ಜೀವಾವಧಿ ಜೈಲು ಶಿಕ್ಷೆ ಪ್ರಶ್ನಿಸಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿರುವ ಮೇಲ್ಮನವಿ ಸಂಬಂಧ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
1990ರ ಕಸ್ಟಡಿ ಚಿತ್ರಹಿಂಸೆ ಮತ್ತು ಸಾವಿನ ಪ್ರಕರಣದಲ್ಲಿ ಸಂಜೀವ್ ಭಟ್ ಅವರಿಗೆ ಜಾಮ್‌ನಗರ ನ್ಯಾಯಾಲಯ ಜೀವಾವಧಿ ಜೈಲು ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿ ಭಟ್ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಸನ್ನ ಭಾಲಚಂದ್ರ ವರಾಳೆ ಅವರ ಪೀಠವು ನೋಟಿಸ್ ನೀಡುವಾಗ, ಪ್ರಸ್ತುತ ಅರ್ಜಿಯನ್ನು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಇತರ ಅರ್ಜಿಗಳನ್ನು ಟ್ಯಾಗ್ ಮಾಡಿದೆ.
ಭಟ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ದೇವದತ್ ಕಾಮತ್, ಈ ಅರ್ಜಿಯ ವಿಚಾರಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ ಮತ್ತು ಈ ಅರ್ಜಿಯನ್ನು ನ್ಯಾಯಾಲದ ಮುಂದೆ ಬಾಕಿ ಉಳಿದಿರುವ ಇತರ ಅರ್ಜಿಗಳೊಂದಿಗೆ ಟ್ಯಾಗ್ ಮಾಡಬಹುದು ಎಂಬ ನ್ಯಾಯಾಲಯದ ಪ್ರತಿಪಾದನೆಯನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ, ವಕೀಲರ ಮನವಿ ಪುರಸ್ಕರಿಸಿದ ನ್ಯಾಯಾಲಯ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಆದೇಶಿಸಿ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಭಟ್ ಪರ ಇನ್ನಿಬ್ಬರು ವಕೀಲರಾದ ರಾಜೇಶ್ ಜಿ.ಇನಾಮದಾರ್ ಮತ್ತು ಶಾಶ್ವತ್ ಆನಂದ್ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ಪ್ರಕರಣವು ನವೆಂಬರ್ 1990ರಲ್ಲಿ ಸಂಭವಿಸಿದ ಪ್ರಭುದಾಸ್ ಮಾಧವ್‌ಜಿ ವೈಷ್ಣಾನಿಯವರ ಕಸ್ಟಡಿ ಸಾವಿಗೆ ಸಂಬಂಧಿಸಿದೆ. ಪೊಲೀಸ್ ಕಸ್ಟಡಿಯ ಚಿತ್ರಹಿಂಸೆಯಿಂದ ವೈಷ್ಣಾನಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿತ್ತು. ವೈಷ್ಣಾನಿ ಸಾವಿನ ಸಮಯದಲ್ಲಿ ಸಂಜೀವ್ ಭಟ್ ಅವರು ಜಾಮ್‌ನಗರದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದರು. ಭಾರತ್ ಬಂದ್ ವೇಳೆ ಗಲಭೆ ನಡೆಸಿದ ಆರೋಪದ ಮೇಲೆ ವೈಷ್ಣಾನಿ ಸೇರಿದಂತೆ ಸುಮಾರು 133 ಜನರನ್ನು ಇತರ ಅಧಿಕಾರಿಗಳೊಂದಿಗೆ ಸಂಜೀವ್ ಭಟ್ ಕಸ್ಟಡಿಗೆ ತೆಗೆದುಕೊಂಡಿದ್ದರು. ಹಾಗಾಗಿ, ವೈಷ್ಣಾನಿ ಕಸ್ಟಡಿ ಸಾವಿನ ಆರೋಪ ಭಟ್ ಮತ್ತು ಇತರರ ಮೇಲೆ ಬಂದಿದೆ.
ಒಂಬತ್ತು ದಿನಗಳ ಕಾಲ ಪೊಲೀಸ್ ಬಂಧನದಲ್ಲಿದ್ದ ವೈಷ್ಣಾನಿ, ಜಾಮೀನಿನ ಮೇಲೆ ಬಿಡುಗಡೆಯಾದ ಹತ್ತು ದಿನಗಳ ನಂತರ ನಿಧನರಾಗಿದ್ದರು. ವೈದ್ಯಕೀಯ ದಾಖಲೆಗಳ ಪ್ರಕಾರ, ಅವರ ಸಾವಿಗೆ ಮೂತ್ರಪಿಂಡದ ವೈಫಲ್ಯ ಕಾರಣ ಎಂದು ಹೇಳಲಾಗಿತ್ತು.
ವೈಷ್ಣಾನಿ ಸಾವಿನ ನಂತರ, ಕಸ್ಟಡಿ ಚಿತ್ರಹಿಂಸೆ ಆರೋಪದ ಮೇಲೆ ಭಟ್ ಮತ್ತು ಇತರ ಕೆಲವು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. 1995ರಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಾಗ ಗುಜರಾತ್ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. 2011 ರವರೆಗೆ ವಿಚಾರಣೆಗೆ ತಡೆ ನೀಡಲಾಗಿತ್ತು. ನಂತರ ತಡೆ ತೆರವುಗೊಂಡು ವಿಚಾರಣೆ ಮುಂದುವರೆದಿತ್ತು.
ಜೂನ್ 2019ರಲ್ಲಿ, ಜಾಮ್‌ನಗರ ಜಿಲ್ಲೆಯ ಸೆಷನ್ಸ್ ನ್ಯಾಯಾಲಯವು ಪ್ರಕರಣದಲ್ಲಿ ಸಂಜೀವ್ ಭಟ್ ಮತ್ತು ಪೊಲೀಸ್ ಪೇದೆ ಪ್ರವೀಣ್‌ಸಿನ್ಹ ಝಲಾ ಅವರಿಗೆ ಐಪಿಸಿ ಸೆಕ್ಷನ್ 302 (ಕೊಲೆ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಮತ್ತು 506 (11) (ಕ್ರಿಮಿನಲ್ ಬೆದರಿಕೆಯ ಅಪರಾಧಕ್ಕೆ ಶಿಕ್ಷೆ) ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ.
ಸಂಜೀವ್ ಭಟ್ ಜೊತೆ ಪೊಲೀಸ್ ಪೇದೆಗಳಾದ ಪ್ರವಿನ್‌ಸಿನ್ಹ ಜಡೇಜಾ, ಅನೋಪ್‌ಸಿನ್ಹ ಜೇತ್ವಾ, ಕೇಸುಭ ಡೊಲುಭಾ ಜಡೇಜಾ ಮತ್ತು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಾದ ಶೈಲೇಶ್ ಪಾಂಡ್ಯ, ದೀಪಕ್‌ಕುಮಾರ್ ಭಗವಾನದಾಸ್ ಷಾ ಕೂಡ ಕಸ್ಟಡಿ ಚಿತ್ರಹಿಂಸೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಅವರಿಗೆ ಐಪಿಸಿಯ ಸೆಕ್ಷನ್ 323 ಮತ್ತು 506 ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ, ಝಲಾ, ಭಟ್, ಶಾ ಮತ್ತು ಪಾಂಡ್ಯ ಅವರು 2019 ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅವರ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಅಶುತೋಷ್ ಶಾಸ್ತ್ರಿ ಮತ್ತು ನ್ಯಾಯಮೂರ್ತಿ ಸಂದೀಪ್ ಎನ್.ಭಟ್ ಅವರ ಪೀಠವು, ಜಾಮ್‌ನಗರ ನ್ಯಾಯಾಲಯ ನೀಡಿದ ತೀರ್ಪು ಸರಿಯಾಗಿದೆ. ಆದ್ದರಿಂದ ಶಿಕ್ಷೆಯ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ : ‘ಅಮ್ಮ’ ಅಧ್ಯಕ್ಷ ಸ್ಥಾನಕ್ಕೆ ಮೋಹನ್ ಲಾಲ್ ರಾಜೀನಾಮೆ : ಸಂಪೂರ್ಣ ಸಮಿತಿ ವಿಸರ್ಜನೆ


