ದೇಶದ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹತ್ತು ಲಕ್ಷ ಆಶಾ ಕಾರ್ಯಕರ್ತರನ್ನು ವಿಶ್ವ ಸಂಸ್ಥೆ ಗೌರವಿಸಿದೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯ 75 ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಭಾರತದ ಆಶಾ ಕಾರ್ಯಕರ್ತರು ‘ಗ್ಲೋಬಲ್ ಹೆಲ್ತ್ ಲೀಡರ್ಸ್ ಅವಾರ್ಡ್-2022’ ಗೆ ಪಾತ್ರರಾಗಿದ್ದಾರೆ.
“ಕೊರೊನಾ ಸಾಂಕ್ರಾಮಿಕ ರೋಗದ ಉದ್ದಕ್ಕೂ ಕಂಡಿರುವಂತೆ ಗ್ರಾಮೀಣ ಭಾಗದ ಬಡತನದಲ್ಲಿ ವಾಸಿಸುವವರು ಕೂಡಾ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಸಮುದಾಯವನ್ನು ಆರೋಗ್ಯ ವ್ಯವಸ್ಥೆಯೊಂದಿಗೆ ಸಂಪರ್ಕಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಕ್ಕಾಗಿ ಭಾರತದ ಹತ್ತು ಲಕ್ಷಕ್ಕೂ ಹೆಚ್ಚು ‘ಆಶಾ’ (ಹಿಂದಿಯಲ್ಲಿ ‘ಭರವಸೆ’ ಎಂದರ್ಥ) ಮಹಿಳಾ ಸ್ವಯಂಸೇವಕರನ್ನು ಗೌರವಿಸಲಾಗಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ASHA – means 'hope' in Hindi. These health workers provide maternal care & immunization for children against vaccine-preventable diseases; community health care; treatment for hypertension & tuberculosis & core areas of health promotion for nutrition, sanitation & healthy living pic.twitter.com/uId27EqjO1
— World Health Organization (WHO) (@WHO) May 22, 2022
ವಿಶ್ವ ಸಂಸ್ಥೆಯು ‘ಗ್ಲೋಬಲ್ ಹೆಲ್ತ್ ಲೀಡರ್ಸ್ ಅವಾರ್ಡ್-2022’ ಅನ್ನು ಆರು ಮಂದಿಗೆ ನೀಡಿದ್ದು, ಅದರಲ್ಲಿ ದೇಶದ ಆಶಾ ಕಾರ್ಯಕರ್ತರೂ ಒಬ್ಬರಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ, “ಜಗತ್ತು ಅಸಮಾನತೆ, ಸಂಘರ್ಷ, ಆಹಾರ ಅಭದ್ರತೆ, ಹವಾಮಾನ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ರೋಗಗಳ ಹಿಂದೆಂದೂ ಕಂಡಿಲ್ಲ ಒಮ್ಮುಖವನ್ನು ಎದುರಿಸುತ್ತಿರುವ ಸಮಯದಲ್ಲಿ, ಅದರಿಂದ ರಕ್ಷಿಸಲು ಅತ್ಯುತ್ತಮ ಕೊಡುಗೆ ನೀಡಿದವರನ್ನು ಈ ಪ್ರಶಸ್ತಿಯು ಗುರುತಿಸುತ್ತದೆ” ಎಂದು ಹೇಳಿದ್ದರೆ.
ಇದನ್ನೂ ಓದಿ: ವೇತನ ಹೆಚ್ಚಳ, ಕೋವಿಡ್ ಭತ್ಯೆಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ: ಆಶಾ ಕಾರ್ಯಕರ್ತೆಯರಿಗೊಂದು ದೊಡ್ಡ ಗೆಲುವು
ಆಶಾ ಕಾರ್ಯಕರ್ತರನ್ನು ವಿಶ್ವಸಂಸ್ಥೆಯು ಗೌರವಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, “ಆಶಾ ಕಾರ್ಯಕರ್ತೆಯರ ಇಡೀ ತಂಡಕ್ಕೆ ಡಬ್ಲ್ಯುಎಚ್‌ಒ ಮಹಾನಿರ್ದೇಶಕರ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿಯನ್ನು ನೀಡಿರುವುದು ಸಂತಸ ತಂದಿದೆ. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆಗಳು. ಆರೋಗ್ಯಕರ ಭಾರತವನ್ನು ಖಚಿತಪಡಿಸಿಕೊಳ್ಳುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ. ಅವರ ಸಮರ್ಪಣೆ ಮತ್ತು ದೃಢತೆ ಮೆಚ್ಚುವಂತದ್ದು” ಎಂದು ಹೇಳಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಆಶಾ ಕಾರ್ಯಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, “ನಾವು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಜಗತ್ತೇ ಗುರುತಿಸಿದೆ. ಈ ಗೌರವಕ್ಕೆ ಪಾತ್ರರಾಗಿರುವುದಕ್ಕೆ ಪ್ರಧಾನಿ ಮೋದಿ ಕೂಡಾ ಅಭಿನಂದಿಸಿದ್ದಾರೆ. ಮಹತ್ವವಾದ ಕೆಲಸವನ್ನು ಚೆನ್ನಾಗಿ ಮಾಡತ್ತಿದ್ದೇವೆ ಮತ್ತು ಎಲ್ಲರೂ ಗುರುತಿಸುವಂತಹದ್ದು ಸಂತೋಷ ಮತ್ತು ಗೌರವದ ಸಂಗತಿ” ಎಂದು ಅವರು ತಿಳಿಸಿದ್ದಾರೆ.
“ನಿಜವಾಗಿಯೂ ನಮ್ಮನ್ನು ಅಭಿನಂದಿಸುವುದೇ ಆಗಿದ್ದರೆ ನಮ್ಮ ದುಡಿಮೆಗೆ ತಕ್ಕಂತಹ ಪ್ರತಿಫಲ ನೀಡಬೇಕು. ಅದು ನಮ್ಮನ್ನು ನಿಜವಾಗಿಯೂ ಗೌರವಿಸಿದಂತೆ ಆಗುತ್ತದೆ. ಆದರೆ ನಾವು ದುಡಿದ ಹಣವನ್ನೂ ನೀಡಲು ಕೂಡಾ ಸರ್ಕಾರ ಸತಾಯಿಸುತ್ತದೆ. ಮೊನ್ನೆ ಮೇ 17 ರಂದು ಕೂಡಾ ನಾವು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದೇವೆ. ಆ ಹೋರಾಟದಲ್ಲೂ ನಾವು ಹೇಳಿದ್ದು ನಮ್ಮ ದುಡಿಮೆಯ ಪ್ರತಿಫಲ ಕೊಡಿ ಎಂದಷ್ಟೆ. ಗೌರವಧನದ ಹೆಸರಿನಲ್ಲಿ 5 ಸಾವಿರವನ್ನು ನೀಡಲಾಗುತ್ತದೆ. ಅದನ್ನು ಸರಿಯಾದ ಸಮಯದಲ್ಲಿ ನೀಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಚರ್ಚೆ: HD ಕುಮಾರಸ್ವಾಮಿ ಭರವಸೆ
“ಮಾಡಿದ ಕೆಲಸಗಳಿಗೆ 50 ರಿಂದ 200 ರೂ ವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ. ಈ ಕೆಲಸಗಳನ್ನು ಪೋರ್ಟಲ್ ಅಲ್ಲಿ ದಾಖಲಾಗಬೇಕಾಗುತ್ತದೆ. ಆದರೆ ಅದನ್ನು ದಾಖಲು ಮಾಡಲು ವ್ಯವಸ್ಥೆಯಿಲ್ಲ. ಆ ಹುದ್ದೆಯನ್ನು ಇನ್ನೂ ಖಾಲಿ ಬಿಡಲಾಗಿದೆ. ಅದನ್ನು ದಾಖಲೆ ಮಾಡುವವರೆಗೂ ನಮಗೆ ಪ್ರೋತ್ಸಾಹ ಧನ ಬರುವುದಿಲ್ಲ. ಇದೂ ಕೂಡಾ ಸರ್ಕಾರ ನಮಗೆ ಮಾಡುವ ಮೋಸ ಅಲ್ಲವೆ” ಎಂದು ಬೇಸರ ವ್ಯಕ್ತಪಡಿಸಿದರು.
“ದೇಶದ ಎಲ್ಲರ ಆರೋಗ್ಯವೂ ಚೆನ್ನಾಗಿ ಇರಬೇಕು ಎಂದು ನಾವು ಹಗಲು-ರಾತ್ರಿ ಕೆಲಸ ಮಾಡುತ್ತೇವೆ. ಆದರೆ ನಮ್ಮ ಆರೋಗ್ಯ ಕೆಟ್ಟರೆ ಅದಕ್ಕೆ ಸರ್ಕಾರ ಸಹಾಯ ಮಾಡುವುದಿಲ್ಲ. ಆರೋಗ್ಯ ವಿಚಾರವಾಗಿ ಒಂದು ತಿಂಗಳು ಕೆಲಸ ಮಾಡಿಲ್ಲ ಅಂದರೆ ಒಂದು ರುಪಾಯಿಯೂ ನಮಗೆ ಬರುವುದಿಲ್ಲ. ಅಷ್ಟೊಂದು ನಿಕೃಷ್ಟವಾಗಿ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ. ಇದೆಲ್ಲಕ್ಕೆ ಸರ್ಕಾರ ಪರಿಹಾರ ನೀಡಿದರೆ ನಿಜವಾಗಿಯೂ ನಮ್ಮನ್ನು ಗೌರವಿಸಿದ ಹಾಗೆ” ಎಂದು ಅವರು ಹೇಳಿದ್ದಾರೆ.
ಸಾಮಾನ್ಯವಾಗಿ ಕಾರ್ಮಿಕರು ದುಡಿಮೆ ತಕ್ಕಂತೆ ಕೂಲಿ, ಸಂಬಳ ಪಡೆಯುತ್ತಾರೆ. ಆದರೆ ನಿಮ್ಮ ದುಡಿಮೆಗೆ ಪ್ರತಿಫಲವಾಗಿ ‘ಗೌರವಧನ’ ಎಂಬ ಹೆಸರಿಟ್ಟು ನಿಮ್ಮ ಶ್ರಮಕ್ಕೆ ಮೋಸ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,“ವಾಸ್ತವದಲ್ಲಿ ನಾವು ಮಾಡುತ್ತಿರುವ ಕೆಸಲಕ್ಕೆ ಪ್ರತಿಫಲವಾಗಿ ನೀಡುವ ‘ಗೌರವಧನ’ದ ಹೆಸರೂ ಕೂಡಾ ಒಂದು ಮೋಸ. ಹೆಸರು ಇಟ್ಟಕೂಡಲೇ ನಮಗೆ ಗೌರವ ಸಿಕ್ಕಿದ ಹಾಗೆ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.