Homeಚಳವಳಿರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

ರಾಜಸ್ಥಾನದ ಜಲಿಯನ್‌ವಾಲಾ ಭಾಗ್‌‌ ‘ಮಂಗರ್‌ ಧಾಮ’ದ ಕೇಸರಿಕರಣ; ಆದಿವಾಸಿಗಳಿಂದ ಭಾರಿ ಪ್ರತಿಭಟನೆ

- Advertisement -
- Advertisement -

ರಾಜಸ್ಥಾನದ ಜಲಿಯನ್‌ಲಾಲಾ ಭಾಗ್‌‌ ಎಂದೇ ಪ್ರಸಿದ್ದಿ ಹೊಂದಿರುವ ಮತ್ತು ಆದಿವಾಸಿಗಳು ತಮ್ಮ ಸ್ವಾಭಿಮಾನದ ಸಂಕೇತವಾಗಿ ಕಾಣುವ ‘ಮಂಗರ್‌ ಧಾಮ್‌’ ಸ್ಮಾರಕವನ್ನು ಕೇಸರಿಕರಣಗೊಳಿಸುವುದನ್ನು ವಿರೋಧಿಸಿ ನಾಲ್ಕು ರಾಜ್ಯಗಳ ಹತ್ತಾರು ಸಾವಿರ ಆದಿವಾಸಿಗಳು ಭಾನುವಾರ ವಾಹನ ಜಾಥಾವನ್ನು ಆಯೋಜಿಸಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.

ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಸುಮಾರು 15 ಸಾವಿರ ಆದಿವಾಸಿಗಳು ಬುಡಕಟ್ಟು ‘ಬಿಲ್‌ಪ್ರದೇಶ ಸಂದೇಶ್ ವಾಹನ ಯಾತ್ರೆ’ಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರರು ಮಂಗರ್ ಧಾಮವನ್ನು ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ, ಎಲ್ಲಾ ಪಕ್ಷಗಳ ರಾಜಕೀಯವನ್ನು ಕೊನೆಗೊಳಿಸುತ್ತೇವೆ ಎಂದು ಆದಿವಾಸಿ ಪರಿವಾರ ಮತ್ತು ಭಿಲ್ ಪ್ರದೇಶ್ ಮುಕ್ತಿ ಮೋರ್ಚಾ ಸಂಘಟನೆ ಪ್ರತಿಜ್ಞೆ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಮಂಗರ್ ಧಾಮದಲ್ಲಿ ಸುಮಾರು 12 ಸಾವಿರ ಕಾರ್ಯಕರ್ತರನ್ನು ಸೇರಿಸಿ ಅಮೃತ ಮಹೋತ್ಸವ ಕಾರ್ಯಕ್ರಮದಡಿಯಲ್ಲಿ ವಾಹನ ರ್‍ಯಾಲಿ ನಡೆಸಿತ್ತು. ಅಲ್ಲದೆ ಅಲ್ಲಿ ಆರೆಸ್ಸೆಸ್ಸಿನ ಧ್ವಜವನ್ನು ನಟ್ಟು ಆದಿವಾಸಿಗಳ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಕೂಡಾ ಆರೋಪಿಸಲಾಗಿದೆ.

ಇದನ್ನೂ ಓದಿ: 9 ಮಕ್ಕಳು ಸೇರಿದಂತೆ 20 ಆದಿವಾಸಿಗಳನ್ನು ಬಂಧಿತ ಕಾರ್ಮಿಕರಾಗಿ ರಾಜ್ಯಕ್ಕೆ ಕರೆತರಲಾಗಿದೆ: ವರದಿ

ಇದನ್ನು ವಿರೋಧಿಸಿ ಅದೇ ಸ್ಥಳದಲ್ಲಿ ಭಾನುವಾರದಂದು ನೂತನ ರಾಜಕೀಯ ಸಂಘಟನೆಯಾದ ರಾಷ್ಟ್ರೀಯ ಬುಡಕಟ್ಟು ಪಕ್ಷ(ಎನ್‌ಟಿಪಿ)ದ ವತಿಯಿಂದ ಸುಮಾರು 15 ಸಾವಿರ ಕಾರ್ಯಕರ್ತರೊಂದಿಗೆ ವಾಹನ ಜಾಥಾ ನಡೆಸಿದೆ.

ಸೇರಿದ್ದ ಜನಸಮೂಹವು ಬುಡಕಟ್ಟು ಪರಂಪರೆಯ ಮಂಗರ್ ಧಾಮವನ್ನು ಯಾವುದೇ ಸಂದರ್ಭದಲ್ಲೂ ಕೇಸರಿಕರಣ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಂಗರ್ ಧಾಮದಲ್ಲಿ ರಾಜಕೀಯ ಮಾಡುವ ಹಕ್ಕು  ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ (ಭಾರತೀಯ ಬುಡಕಟ್ಟು ಪಕ್ಷ) ಸೇರಿದಂತೆ ಯಾರಿಗೂ ಇಲ್ಲ ಎಂದು ಆದಿವಾಸಿ ನಾಯಕರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಒಟ್ಟು 15 ಆರೋಪಿಗಳ ಬಂಧನ

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡುಂಗರ್‌ಪುರ ಬುಡಕಟ್ಟು ಪರಿವಾರದ ಭನ್ವರ್‌ಲಾಲ್ ಪರ್ಮಾರ್, “ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿ ಪಕ್ಷಗಳ ರಾಜಕೀಯ ಈ ಕ್ಷೇತ್ರದಲ್ಲಿ ಕೊನೆಗೊಳ್ಳಬೇಕಿದೆ. ಬಿಟಿಪಿಯನ್ನು ಸಹ ಬೆಂಬಲಿಸಬೇಕಾಗಿಲ್ಲ. ಬುಡಕಟ್ಟು ಪರಿವಾರ ಯಾವ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸುತ್ತಾರೋ ಅವರನ್ನು ಗೆಲ್ಲಿಸಬೇಕು” ಎಂದು ಹೇಳಿದ್ದಾರೆ.

“ಧರಿಯಾವಾಡದ ಉಪಚುನಾವಣೆಯಲ್ಲಿ ಆದಿವಾಸಿ ಪರಿವಾರ ಮಾಡಿದ್ದು ಇದನ್ನೇ” ಎಂದು ಭನ್ವರಲಾಲ್ ಸ್ಪಷ್ಟಪಡಿಸಿದ್ದಾರೆ. ಹೊಸ ಪಕ್ಷವಾದ ಎನ್‌ಟಿಪಿಯನ್ನು ಬುಡಕಟ್ಟು ಪರವಾರದಿಂದ ಡುಂಗರ್‌ಪುರದಲ್ಲಿ ರಾಜಕೀಯ ಸಂಘಟನೆಯಾಗಿ ನೋಂದಾಯಿಸಲಾಗಿದೆ.

ಮಂಗರ್ ಧಾಮ ಭಿಲ್ ರಾಜ್ಯದ ರಾಜಧಾನಿಯಾಗಲಿದೆ!

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಿಲ್ ಪ್ರದೇಶ ಮುಕ್ತಿ ಮೋರ್ಚಾದ ಕೆಲವು ಮುಖಂಡರು ಬುಡಕಟ್ಟು ಪರಿವಾರಕ್ಕಾಗಿ ಪ್ರತ್ಯೇಕ ‘ಭಿಲ್’ ರಾಜ್ಯಕ್ಕಾಗಿ ಒತ್ತಾಯಿಸಿದ್ದು, ಭಿಲ್ ರಾಜ್ಯದ ರಾಜಧಾನಿ ಮಂಗರ್‌ ಧಾಮ ಆಗಲಿದೆ ಎಂದು ಹೇಳಿದ್ದಾರೆ.

ಬುಡಕಟ್ಟು ಪರಿವಾರದ ಮಣಿಲಾಲ್ ಗರಾಸಿಯಾ ಮಾತನಾಡಿ, “ಆದಿವಾಸಿಗಳು ಪ್ರಕೃತಿ ಆರಾಧಕರಾಗಿದ್ದು, ಅವರಿಗೂ ಯಾವುದೇ ಧರ್ಮಕ್ಕೂ ಸಂಬಂಧವಿಲ್ಲ. ಆದ್ದರಿಂದ ಮನೆಯಲ್ಲಿ ನಡೆಯುವ ಯಾವುದೇ ಪೂಜೆಗೆ ಬ್ರಾಹ್ಮಣರನ್ನು ಕರೆಯುವ ಅನಿವಾರ್ಯತೆ ಇಲ್ಲವಾಗಬೇಕು” ಎಂದು ಹೇಳಿದ್ದಾರೆ.

“ಆದಿವಾಸಿ ರಾಣಾ ಪೂಂಜಾ ಇಲ್ಲದೆ ಮಹಾರಾಣಾ ಪ್ರತಾಪನ ಇತಿಹಾಸ ಏನೂ ಅಲ್ಲ” ಎಂದು ಗರಾಸಿಯಾ ಪ್ರತಿಪಾಸಿದ್ದಾರೆ.

ಬುಡಕಟ್ಟು ಪರಿವಾರ ಮತ್ತು ಮುಕ್ತಿ ಮೋರ್ಚಾ, ಬಿಜೆಪಿ, ಕಾಂಗ್ರೆಸ್ ಮತ್ತು ಬಿಟಿಪಿಗೆ ಮಂಗರ್ ಧಾಮ್‌ನಲ್ಲಿ ಪಕ್ಷದ ಧ್ವಜಗಳನ್ನು ಹಾಕದಂತೆ ಎಚ್ಚರಿಕೆ ನೀಡಿದೆ. “ಮಂಗರ್ ಧಾಮ ಆದಿವಾಸಿಗಳ ಹುತಾತ್ಮರಾದ ಪುಣ್ಯಭೂಮಿ. ಆದ್ದರಿಂದಲೇ ಇಲ್ಲಿ ರಾಜಕೀಯ ಬೇಡ. ಆದಿವಾಸಿಗಳ ಈ ಜಾಗವನ್ನು ಆದಿವಾಸಿಗಳಲ್ಲದವರ ವಶಕ್ಕೆ ಕೊಡುವಲ್ಲಿ ಬಿಜೆಪಿ ನಿರತವಾಗಿದೆ” ಎಂದು ಹೇಳಿದೆ.

ಇದನ್ನೂ ಓದಿ: ಬೆಳ್ತಂಗಡಿ: ಆದಿವಾಸಿ ಮಹಿಳೆಯ ಮೇಲೆ ಹಲ್ಲೆ, ಅರೆಬೆತ್ತಲೆ ಮಾಡಿ ಚಿತ್ರೀಕರಣ; ದುಷ್ಕರ್ಮಿಗಳ ಕೃತ್ಯಕ್ಕೆ ಬಿಜೆಪಿ ಮುಖಂಡನೇ ನೇತೃತ್ವ?

ಆಗಸ್ಟ್ 9 ರಂದು ಕಾಂಗ್ರೆಸ್‌ನ ಪಾದಯಾತ್ರೆ

ಬಿಜೆಪಿ ಜಾಥಾದ ನಂತರ, ಆಗಸ್ಟ್ 9 ರಂದು, 75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ಪಕ್ಷವು 75 ಕಿಲೋಮೀಟರ್ ಪಾದಯಾತ್ರೆ ನಡೆಯಲಿದೆ. ಈ ಜಾಥಾ ಮಂಗರ್ ಧಾಮದಿಂದಲೇ ಆರಂಭಿಸಲಾಗುವುದು ಎಂದು ದೈನಿಕ್ ಭಾಸ್ಕರ್‌ ವರದಿ ಮಾಡಿದೆ.

ಏನಿದು ಮಂಗರ್‌ ಧಾಮ?

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಆರು ವರ್ಷಗಳ ಮೊದಲು ನವೆಂಬರ್ 17, 1913 ರಂದು ರಾಜಸ್ಥಾನ-ಗುಜರಾತ್ ಗಡಿಯ ಮಂಗರ್ ಬೆಟ್ಟದಲ್ಲಿ ಬ್ರಿಟೀಷ್‌ ಮತ್ತು ಭಾರತದ ರಾಜರಿಂದ ನಡೆದ ಹತ್ಯಾಕಾಂಡದ ಸ್ಮಾರಕ ಸ್ಥಳವಾಗಿದೆ ಮಂಗರ್‌ ಧಾಮ.

ಜಲಿಯನ್ ವಾಲಾಬಾಗ್‌ನಲ್ಲಿ ಬ್ರಿಟಿಷರ ಆಡಳಿತದ ಗುಂಡಿಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಮಂಗರ್ ಹತ್ಯಾಕಾಂಡದಲ್ಲಿ ಒಂದೂವರೆ ಸಾವಿರ ಜನರು ಸತ್ತರು ಎಂದು ಇತಿಹಾಸಹಾರರು ದಾಖಲಿಸಿದ್ದಾರೆ. ಮಂಗರ್ ಬೆಟ್ಟದಲ್ಲಿ ನೆರೆದಿದ್ದ ಸಾವಿರಾರು ಆದಿವಾಸಿಗಳನ್ನು ಭಾರತ ಮತ್ತು ಇಂಗ್ಲಿಷ್ ರಾಜಪ್ರಭುತ್ವದ ಸೈನ್ಯಗಳು ಸೇರಿಕೊಂಡು ಹತ್ಯಾಕಾಂಡ ನಡೆಸಿತ್ತು.

ಈ ಘಟನೆಯು ಜಲಿಯನ್ ವಾಲಾಬಾಗ್‌ಗಿಂತಲೂ ದೊಡ್ಡ ಹತ್ಯಾಕಾಂಡ ಎಂದು ಲೇಖಕರು, ಇತಿಹಾಸಕಾರರು ಮತ್ತು ಸ್ಥಳೀಯ ಜನರು ಹೇಳುತ್ತಾರೆ ಎಂದು ಬಿಬಿಸಿ ಹಿಂದಿ ವರದಿ ಹೇಳುತ್ತದೆ. ಆದರೆ, ಇಷ್ಟು ದೊಡ್ಡ ಹತ್ಯಾಕಾಂಡ ಇತಿಹಾಸದಲ್ಲಿ ದೊಡ್ಡ ಮಟ್ಟದಲ್ಲಿ ದಾಖಲಾಗಿಲ್ಲ.

ಇದನ್ನೂ ಓದಿ: ಕೊಡಗು: 4 ವರ್ಷ ಕಳೆದರೂ ಸಿಗದ ಸೌಲಭ್ಯ; ಪುನರ್‌ ವಸತಿ ಬಿಟ್ಟು ಕಾಡಿಗೆ ಬಂದ ಆದಿವಾಸಿಗಳು

ಮಂಗರ್‌ ಧಾಮವೂ ರಾಜಸ್ಥಾನದ ರಾಜಧಾನಿ ಜೈಪುರದಿಂದ ಸುಮಾರು 550 ಕಿಮೀ ದೂರದಲ್ಲಿರುವ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬನ್ಸ್‌ವಾರಾ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಮೀ ದೂರದಲ್ಲಿದೆ. 108 ವರ್ಷಗಳ ಹಿಂದೆ ನಡೆದ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದ ಪರ್ವತ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದೇ ಬೆಟ್ಟವನ್ನು ಈಗ ‘ಮಂಗರ್ ಧಾಮ’ ಎಂದು ಕರೆಯುತ್ತಾರೆ.

ಮಂಗರ್ ಬೆಟ್ಟವು ಸುತ್ತಲೂ ಕಾಡಿನಿಂದ ಆವೃತವಾಗಿದ್ದು, ಬೆಟ್ಟದ ಎತ್ತರವು ಸುಮಾರು 800 ಮೀಟರ್ ಹೊಂದಿದೆ. ಹತ್ಯಾಕಾಂಡದ ನಂತರ ಬ್ರಿಟೀಷರು ಆ ಬೆಟ್ಟದ ಬಳಿಗೆ ಜನರು ತೆರಳುವುದನ್ನು ನಿಷೇಧಿಸಿದ್ದರು. ಅಳಿದುಳಿದ ಜನರು ಅಲ್ಲಿಂದ ಪಲಾಯನ ಮಾಡಿದ್ದರು. ಈ ದುರ್ಘಟನೆ ನಡೆದು ಸುಮಾರು 80 ವರ್ಷಗಳ ಕಾಲ ಇಲ್ಲಿ ಏನೂ ಇರಲಿಲ್ಲ. ಆದರೆ ಕಳೆದ ಎರಡು ದಶಕಗಳ ಹಿಂದೆ ಇಲ್ಲಿ ಹುತಾತ್ಮರ ಸ್ಮಾರಕ, ವಸ್ತುಸಂಗ್ರಹಾಲಯ ಮತ್ತು ರಸ್ತೆ ನಿರ್ಮಿಸಲಾಗಿದೆ.

ಮಂಗರ್‌ ಧಾಮದ ಬಗ್ಗೆ ಬಿಬಿಸಿ ಹಿಂದಿಯ ವರದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...