“ಆರೆಸ್ಸೆಸ್ ಬೆಂಬಲಿತ ಶಾಲೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕೋಮು ದ್ವೇಷವನ್ನು ಬೆಳೆಸುತ್ತವೆ” ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು ಹೇಳಿಕೆ ನೀಡಿದ್ದಾರೆ. ಇದರ ವಿರುದ್ದ ಮಧ್ಯಪ್ರದೇಶದ ಬಿಜೆಪಿ ವಕ್ತಾರ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು ಪಿಟಿಐ ಬುಧವಾರ ವರದಿ ಮಾಡಿದೆ.
ದಿಗ್ವಿಜಯ್ ಸಿಂಗ್ ಅವರು ಭಾನುವಾರದಂದು ಭೋಪಾಲ್‌ನಲ್ಲಿ ಸರಸ್ವತಿ ಶಿಶು ಮಂದಿರದ ಬಗ್ಗೆ ಹೇಳಿಕೆ ನೀಡಿದ್ದರು. “ಬಾಲ್ಯದಿಂದಲೆ ಸರಸ್ವತಿ ಶಿಶು ಮಂದಿರದಲ್ಲಿ, ವಿದ್ಯಾರ್ಥಿಗಳ ಹೃದಯ ಮತ್ತು ಮನಸ್ಸಿನಲ್ಲಿ ಇತರ ಧರ್ಮಗಳ ವಿರುದ್ಧ ದ್ವೇಷದ ಬೀಜಗಳನ್ನು ಬಿತ್ತುವವರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಈ ದ್ವೇಷದ ಬೀಜಗಳು ಕ್ರಮೇಣ ಭಾರತದ ಕೋಮು ಸೌಹಾರ್ದತೆಯನ್ನು ಕೆಡಿಸುತ್ತವೆ ಹಾಗೂ ಕೋಮು ದ್ವೇಷವನ್ನು ಸೃಷ್ಟಿಸುತ್ತವೆ ಮತ್ತು ಗಲಭೆಗೆ ಕಾರಣವಾಗುತ್ತವೆ” ಎಂದು ಹೇಳಿದ್ದರು.
ಇದನ್ನೂ ಓದಿ: ಕೋಮುದ್ವೇಷ ಬಿತ್ತುವ ವರದಿಗಳಿಂದ ದೇಶಕ್ಕೆ ಕೆಟ್ಟ ಹೆಸರು: ಸುಪ್ರೀಂ ಆತಂಕ
ಬಿಜೆಪಿ ವಕ್ತಾರರಾದ ಪಂಕಜ್ ಚತುರ್ವೇದಿ ಅವರು ಬುಧವಾರದಂದು ದಿಗ್ವಿಜಯ್ ಸಿಂಗ್ ಅವರಿಗೆ, ಶಾಲೆಗಳ ವಿರುದ್ಧ ಮಾಡಿರುವ ತಮ್ಮ ಟೀಕೆಗಳನ್ನು ಹಿಂಪಡೆಯುವಂತೆ ಕೇಳಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ದಿಗ್ವಿಜಯ್ ಅವರು ಭಾರತದಾದ್ಯಂತ ಹರಡಿರುವ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕ್ಷಮೆ ಕೇಳಬೇಕು. ಕ್ಷಮೆ ಕೇಳದಿದ್ದರೆ, ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ” ಎಂದು ಪಂಕಜ್ ಹೇಳಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡಾ ದಿಗ್ವಿಜಯ್ ಸಿಂಗ್ ಮತ್ತು ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕ ವಿವೇಕ್ ಜೋಹ್ರಿಗೆ ಸೋಮವಾರ ನೋಟಿಸ್ ನೀಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮಕ್ಕಳ ಹಕ್ಕುಗಳ ಆಯೋಗವು, ಈ ಕುರಿತು ವಿಚಾರಣೆ ನಡೆಸಿ ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ವಿವೇಕ್ ಜೋಹ್ರಿಯನ್ನು ಕೇಳಿದೆ. ದಿಗ್ವಿಜಯ್ ಅವರ ಹೇಳಿಕೆ ಸರಸ್ವತಿ ಶಿಶು ಮಂದಿರದ ವಿದ್ಯಾರ್ಥಿಗಳ ಭಾವನೆಗಳನ್ನು ಘಾಸಿಗೊಳಿಸಿದೆ. ಜೊತೆಗೆ ಭಾರತೀಯ ದಂಡ ಸಂಹಿತೆ ಹಾಗೂ ಬಾಲ ನ್ಯಾಯ ಕಾಯ್ದೆಯ ಭಾಗಗಳನ್ನು ಅವರ ಹೇಳಿಕೆ ಉಲ್ಲಂಘಿಸಿವೆ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ: Fact check: ಸುಳ್ಳು ವರದಿ ಮಾಡಿ ಕೋಮುದ್ವೇಷ ಹರಡುತ್ತಿರುವ ಝೀ ನ್ಯೂಸ್


