ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಕೆಲವು ತಿಂಗಳುಗಳ ಹಿಂದೆ ನೀಡಿದ್ದ “ಸನಾತನ ಧರ್ಮದ ನಿರ್ಮೂಲನೆ” ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕೆ. ಪವನ್ ಕಲ್ಯಾಣ್, ಭವಿಷ್ಯದಲ್ಲಿ ಅಂತಹ ಮಾತುಗಳನ್ನು ಆಡದಂತೆ ಎಚ್ಚರಿಕೆ ನೀಡಿದ್ದರು.
ಹಿಂದೂ ಧರ್ಮದಲ್ಲಿರುವ ಅಸಮಾನತೆ ಮತ್ತು ಅಸ್ಪೃಶ್ಯತೆ ಕುರಿತು ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವನ್ನು ಕರೋನ ವೈರಸ್, ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿ, ಅದನ್ನು ವಿರೋಧಿಸಲಾವಾರದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.
ಅಕ್ಟೋಬರ್ 3 ರಂದು (ಗುರುವಾರ) ತಿರುಮಲ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಜನರಿಗೆ ‘ವರಾಹಿ ಘೋಷಣೆ’ಯನ್ನು ನೀಡುವಾಗ ಮಾತನಾಡಿದ ಪವನ್ ಕಲ್ಯಾಣ್, ತಮಿಳಿನಲ್ಲಿ ಮಾತನಾಡಲು ಪ್ರಯತ್ನಿಸಿದರು.
“ರಾಜಕಾರಣಿಗಳ ಇಂತಹ ಪ್ರಚೋದನಕಾರಿ ಹೇಳಿಕೆಗಳು ಪುರಾತನ ನಂಬಿಕೆಗೆ ಹಾನಿ ಮಾಡುವಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ನಿಮ್ಮಂತಹವರು ಬಂದು ಹೋಗಿದ್ದಾರೆ, ಆದರೆ ಸನಾತನ ಧರ್ಮವು ಇಲ್ಲಿ ಉಳಿಯುತ್ತದೆ” ಎಂದು ಅವರು ಉದಯನಿಧಿ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದ್ದರು.
ಕಾದು ನೋಡೋಣ ಎಂದ ಸ್ಟಾಲಿನ್
ಪವನ್ ಕಲ್ಯಾಣ್ ಅವರ ‘ಸನಾತನ ಧರ್ಮವನ್ನು ಅಳಿಸಲು ಸಾಧ್ಯವಿಲ್ಲ’ ಎಂಬ ಹೇಳಿಕೆಗೆ ತಣ್ಣಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್, “ಕಾದು ನೋಡೋಣ” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಕ್ತಾರ ಸೈಯದ್ ಹಫೀಜುಲ್ಲಾ ಸ್ಪಷ್ಟನೆ ನೀಡಿದ್ದಾರೆ. “ಡಿಎಂಕೆ ಹಿಂದೂ ಧರ್ಮ ಸೇರಿದಂತೆ ಯಾವುದೇ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ. ಆದರೆ, ಜಾತಿ ಆಧಾರಿತ ದೌರ್ಜನ್ಯಗಳು, ಅಸ್ಪೃಶ್ಯತೆ ಮತ್ತು ಜಾತಿ ಶ್ರೇಣಿಗಳ ವಿರುದ್ಧ ಹೋರಾಡಲು ಬದ್ಧವಾಗಿದೆ” ಎಂದು ಅವರು ಒತ್ತಿ ಹೇಳಿದರು.
ಉದಯನಿಧಿ ಸ್ಟಾಲಿನ್ ಅವರ ಹಿಂದಿನ ಹೇಳಿಕೆಗಳ ಬಗ್ಗೆ ಕಲ್ಯಾಣ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಹಫೀಜುಲ್ಲಾ, “ನಮ್ಮ ಪಕ್ಷವು ಯಾವುದೇ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಆದರೆ, ನಾವು ಜಾತಿ ಅನ್ಯಾಯದ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯು ವ್ಯಾಪಕ ವಿವಾದವನ್ನು ಹುಟ್ಟುಹಾಕಿತ್ತು. ಸನಾತನ ಧರ್ಮವು ಮೂಲಭೂತವಾಗಿ ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಮತ್ತು ಅದನ್ನು ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ಕಾಯಿಲೆಗಳಿಗೆ ಹೋಲಿಸಿ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ; ಮೀಸಲಾತಿ ಮೇಲಿನ 50% ಮಿತಿ ತೆಗೆದುಹಾಕಿ: ಕೇಂದ್ರ ಸರ್ಕಾರಕ್ಕೆ ಶರದ್ ಪವಾರ್ ಆಗ್ರಹ


