ಭಾರತ ದೇಶ 1947ರಲ್ಲಿ ಸ್ವಾತಂತ್ರ್ಯವಾಯಿತು. ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಒಪ್ಪಿ ಜಾರಿಗೊಳಿಸುವುದರ ಮುಖಾಂತರ 1950ರಲ್ಲಿ ಗಣರಾಜ್ಯವಾಯಿತು. ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸುವ ಕೆಲಸವನ್ನು ಶಾಸಕಾಂಗಕ್ಕೆ ಕಾನೂನುಗಳನ್ನು ಜಾರಿಗೊಳಿಸುವ ಕೆಲಸವನ್ನು ಕಾರ್ಯಾಂಗಕ್ಕೆ ಮತ್ತು ಕಾನೂನುಗಳ ವ್ಯಾಖ್ಯಾನ ಹಾಗೂ ಅವುಗಳ ಸಿಂಧುತ್ವ ಮತ್ತು ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ವಿಧಿಸುವ ಕೆಲಸವನ್ನು ನ್ಯಾಯಾಂಗಕ್ಕೆ ವಹಿಸಲಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಅಂಗದ ಕೆಲಸ ಅವುಗಳ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿಯನ್ನು ತಿಳಿಯಪಡಿಸಲಾಗಿದೆ. ಈ ಅಂಗಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ವತಂತ್ರರು ಮತ್ತು ಸಮಾನರು.

ಆದರೆ ಕಳೆದ 72 ವರ್ಷಗಳಲ್ಲಿ ಘಟಿಸಿರುವ ಸತ್ಯವೆಂದರೆ ಒಂದು ಅಂಗ ಬೇರೆ ಅಂಗಗಳಿಗಿಂತ ಶ್ರೇಷ್ಠರೆಂದು ಪೈಪೋಟಿಗೆ ಬಿದ್ದಿರುವುದು. ಒಬ್ಬರು ಮತ್ತೊಬ್ಬರ ಮೇಲೆ ಹಿಡಿತವನ್ನು ಸಾಧಿಸಲು ಪ್ರಯತ್ನಿಸಿರುವುದು ಮತ್ತು ಒಬ್ಬರು ಇನ್ನೊಬ್ಬರ ಕಾರ್ಯ ಕ್ಷೇತ್ರದಲ್ಲಿ ಅತಿಕ್ರಮಣವನ್ನು ಮಾಡಿದ್ದು. ಈ ಕಸರತ್ತಿನಿಂದ ನಮ್ಮ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿರುವುದೂ ಅಷ್ಟೇ ಸತ್ಯ.

1950ರಲ್ಲಿ ತಮಿಳುನಾಡು ಸರ್ಕಾರ ವೃತ್ತಿ ಶಿಕ್ಷಣದಲ್ಲಿ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮತ್ತು ದಲಿತರಿಗೆ ನೀಡಿದ ಮೀಸಲಾತಿಯನ್ನು ಸರ್ವೋಚ್ಛ ನ್ಯಾಯಾಲಯವು ಚಂಪಕಂ ದೊರೈರಾಜ್ ಪ್ರಕರಣದಲ್ಲಿ ರದ್ದುಪಡಿಸಿತು. ಪಂಜಾಬ್ ಸರ್ಕಾರ ತಂದ ಭೂಮಿತಿ ಶಾಸನವನ್ನು ಗೋಲಕನಾಥ್ ಪ್ರಕರಣದಲ್ಲಿ ರದ್ದುಪಡಿಸಲಾಯಿತು. ಕೇರಳ ಸರ್ಕಾರ ತಂದ ಭೂಸುಧಾರಣೆ ಕಾಯ್ದೆಯನ್ನು ಕೇಶವಾನಂದ ಭಾರತಿ ಮಹಾಸ್ವಾಮಿಗಳ ಪ್ರಕರಣದಲ್ಲಿ ರದ್ದುಪಡಿಸಲಾಯಿತು. ಬ್ಯಾಂಕ್‌ಗಳ ರಾಷ್ಟ್ರೀಕರಣವನ್ನು ಕೂಪರ್ ಕೇಸ್‌ನಲ್ಲಿ ರದ್ದುಪಡಿಸಲಾಯಿತು. ಈ ರೀತಿ ಶಾಸಕಾಂಗ ತಂದ ಜನಪರ ಮತ್ತು ಪ್ರಗತಿಪರ ಕಾಯ್ದೆಗಳನ್ನು ರದ್ದುಪಡಿಸಲಾಯಿತು. ಆದರೆ ಶಾಸಕಾಂಗ ಸಂವಿಧಾನಕ್ಕೆ ತಿದ್ದುಪಡಿಗಳನ್ನು ತಂದು ಈ ತೀರ್ಪುಗಳನ್ನು ಶೂನ್ಯಗೈದು ತಾವು ಮಾಡಿದ ಕಾನೂನುಗಳನ್ನು ಅನುಷ್ಠಾನಗೊಳಿಸಿತು. ಅಂದು ಪ್ರಾರಂಭವಾದ ಶಾಸಕಾಂಗ ಮತ್ತು ನ್ಯಾಯಾಂಗದ ಘರ್ಷಣೆ ಇಂದಿಗೂ ಮುಂದುವರೆಯುತ್ತಿದೆ.

ನಂತರದ ದಿನಗಳಲ್ಲಿ ಶಾಸಕಾಂಗ ಸಂವಿಧಾನದ 24, 25 ಮತ್ತು 42ನೇ ತಿದ್ದುಪಡಿಗಳನ್ನು ತರುವುದರ ಮೂಲಕ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿತು. ನ್ಯಾಯಮೂರ್ತಿಗಳ ನೇಮಕಾತಿ, ವರ್ಗಾವಣೆ ಮತ್ತು ಬಡ್ತಿ ವಿಷಯಗಳಲ್ಲಿ ಕಾರ್ಯಾಂಗ ತನ್ನ ಮೇಲುಗೈಯನ್ನು ಸಾಧಿಸಿ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿತು. ರಾಜಕೀಯ ಕಾರಣಕ್ಕಾಗಿ ನ್ಯಾಯಾಧೀಶರ ನೇಮಕಾತಿ ಶೀಫಾರಸ್ಸುಗಳನ್ನು ತಿರಸ್ಕರಿಸುವುದು, ವಿಳಂಬ ಮಾಡುವುದು ಮತ್ತು ವಿನಾಕಾರಣ ನ್ಯಾಯಾಂಗಕ್ಕೆ ಹಿಂತಿರುಗಿಸುವುದು, ನ್ಯಾಯಾಧೀಶರ ನಿವೃತ್ತಿಯ ನಂತರ ಆಯ್ದ ಕೆಲವರನ್ನು ಕೆಲವು ಹುದ್ದೆಗಳಿಗೆ ನೇಮಿಸುವುದು, ಕೆಲವು ಶಿಫಾರಸ್ಸುಗಳನ್ನು ತಿರಸ್ಕರಿಸುವುದು ನ್ಯಾಯಾಂಗಕ್ಕೆ ಮೂಲ ಸೌಕರ್ಯಗಳನ್ನು ಒದಗಿಸದೇ ಇರುವುದು, ನ್ಯಾಯಾಧೀಶರ ಹುದ್ದೆಗಳನ್ನು ಹೆಚ್ಚಿಸದೇ ಇರುವುದು, ಅವಶ್ಯಕವಾಗಿ ಬೇಕಾದ ಆರ್ಥಿಕ ಸಂಪನ್ಮೂಲ ಒದಗಿಸದೇ ಇರುವುದು ಇತ್ಯಾದಿಯಾಗಿ ಇಂತಹ ಕೆಲಸಗಳು ಅವ್ಯಾಹತವಾಗಿ ನಡೆಯುತ್ತಾ ಹೋಯಿತು.

PC : Orissa POST

ಶಾಸಕಾಂಗ ಮತ್ತು ಕಾರ್ಯಾಂಗಗಳ ವೈಫಲ್ಯದಿಂದ ನ್ಯಾಯಾಂಗದ ಕ್ರಿಯಾಶೀಲತೆಗೆ ದಾರಿ ಮಾಡಿಕೊಟ್ಟಿತು. ಪ್ರಾರಂಭದಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ಒಳ್ಳೆಯ ಕೆಲಸ ಮಾಡಿತು ಮತ್ತು ದೇಶದ ಜನ ಅದನ್ನು ಸ್ವಾಗತಿಸಿದರು. ಪ್ರಮುಖವಾದ ಕೆಲವು ತೀರ್ಪುಗಳೆಂದರೆ: ಜೀವಿಸುವ ಹಕ್ಕು, ಮಾನವ ಘನತೆಯಿಂದ ಬದುಕುವ ಹಕ್ಕು, ಸಂಸ್ಕೃತಿ ಮತ್ತು ಪರಂಪರೆಯ ಹಕ್ಕು, ಮಹಿಳೆಯರನ್ನು ಸಭ್ಯತೆ ಮತ್ತು ಸೂಕ್ತ ಘನತೆಯಿಂದ ನಡೆಸಿಕೊಳ್ಳುವ ಹಕ್ಕು, ಮಾಹಿತಿ ಹಕ್ಕು, ಶವವನ್ನು ಗೌರವಪೂರಕವಾಗಿ ಸಂಸ್ಕಾರ ಮಾಡುವ ಹಕ್ಕು, ವಿದೇಶಿ ಪ್ರವಾಸದ ಹಕ್ಕು, ಒಬ್ಬನ ಕುಟುಂಬ ಮತ್ತು ಆತನ ಬಳಗದ ಜೊತೆ ಬೆರೆಯುವ ಹಕ್ಕು, ಏಕಾಂತ ಬಂಧನದ ವಿರುದ್ಧದ ಹಕ್ಕು, ವಿಚಾರಣೆ ಇಲ್ಲದೆ ಸೆರೆಮನೆಯಲ್ಲಿರುವುದರ ವಿರುದ್ಧದ ಹಕ್ಕು, ಬೇಡಿ ತೊಡಿಸುವುದರ ವಿರುದ್ದ ಹಕ್ಕು, ಅಭಿರಕ್ಷೆಯಲ್ಲಿರುವಾಗ ಹಿಂಸೆ ಮತ್ತು ಚಿತ್ರಹಿಂಸೆ ನೀಡುವುದರ ವಿರುದ್ಧದ ಹಕ್ಕು, ಜೀವಿಸುವ ಹಕ್ಕು, ಮೂಲಸೌಕರ್ಯಗಳ ಹಕ್ಕುಗಳನ್ನು ಅದು ಒಳಗೊಳ್ಳುತ್ತದೆ. ಆಹಾರ, ಬಟ್ಟೆ ಮತ್ತು ವಸತಿಯ ಹಕ್ಕನ್ನು ಹಾಗೂ ಜೀವಿಸುವ ಹಕ್ಕು ಒಳಗೊಂಡಿರುತ್ತದೆ. ಉಚಿತ ಕಾನೂನು ನೆರವು ಹಕ್ಕು, ಜೀತಗಾರಿಕೆಗೆ ಒಳಪಡದಿರುವ ಹಕ್ಕು, ವೈದ್ಯಕೀಯ ನೆರವು ಹಕ್ಕು, ಆರೋಗ್ಯಕರ ಪರಿಸರ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು ಇತ್ಯಾದಿಯಾಗಿ.

ಕ್ರಮೇಣ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳನ್ನು ಸ್ವಂತ ಹಿತಾಸಕ್ತಿ ಸಾಧನೆಯಾಗಿ, ರಾಜಕೀಯ ಉದ್ದೇಶದ ಸಾಧನೆಯಾಗಿ ಪ್ರಚಾರ ಪಡೆಯಲೆಂದು ಮತ್ತು ಹಣಗಳಿಕೆಯ ದುರುಪಯೋಗಕ್ಕಾಗಿ ಉಪಯೋಗಿಸಿಕೊಳ್ಳಲಾಯಿತು. ಮತ್ತೊಂದು ಕಡೆ ಸಾರ್ವಜನಿಕ ಹಿತಾಸಕ್ತಿ ವ್ಯಾಜ್ಯಗಳ ಹೆಸರಿನಲ್ಲಿ ನ್ಯಾಯಾಲಯಗಳು, ಮಿತಿಮೀರಿದ ಕ್ರಿಯಾಶೀಲತೆಯಲ್ಲಿ ತೊಡಗಿದವು. ನ್ಯಾಯಾಲಯಗಳು ಕಾನೂನುಗಳನ್ನು ರಚಿಸುವ, ಕಾನೂನುಗಳಿಗೆ ತಿದ್ದುಪಡಿ ಮಾಡುವ ಮತ್ತು ಅವುಗಳನ್ನು ಅನುಷ್ಠಾನಗೊಳಿಸುವ ಶಾಸಕಾಂಗ ಮತ್ತು ಕಾರ್ಯಾಂಗಗಳ ಕೆಲಸದಲ್ಲಿ ಅತಿಕ್ರಮಣ ಮಾಡುವ ಕೆಲಸಕ್ಕೂ ಕೈಹಾಕಿದ್ದನ್ನು ಕಾಣಬಹುದು. ರಸ್ತೆಯನ್ನು ಮಾಡಿ, ಶಾಲೆಯನ್ನು ಕಟ್ಟಿ, ಆಸ್ಪತ್ರೆಯನ್ನು ಕಟ್ಟಿ, ಬಸ್ಸುಗಳನ್ನು ಓಡಿಸಿ, ಬಸ್‌ಗಳಿಗೆ ಹಸಿರು ಬಣ್ಣ ಹಚ್ಚಿ ಇತ್ಯಾದಿಯಾಗಿ ಆದೇಶಗಳನ್ನು ಹೊರಡಿಸಿದ್ದನ್ನು ಕಾಣಬಹುದು.

ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮುಂದಿನ ದಾರಿ ಹೇಗಿರಬೇಕು ಎಂಬುದು ಮುಖ್ಯ.

1. ಶಾಸಕಾಂಗ ಮತ್ತು ಕಾರ್ಯಾಂಗಗಳನ್ನು ಬಲಹೀನಗೊಳಿಸಿ ನ್ಯಾಯಾಂಗವನ್ನು ಬಲಿಷ್ಠಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರವಾದ ಬೆಳವಣಿಗೆಯಲ್ಲ.

2. ಶಾಸಕಾಂಗ ಮತ್ತು ಕಾರ್ಯಾಂಗಗಳು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಮತ್ತು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು ಮತ್ತು ಸವಾಲುಗಳನ್ನು ಹಿಮ್ಮೆಟ್ಟಿಸಬೇಕು. ಸಂವಿಧಾನದಲ್ಲಿ ತಿಳಿಯಪಡಿಸಿರುವ ಕರ್ತವ್ಯವನ್ನು ನಿರ್ವಹಿಸಬೇಕು.

3. ಇಂದು ನ್ಯಾಯಾಂಗದ ಕ್ರಿಯಾಶೀಲತೆಯ ಅವಶ್ಯಕತೆ ಇದೆ ಮತ್ತು ಅದು ಮುಂದುವರಿಯಬೇಕು. ಆದರೆ ಮಿತಿಮೀರಿದ ಕ್ರಿಯಾಶೀಲತೆ ಮತ್ತು ಇತರ ಅಂಗಗಳ ಕೆಲಸದಲ್ಲಿ ಅತಿಕ್ರಮಣ ನಿಲ್ಲಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅದು ಹಾನಿಕಾರಕ.

4. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಒಂದಕ್ಕೆ ಪೂರಕವಾಗಿ ಮತ್ತೊಂದು ಕೆಲಸ ಮಾಡಿ ಸಂವಿಧಾನದ ಅಶಯಗಳನ್ನು ಅನುಷ್ಠಾನಗೊಳಿಸಬೇಕು.

ಹೆಚ್. ಎನ್. ನಾಗಮೋಹನ್ ದಾಸ್

ಜಸ್ಟೀಸ್ ಹೆಚ್. ಎನ್. ನಾಗಮೋಹನ್ ದಾಸ್
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕದಾದ್ಯಂತ ‘ಸಂವಿಧಾನ ಓದು’ ಕಾರ್ಯಕ್ರಮಗಳನ್ನು ಮುನ್ನಡೆಸಿದವರು


ಇದನ್ನೂ ಓದಿ: ಎಲ್ಲೆಲ್ಲಿ ಸಾಧ್ಯವೋ ಅಲ್ಲೇ ಪ್ರತಿಭಟಿಸಿ, ರೈತ ಚಳುವಳಿ ವಿಕೇಂದ್ರೀಕರಣಗೊಳ್ಳಲಿ- ಹರಿಪ್ರಸಾದ್ ಕೆ.ಆರ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಹೆಚ್. ಎನ್. ನಾಗಮೋಹನ್ ದಾಸ್

LEAVE A REPLY

Please enter your comment!
Please enter your name here