಾರಿಗಳು ಅರೋಪಿಸಿದ್ದಂತೆ ದಕ್ಷತೆಯ ಕೊರತೆ ಅಥವಾ ಆಭಿವೃದ್ದಿಯ ಹಿನ್ನಡೆಯ ಸಿದ್ಧಾಂತ ಸುಳ್ಳಾಗಿ, ಹಿಂದಿಗಿಂತಲೂ ಮೈಸೂರು ಸಂಸ್ಥಾನ ಮಿಲ್ಲರ್ ಸಮಿತಿಯ ಶಿಫಾರಸ್ಸುಗಳ ಭಾಗಶಃ ಅನುಷ್ಠಾನದ ಜೊತೆಗೇ ಹೆಚ್ಚು ಅಭಿವೃದ್ಧಿ ಆಗಿದ್ದನ್ನು ಅಂಕಿ ಅಂಶಗಳೊಂದಿಗೆ ಚರ್ಚಿಸಿದ್ದಾರೆ.

ಹಿಂದುಳಿದವರಲ್ಲಿ ಆದ ಒಡಕು ಮತ್ತು ಅದರಲ್ಲಿ ಪ್ರಬಲ ಜಾತಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದರ ಬಗ್ಗೆ ಇನ್ನಷ್ಟು ಚರ್ಚೆ ಬೇಕಿತ್ತೆನಿಸುತ್ತದೆ. ಈಗ ಹಿಂದೆ ಬಂದಿರುವ ಹಲವು ಅಧ್ಯಯನಗಳೂ ಸೇರಿದಂತೆ, ಈ ಎಲ್ಲ ವಿರೋಧ ಟೀಕೆಗಳ ಸಮಯದಲ್ಲಿ ನಾಲ್ವಡಿಯವರು ಮತ್ತು ಸಮಿತಿಯ ಅಧ್ಯಕ್ಷರಾಗಿದ್ದ ಅಂದಿನ ಮೈಸೂರು ಮುಖ್ಯ ನ್ಯಾಯಾಧೀಶರಾದ ಲೆಸ್ಲಿ ಸಿ ಮಿಲ್ಲರ್ ಅವರುಗಳು ಹೇಗೆಲ್ಲಾ ಪ್ರತಿಕ್ರಿಯಿಸಿದ್ದರು ಎಂಬ ಅಂಶ ಕಾಣೆಯಾಗಿರುವಂತೆ ಭಾಸವಾಗುತ್ತದೆ. ಮುಂದೆ ಇದರ ಬಗ್ಗೆ ಸಂಶೋಧನೆ ಮಾಡುವವರಿಗೆ ಇದು ಒಳ್ಳೆಯ ಅಧ್ಯಯನದ ವಿಷಯ ಆಗಬಹುದು. ಅದೇ ರೀತಿ, ಸಮಿತಿಯ ಮತ್ತೊಬ್ಬ ಮುಸ್ಲಿಂ ಸದಸ್ಯ ಗುಲಾಮ್ ಅಹಮದ್ ಕಲಾಮಿ ಅವರ ಬಗ್ಗೆಯೂ ವಿವರಗಳು ಕಾಣಸಿಗುವುದು ಕಡಿಮೆ. ಚಾತುರ್ವರ್ಣ ವ್ಯವಸ್ಥೆಯಲ್ಲಿ ಮೊದಲು ನಡೆದ ಚಳುವಳಿಗಳನ್ನು ಪಟ್ಟಿ ಮಾಡಿರುವ ಮೊದಲ ಭಾಗದಲ್ಲಿ, ದಕ್ಷಿಣಕನ್ನಡದಲ್ಲಿ ನಡೆದ ಕುದ್ಮುಲ್ ರಂಗರಾವ್ ಅವರ ಸುಧಾರಣೆ ಕಾರ್ಯಗಳ ಸ್ಥಾನ ಏನು ಎಂಬ ಪ್ರಶ್ನೆಯೂ ಮೂಡದೆ ಇರದು.

ಇಂತಹ ಹಲವು ಪ್ರಶ್ನೆಗಳ ಜೊತೆಗೆ ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ ಒಂದು ಅಧ್ಯಯನ ಒಂದು ಅಪೂರ್ವ ಅಧ್ಯಯನ ಮತ್ತು ಪ್ರಮಖ ಪುಸ್ತಕ. ಮುಂದಿನ ವರ್ಷಕ್ಕೆ ಸಮಿತಿ ಶಿಫಾರಸ್ಸುಗಳನ್ನು ಅಂಗೀಕರಿಸಿದ್ದಕ್ಕೆ ೧೦೦ ವರ್ಷ ತುಂಬುವ ಹೊತ್ತಿನಲ್ಲಿ ಮೂಡಿರುವ ಈ ಅಧ್ಯಯನಶೀಲ ಪುಸ್ತಕವನ್ನು ಎಲ್ಲರೂ ಆಸಕ್ತಿಯಿಂದ ಓದಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಷ್ಯನ ಘನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಸಂವಿಧಾನದಲ್ಲಿ ಕೊಟ್ಟ ಮೀಸಲಾತಿ/ಪ್ರತಿನಿಧಿತ್ವದ ಕೊಡುಗೆಯನ್ನು ಹಳಿತಪ್ಪಿಸಲು ಹವಣಿಸುತ್ತಿರುವ ಎಷ್ಟೋ ಪ್ರತಿಗಾಮಿ ಸಿದ್ಧಾಂತಿಗಳಿಗೆ ನಮ್ಮ ಇತಿಹಾಸದಲ್ಲಿ ನಡೆದಿರುವ ಹೋರಾಟಗಳು, ಅದಕ್ಕೆ ಬಂದಿರುವ ವಿರೋಧಗಳ ಅಬೌದ್ಧಿಕತೆಯ ಸಮಸ್ಯೆಗಳನ್ನು ಮನವರಿಕೆ ಮಾಡುವ ಮೂಲಕ ಉತ್ತರಿಸಬೇಕಿದೆ.

ಆಕೃತಿ ಗುರುಪ್ರಸಾದ್, ಕಾರ್ಯಕಾರಿ ಸಂಪಾದಕರು, ನ್ಯಾಯಪಥ ವಾರಪತ್ರಿಕೆ.


ಇದನ್ನೂ ಓದಿ: ದೇವತಾ ಪ್ರತಿಮೆಗಳು ವಿಕಾಸವಾದುದ್ದು ಹೇಗೆ? ಅದರ ಹಿಂದಿನ ರಾಜಕೀಯವೇನು? 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸೆಂಟ್ರಲ್ ಗವರ್ನಮೆಂಟ್ ಕೆಲಸಗಳು ಒಂದುಕಡೆ ಇರಲಿ,
    ಕನ್ನಡ ನಾಡಿನ ಮಂದಿ ಎಣಿಕೆ ೬.೫೦ ಕೋಟಿ.
    ನಮ್ಮ ಸರ್ಕಾರಿ ಕೆಲಸಗಳು ಸು.೬.೫೦ ಲಕ್ಶ.
    ಅಂದರೆ, ನೂರಕ್ಕೆ ಒಬ್ಬರಿಗೆ ಸರ್ಕಾರದ ಕೆಲಸ ಸಿಕ್ಕಿದೆ.
    ಮೀಸಲಾತಿ ಗೊಂದಲದಲ್ಲಿ ಸಿಕ್ಕಾಪಟ್ಟೆ ಹೋರಾಟ ನಡೆದು, ಇದಕ್ಕೆ ಕೊನೆಯ ತೀರ್ಮಾನವೇ ಇಲ್ಲವೇ ಎಂದು ಕಗ್ಗಂಟಾಗಿದೆ.
    ಓದಿಕೊಂಡ ಎಲ್ಲರಿಗೂ ಕೆಲಸ ಕೊಡಲಾಗುವುದಿಲ್ಲವೆಂದು ಗೊತ್ತಿರುವ ಪೊಲಿಟಿಕಲ್ ಕೂಟಗಳು ಮೀಸಲಾತಿಯನ್ನು ಮತ್ತಶ್ಟು ಕಗ್ಗಂಟಾಗಿಸಿ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಿವೆ.
    ಈ ಹಿನ್ನೆಲೆಯಲ್ಲಿ ಆಯಾ ಪಂಗಡಗಳ ಮಂದಿಎಣಿಕೆ ನೆಲಗಟ್ಟಿನಲ್ಲಿ ಎಲ್ಲಾ ಹಂತದಲ್ಲಿ ನೂರಕ್ಕೆ ನೂರು ಮೀಸಲಾತಿ ಇರುವಂತಾಗಬೇಕು.
    ತುಳಿತಕ್ಕೊಳಗಾದ ಪಂಗಡಗಳಿಗೆ ಹೆಚ್ಚು “ಡಿ” ಗುಂಪಿನ ಹುದ್ದೆಗಳನ್ನು ಹಂಚಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...