ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಸರ್ಕಾರ ರೈತರೊಂದಿಗೆ ಹನ್ನೊಂದು ಸುತ್ತಿನ ಮಾತುಕತೆ ನಡೆಸಿದರು ಎಲ್ಲವೂ ಮುರಿದು ಬಿದ್ದಿದೆ. ಇಂದು ದೆಹಲಿಯ ಗಡಿಗಳ ಸುತ್ತಲೂ ಪ್ರತಿಭಟನಾ ನಿರತ ರೈತರು ಟ್ರಾಕ್ಟರ್ ಪರೇಡ್ ನಡೆಸಿ ಗಣರಾಜ್ಯೋತ್ಸವವನ್ನು, ರೈತರ ಗಣರಾಜ್ಯೋತ್ಸೋವ ಆಗಿ ನಡೆಸಲು ತೀರ್ಮಾನಿಸಿದ್ದಾರೆ.
ಈಗಾಗಲೇ ಟ್ರಾಕ್ಟರ್ ಪರೇಡ್ ಪ್ರಾರಂಭವಾಗಿದ್ದು, ದೆಹಲಿಯ ಸಿಂಘುಗಡಿಯಲ್ಲಿ ರೈತರ ಟ್ರಾಕ್ಟರ್‌ಗಳು ಸಾಲು ಸಾಲಾಗಿ ಮೆರವಣಿಗೆ ಹೊರಟಿವೆ. ರೈತರ ಪರೇಡ್ ಅನ್ನು ಅನುಮತಿಸಿ ರೂಟ್ ಮ್ಯಾಪ್‌ಕೂಡ ಹಾಕಿಕೊಟ್ಟಿದ್ದ ಪೊಲೀಸರು ಪರೇಡ್ ತಡೆಯಲು ಬೆಳ್ಳಂಬೆಳಗ್ಗೆಯೇ ಬ್ಯಾರಿಕೇಡ್‌ಗಳನ್ನು ರಸ್ತೆಗೆ ಅಡ್ಡಲಾಗಿ ಜೋಡಿಸಿದ್ದರು.
ದೆಹಲಿಯಲ್ಲಿ ಐತಿಹಾಸಿಕ ಟ್ರಾಕ್ಟರ್ ರ್ಯಾಲಿ ಪ್ರಾರಂಭ; ದೆಹಲಿಯ ಸಿಂಘುಗಡಿಯಿಂದ ನಾನುಗೌರಿ.ಕಾಮ್ ನೇರ ಪ್ರಸಾರದ ಲೈವ್ ವಿಡಿಯೋ ನೋಡಿ
ಇದರಿಂದ ಸಿಟ್ಟಾಗಿರುವ ರೈತರು 12 ಗಂಟೆಗೆ ನಿಗದಿ ಮಾಡಿದ್ದ ರ್‍ಯಾಲಿಯನ್ನು 08 ಗಂಟೆಗೆ ಆರಂಭಿಸಿದ್ದು, ಪೊಲೀಸರ ಬ್ಯಾರಿಕೇಡ್ ಭೇದಿಸಿ ಟ್ರಾಕ್ಟರ್ ರ್‍ಯಾಲಿ ಹೊರಟಿದ್ದಾರೆ. ರ್‍ಯಾಲಿಯು ಶಾಂತಿಯುತವಾಗಿ ನಡೆಯುತ್ತಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಲಕ್ಷಾಂತರ ಟ್ರಾಕ್ಟರ್‌ಗಳು ಇಂದು ದೆಹಲಿಯ ಐದು ಗಡಿಭಾಗಗಳಿಂದ ರಾಜಧಾನಿಯ ಸುತ್ತಲೂ ಇರುವ ಹೆದ್ದಾರಿಯಲ್ಲಿ ಪರೇಡ್ ನಡೆಸುತ್ತಿವೆ.
ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದ್ದು, ನೂರಾರು ಟ್ರಾಕ್ಟರ್‌ಗಳು ನಿನ್ನೆ (ಸೋಮವಾರ) ರಾತ್ರಿ ದೆಹಲಿ ಗಡಿ ತಲುಪಿವೆ. ಕರ್ನಾಟಕದಿಂದಲೇ ನೂರಾರು ರೈತ-ಹೋರಾಟಗಾರರು ದೆಹಲಿ ಗಡಿಗೆ ತೆರಳಿದ್ದಾರೆ. ಇಂದಿನ ಗಣರಾಜ್ಯೋತ್ಸವ ಆಚರಣೆಯ ದಿನ ರೈತರು ಸರ್ಕಾರಕ್ಕೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.
ಕರ್ನಾಟಕದಲ್ಲಿಯೂ ರೈತರ ಟ್ರಾಕ್ಟರ್ ಪರೇಡ್ ನಡೆಯಲಿದ್ದು, ಈಗಾಗಲೇ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ರೈತ ಹೋರಾಟಗಳು ಪ್ರಾರಂಭವಾಗಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಟ್ರಾಕ್ಟರ್ ರ್‍ಯಾಲಿ ನಡೆಯಲಿದ್ದು, ತಯಾರಿಗಳು ಪ್ರಾರಂಭವಾಗಿದೆ. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಐದು ಹೆದ್ದಾರಿಗಳಿಂದ ಟ್ರಾಕ್ಟರ್ ರ್‍ಯಾಲಿ ನಗರದ ಫ್ರೀಡಂ ಪಾರ್ಕ್ ಕಡೆಗೆ ಹೊರಡಲಿವೆ.
ಇದನ್ನೂ ಓದಿ: ಟ್ರ್ಯಾಕ್ಟರ್ ರ್ಯಾಲಿ ನಡೆದೇ ನಡೆಯುತ್ತದೆ; ಮುಂದಿನದು ಪೊಲೀಸರಿಗೆ ಬಿಟ್ಟಿದ್ದು: ನೂರ್ ಶ್ರೀಧರ್