ವಿಶ್ವ ಆರೋಗ್ಯ ಸಂಸ್ಥೆ (WHO)ಯು 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ದೇಶದಾದ್ಯಂತ ಇರುವ ಹತ್ತು ಲಕ್ಷ ಆಶಾ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ‘ಗ್ಲೋಬಲ್ ಹೆಲ್ತ್ ಲೀಡರ್ಸ್ ಅವಾರ್ಡ್-2022’ ನೀಡಿ ಗೌರವಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಕೂಡಾ ಆಶಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಮಹತ್ವವಾದ ಕೆಲಸವನ್ನು ಚೆನ್ನಾಗಿ ಮಾಡತ್ತಿದ್ದೇವೆ ಮತ್ತು ಎಲ್ಲರೂ ಗುರುತಿಸುವಂತಹದ್ದು ಸಂತೋಷ ಮತ್ತು ಗೌರವದ ಸಂಗತಿ. ಆದರೆ ನಿಜವಾಗಿಯೂ ನಮ್ಮನ್ನು ಅಭಿನಂದಿಸುವುದೇ ಆಗಿದ್ದರೆ ನಮ್ಮ ದುಡಿಮೆಗೆ ತಕ್ಕಂತಹ ಪ್ರತಿಫಲ ನೀಡಬೇಕು. ಅದು ನಮ್ಮನ್ನು ನಿಜವಾಗಿಯೂ ಗೌರವಿಸಿದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಅವರು, “ನಾವು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಜಗತ್ತೇ ಗುರುತಿಸಿದೆ. ಈ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಪ್ರಧಾನಿ ಮೋದಿ ಕೂಡಾ ಅಭಿನಂದಿಸಿದ್ದಾರೆ. ಮಹತ್ವವಾದ ಕೆಲಸವನ್ನು ಚೆನ್ನಾಗಿ ಮಾಡತ್ತಿದ್ದೇವೆ ಮತ್ತು ಎಲ್ಲರೂ ಗುರುತಿಸುವಂತಹದ್ದು ಸಂತೋಷ ಮತ್ತು ಗೌರವದ ಸಂಗತಿ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಗ್ಲೋಬಲ್ ಹೆಲ್ತ್ ಲೀಡರ್ಸ್ ಅವಾರ್ಡ್-2022’ – ಆಶಾ ಕಾರ್ಯರ್ತರಿಗೆ ವಿಶ್ವಸಂಸ್ಥೆ ಪ್ರಶಸ್ತಿ
“ನಿಜವಾಗಿಯೂ ನಮ್ಮನ್ನು ಅಭಿನಂದಿಸುವುದೇ ಆಗಿದ್ದರೆ ನಮ್ಮ ದುಡಿಮೆಗೆ ತಕ್ಕಂತಹ ಪ್ರತಿಫಲ ನೀಡಬೇಕು. ಅದು ನಮ್ಮನ್ನು ನಿಜವಾಗಿಯೂ ಗೌರವಿಸಿದಂತೆ ಆಗುತ್ತದೆ. ಆದರೆ ನಾವು ದುಡಿದ ಹಣವನ್ನೂ ನೀಡಲು ಕೂಡಾ ಸರ್ಕಾರ ಸತಾಯಿಸುತ್ತದೆ. ಮೊನ್ನೆ ಮೇ 17 ರಂದು ಕೂಡಾ ನಾವು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದೇವೆ. ಆ ಹೋರಾಟದಲ್ಲೂ ನಾವು ಹೇಳಿದ್ದು ನಮ್ಮ ದುಡಿಮೆಯ ಪ್ರತಿಫಲ ಕೊಡಿ ಎಂದಷ್ಟೆ. ಗೌರವಧನದ ಹೆಸರಿನಲ್ಲಿ 5 ಸಾವಿರವನ್ನು ನೀಡಲಾಗುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮಾಡಿದ ಕೆಲಸಗಳಿಗೆ 50 ರಿಂದ 200 ರೂ ವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಈ ಕೆಲಸಗಳನ್ನು ಪೋರ್ಟಲ್ ಅಲ್ಲಿ ದಾಖಲಾಗಬೇಕಾಗುತ್ತದೆ. ಆದರೆ ಅದನ್ನು ದಾಖಲು ಮಾಡಲು ವ್ಯವಸ್ಥೆಯಿಲ್ಲ. ಆ ಹುದ್ದೆಯನ್ನು ಇನ್ನೂ ಖಾಲಿ ಬಿಡಲಾಗಿದೆ. ಅದನ್ನು ದಾಖಲೆ ಮಾಡುವವರೆಗೂ ನಮಗೆ ಪ್ರೋತ್ಸಾಹ ಧನ ಬರುವುದಿಲ್ಲ. ಇದೂ ಕೂಡಾ ಸರ್ಕಾರ ನಮಗೆ ಮಾಡುವ ಮೋಸ ಅಲ್ಲವೆ” ಎಂದು ಬೇಸರ ವ್ಯಕ್ತಪಡಿಸಿದರು.
“ದೇಶದ ಎಲ್ಲರ ಆರೋಗ್ಯವೂ ಚೆನ್ನಾಗಿ ಇರಬೇಕು ಎಂದು ನಾವು ಹಗಲು-ರಾತ್ರಿ ಕೆಲಸ ಮಾಡುತ್ತೇವೆ. ಆದರೆ ನಮ್ಮ ಆರೋಗ್ಯ ಕೆಟ್ಟರೆ ಅದಕ್ಕೆ ಸರ್ಕಾರ ಸಹಾಯ ಮಾಡುವುದಿಲ್ಲ. ಆರೋಗ್ಯ ವಿಚಾರವಾಗಿ ಒಂದು ತಿಂಗಳು ಕೆಲಸ ಮಾಡಿಲ್ಲ ಅಂದರೆ ಒಂದು ರುಪಾಯಿಯೂ ನಮಗೆ ಬರುವುದಿಲ್ಲ. ಅಷ್ಟೊಂದು ನಿಕೃಷ್ಟವಾಗಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ. ಇದೆಲ್ಲಕ್ಕೆ ಸರ್ಕಾರ ಪರಿಹಾರ ನೀಡಿದರೆ ನಿಜವಾಗಿಯೂ ನಮ್ಮನ್ನು ಗೌರವಿಸಿದ ಹಾಗೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವೇತನ ಹೆಚ್ಚಳ, ಕೋವಿಡ್ ಭತ್ಯೆಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ: ಆಶಾ ಕಾರ್ಯಕರ್ತೆಯರಿಗೊಂದು ದೊಡ್ಡ ಗೆಲುವು
ಸಾಮಾನ್ಯವಾಗಿ ಕಾರ್ಮಿಕರು ದುಡಿಮೆ ತಕ್ಕಂತೆ ಕೂಲಿ, ಸಂಬಳ ಪಡೆಯುತ್ತಾರೆ. ಆದರೆ ನಿಮ್ಮ ದುಡಿಮೆಗೆ ಪ್ರತಿಫಲವಾಗಿ ‘ಗೌರವಧನ’ ಎಂಬ ಹೆಸರಿಟ್ಟು ನಿಮ್ಮ ಶ್ರಮಕ್ಕೆ ಮೋಸ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,“ವಾಸ್ತವದಲ್ಲಿ ನಾವು ಮಾಡುತ್ತಿರುವ ಕೆಸಲಕ್ಕೆ ಪ್ರತಿಫಲವಾಗಿ ನೀಡುವ ‘ಗೌರವಧನ’ದ ಹೆಸರೂ ಕೂಡಾ ಒಂದು ಮೋಸ. ಹೆಸರು ಇಟ್ಟಕೂಡಲೇ ನಮಗೆ ಗೌರವ ಸಿಕ್ಕಿದ ಹಾಗೆ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.


