ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ 1.7 ಕೋಟಿ ರೂಪಾಯಿ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದು, ಈ ಕುರಿತು ನ್ಯಾಯಾಂಗ ತನಿಖೆಗೆ ಕೇರಳ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
ವಿಜಯನ್ ಅವರ ಪುತ್ರಿ ಟಿ.ವೀಣಾ ಅವರಿಗೆ ಮತ್ತು ಬೆಂಗಳೂರಿನ ಎಕ್ಸಲಾಜಿಕ್ ಸಲ್ಯೂಷನ್ಸ್ ಐ.ಟಿ ಕಂಪನಿಗೆ 1.72 ಕೋಟಿ ಹಣ ಅಕ್ರಮವಾಗಿ ಸಂದಾಯವಾಗಿದೆ ಎಂದು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ ವರದಿಯಲ್ಲಿ ಹೇಳಿದೆ.
ವಿರೋಧ ಪಕ್ಷವು ಮುಖ್ಯಮಂತ್ರಿ ವಿಜಯನ್ ಅವರ ಮಗಳ ವಿರುದ್ಧ ಭುಗಿಲೆದ್ದ ಆರೋಪಗಳ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿದೆ.ಆಡಳಿತಾರೂಢ ಸಿಪಿಐಎಂನ್ನು ಗುರಿಯಾಗಿಟ್ಟುಕೊಂಡು ಮುಖ್ಯಮಂತ್ರಿಗಳ ಕುಟುಂಬಕ್ಕೆ ಕೋಟಿಗಟ್ಟಲೆ ಹೋಗುತ್ತಿರುವ ಬಗ್ಗೆ ಏಕೆ ತನಿಖೆ ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ಅಕ್ರಮದ ಬಗ್ಗೆ ಬಂದ ವರದಿ ಕುರಿತು ಪ್ರಶ್ನಿಸಿದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಸುಧಾಕರನ್ ‘ಜವಾಬ್ದಾರಿಯುತ ಸಂಸ್ಥೆ’ ನಡೆಸಿರುವ ತನಿಖೆಯನ್ನು ಅನುಮಾನಿಸಲು ಏನಾದರೂ ಕಾರಣವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ ಪಟ್ಟಿಯನ್ನು ಪ್ರಾದೇಶಿಕ ಪತ್ರಿಕೆಯೊಂದು ಪ್ರಕಟಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಪಿಎ ಮೊಹಮ್ಮದ್ ರಿಯಾಸ್ ಅವರ ಪತ್ನಿಯೂ ಆಗಿರುವ ಸಿಎಂ ಪುತ್ರಿ ಟಿ ವೀಣಾ ಅವರು ಕೊಚ್ಚಿನ್ ಮಿನರಲ್ಸ್ ಮತ್ತು ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಎಂಬ ಖಾಸಗಿ ಕಂಪನಿಯಿಂದ ಮೂರು ವರ್ಷಗಳ ಅವಧಿಯಲ್ಲಿ ಮಾಸಿಕ ಕಂತುಗಳಲ್ಲಿ 1.72 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ – ಮಾರ್ಕ್ಸ್‌ವಾದಿ (ಸಿಪಿಐಎಂ) ಈ ಆರೋಪವನ್ನು ತಳ್ಳಿಹಾಕಿದ್ದು, ನ.5 ರಂದು ನಡೆಯಲಿರುವ ಪುತ್ತುಪ್ಪಲ್ಲಿ ಉಪಚುನಾವಣೆಗೆ ಮುನ್ನ ಪಕ್ಷದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಇದು ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: ಸೌಜನ್ಯ ಪ್ರಕರಣ:ಸಂತೋಷ್ ರಾವ್ ತಂದೆಯ ಪಾದ ಪೂಜೆ ಮಾಡಿ ಕ್ಷಮೆಯಾಚನೆ


