ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಬಹಿರಂಗವಾಗಿ ನಡೆಯುತ್ತಿದ್ದು, ಪ್ರಶ್ನೆ ಮಾಡಿದ ವಿದ್ಯಾರ್ಥಿಗಳನ್ನು ವಿವಿಧ ರೀತಿಯಲ್ಲಿ ಗುರಿಯಾಗಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಜುಲೈ 18, 2024ರಂದು ವಿಶ್ವ ವಿದ್ಯಾಲಯದ ಅತಿಥಿ ಗೃಹದಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಕಾರ್ಯಕ್ರವೊಂದು ನಡೆದಿದ್ದು, ಕುಲಸಚಿವ ಆರ್.ಆರ್ ಬಿರಾದಾರ, ಶೈಕ್ಷಣಿಕ ನಿರ್ದೇಶಕ ಪ್ರೊ. ಬಸವಾರಾಜ್ ಡೋಣುರ್, ವಿವಿ ಅಭಿವೃದ್ಧಿ ಅಧಿಕಾರಿ ಪ್ರೊ. ಚನ್ನವೀರಯ್ಯ, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಕುಬೂಕಡ್ಡಿ , ಚಿಫ್ ವಾರ್ಡನ್ ಡಾ. ಬಸವಾರಾಜ್ ಸೋಮನಮರಡಿ, ವಿವಿ ಶಿಸ್ತು ಪಾಲನಾ ಅಧಿಕಾರಿ ವೆಂಕಟರಮಣ ದೊಡ್ಡಿ, ಪರೀಕ್ಷಾ ಮುಖ್ಯ ಅಧಿಕಾರಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡು ಭಗವಾಧ್ವಜಕ್ಕೆ ನಮಿಸಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ನಂದಕುಮಾರ ಪಿ ಆರೋಪಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿರುವ ಅವರು, ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆ ನಿಮಿತ್ತ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಿದ್ದಾರೆ. ಅದರ ಭಾಗವಾಗಿ ಕೇಂದ್ರೀಯ ವಿವಿಯಲ್ಲಿ ಸಿದ್ದತಾ ಕಾರ್ಯಕ್ರಮ ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ನಾಗಪುರದಿಂದ ಆಗಮಿಸಿದ್ದ ಕೆಲವರು ಹಿಂದಿಯಲ್ಲಿ ಭಾಷಣ ಮಾಡಿದ್ದು, “ವಿವಿ ಆರ್‌ಎಸ್‌ಎಸ್ ಕೇಂದ್ರ ಎನ್ನುವುದನ್ನು ಪದೇ ಪದೇ ಗುರುತಿಸುವ ಅಗತ್ಯವಿಲ್ಲ, ಇದು ಆರ್‌ಎಸ್‌ಎಸ್‌ನ ಕೇಂದ್ರವೇ. ಭಗವಾ ಧ್ವಜಕ್ಕೆ ನೀವು ಸದಾ ನಮಿಸಬೇಕು, ಅದನ್ನು ಗೌರವಿಸಬೇಕು. ಎಡ ಪಂಥೀಯರು ಇಲ್ಲಿ ಧ್ವನಿಯೆತ್ತಿದ್ದರೆ ಅವರನ್ನು ಯಾವ ರೀತಿ ಸದ್ದಡಗಿಸಬೇಕು ಎಂದು ನಾವು ಈ ಹಿಂದೆ ಹೇಳಿದ್ದೇವೆ. ಅದರಂತೆ ನೀವು ನಡೆದುಕೊಂಡಿದ್ದೀರಿ, ಅದು ಒಳ್ಳೆಯ ಬೆಳವಣಿಗೆ. ಇದರಿಂದ ಎಡ ಪಂಥೀಯರಿಗೆ ಒಂದಿಷ್ಟು ಭಯ ಬಂದಿದೆ. ನಿಮ್ಮ ಪ್ರತಿರೋಧವನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕೇಂದ್ರದಲ್ಲಿ ನಮ್ಮ ಸರ್ಕಾರ ಇಲ್ಲ ಎಂಬ ಭಾವನೆ ಅವರಿಗೆ ಬಂದಿದೆ. ಒಂದು ರೀತಿಯಲ್ಲಿ ಜಾಸ್ತಿ ಗೆದ್ದಿದ್ದೀವಿ ಎನ್ನುವ ಉತ್ಸಾಹದಲ್ಲಿದ್ದಾರೆ. ಸಂವಿಧಾನ ಅಂತೆಲ್ಲ ಹೇಳುತ್ತಿದ್ದಾರೆ. ಹಾಗೇನು ಇಲ್ಲ, ಯಾರು ಬಂದರೂ, ನಮ್ಮದೆ ಅರ್‌ಎಸ್‌ಎಸ್, ನಮ್ಮದೇ ಸರ್ಕಾರ ನಡೆಯುವುದು. ನೀವು ಆರ್‌ಎಸ್‌ಎಸ್‌ನ ಸಿದ್ದಾಂತಗಳನ್ನು ಎಷ್ಟು ಅಗುತ್ತೋ ಅಷ್ಟು ಅನುಷ್ಠಾನಗೊಳಿಸಿ. ಯಾರಾದರೂ ಪ್ರಾಧ್ಯಾಪಕರು ವಿರುದ್ದವಾಗಿ ನಡೆದುಕೊಂಡರೆ, ಅವರಿಗೆ ಮುಲಾಜಿಲ್ಲದೆ ನೋಟಿಸ್ ಕೊಡಿ. ವಿದ್ಯಾರ್ಥಿಗಳು ಪ್ರಶ್ನಿಸಿದರೆ, ಅವರ ಧ್ವನಿ ಅಡಗಿಸಿ. ಅದೂ ಅಗಿಲ್ಲ ಅಂದರೆ, ಬೇರೆ ರೀತಿಯ ಕ್ರಮ (ಪೊಲೀಸ್ ದೂರು ಇತ್ಯಾದಿ) ಕೈಗೊಳ್ಳಿ. ಇಲ್ಲಿ ಯಾರೇ ಸಚಿವ, ಸಂಸದ ಆದರೂ ನೀವು ಚಿಂತೆ ಮಾಡುವ ಅವಶ್ಯಕತೆಯಿಲ್ಲ” ಎಂದು ಹೇಳಿದ್ದಾಗಿ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸಂಶೋಧನಾ ವಿದ್ಯಾರ್ಥಿಗಳ ಮೇಲೆ ನರೇಂದ್ರ ದರಿಯಾ ಹಾಗೂ ರೋಹಿತ್ ಜೋಶಿ (ಪ್ರೊ. ಬಸವರಾಜ್ ಡೋಣುರ್ ಅವರ ಶಿಷ್ಯ) ಕೂಡಿಕೊಂಡು ಹಲ್ಲೆಗೆ ಮುಂದಾಗಿದ್ದಲ್ಲದೆ. ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲೀಟ್ ಮಾಡು ಇಲ್ಲವಾದರೆ ಪರಿಣಾಮ ಸರಿ ಇರುವುದಿಲ್ಲವೆಂದು ಬೆದರಿಕೆ ಒಡ್ಡಿದ್ದಾರೆ. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮ ಕಾನೂನಾತ್ಮಕವಾಗಿದ್ದರೆ, ಸಂವಿಧಾನ ಬದ್ದವಾಗಿದ್ದರೆ ಇಷ್ಟೊಂದು ಭಯದಿಂದ ಕಾರ್ಯಕ್ರಮ ಆಯೋಜನೆ ಮಾಡುವ ಅಶ್ಯಕತೆ ಏನಿದೆ? ಎಂದು ನಂದಕುಮಾರ ಪ್ರಶ್ನಿಸಿದ್ದಾರೆ.
“ವಿವಿಯಲ್ಲಿ ಶೈಕ್ಷಣಿಕವಾಗಿ ಏನು ನಡೆಯುತ್ತಿಲ್ಲ. ಕೇವಲ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯುತ್ತವೆ. ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಪರವಾಗಿದ್ದರೆ ಅವರನ್ನು ಸುಲಭವಾಗಿ ಪಾಸ್ ಮಾಡುತ್ತಾರೆ. ಪ್ರಾಧ್ಯಾಪಕರು ಒಬ್ಬ ವಿದ್ಯಾರ್ಥಿಯನ್ನು ಪಾಸ್ ಮಾಡಿದರೆ, ಆತನ ಹಿನ್ನೆಲೆ ತಿಳಿದುಕೊಂಡು (ಎಡ ಪಂಥೀಯನೋ, ಬಲ ಪಂಥೀಯನೋ) ಪರೀಕ್ಷಾ ಮುಖ್ಯ ಅಧಿಕಾರಿಗಳು ಅವರನ್ನು ಫೇಲ್ ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮಗೆ ಅಧಿಕಾರವಿದೆ ಎನ್ನುತ್ತಾರೆ. ಆರ್‌ಎಸ್‌ಎಸ್ ಪರವಾಗಿದ್ದರೆ ವಿದ್ಯಾರ್ಥಿಗಳು ಸಂಶೋಧನೆ ಮಾಡುವ, ತರಗತಿಗೆ ಹಾಜರಾಗುವ ಅಗತ್ಯವಿಲ್ಲ. ಸ್ವತಃ ಗೈಡ್‌ಗಳೇ ಮುಂದೆ ನಿಂತು ಕ್ಷೇತ್ರ ಕಾರ್ಯ ಸೇರಿದಂತೆ ಇನ್ನಿತರ ನೆಪದಲ್ಲಿ ನಾಗಪುರಕ್ಕೋ, ಉತ್ತರ ಪ್ರದೇಶಕ್ಕೋ ಆರ್‌ಎಸ್‌ಎಸ್ ಶಿಬಿರಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿತ್ತಾರೆ” ಎಂದು ವಿವರಿಸಿದ್ದಾರೆ.
“ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಕುಬೂಕಡ್ಡಿ ತಮ್ಮ ಪರವಾಗಿರುವ ಅಥವಾ ಅರ್‌ಎಸ್‌ಎಸ್ ಪರವಾಗಿರುವ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ಕೊಡುವುದು, ಇತರ ವಿದ್ಯಾರ್ಥಿಗಳನ್ನು ಕಡೆಗಣಿಸುವುದನ್ನು ಮಾಡುತ್ತಾರೆ. ಈ ಬಗ್ಗೆಯೆಲ್ಲ ಪ್ರಶ್ನಿಸಿದರೆ ವಿದ್ಯಾರ್ಥಿಗಳನ್ನು ಅಮಾನತು ಮಾಡುವುದು, ಪೊಲೀಸ್ ದೂರು ದಾಖಲಿಸುವುದು ಮಾಡುತ್ತಾರೆ” ಎಂದು ತಿಳಿಸಿದ್ದಾರೆ.
ಹೆಚ್ಚಿನ ಸಿಬ್ಬಂದಿ ಆಂಧ್ರ ಮೂಲದವರು :
ಕರ್ನಾಟಕಕ್ಕಾಗಿ, ವಿಶೇಷವಾಗಿ ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿ ಸ್ಥಾಪನೆ ಮಾಡಿದ್ದರೂ, ಶೇ. 75ರಷ್ಟು ಸಿಬ್ಬಂದಿ ಆಂಧ್ರ ಪ್ರದೇಶ ಮೂಲದವರಿದ್ದಾರೆ. ಈ ರೀತಿಯಾದರೆ ಉತ್ತರ ಕರ್ನಾಟಕದವರಿಗೆ ವಿವಿಯಿಂದ ಏನು ಪ್ರಯೋಜನವಾಗಲಿದೆ? ಎಂದು ನಂದಕುಮಾರ ಪ್ರಶ್ನಿಸಿದ್ದಾರೆ.
ಪ್ರಶ್ನಿಸಿದರೆ ದಬ್ಬಾಳಿಕೆ
“ವಿವಿಯಲ್ಲಿ ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಕಾರ್ಯಕ್ರಮ ನಡೆಸಲು ಅವಕಾಶವಿದೆಯೇ?” ಎಂಬ ನಮ್ಮ ಪ್ರಶ್ನೆಗೆ ಉತ್ತರಿಸಿದ ನಂದಕುಮಾರ ಅವರು, “ವಿವಿಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮ ನಡೆಸಲು ಅನುಮತಿ ಇಲ್ಲ. ಆದರೆ, ಇಲ್ಲಿ ಆರ್‌ಎಸ್‌ಎಸ್‌ಗೆ ಅವಕಾಶ ನೀಡಿದ್ದಾರೆ. ಈ ಹಿಂದೆಯೊಮ್ಮೆ ಆರ್‌ಎಸ್‌ಎಸ್‌ನ ಸಭೆಯನ್ನು ವಿವಿಯ ಅತಿಥಿ ಗೃಹದಲ್ಲಿ ಆಯೋಜಿಸಿದ್ದರು. ಈ ವೇಳೆ ನಾವು ಅಂಬೇಡ್ಕರ್‌ವಾದ ವಿದ್ಯಾರ್ಥಿ ಸಂಘಟನೆಗೆ ಸಂಬಂಧಿಸಿದ ಸಭೆ ನಡೆಸಲು ಅನುಮತಿ ಕೇಳಿದ್ದೆವು. ಆ ಸಂದರ್ಭದಲ್ಲಿ ಕುಲ ಸಚಿವರು ಆರ್‌ಎಸ್‌ಎಸ್ ಸಭೆಯನ್ನು ರದ್ದುಪಡಿಸಿದ್ದರು. ಇದಾಗಿ ಅರ್ಧ ಗಂಟೆಯ ಬಳಿಕ ಇತಿಹಾಸ ವಿಭಾಗದ ಮುಖ್ಯಸ್ಥ ರವಿ ಕುಮಾರ್ ಎಂಬವರು ವಿಭಾಗದ ಒಳಗಡೆ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಈ ಬಗ್ಗೆ ನಾವು ಕುಲಸಚಿವರನ್ನು ಪ್ರಶ್ನಿಸಿದಾಗ ” ಇಲ್ಲ ಯಾರೂ ಸಭೆಗೆ ಅನುಮತಿ ಕೊಟ್ಟಿದ್ದಾರೋ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು”. ಆದರೆ, ಮರುದಿನ ಪ್ರಶ್ನೆ ಮಾಡಿದ್ದ ನಮ್ಮ ಪಿಹೆಚ್‌ಡಿ ರದ್ದುಪಡಿಸಿ ವಿವಿ ಪ್ರವೇಶಕ್ಕೆ ತಡೆಯೊಡ್ಡಿದ್ದರು” ಎಂದು ಹೇಳಿದ್ದಾರೆ.
“ವಿಶ್ವ ವಿದ್ಯಾಲಯದ ಎಲ್ಲಾ ಆಯ ಕಟ್ಟಿನ ಸ್ಥಳಗಳನ್ನು ಅಕ್ರಮಿಸಿಕೊಂಡು ಅಧಿಕಾರದಲ್ಲಿ ಆರ್‌ಎಸ್‌ಎಸ್‌ನ ಮತಾಂದರೆ ತುಂಬಿದ್ದಾರೆ. ಶರಣರ, ಸೂಫಿ ಸಂತರ, ತತ್ವಪದಕಾರರ ಸೌಹಾರ್ದ ಪರಂಪರೆಯ ನಮ್ಮ ಈ ಭಾಗದ ವಿದ್ಯಾರ್ಥಿಗಳು ಇಂತಹ ಪ್ರಾಧ್ಯಾಪಕರಿಂದ ಏನು ಕಲಿಯುವರು ಎಂಬುವುದನ್ನು ಊಹಿಸಿದರೆ ಆತಂಕವಾಗುತ್ತದೆ. ಹಾಗಾಗಿ, ಈ ವಿಶ್ವವಿದ್ಯಾಲಯಕ್ಕೆ ಆರ್‌ಎಸ್‌ಎಸ್ ಕೇಂದ್ರೀಯ ಕಚೇರಿ ವಿಶ್ವವಿದ್ಯಾಲಯ ಅಂತ ಹೆಸರು ಇಡುವುದೇ ಸೂಕ್ತ ಎನ್ನಿಸುತ್ತಿದೆ” ಎಂದು ನಂದಕುಮಾರ ಬೇಸರ ಹೊರ ಹಾಕಿದ್ದಾರೆ.
ಇದನ್ನೂ ಓದಿ : ಕನ್ವರ್ ಯಾತ್ರೆ ಮಾರ್ಗದ ಹೋಟೆಲ್‌ಗಳು ಮಾಲೀಕ, ಸಿಬ್ಬಂದಿಯ ಹೆಸರು ಪ್ರದರ್ಶಿಸಬೇಕು: ಆಕ್ರೋಶಕ್ಕೆ ಕಾರಣವಾದ ಯುಪಿ ಪೊಲೀಸರ ಆದೇಶ



