’ಒಂದೇ ಲಿಂಗದ ದಂಪತಿಗಳು ತಮ್ಮ ಮದುವೆಯನ್ನು (ಸಲಿಂಗ ವಿವಾಹ) ಮೂಲಭೂತ ಹಕ್ಕು ಎಂದು ಕಾನೂನು ಮಾನ್ಯತೆ ಪಡೆಯಲು ಸಾಧ್ಯವಿಲ್ಲ’ ಎಂದು ಕೇಂದ್ರ ಸರ್ಕಾರ ಗುರುವಾರ ದೆಹಲಿ ಹೈಕೋರ್ಟ್ ಮುಂದೆ ಅಫಿಡವಿಟ್ ಸಲ್ಲಿಸಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಭಾರತದಲ್ಲಿ ವಿವಾಹವು “ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವಿನ ಸಂಬಂಧ” ಎಂದು ಅಫಿಡ್‌ವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬಹುದೇ ಎಂಬ ಪ್ರಶ್ನೆಯನ್ನು ಶಾಸಕಾಂಗಕ್ಕೆ ಬಿಡಬೇಕು ಎಂದು ಅದು ಪ್ರತಿಪಾದಿಸಿದೆ.
“ಒಂದೇ ಲಿಂಗದ ಇಬ್ಬರು ವ್ಯಕ್ತಿಗಳ ನಡುವಿನ ವಿವಾಹದ ಅಂಗೀಕಾರವನ್ನು ಯಾವುದೇ ಕ್ರೋಡೀಕರಿಸದ ವೈಯಕ್ತಿಕ ಕಾನೂನುಗಳು ಅಥವಾ ಯಾವುದೇ ಕ್ರೋಡೀಕರಿಸಿದ ಶಾಸನಬದ್ಧ ಕಾನೂನುಗಳಲ್ಲಿ ಗುರುತಿಸಲಾಗುವುದಿಲ್ಲ ಅಥವಾ ಸ್ವೀಕರಿಸಲಾಗುವುದಿಲ್ಲ” ಎಂದು ಅದು ಹೇಳಿದೆ.
ಇದನ್ನೂ ಓದಿ: ಸಲಿಂಗ ದಂಪತಿಗೆ ರಕ್ಷಣೆ ನೀಡಿ: ಪೊಲೀಸರಿಗೆ ಅಲಹಾಬಾದ್ ಹೈಕೋರ್ಟ್ ಆದೇಶ
“ಅಂತಹ ಸಂಬಂಧವನ್ನು ವಿವಾಹದ ಕಾನೂನು ಮಾನ್ಯತೆಯ ಮೂಲಕ ಔಪಚಾರಿಕಗೊಳಿಸಲು ಅನುಮತಿಸಲಾಗಿದೆಯೇ ಎಂಬ ಪ್ರಶ್ನೆಯು ಮೂಲಭೂತವಾಗಿ ಶಾಸಕಾಂಗವು ನಿರ್ಧರಿಸಬೇಕಾದ ಪ್ರಶ್ನೆಯಾಗಿದೆ; ಮತ್ತು ಇದು ಎಂದಿಗೂ ನ್ಯಾಯಾಂಗ ತೀರ್ಪಿನ ವಿಷಯವಾಗಿರಬಾರದು” ಎಂದು ಕೇಂದ್ರ ಹೇಳಿದೆ.
ಹಿಂದೂ ವಿವಾಹ ಕಾಯ್ದೆ 1955 ರ ಅಡಿಯಲ್ಲಿ ಸಲಿಂಗಿ ಸಮುದಾಯಕ್ಕೆ ಮದುವೆ ಹಕ್ಕು ಕೋರಿ ಕಳೆದ ವರ್ಷ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಹೇಳಿಕೆಗಳನ್ನು ನೀಡಲಾಗಿದೆ.
ಈ ಮನವಿಯನ್ನು ಎಲ್ಜಿಬಿಟಿಕ್ಯೂ+ (ಸಲಿಂಗಿ, ದ್ವಿಲಿಂಗಿ, ಟ್ರಾನ್ಸ್‌ಜೆಂಡರ್, ಕ್ವೀರ್ ಮತ್ತು ಇತರರು) ಸಮುದಾಯದ ನಾಲ್ಕು ಸದಸ್ಯರು ಸಲ್ಲಿಸಿದ್ದಾರೆ. ಭದ್ರತೆ ಮತ್ತು ವಿದೇಶಾಂಗ ನೀತಿ ನಿರೂಪಕ ಅಭಿಜಿತ್ ಅಯ್ಯರ್ ಮಿತ್ರ, ತಮಿಳುನಾಡು ಮೂಲದ ಇಂಟರ್‌ಸೆಕ್ಸ್ ಕಾರ್ಯಕರ್ತ ಗೋಪಿ ಶಂಕರ್ ಎಂ., 2016 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ, ಭಾರತದ ಸಮಕಾಲೀನ ಮತ್ತು ಐತಿಹಾಸಿಕ ಸಲಿಂಗಿಗಳ ಜೀವನದ ಸಖಿ ಸಾಮೂಹಿಕ ಜರ್ನಲ್‌ನ ಸ್ಥಾಪಕ ಸದಸ್ಯರಾದ ಗೀತಿ ಥಡಾನಿ ಮತ್ತು ಟ್ರಾನ್ಸ್‌ಜೆಂಡರ್ ಕಾರ್ಯಕರ್ತೆ ಜಿ.ಊರ್ವಶಿ ಸಲ್ಲಿಸಿದ್ದಾರೆ.
ಕೇಂದ್ರವು, “ಆರ್ಟಿಕಲ್ 21 ರ ಅಡಿಯಲ್ಲಿರುವ ಮೂಲಭೂತ ಹಕ್ಕು ಕಾನೂನಿನಿಂದ ಸ್ಥಾಪಿಸಲ್ಪಟ್ಟ ಕಾರ್ಯವಿಧಾನಕ್ಕೆ ಒಳಪಟ್ಟಿರುತ್ತದೆ ಮತ್ತು ಅದನ್ನು ಒಂದೇ ರೀತಿಯ ಲಿಂಗದವರ ವಿವಾಹಗಳಿಗೆ ವಿಸ್ತರಿಸಿ, ಮೂಲಭೂತ ಹಕ್ಕು ಎನ್ನಲು ಸಾಧ್ಯವಿಲ್ಲ” ಎಂದಿದೆ.
ಭಾರತದಲ್ಲಿ, “ವಿವಾಹವು ಕೇವಲ ಇಬ್ಬರು ವ್ಯಕ್ತಿಗಳ ಸಂಗಮದ ವಿಷಯವಲ್ಲ, ಆದರೆ ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವಿನ ಗಂಭೀರ ಸಂಬಂಧ” ಎಂದು ಅಫಿಡ್‌ವಿಟ್‌ನಲ್ಲಿ ವಾದಿಸಲಾಗಿದೆ.
ಇದನ್ನೂ ಓದಿ: ಸಲಿಂಗ ವಿವಾಹ: ಕೊಡಗು ಮೂಲದ ಯುವಕನನ್ನು ಬಹಿಷ್ಕರಿಸಿದ ಕೊಡವ ಸಮಾಜ!
ಗೌಪ್ಯತೆಯ ಹಕ್ಕಿನಲ್ಲಿ ಮದುವೆಯಾಗಲು ಮೂಲಭೂತ ಹಕ್ಕಿದೆ ಎಂಬ ರ್ಜಿದಾರರ ಸಲ್ಲಿಕೆಯನ್ನು ನಿರಾಕರಿಸುವ ಕೇಂದ್ರ ಸರ್ಕಾರ, “ಮದುವೆಯಾಗುವುದು ಸಾರ್ವಜನಿಕ ಪ್ರಾಮುಖ್ಯತೆಯನ್ನು ಹೊಂದಿರುವ ಸಂಬಂಧವನ್ನು ಪ್ರವೇಶಿಸಿದಂತೆ” ಎಂದು ಪ್ರತಿಪಾದಿಸಿದೆ.
ಸಂಗಾತಿಗಳಾಗಿ ಒಟ್ಟಿಗೆ ವಾಸಿಸುವುದು (ಲಿವಿಂಗ್ ಟುಗೆದರ್) ಮತ್ತು ಅದೇ ಲಿಂಗದ ವ್ಯಕ್ತಿಗಳಿಂದ ಲೈಂಗಿಕ ಸಂಬಂಧವನ್ನು ಹೊಂದಿರುವುದನ್ನು (ಈಗ ನಿರ್ಣಯಿಸಲ್ಪಟ್ಟು ಮಾನ್ಯತೆ ಪಡೆದಿದೆ) ಭಾರತೀಯ ಕುಟುಂಬ ಘಟಕದ ಗಂಡ, ಹೆಂಡತಿ ಮತ್ತು ಮಕ್ಕಳ ಪರಿಕಲ್ಪನೆಯೊಂದಿಗೆ ಹೋಲಿಸಲಾಗುವುದಿಲ್ಲ. ಈ ಪರಿಕಲ್ಪನೆಯು, ಜೈವಿಕ ಮನುಷ್ಯನನ್ನು ’ಗಂಡ’, ಜೈವಿಕ ಮಹಿಳೆಯನ್ನು ’ಹೆಂಡತಿ’ ಮತ್ತು ಇಬ್ಬರ ನಡುವಿನ ಸಂಗದಿಂದ ಹುಟ್ಟಿದವರನ್ನು ಮಕ್ಕಳು ಎನ್ನುತ್ತದೆ” ಎಂದು ಅಫಿಡ್‌ವಿಟ್ ಪ್ರತಿಪಾದಿಸಿದೆ.
ಆದ್ದರಿಂದ, “ವಿರುದ್ಧ ಲಿಂಗದ ವ್ಯಕ್ತಿಗಳಿಗೆ ಮಾತ್ರ ವಿವಾಹದ ಕಾನೂನು ಮಾನ್ಯತೆಯನ್ನು ಸೀಮಿತಗೊಳಿಸುವಲ್ಲಿ ಕಾನೂನುಬದ್ಧವಾದ ಹಿತಾಸಕ್ತಿ ಇದೆ” ಮತ್ತು “ಭಾರತೀಯ ನೀತಿಶಾಸ್ತ್ರದ ಆಧಾರದ ಮೇಲೆ ಅಂತಹ ಸಾಮಾಜಿಕ ನೈತಿಕತೆ ಮತ್ತು ಸಾರ್ವಜನಿಕ ಸ್ವೀಕಾರವನ್ನು ನಿರ್ಣಯಿಸುವುದು ಮತ್ತು ಜಾರಿಗೊಳಿಸುವುದು ಶಾಸಕಾಂಗಕ್ಕೆ ಸೇರಿದೆ” ಎಂದು ಕೇಂದ್ರ ವಾದಿಸಿದೆ.
ಕಳೆದ ವರ್ಷದಿಂದ ದೆಹಲಿ ಹೈಕೋರ್ಟ್ ಸಲಿಂಗ ಮದುವೆಗಳಿಗೆ ಮಾನ್ಯತೆ ನೀಡುವಂತೆ ಕೋರಿದ ಅರ್ಜಿಗಳನ್ನು ಆಲಿಸುತ್ತಿದೆ. ಅರ್ಜಿಗಳು ಮುಂದಿನ ಏಪ್ರಿಲ್‌ನಲ್ಲಿ ವಿಚಾರಣೆಗೆ ಬರಲಿವೆ.
2018ರಲ್ಲಿ ಸಲಿಂಗಕಾಮವನ್ನು ಸುಪ್ರೀಂ ಕೋರ್ಟ್ ಅಪರಾಧವಲ್ಲವೆಂದು ನಿರ್ಣಯಿಸಿ ಮಾನ್ಯತೆ ಮಾಡಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಇದನ್ನೂ ಓದಿ: ಸಲಿಂಗ ವಿವಾಹವನ್ನು ನಮ್ಮ ಕಾನೂನು ಮತ್ತು ಸಮಾಜ ಒಪ್ಪುವುದಿಲ್ಲ: ಕೇಂದ್ರ ಸರ್ಕಾರ


