ಭಾರತದ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ, ಬಡ್ತಿ ನೀಡುವ, ವರ್ಗಾವಣೆ ಮಾಡುವ ಅಧಿಕಾರ ಯಾರಿಗಿರಬೇಕೆಂಬ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. 1993ರವರೆಗೆ ಈ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿತ್ತು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ನ್ಯಾಯಾಧೀಶರ ನೇಮಕಾತಿಯಲ್ಲಿ ಏಕಪಕ್ಷೀಯವಾಗಿ, ಪಕ್ಷಪಾತ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಲವು ತೀರ್ಪುಗಳ ಮೂಲಕ ಸುಪ್ರೀಂ ಕೋರ್ಟ್ ಆ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಿತು. ಅದಕ್ಕಾಗಿ ಕೊಲಿಜಿಯಂ (ನ್ಯಾಯಮೂರ್ತಿಗಳ ನೇಮಕಾತಿ ಸಮಿತಿ) ಎಂಬ ವ್ಯವಸ್ಥೆ ಜಾರಿಗೊಳಿಸಿತು. ಅದು ಇಂದಿನವರೆಗೂ ನಡೆದುಕೊಂಡು ಬಂದಿದೆ.
’ಈ ಕೊಲಿಜಿಯಂನ ಕಾರ್ಯವಿಧಾನ ಪಾರದರ್ಶಕವಾಗಿಲ್ಲ ಮತ್ತು ಉತ್ತರದಾಯಿತ್ವವಾಗಿಲ್ಲ; ಮುಖ್ಯ ನ್ಯಾಯಮೂರ್ತಿಗಳ ಸಮಯ ನೇಮಕಾತಿಯಲ್ಲಿಯೇ ಪೋಲಾಗುತ್ತಿದೆ’ ಎಂಬ ಕಾರಣಗಳನ್ನು ನೀಡಿ 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಆ ಕಾಯ್ದೆಯನ್ನು ರದ್ದುಪಡಿಸಿ ಹಾಲಿ ಇರುವ ಕೊಲಿಜಿಯಂ ವ್ಯವಸ್ಥೆಯನ್ನು ಎತ್ತಿಹಿಡಿದಿತ್ತು. ಜೊತೆಗೆ ಹಾಲಿ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ತರುವುದಕ್ಕಾಗಿ ಸಾರ್ವಜನಿಕರಿಂದ ಸಲಹೆ ಕೇಳಿ ಪಾರದರ್ಶಕತೆಯನ್ನು ಹೆಚ್ಚಿಸುವುದಕ್ಕಾಗಿ ನಾಲ್ಕು ಅಂಶಗಳಲ್ಲಿ ಸುಧಾರಣೆಗೆ ಮುಂದಾಗಿತ್ತು.

ಹಾಲಿ ಕೇಂದ್ರ ಸರ್ಕಾರ ಮತ್ತೆ ನ್ಯಾಯಾಧೀಶರ ನೇಮಕದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳಲು ಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರ್ಕಾರದ ಕಾನೂನು ಸಚಿವ ಕಿರಣ್ ರಿಜಿಜು ಬಹಿರಂಗವಾಗಿ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಕಿಡಿಕಾರುತ್ತಿದ್ದು, ಸರ್ಕಾರವು ಕೈಕಟ್ಟಿ ಕುಳಿತಿಲ್ಲ, ಪರ್ಯಾಯ ವ್ಯವಸ್ಥೆ ತರಲು ಯೋಚಿಸುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಕೊಲಿಜಿಯಂ ಶಿಫಾರಸ್ಸು ಮಾಡಿದ ನ್ಯಾಯಾಧೀಶರ ಹೆಸರು ಅಂತಿಮಗೊಳಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ.
ಏನಿದು ಕೊಲಿಜಿಯಂ?
ಭಾರತದ ಮುಖ್ಯ ನ್ಯಾಯಾಧೀಶರ (ಸಿಜೆಐ) ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ನ ಇತರ ನಾಲ್ವರು ಅತಿ ಹಿರಿಯ ನ್ಯಾಯಾಧೀಶರನ್ನೊಳಗೊಂಡ ಸಮಿತಿಯೇ ಕೊಲಿಜಿಯಂ. ಈ ಕೊಲಿಜಿಯಂ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‌ಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಮತ್ತು ವರ್ಗಾವಣೆ ಮಾಡುವ ಅಧಿಕಾರ ಹೊಂದಿದೆ. ಇಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಪಾತ್ರವಿರುವುದಿಲ್ಲ. ಕೊಲಿಜಿಯಂ ನೀಡಿದ ಶಿಫಾರಸ್ಸನ್ನು ಸಾಮಾನ್ಯವಾಗಿ ಅಂಗೀಕರಿಸುವುದಷ್ಟೆ ಅದರ ಕೆಲಸವಾಗಿದೆ. (ಕೆಲವು ಪ್ರಕರಣಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇಮಕವನ್ನು ಕಾರ್ಯಾಂಗ ದೀರ್ಘಕಾಲ ವಿಳಂಬಗೊಳಿಸಿರುವ ಉದಾಹರಣೆಗಳಿವೆ). ಈ ವ್ಯವಸ್ಥೆಯು ಸಂವಿಧಾನದ ವಿಧಿಗಳು ಅಥವಾ ಸಂಸತ್ತಿನ ಕಾಯ್ದೆಯ ಬದಲಿಗೆ ಸುಪ್ರೀಂ ಕೋರ್ಟ್‌ನ ತೀರ್ಪುಗಳ ಆಧಾರದಲ್ಲಿ ರೂಪುಗೊಂಡಿದೆ.
ಕೊಲಿಜಿಯಂ ರಾಜಕೀಯವಾಗಿದೆ ಮತ್ತು ಸಂಪೂರ್ಣ ಅಪಾರದರ್ಶಕವಾಗಿದೆ – ಕಿರಣ್ ರಿಜಿಜು
ಭಾರತ ಹೊರತುಪಡಿಸಿ ಜಗತ್ತಿನಾದ್ಯಂತ ಎಲ್ಲಿಯೂ ನ್ಯಾಯಾಧೀಶರೆ ನ್ಯಾಯಾಧೀಶರನ್ನು ನೇಮಿಸುವುದಿಲ್ಲ. ಭಾರತದ ಕೊಲಿಜಿಯಂ ರಾಜಕೀಯವಾಗಿದೆ ಮತ್ತು ಸಂಪೂರ್ಣ ಅಪಾರದರ್ಶಕವಾಗಿದೆ. ಸಿಜೆಐ ಸೇರಿ ಕೊಲಿಜಿಯಂನ ಉಳಿದ ನ್ಯಾಯಾಧೀಶರು ನ್ಯಾಯ ನೀಡುವ ತಮ್ಮ ಪ್ರಾಥಮಿಕ ಕರ್ತವ್ಯದ ಬದಲು ನೇಮಕಾತಿ ಮತ್ತು ವರ್ಗಾವಣೆಗಳಲ್ಲಿಯೇ ಕಳೆದುಹೋಗುತ್ತಿದ್ದಾರೆ. ಹಾಗಾಗಿ ದೇಶದ ಜನರು ಈ ವ್ಯವಸ್ಥೆಂಮದ ಸಂತುಷ್ಟರಾಗಿಲ್ಲ. ಭಾರತದ ಸಂವಿಧಾನದ ಆಶಯದಂತೆ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂಬುದು ಕಾನೂನು ಸಚಿವರಾದ ಕಿರಣ್ ರಿಜಿಜುರವರ ವಾದವಾಗಿದೆ.
ಇದನ್ನೂ ಓದಿ: ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ: ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್
ಕೊಲಿಜಿಯಂ ಸಮತೋಲಿತ ವ್ಯವಸ್ಥೆ- ನಿವೃತ್ತ ಸಿಜೆಐ ಯು.ಯು ಲಲಿತ್
“ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಕಾನೂನಿನ ಆಳ್ವಿಕೆಗೆ ಕೊಲಿಜಿಯಂ ವ್ಯವಸ್ಥೆ ಅತ್ಯಗತ್ಯ ಮತ್ತು ಅನಿವಾರ್ಯ. ಕೊಲಿಜಿಯಂ ವ್ಯವಸ್ಥೆಯು ಸರಿಯಾದ ಮತ್ತು ಸಮತೋಲಿತ ವ್ಯವಸ್ಥೆಯಾಗಿದ್ದು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಸಾಬೀತಾಗಿದೆ. ಸರ್ಕಾರ ಸೇರಿದಂತೆ ಹಲವು ಪರಿಶೀಲನೆಗಳ ನಂತರವೇ ಕೊಲಿಜಿಯಂ ನ್ಯಾಯಾಧೀಶರ ನೇಮಕಾತಿಯನ್ನು ಅನುಮೋದಿಸುತ್ತದೆ. ಎಲ್ಲ ಸದಸ್ಯರ ಒಳನೋಟಗಳ ಮೂಲಕವೇ ರಮಣರವರು ಸಿಜೆಐ ಆಗಿದ್ದ ಕಾಲದಲ್ಲಿ 250ಕ್ಕೂ ಹೆಚ್ಚು ನ್ಯಾಯಾಧೀಶರ ನೇಮಕವಾಗಿದೆ. ಸರ್ಕಾರ ಮತ್ತು ಕೊಲಿಜಿಯಂ ಮಾತುಕತೆಗಳ ಮೂಲಕ ಯಾವುದೇ ತಡವಿಲ್ಲದೆ ನೇಮಕಾತಿಗಳು ನಡೆಯಬೇಕು” ಎಂದು ವಾರದ ಹಿಂದಷ್ಟೇ ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿ ನಿವೃತ್ತರಾದ ಜಸ್ಟೀಸ್ ಯು.ಯು ಲಲಿತ್ ಪತ್ರಿಕಾ ಗೋಷ್ಠಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಹೀಗೆ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ನಡುವೆ ತಿಕ್ಕಾಟ ಆರಂಭವಾಗಿದೆ. ಹೀಗಿರುವಾಗ ಯಾವ ವ್ಯವಸ್ಥೆ ನಮ್ಮ ದೇಶಕ್ಕೆ ಸೂಕ್ತ ಎಂದು ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿರುವ ಜಸ್ಟೀಸ್ ವಿ.ಗೋಪಾಲಗೌಡರು ಮತ್ತು ಜಸ್ಟೀಸ್ ನಾಗಮೋಹನ್ ದಾಸ್‌ರವರನ್ನು ನ್ಯಾಯಪಥ ಪತ್ರಿಕೆ ಸಂಪರ್ಕಿಸಿ ಅವರ ಅಭಿಪ್ರಾಯಗಳನ್ನು ದಾಖಲಿಸಿದೆ.
ಕೊಲಿಜಿಯಂ ಇರಬೇಕು, ಅದರಲ್ಲಿ ಬದಲಾವಣೆ ತರಬೇಕು- ಜಸ್ಟೀಸ್ ವಿ. ಗೋಪಾಲಗೌಡರು
“ಕೊಲಿಜಿಯಂ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಅದರ ಕಾರ್ಯವಿಧಾನದಲ್ಲಿ ಕೆಲವು ಬದಲಾವಣೆಗಳು ಬರಬೇಕಿವೆ. ನಮ್ಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸರ್ಕಾರಗಳಲ್ಲಿ ಒಳ್ಳೆಯವರು ಮತ್ತು ಕೆಟ್ಟವರೂ ಇದ್ದಾಗಲೂ ನ್ಯಾಯಾಧೀಶರನ್ನು ನೇಮಿಸುವ ಅಧಿಕಾರ ಕೊಲಿಜಿಯಂಗೆ ಇರಬೇಕು” ಎನ್ನುತ್ತಾರೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮತ್ತು ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಜಸ್ಟೀಸ್ ವಿ. ಗೋಪಾಲಗೌಡರು.
“ಕೊಲಿಜಿಯಂನಲ್ಲಿ ಸಮರ್ಥ ವಕೀಲರನ್ನು ಗುರುತಿಸಿ ನ್ಯಾಯಾಧೀಶರನ್ನಾಗಿ ಮಾಡಬೇಕು. ಅದು ಆಗುತ್ತಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಧೀಶರ ಮಕ್ಕಳು – ಮೊಮ್ಮಕ್ಕಳು ನ್ಯಾಯಾಧೀಶರಾಗುತ್ತಿದ್ದಾರೆ ಎನ್ನುವ ಆರೋಪದಲ್ಲಿ ಹುರುಳಿದೆ. ಇಲ್ಲಿ ನಾವು ಬುದ್ಧಿ, ಪ್ರತಿಭೆ ಎಂಬ ಒಂದೇ ಮಾನದಂಡವನ್ನು ನೋಡಲಾಗುವುದಿಲ್ಲ. ಅದರೊಟ್ಟಿಗೆ ಸಮಾಜದ ಬಗ್ಗೆ ಕಳಕಳಿ, ತಿಳಿವಳಿಕೆ, ಮಾನವೀಯ ಮೌಲ್ಯಗಳನ್ನು ಹೊಂದಿರುವವರು ನ್ಯಾಯಾಧೀಶರಾಗಬೇಕು. ಅವರಿಗೆ ಕೊಟ್ಟಿರುವ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ರೂಢಿಸಿಕೊಳ್ಳುವವರು, ಜನರ ಭಾವನೆಗಳನ್ನು ಅರ್ಥೈಸಿಕೊಳ್ಳುವ ನ್ಯಾಯಾಧೀಶರು ಬೇಕು. ಇಂತಹವರನ್ನು ಹುಡುಕುವ ವ್ಯವಸ್ಥೆ ಬೇಕು” ಎನ್ನುತ್ತಾರೆ.
“ನ್ಯಾಯಾಲಯಗಳಲ್ಲಿ ಒಂದೇ ಧರ್ಮದ, ಒಂದೇ ಜಾತಿಯ ನ್ಯಾಯಾಧೀಶರು ಇರುವುದು ಸರಿಯಲ್ಲ. ಪ್ರಾದೇಶಿಕ, ಲಿಂಗ, ಧರ್ಮ, ಜಾತಿಗಳ ಆಧಾರದಲ್ಲಿ ನ್ಯಾಯಾಧೀಶರ ಪ್ರಾತಿನಿಧ್ಯ ಇರಲೇಬೇಕು. ಎಲ್ಲಾ ಜಾತಿ, ವರ್ಗದ ನ್ಯಾಯಾಧೀಶರಿಗೂ ಸಹ ಒಂದು ಅವಕಾಶ ನೀಡಿ, ಸಾಮಾಜಿಕ ನ್ಯಾಯವನ್ನು ಪರಿಪಾಲಿಸಬೆಕು.”

“ನಿಷ್ಪಕ್ಷಪಾತವಾಗಿ ನಡೆದುಕೊಳ್ಳುವ, ನಿರ್ಣಯ ತೆಗೆದುಕೊಳ್ಳುವ ಛಾತಿ ಇರುವ, ಧೀಮಂತಿಕೆ ಇರುವವರು ಕೊಲಿಜಿಯಂ ಸದಸ್ಯರಾಗಬೇಕು. ಹಿರಿತನ ಮುಖ್ಯವಾದರೂ ಸಹ ದೃಢ ಮನಸ್ಸಿನ, ನಮ್ಮ ನ್ಯಾಯಾಂಗ ವ್ಯವಸ್ಥೆಯ ಹಿತಾಸಕ್ತಿ ಬಯಸುವವರು ಕೊಲಿಜಿಯಂನಲ್ಲಿರಬೇಕು. ಕೊಲಿಜಿಯಂಗೆ ಸಮರ್ಥ ಕಾರ್ಯನಿರ್ವಹಣೆ ಬೇಕು. ಅಲ್ಲಿನ ಸದಸ್ಯರು ಸಾಮೂಹಿಕ ನಿರ್ಧಾರಕ್ಕೆ ಬದ್ಧವಾಗಬೇಕೆ ಹೊರತು ಸಿಜೆಐ ಹೇಳಿದ್ದಕ್ಕೆ ಹುಹು ಅನ್ನುವುದಲ್ಲ. ಆ ರೀತಿ ಅದನ್ನು ಬದಲಿಸುವ ಸಂದರ್ಭ ಇದಾಗಿದೆ. ಅದಕ್ಕಾಗಿ ನಾನು ಒತ್ತಾಯಿಸುತ್ತೇನೆ” ಎಂದರು.
ನಿರ್ದಿಷ್ಟ ನಿಯಮಗಳುಳ್ಳ ಸ್ವಾಯತ್ತ ಸಂಸ್ಥೆ ಬೇಕು – ಜಸ್ಟೀಸ್ ಎಚ್.ಎನ್ ನಾಗಮೋಹನ್ ದಾಸ್
“90ರ ದಶಕಕ್ಕಿಂತ ಮುಂಚೆ ಕೊಲಿಜಿಯಂ ವ್ಯವಸ್ಥೆಯೇ ಇರಲಿಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಮೇಲುಗೈ ಇತ್ತು. ಆದರೆ ಆ ಮೇಲುಗೈಯನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳಲಿಲ್ಲ. ಅದು ಕೊಂಚ ದುರ್ಬಳಕೆಯಾದುದರ ವಿರುದ್ಧ ಜನರು ದನಿಯೆತ್ತಿದ್ದರು. ಸರ್ಕಾರದ ಮೇಲುಗೈ ಕೊನೆಗಾಣಿಸುವ ಚರ್ಚೆಗಳಾದವು. ಹಾಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆದರೆ ಕ್ರಮೇಣ ಈ ಕೊಲಿಜಿಯಂ ವ್ಯವಸ್ಥೆ ಸಹ ವಿಫಲವಾಗಿದೆ” ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್‌ರವರು.
ಇದನ್ನೂ ಓದಿ: 12 ಹೈಕೋರ್ಟ್‌ಗಳಿಗೆ 68 ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿದ ಕೊಲಿಜಿಯಂ
“ಕೊಲಿಜಿಯಂ ವ್ಯವಸ್ಥೆಗೆ ನಿರ್ದಿಷ್ಟವಾಗಿ ಕ್ರೋಢೀಕರಿಸಿದ ನಿಯಮಗಳಾಗಲಿ, ಮಾನದಂಡಗಳಾಗಲಿ ಇಲ್ಲ. ಹಾಗಾಗಿ ನೇಮಕಾತಿಯಲ್ಲಿ ಪಾರದರ್ಶಕತೆ ಬಾರದೆ, ನ್ಯಾಯಾಧೀಶರ ಮಕ್ಕಳೆ ನ್ಯಾಯಾಧೀಶರಾಗುವಂತಹ ಪರಿಸ್ಥಿತಿ ಇದೆ. ಈ ನ್ಯಾಯಾಂಗದ ಮೇಲುಗೈಯನ್ನು ತಪ್ಪಿಸಲು ಸರ್ಕಾರ ಮತ್ತೆ ಯತ್ನಿಸುತ್ತಿದೆ. ಆದರೆ ನನ್ನ ಅಭಿಪ್ರಾಯದಲ್ಲಿ ಸರ್ಕಾರದ ಅಥವಾ ನ್ಯಾಯಾಂಗದ ಮೇಲುಗೈ ಇಲ್ಲದ ಸ್ಪಷ್ಟ ನಿಯಮಗಳನ್ನು ಹೊಂದಿರುವ ಸ್ವತಂತ್ರವಾದ ಸಂಸ್ಥೆಯೊಂದಕ್ಕೆ ನ್ಯಾಯಾಧೀಶರ ನೇಮಕಾತಿ ಅಧಿಕಾರ ನೀಡಬೇಕು” ಎಂದರು.

“ಈಗ ಕೊಲಿಜಿಯಂ ಕಳಿಸುವ ಶಿಫಾರಸ್ಸುಗಳನ್ನು ಸರ್ಕಾರ ಅನಗತ್ಯವಾಗಿ ತಡೆಹಿಡಿಯುತ್ತಿದೆ. ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳದೆ ಸಮಯ ವ್ಯರ್ಥ ಮಾಡಲಾಗುತ್ತಿದೆ. ಇದರಿಂದ ನ್ಯಾಯಾಧೀಶರಾಗಲು ಒಪ್ಪಿಗೆ ನೀಡಿದ್ದವರು ಸುಸ್ತಾಗಿ ತಮ್ಮ ಅನುಮತಿ ವಾಪಸ್ ಪಡೆಯುವ ಸಂಭವವಿದೆ. ಇನ್ನು ಕೆಲವರು ವಯಸ್ಸು ಮೀರಿ ನಿವೃತ್ತಿಯಾಗುವುದು ಇದೆ. ಇವೆಲ್ಲವೂ ರಾಜಕೀಯ ಕಾರಣಗಳಿಗಾಗಿ ನಡೆಯುತ್ತಿವೆ. ಹಾಗಾಗಿ ಇದು ಸರಿಯಾದ ಮಾರ್ಗವಲ್ಲ.”
“ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ನ್ಯಾಯಾಂಗಗಳಲ್ಲಿ ಪ್ರಾತಿನಿಧ್ಯವಿರಬೇಕು. ಏಕೆಂದರೆ ಭಾರತವೆಂದರೆ ಯಾವುದೋ ಒಂದು ಜಾತಿಯವರ ಸ್ವತ್ತಲ್ಲ. ಅದು ಹಲವು ಜಾತಿ-ಧರ್ಮಗಳ ಒಕ್ಕೂಟವಾಗಿದೆ. ಎಲ್ಲಾ ಜಾತಿಯವರಿಗೂ ಪ್ರಾತಿನಿಧ್ಯ ಕೊಡಲಾಗದಿದ್ದರೂ ಒಂದು ವಿಶಾಲ ಒಳಗೊಳ್ಳುವಿಕೆ ಅಗತ್ಯವಿದೆ. ನಮ್ಮ ಜನಸಂಖ್ಯೆಯಲ್ಲಿ 50% ಇರುವ ಮಹಿಳೆಯರಿಗೆ ನ್ಯಾಯಾಲಯಗಳಲ್ಲಿ ಪ್ರಾತಿನಿಧ್ಯ ಬೇಡವೇ? ದಲಿತರಿಗೆ ಪ್ರಾತಿನಿಧ್ಯ ಬೇಡವೇ? ಅವರನ್ನು ಹುಡುಕಿ ಅವಕಾಶ ಕೊಡುವ ಅವಶ್ಯಕತೆಯಿದೆ. ಈ ರೀತಿಯ ಪ್ರಾತಿನಿಧ್ಯ, ಪ್ರಾದೇಶಿಕ ಸಮತೋಲನ ಕಾಪಾಡಿಕೊಳ್ಳಬೇಕು” ಎಂದರು.
“ಸುಪ್ರೀ ಕೋರ್ಟ್‌ನಲ್ಲಿ ಐವರು ನ್ಯಾಯಾಧೀಶರು ಮತ್ತು ಹೈಕೋರ್ಟ್‌ಗಳಲ್ಲಿ ಮೂವರು ನ್ಯಾಯಾಧೀಶರು ಕೊಲಿಜಿಯಂನಲ್ಲಿರುತ್ತಾರೆ. ಆದರೆ ಇವರ ಕಣ್ಣಿಗೆ ಕಂಡವರು ಮಾತ್ರ ಪ್ರತಿಭಾವಂತರು ಎಂದು ಹೇಳಲಾಗುವುದಿಲ್ಲ. ಆ ಪ್ರತಿಭಾವಂತರನ್ನು ಗುರುತಿಸುವ ವ್ಯವಸ್ಥೆ ನಮಗೆ ಬೇಕಿದೆ. ಅದಕ್ಕಾಗಿ ನ್ಯಾಯಾಧೀಶರೇ ನ್ಯಾಯಾಧೀಶರನ್ನು ನೇಮಕ ಮಾಡುವುದು ಸರಿಯಿಲ್ಲ ಅಥವಾ ಸರ್ಕಾರ ಮಾಡುವುದು ಸರಿಯಲ್ಲ. ಬದಲಿಗೆ ನಿರ್ದಿಷ್ಟ ನಿಯಮಗಳು, ಮಾರ್ಗದರ್ಶನಗಳುಳ್ಳ ಒಂದು ಸ್ವಾಯತ್ತ ಸಂಸ್ಥೆಯನ್ನು ಹುಟ್ಟುಹಾಕುವ ಕಡೆಗೆ ಹೆಜ್ಜೆ ಇಡಬೇಕಿದೆ. ಆಗ ಮಾತ್ರ ಅದರ ನೇಮಕಾತಿಗಳಿಗೆ ಮಾನ್ಯತೆ ದೊರಕುತ್ತದೆ ಎಂದು ಅಭಿಪ್ರಾಯಪಟ್ಟರು.


