| ಡಾ.ಅನುಸೂಯ ಕಾಂಬಳೆ |
ಸಂವಿಧಾನದಲ್ಲಿ ಧರ್ಮಶಾಸ್ತ್ರವಿಲ್ಲ, ಇನ್ನು ಮುಂದೆ ಹೆಂಡತಿಯಿಂದ ಸಹಿ ಪಡೆದುಕೊಂಡು ಮುಟ್ಟಬೇಕಾಗುತ್ತದೆ ಎಂಬ ಎಸ್.ಎಲ್.ಭೈರಪ್ಪನವರ ಮಾತುಗಳಿಗೆ ಹಲವು ಬರಹಗಾರ್ತಿಯರು ಪ್ರತಿಕ್ರಿಯಿಸಿದ್ದನ್ನು ಹಿಂದೆಯೇ ಪ್ರಕಟಿಸಿದ್ದೆವು. ಅದರ ಮುಂದುವರಿಕೆಯಾಗಿ ಪ್ರಾಧ್ಯಾಪಕಿ, ಕವಯತ್ರಿ ಮತ್ತು ಚಿಂತಕರಾದ ಡಾ.ಅನಸೂಯ ಕಾಂಬಳೆಯವರ ಬರಹ ಇಲ್ಲಿದೆ.
ಪರಂಪರೆಯ ಪ್ರಜ್ಞೆ ಮತ್ತು ರಾಷ್ಟ್ರೀಯತೆ ಎರಡು ಭಿನ್ನವಾದವು. ಭೈರಪ್ಪನವರ ಮಾತಿಗೆ ಪ್ರತಿಕ್ರಿಯಿಸುವುದು ಅಂತ ವಿಶೇಷ ಅನಿಸುವುದಿಲ್ಲ. ಧರ್ಮಶಾಸ್ತ್ರವೇ ರಾಷ್ಟ್ರೀಯ ಗ್ರಂಥವಾಗಬೇಕೆಂದು ಏಕೆ ಹೇಳುತ್ತಿದ್ದಾರೆ ಎನ್ನುವುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಅವರು ಹೇಳುವ ಧರ್ಮ ರಾಷ್ಟ್ರವನ್ನು ಪ್ರತಿನಿಧಿಸುವ ಧರ್ಮವಲ್ಲ. ಕೇವಲ ಮೂರು ಪ್ರತಿಶತದಷ್ಟು ಜನರಿಗೆ ಅನ್ವಯಿಸುವುದು ಮತ್ತು ಅಧಿಕಾರವನ್ನು ಅವರಿಗೆ ನಿಗದಿಗೊಳಿಸುವರಿಂದ ಹೇಳುತ್ತಿರುವ ರಾಜಕಾರಣದ ಭಾಗವೇ ಆಗಿದೆ ಹೊರತು ಪರಂಪರೆಯ ಪ್ರಶ್ನೆ ಅಲ್ಲ. ಬ್ರಾಹ್ಮಣರಿಗೆ ಅಧಿಕಾರ ಇರಬೇಕು, ಭಾರತದ ಬಹುಸಂಖ್ಯಾತರು ಸೇವಕರು ಆಗಿರಬೇಕು ಎಂದು ಹೇಳಲು ಧೈರ್ಯವಿಲ್ಲದೆ ಪರಂಪರೆ ಹೆಸರಿನ ಸಂಕೇತದ ಮೂಲಕ ಸೂಚಿಸುತ್ತಿದ್ದಾರೆ.
ಭೈರಪ್ಪನವರು ಹೇಳುವ ಧರ್ಮ ಭಾರತೀಯರ ಭಾವೈಕ್ಯತೆಯನ್ನು ಹೊಂದಿಲ್ಲ. ವರ್ಣ, ಜಾತಿ, ಲಿಂಗ ನೆಲೆಯಲ್ಲಿ ಅಧಿಕಾರದ ವಿಭಜನೆ ಮಾಡುತ್ತಾ ಮನುಷ್ಯ ಮನುಷ್ಯರ ನಡುವೆ ಬೇಧ ಸಂಸ್ಕೃತಿಯನ್ನು ಬಿತ್ತುತ್ತದೆ. ಮೇಲು – ಕೀಳು ಎನ್ನುವ ಶ್ರೇಣೀಕರಣದ ಮೂಲಕ ಒಡೆದು ಆಳುವ ನೀತಿಯನ್ನು ಅನುಸರಿಸುತ್ತವೆ. ಇದೇ ಪರಂಪರೆ ಅನ್ನುವುದಾದರೆ ಬೈರಪ್ಪನವರು ಹೇಳುತ್ತಿರುವುದು ಏನನ್ನು? ನಮ್ಮ ಸಂವಿಧಾನ ವಿಶ್ವ ಮಾನವ ತತ್ವಗಳನ್ನು ಹೊಂದಿದೆ. ಅದರ ಪ್ರಸ್ತಾವನೆಯಲ್ಲಿ “ನಾವು” ಅನ್ನುವ ಪದವೇ ಭಾರತೀಯರ ಭವ್ಯ ಪರಂಪರೆ ಮತ್ತು ಸಾಂಸ್ಕೃತಿಕ ಅನನ್ಯತೆಯನ್ನು ಹೇಳುತ್ತಿಲ್ಲವೆ? ನಮ್ಮ ಸಂವಿಧಾನದ ಆತ್ಮವಾದ ಸಮಾನತೆ, ಸ್ವಾತಂತ್ರ, ಭ್ರಾತೃತ್ವ, ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಮಾನವನಲ್ಲಿ ಇರಬೇಕಾದ ಮೂಲಭೂತ ಗುಣಗಳನ್ನು ಬೇರೆ ಬೇರೆ ದೇಶಗಳಿಂದ ಎರವಲು ತಂದವುಗಳೆಂದು ಹೇಳಲಾದೀತೆ? ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಮಾನವತಾವಾದವು ಭೈರಪ್ಪನವರು ಹೇಳುವ ಸಾಂಸ್ಥಿಕ ಧರ್ಮದಲ್ಲಿ ಇದೆಯೇ? ಮನುಷ್ಯನ ಸ್ವಾವಲಂಬನೆ, ಸ್ವಾಯತ್ತತೆಯನ್ನು ನಾಶಮಾಡುವ ಆತನ ಸಹಜ ಶಕ್ತಿಯನ್ನು ನಾಶ ಮಾಡಿ ನಿಷ್ಕ್ರಿಯಗೊಳಿಸುವ, ಜನರನ್ನು ಸದಾ ಭಯ ಮತ್ತು ಆತಂಕದಲ್ಲಿ ಇಡುವ ಮೌಢ್ಯವನ್ನು ಬಿತ್ತುತ್ತ ಅಧಿಕಾರ ಮತ್ತು ಆದಾಯದ ಮೂಲಗಳಿಂದ ವಂಚಿಸುವ ಭಾರತದ ಬಹುಜನ ಸಮುದಾಯವನ್ನು ಸೇವಕರನ್ನಾಗಿಸುವ ಧರ್ಮಶಾಸ್ತ್ರ ರಾಷ್ಟ್ರೀಯ ಗ್ರಂಥವಾದರೆ ಭಾರತೀಯತೆಯ, ಪ್ರಜಾಪ್ರಭುತ್ವದ ನಾಶವೇ ಆಗುತ್ತದೆ. ಬೈರಪ್ಪನವರ ಧರ್ಮಶಾಸ್ತ್ರ ಗ್ರಂಥವು ದೈವ ಕೇಂದ್ರಿತವಾದುದೇ ಹೊರತು ಮಾನವ ಕೇಂದ್ರಿತ ಅಲ್ಲ. ನಮ್ಮ ಸಂವಿಧಾನವು ಮನುಷ್ಯನ ಮೂಲಕ ನೋಡುವ ಮಾನವತಾವಾದವನ್ನು ಕಟ್ಟಿಕೊಡುವ ಮೂಲಕ ಮನುಷ್ಯನಿಗೆ ಅಪಾರ ಗೌರವ- ಘನತೆಯನ್ನು ತಂದು ಕೊಟ್ಟಿದೆ. ಅದಕ್ಕಾಗಿಯೇ ಭೈರಪ್ಪ ಮತ್ತು ಭೈರಪ್ಪರಂತ ಮೂಲಭೂತವಾದಿಗಳು ಪರಂಪರೆಯ ಹೆಸರಿನಲ್ಲಿ ಅದನ್ನು ವಿರೋಧಿಸುತ್ತಿದ್ದಾರೆ. ಉಗ್ರ ಮಹಿಳಾ ವಿರೋಧಿಯಾದ ಭೈರಪ್ಪನವರು ಮಹಿಳೆಯ ದೇಹದ ಮೇಲೆ ಪುರುಷಾಧಿಕಾರವನ್ನು ಸ್ಥಾಪಿಸಿದ್ದ ಮನುಸ್ಮೃತಿ ಬೆಂಬಲಿಸುತ್ತಿದ್ದಾರೆ. ಸಂವಿಧಾನವು ಮಹಿಳೆಗೆ ಕಾನೂನಾತ್ಮಕ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ನೀಡುವ ಮೂಲಕ ಅವಳಿಗೆ ಗೌರವದ ಬದುಕು ನೀಡಿದೆ. ತಮ್ಮ ಬರಹ ಮತ್ತು ಮಾತಿನ ಮೂಲಕವೇ ಭೈರಪ್ಪನವರು ಮಹಿಳೆಯರನ್ನು ಅವಮಾನಿಸುವ ಮೂಲಕ ಅವಳ ಹಕ್ಕು ಮತ್ತು ಅಧಿಕಾರವನ್ನು ನಿರಾಕರಿಸುತ್ತಿದ್ದಾರೆ.


