ಒಳಮೀಸಲಾತಿ ಜಾರಿ ಆಗಿಯೇ ಬಿಟ್ಟಿದೆ ಎಂದು ಬಿಜೆಪಿ ಸುಳ್ಳು ಪ್ರಚಾರವನ್ನು ಮಾಡುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ವಿಧಾನ ಮಂಡಲದ ಮೊದಲ ಅಧಿವೇಶನದಲ್ಲೇ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವುದು ಮತ್ತೊಂದು ಚರ್ಚೆಗೆ ಅವಕಾಶ ನೀಡಿದೆ.
ಅರೆ, ಈಗಾಗಲೇ ಬಿಜೆಪಿ ಒಳಮೀಸಲಾತಿ ಮಾಡಿದ್ದೇವೆ ಎಂದು ಹೇಳುತ್ತಿರುವಾಗ, ಕಾಂಗ್ರೆಸ್ ಪಕ್ಷ ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಹೇಳುತ್ತಿರುವುದು ಏತಕ್ಕೆ? ಕಾಂಗ್ರೆಸ್ ದಲಿತರನ್ನು, ಮುಖ್ಯವಾಗಿ ಈ ಹೋರಾಟದ ಮುಂಚೂಣಿಯಲ್ಲಿರುವ ಮಾದಿಗ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದೆಯೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಬಿಜೆಪಿ ಸರ್ಕಾರ ಮಾಡಿರುವ ಮೋಸವನ್ನು ಅರ್ಥಮಾಡಿಕೊಂಡರೆ, ಕಾಂಗ್ರೆಸ್ ನೀಡಿರುವ ಭರವಸೆಯಲ್ಲಿ ಅರ್ಥವಿದೆ ಅನಿಸುತ್ತದೆ.
ಎ.ಜೆ.ಸದಾಶಿವ ಆಯೋಗದ ವರದಿಗೆ ಮಹತ್ವವಿದೆ. ಜೊತೆಗೆ ಇಂತಹ ವರದಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಉತ್ನತ ನ್ಯಾಯಾಲಯ ಅಂಕಿ-ಅಂಶಗಳನ್ನು ಕೇಳಿದರೆ ವೈಜ್ಞಾನಿಕ ಆಧಾರವನ್ನು ಕೋರ್ಟ್ ಮುಂದೆ ಸಲ್ಲಿಸಬೇಕಾಗುತ್ತದೆ.
ಮಾದಿಗ ಸಮುದಾಯದ ಹೋರಾಟಕ್ಕೂ ಎ.ಜೆ.ಸದಾಶಿವ ಆಯೋಗದ ವರದಿಗೂ ಇರುವ ಸಂಬಂಧ ಒಂದು ದಶಕಕ್ಕೂ ಮೀರಿದ್ದು. ಆದರೆ ಬಿಜೆಪಿ ಈ ವರದಿಯನ್ನೇ ನೇಪಥ್ಯಕ್ಕೆ ಸರಿಸಿತು. “ಎ.ಜೆ.ಸದಾಶಿವ ಆಯೋಗದ ವರದಿಯನ್ನು ಪರಿಗಣಿಸಿಲ್ಲ’’ ಎಂದು ಸಚಿವರುಗಳು ಹೇಳಿದರು.
ಸಾಮಾಜಿಕ ನ್ಯಾಯಕ್ಕಾಗಿ ಜನಸಂಖ್ಯೆ ಆಧರಿಸಿ ಪರಿಶಿಷ್ಟ ಜಾತಿಯಲ್ಲಿನ 101 ಉಪ ಪಂಗಡಗಳಿಗೆ ಮೀಸಲಾತಿ ಸೌಲಭ್ಯವನ್ನು ಹಂಚಬೇಕು. ಏಕೆಂದರೆ ಕೆಲವೇ ಜಾತಿಗಳು ತಮ್ಮ ವರ್ಚಸ್ಸಿನಿಂದ ಕಬಳಿಸುತ್ತಿವೆ ಎನ್ನುವ ದೂರು ವ್ಯಾಪಕವಾದ ಹಿನ್ನೆಲೆಯಲ್ಲಿ 2005ರ ಸೆಪ್ಟೆಂಬರ್‌ನಲ್ಲಿ ಧರಂಸಿಂಗ್ ನೇತೃತ್ವದ ಸರಕಾರವು ನ್ಯಾಯಮೂರ್ತಿ ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚಿಸಿತು. ಸದಾಶಿವ ಆಯೋಗ(2005)ವು ಕೇವಲ 2 ವರ್ಷದ ಸಮೀಕ್ಷಾ ಕಾರ್ಯದ ಮಿತಿ ಹೊಂದಿತ್ತಾದರೂ, ಹಣಕಾಸು ಹಾಗೂ ಇನ್ನಿತರ ಸಮರ್ಪಕ ಸೌಲಭ್ಯ ದೊರೆಯದೆ 7 ವರ್ಷಗಳ ನಂತರ ಸಾಕಷ್ಟು ವಿಳಂಬವಾಗಿ 2012ರ ಜೂನ್‌ನಲ್ಲಿ ತನ್ನ ಶಿಫಾರಸು ವರದಿಯನ್ನು ನೀಡಿತು. ಆಗ ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದರು. ಆನಂತರದಲ್ಲಿ ವರದಿ ಬಿಡುಗಡೆಯೇ ಆಗಲಿಲ್ಲ.
ಜಸ್ಟಿಸ್ ಎ.ಜೆ.ಸದಾಶಿವ ಆಯೋಗದ ವರದಿ ಸಾರ್ವಜನಿಕವಾಗಿ ಲಭ್ಯವಾಗಿಲ್ಲ, ಚರ್ಚೆಗೂ ಒಳಪಟ್ಟಿಲ್ಲ. ಆದರೆ ಸಾರ್ವಜನಿಕವಾಗಿ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಎ.ಜೆ.ಸದಾಶಿವ ಆಯೋಗವು ಪರಿಶಿಷ್ಟ ಜಾತಿಯಲ್ಲಿನ 101 ಸಮುದಾಯಗಳನ್ನು 4 ಗುಂಪುಗಳಾಗಿ ವರ್ಗೀಕರಿಸಿ, ಶೇ.15ರ ಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಿದೆ. ಅದರಂತೆ ಶೇ.33.4ರಷ್ಟಿರುವ ಎಡಗೈ (ಮಾದಿಗ) ಸಮುದಾಯಕ್ಕೆ ಶೇ.6ರಷ್ಟು, ಶೇ.32ರಷ್ಟಿರುವ ಬಲಗೈ (ಹೊಲೆಯ) ಸಮುದಾಯಕ್ಕೆ ಶೇ.5ರಷ್ಟು, ಶೇ.23.64ರಷ್ಟಿರುವ ಸ್ಪೃಶ್ಯ ಪರಿಶಿಷ್ಟರಿಗೆ ಶೇ.3ರಷ್ಟು ಹಾಗೂ ಇತರೆ ಪರಿಶಿಷ್ಟರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಆದರೆ ದಲಿತ ಸಮುದಾಯದ ಮೂಗಿಗೆ ತುಪ್ಪ ಸವರುವ, ಕೊನೆಗಳಿಗೆಯಲ್ಲಿ ಯಾಮಾರಿಸಿ ಆಟವಾಡಿರುವ ಬಿಜೆಪಿ ಸರ್ಕಾರದ ಸಂಪುಟ ಉಪಸಮಿತಿ, ಮಾದಿಗ ಸಂಬಂಧಿತ ಜಾತಿಗಳಿಗೆ ಶೇ. 6, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ.5.5, ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ. 4.5, ಇತರೆ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಹಂಚಿಕೆ ಮಾಡುವ ನಿರ್ಣಯ ಕೈಗೊಂಡಿತು. ಇದು ಒಳಮೀಸಲಾತಿಗಾಗಿ ಹೋರಾಡುತ್ತಿರುವ ಮಾದಿಗ ಸಮುದಾಯಕ್ಕೆ ಮಾಡಿದ ಬಹುದೊಡ್ಡ ವಂಚನೆ ಎಂದರೆ ತಪ್ಪಾಗಲಾರದು. ಎ.ಜೆ.ಸದಾಶಿವ ಆಯೋಗದ ವರದಿ ಇಲ್ಲವಾದರೆ ಈ ಮೀಸಲಾತಿ ಪ್ರಸ್ತಾಪ ಊರ್ಜಿತವಾಗುವುದಿಲ್ಲ ಎಂಬುದನ್ನು ಗಮನಿಸಬೇಕು.
ಒಳಮೀಸಲಾತಿ ಜಾರಿಗೊಳ್ಳಲು ಎ.ಜೆ.ಸದಾಶಿವ ಆಯೋಗದ ವರದಿ ಏಕೆ ಮುಖ್ಯ?
ಮೊದಲನೆಯದಾಗಿ, ಸದಾಶಿವ ಆಯೋಗದ ಶಿಫಾರಸ್ಸು ಜಾರಿಯಾಗಬೇಕು ಹೋರಾಟಗಾರರು ಕೇಳುತ್ತಿದ್ದರು. ಇದಕ್ಕೆ ಕಾರಣವಿತ್ತು. ಆಯೋಗ ಪರಿಶಿಷ್ಟ ಜಾತಿಯ 101 ಸಮುದಾಯಗಳ ಜನಗಣತಿ ಮಾಡಿತ್ತು; ಅವರು ಉದ್ಯೋಗ, ಶಿಕ್ಷಣದಲ್ಲಿ ಪಡೆದುಕೊಂಡ ಸೌಲಭ್ಯಗಳ ಸಂಪೂರ್ಣ ಅಧ್ಯಯನ ಮಾಡಿತ್ತು. ಆದರೆ ಈಗ ಸದಾಶಿವ ಆಯೋಗದ ವರದಿಯ ಪ್ರಸ್ತಾಪವೇ ಇಲ್ಲ. ಈ ಸರ್ಕಾರ ರಚಿಸಿದ್ದ ಸಂಪುಟ ಉಪಸಮಿತಿಯಲ್ಲಿನ ಸದಸ್ಯ ಪ್ರಭು ಚೌಹಾಣ್ ಅವರ ಅಧಿಕೃತ ಪತ್ರವೇ ಹೇಳುವಂತೆ ಅದರ ಪ್ರಸ್ತಾಪ ಮಾಡುವ ಹಾಗೂ ಇರಲಿಲ್ಲ.
ಸುಪ್ರೀಂಕೋರ್ಟಿನಲ್ಲಿ ಇದುವರೆಗೆ ಬಿದ್ದು ಹೋಗಿರುವ ಎಲ್ಲಾ ಮೀಸಲಾತಿ ಪ್ರಸ್ತಾಪಗಳ ಸಂದರ್ಭದಲ್ಲಿ ಕೋರ್ಟು ಕೇಳಿರುವುದು `ನಿಮ್ಮ ಈ ಪ್ರಸ್ತಾಪಕ್ಕೆ ಆಧಾರವಾಗಿ ಯಾವ ಗಣತಿ/ಅಧ್ಯಯನ/ಡೇಟಾ ಇದೆ ಹೇಳಿʼ ಅಂತ. ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಯ ವಿಚಾರದಲ್ಲಿ ಆಗಿರುವುದು ಅದೇ ಎಂಬುದು ಕಣ್ಣಿಗೆ ರಾಚಿ ಹೊಡೆಯುತ್ತಿದೆ. ಹೀಗಿರುವಾಗ ಸದಾಶಿವ ಆಯೋಗದ ವಿವರಗಳನ್ನು ಪಕ್ಕಕ್ಕಿಟ್ಟರೆ ಈಗ ಪ್ರಸ್ತಾಪ ಮಾಡಲಾಗಿರುವ ಮೀಸಲಾತಿಗೆ ಆಧಾರವೇನು? ಬಿಜೆಪಿಯ ಉದ್ದೇಶವೇನಾಗಿದೆ?
ಎರಡನೆಯದಾಗಿ, ಇಂದು ಸಂವಿಧಾನಬದ್ಧವಾಗಿ, ಕಾನೂನಿನ ಪ್ರಕಾರ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಿಗೆ ಇರುವುದು 15% ಮೀಸಲಾತಿ. ಅದನ್ನು 17%ಗೆ ಏರಿಸಲು ಕಾಂಗ್ರೆಸ್-ಜೆಡಿಎಸ್ ಸರ್ಕಾರ ನೇಮಿಸಿದ್ದ ಜಸ್ಟೀಸ್ ನಾಗಮೋಹನದಾಸ್ ಸಮಿತಿಯು ಶಿಫಾರಸ್ಸು ಮಾಡಿತ್ತು. ಈಗ ಬೊಮ್ಮಾಯಿಯವರ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಹಂಚಿರುವುದು 17%ನಲ್ಲಿ. ಆಯಿತು, ಒಪ್ಪಿಕೊಳ್ಳೋಣ. ಆದರೆ, ಈ 17% ಯಾವಾಗ ಜಾರಿಗೆ ಬರುತ್ತದೆ? ಯಾರಿಗೂ ಗೊತ್ತಿಲ್ಲ. ಈ 17% ಮೀಸಲಾತಿ ಹೆಚ್ಚಳದ ಮಾತು ನಡೆದು ನಾಲ್ಕು ತಿಂಗಳಾಗಿವೆ. ಇವತ್ತಿಗೂ, ಗಮನಿಸಿ ಇವತ್ತಿಗೂ, ಅದನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ. ಕೇಂದ್ರ ಸರ್ಕಾರಕ್ಕೆ ಏಕೆ ಕಳಿಸಬೇಕು? ಏಕೆಂದರೆ ಅವರು ಅದನ್ನು ಅನುಮೋದಿಸಿದ ಮೇಲೆಯೇ ಜಾರಿಗೆ ಬರುತ್ತದೆ. ಕೇಂದ್ರ ಸರ್ಕಾರಕ್ಕೆ ಕಳಿಸಿಲ್ಲ ಎಂದು ಯಾರು ಹೇಳಿದ್ದಾರೆ? ಇದೇ ಬಿಜೆಪಿಯ ಎ.ನಾರಾಯಣಸ್ವಾಮಿ (ಸಮಾಜ ಕಲ್ಯಾಣ ಇಲಾಖೆಯ ರಾಜ್ಯಸಚಿವ ಸಂಸತ್ತಿನಲ್ಲಿ ಪ್ರಜ್ವಲ್ ರೇವಣ್ಣ ಕೇಳಿದ ಪ್ರಶ್ನೆಗೆ) ಲಿಖಿತ ಉತ್ತರ ನೀಡಿದ್ದಾರೆ. ಹಾಗಿದ್ದ ಮೇಲೆ ಈಗ 17%ನಲ್ಲಿ ಮೀಸಲಾತಿ ಏಕೆ ಹಂಚಿದ್ದಾರೆ?
ಮೂರನೆಯದಾಗಿ, ಇದು ಜಾರಿಗೆ ಬಂದರೆ ಮಾದಿಗ ಸಮುದಾಯಕ್ಕೆ ಅನ್ಯಾಯ ಗ್ಯಾರಂಟಿ. ಏಕೆ? ಸದಾಶಿವ ಆಯೋಗ ಮಾದಿಗರಿಗೆ ಕೊಟ್ಟಿದ್ದದ್ದು 6%. ಆಗ ಒಟ್ಟು ಇದ್ದ ಮೀಸಲಾತಿ 15%. ಈಗ ಈ ಸರ್ಕಾರ ಹಂಚಿರುವುದು 17%ನಲ್ಲಿ. ಅದರಲ್ಲಿ ಮಾದಿಗರ ಪಾಲು ಎಷ್ಟು? 6%. ಕೊರಚ, ಕೊರಮ, ಭೋವಿ, ಲಂಬಾಣಿಯಂತಹ ಸ್ಪೃಶ್ಯ ಜಾತಿಗಳಿಗೆ ಸದಾಶಿವ ಆಯೋಗದಿಂದ ಕೊಟ್ಟಿದ್ದದ್ದು ಎಷ್ಟು? 3%. ಈಗ ಬಿಜೆಪಿ ಕೊಡುತ್ತಿರುವುದು ಎಷ್ಟು? 4.5%. ಇದಕ್ಕೆ ಆಧಾರವೇನು? ಸದಾಶಿವ ಆಯೋಗವು ಸಮಗ್ರವಾಗಿ ಅಧ್ಯಯನ ನಡೆಸಿ, ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಹಿಂದುಳಿದಿರುವಿಕೆ, ತಾರತಮ್ಯವನ್ನು ಪರಿಗಣಿಸಿ, ನೀಡಿದ್ದ ವರದಿ ಅದು. ಅದನ್ನು ಕಸದ ಬುಟ್ಟಿಗೆ ಎಸೆಯುವುದೇ ಆದಲ್ಲಿ, ನೀವು ಈಗ ಮಾಡಿರುವ ಹಂಚಿಕೆಗೆ ಏನು ಅಧ್ಯಯನ ಮಾಡಿದ್ದೀರಿ? ಈ ಅನ್ಯಾಯ ಏಕೆ?
ನಾಲ್ಕನೆಯದಾಗಿ, ನಿಮಗೆ ಯಾರಿಗಾದರೂ ಅನುಕೂಲ ಮಾಡಬೇಕು ಎಂದಿದ್ದರೆ ಏನು ಮಾಡುತ್ತೀರಿ? ಅದಕ್ಕೆ ಬೇಕಿರುವ ಸೂಕ್ತ ತಯಾರಿ ಮಾಡಿಕೊಂಡು, ಜಾರಿಗೆ ಬರಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೀರಿ ಅಲ್ಲವೇ? ಉದಾಹರಣೆಗೆ ಬಿಜೆಪಿಗೆ ಬ್ರಾಹ್ಮಣರು ಅವರ ಜನಸಂಖ್ಯೆಗಿಂತ ಹೆಚ್ಚು ಮೀಸಲಾತಿ ಪಡೆದುಕೊಳ್ಳಲಿ ಎಂದಿತ್ತು. ಅದಕ್ಕಾಗಿ ಅವರು (ಸಂವಿಧಾನದಲ್ಲಿ ಅವಕಾಶ ಇಲ್ಲದೇ ಇದ್ದುದರಿಂದ) 2019, ಜನವರಿ 8ರಂದು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಮರುದಿನ ಅಂದರೆ 9ನೇ ಜನವರಿ ರಾಜ್ಯಸಭೆಯಲ್ಲೂ ಮಂಡಿಸಿ ಅಂದೇ ಅನುಮೋದನೆ ಪಡೆದುಕೊಂಡರು. ಅದರ ನಂತರ ಮೂರು ದಿನಕ್ಕೆ, ಅಂದರೆ 12ನೇ ಜನವರಿ ರಾಷ್ಟ್ರಪತಿಗಳ ಸಹಿ ಪಡೆದುಕೊಂಡರು. ಅದರ ನಂತರದ ಎರಡು ದಿನಕ್ಕೆ ಅಂದರೆ 2019ರ ಜನವರಿ 14ರಿಂದ ಅದು ಜಾರಿಯಾಗುವಂತೆ ಮಾಡಿದರು.
ಈಗ ಒಳಮೀಸಲಾತಿ ವಿಚಾರದಲ್ಲಿ ಏನು ಮಾಡಿದ್ದಾರೆ? ಅವರು ಇಲ್ಲಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗಿವೆ. ಅವರದ್ದೇ ಪಕ್ಷಕ್ಕೆ ಸೇರಿದ ಸರ್ಕಾರ ಕೇಂದ್ರದಲ್ಲೂ ಇದೆ. ಮಾದಿಗ ಸಮುದಾಯ ಸತತವಾಗಿ ಹೋರಾಟ ಮಾಡಿದ್ದಲ್ಲದೇ, ಈಗ ತಿಂಗಳುಗಟ್ಟಲೆ ಫ್ರೀಡಂ ಪಾರ್ಕಿನಲ್ಲಿ ಧರಣಿ ಮಾಡುತ್ತಿತ್ತು. ಆದರೆ, ಇವರು ಅಧಿಕಾರ ಕಳೆದುಕೊಳ್ಳುವ ಮುಂಚಿನ ಕಟ್ಟಕಡೆಯ ಕ್ಯಾಬಿನೆಟ್ ಸಭೆಯಲ್ಲಿ, ಜಾರಿಗೆ ಬಾರದ ರೀತಿಯಲ್ಲಿ ಅದಕ್ಕೆ ಎಲ್ಲಾ ಅವ್ಯವಸ್ಥೆ ಮಾಡಿ, ಕೇಂದ್ರಕ್ಕೆ ಕಳಿಸುವ ನಿರ್ಣಯ ತೆಗೆದುಕೊಳ್ಳುತ್ತಾರೆ. ಪರಿಶಿಷ್ಟ ಜಾತಿ (ಮತ್ತು ಪಂಗಡಕ್ಕೆ) ಮೀಸಲಾತಿ ಹೆಚ್ಚಿಸುವ ನಿರ್ಣಯವನ್ನು ವಿಧಾನಮಂಡಲದಲ್ಲೇ ಚರ್ಚಿಸಿ ತೆಗೆದುಕೊಳ್ಳಲಾಯಿತು.
ಮಾದಿಗರಿಗೆ ದಕ್ಕಬೇಕಾದಷ್ಟು ಪ್ರಮಾಣದ ಒಳಮೀಸಲಾತಿ (15%ನಲ್ಲಿ 6%, ಅಥವಾ 17%ನಲ್ಲಿ 6.8%) ಕೊಡಬೇಕೆಂದು ಇನ್ನೊಂದು ಹೋರಾಟ ಮಾಡಬೇಕು. 17% ಮೀಸಲಾತಿ ಹೆಚ್ಚಳ (ಇದು ಎಲ್ಲಾ ಪರಿಶಿಷ್ಟ ಜಾತಿಗಳಿಗೆ)ವನ್ನು ಅನುಮೋದನೆ ಮಾಡಿ ಎಂದು ಮತ್ತೊಂದು ಹೋರಾಟ ಮಾಡಬೇಕು. ಅದೂ ಎಲ್ಲಿ? ದೆಹಲಿಯಲ್ಲಿ.. ಇವರಿಗೆ ಕನಿಷ್ಠ ಕಾಳಜಿ ಇದ್ದಿದ್ದರೆ, 15%ನಲ್ಲಿ 6% ಎಂಬುದನ್ನೇ ನಾಲ್ಕು ವರ್ಷಗಳ ಹಿಂದೆಯೇ ಮಾಡಿ ಕಳಿಸಬಹುದಾಗಿತ್ತಲ್ಲವಾ? ಅಥವಾ ಯಾವಾಗ 17% ಎಂದು ಮಾಡಿದರೋ, ಆಗಲೇ ಅದರಲ್ಲಿ 6.8% ಎಂದು ಮಾಡಿ ಕಳಿಸಬಹುದಿತ್ತಲ್ಲವಾ? 17% ಎಂದು ಮಾಡಿದ್ದನ್ನೇ ದೆಹಲಿಗೆ ಕಳಿಸಿಲ್ಲ.
ಮೇಲೆ ಹೇಳಲಾದ ಎರಡು ಹೋರಾಟಗಳ ಅಗತ್ಯವೇ ಇರಲಿಲ್ಲ, ಇವರ ಈ ಹುನ್ನಾರ ಇರದೇ ಇದ್ದಲ್ಲಿ. ಹಾಗೆ ನೋಡಿದರೆ, ಸಂವಿಧಾನ ತಿದ್ದುಪಡಿ ಮಾಡಲು (ಉಷಾ ಮೆಹ್ರಾ ಸಮಿತಿ ಶಿಫಾರಸ್ಸಿನಂತೆ) ಹೇಗೂ ಹೋರಾಟ ಮಾಡಲೇಬೇಕಿತ್ತು. ಈಗ ಅದರ ಜೊತೆಗೆ ಎರಡೆರಡು ದೆಹಲಿ ಹೋರಾಟವನ್ನು ಹೆಚ್ಚುವರಿ ಮಾಡಬೇಕಾದ ಅನಿವಾರ್ಯತೆಯನ್ನು ತರಲಾಗಿದೆ. ಹೀಗಾಗಿ ಮತ್ತೆ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮುನ್ನೆಲೆ ತರುವುದು ನ್ಯಾಯೋಚಿತ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ವೈಜ್ಞಾನಿಕ ವರದಿಗೆ ಮರುಜೀವ ನೀಡಿರುವುದು ಸ್ವಾಗತಾರ್ಹ.


