ಶನಿವಾರ ಮಧ್ಯಾಹ್ನದೊಳಗೆ ನಿಗದಿತ ಸಮಯಕ್ಕೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ಪ್ಯಾಲೆಸ್ತೀನಿ ಹೋರಾಟಗಾರರ ಪ್ರತಿರೋಧ ಸಂಘಟನೆಯಾದ ಹಮಾಸ್‌ನೊಂದಿಗಿನ ಕದನ ವಿರಾಮ ಕೊನೆಗೊಳ್ಳುತ್ತದೆ ಮತ್ತು ಗಾಜಾದಲ್ಲಿ ತಮ್ಮ ಮಿಲಿಟರಿ ದಾಳಿಯನ್ನು ಇಸ್ರೇಲ್ ಪಡೆಗಳು ಪುನರಾರಂಭಿಸುತ್ತವೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಹೇಳಿದ್ದಾರೆ. ಶನಿವಾರದೊಳಗೆ
“ಶನಿವಾರ ಮಧ್ಯಾಹ್ನದೊಳಗೆ ಹಮಾಸ್ ನಮ್ಮ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ, ಕದನ ವಿರಾಮ ಕೊನೆಗೊಳ್ಳುತ್ತದೆ. ಜೊತೆಗೆ ಐಡಿಎಫ್ [ಇಸ್ರೇಲ್ ರಕ್ಷಣಾ ಪಡೆಗಳು] ಹಮಾಸ್ ಅನ್ನು ಅಂತಿಮವಾಗಿ ಸೋಲಿಸುವವರೆಗೆ ತೀವ್ರ ಹೋರಾಟಕ್ಕೆ ಇಳಿಯುತ್ತದೆ” ಎಂದು ಅವರು ದೇಶದ ಭದ್ರತಾ ಸಂಪುಟ ಸಭೆಯ ನಂತರ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಕದನ ವಿರಾಮವನ್ನು “ಇಸ್ರೇಲ್ ಉಲ್ಲಂಘನೆ” ಮಾಡಿದೆ ಎಂದು ಪ್ರತಿಪಾದಿಸಿ ಶನಿವಾರ ಯೋಜಿಸಲಾದ ಒತ್ತೆಯಾಳುಗಳ ಬಿಡುಗಡೆಯನ್ನು ಮುಂದಿನ ಸೂಚನೆ ಬರುವವರೆಗೆ ವಿಳಂಬಗೊಳಿಸುವುದಾಗಿ ಹಮಾಸ್ ಹೇಳಿದ ಒಂದು ದಿನದ ನಂತರ ಇಸ್ರೇಲ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಕದನ ವಿರಾಮವನ್ನು ಉಲ್ಲಂಘಿಸಿ ಗಾಜಾ ನಿವಾಸಿಗಳ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂದು ಹಮಾಸ್ ಆರೋಪಿಸಿದೆ. ಶನಿವಾರದೊಳಗೆ
ಶನಿವಾರ ಮಧ್ಯಾಹ್ನದ ವೇಳೆಗೆ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೇಡಿಕೆಯನ್ನು ಇಸ್ರೇಲ್ ಭದ್ರತಾ ಸಂಪುಟ ಸ್ವಾಗತಿಸಿದೆ ಎಂದು ನೆತನ್ಯಾಹು ಹೇಳಿದ್ದು, “ಮತ್ತು ಗಾಜಾದ ಭವಿಷ್ಯಕ್ಕಾಗಿ ಅಮೆರಿಕಾ ಅಧ್ಯಕ್ಷರ ಕ್ರಾಂತಿಕಾರಿ ದೃಷ್ಟಿಕೋನವನ್ನು ನಾವೆಲ್ಲರೂ ಸ್ವಾಗತಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಗಾಜಾ ಬಗ್ಗೆ ಟ್ರಂಪ್ ಹೇಳಿಕೆ
ಶನಿವಾರದೊಳಗೆ ಎಲ್ಲಾ ಇಸ್ರೇಲಿ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಮಂಡಿಸುವುದಾಗಿ ಟ್ರಂಪ್ ಸೋಮವಾರ ಹೇಳಿದ್ದರು.
“ನನ್ನ ಮಟ್ಟಿಗೆ ಹೇಳುವುದಾದರೆ, ಶನಿವಾರ [ಫೆಬ್ರವರಿ 15] 12 ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸದಿದ್ದರೆ ಒಪ್ಪಂದವನ್ನು ರದ್ದು ಮಾಡಲು ಇದು ಸೂಕ್ತ ಸಮಯ ಎಂದು ನಾನು ಭಾವಿಸುತ್ತೇನೆ. ಒಪ್ಪಂದವನ್ನು ರದ್ದುಗೊಳಿಸಿ, ಎಲ್ಲಾ ಸ್ಪರ್ಧೆಗಳು ಮುಗಿದಿದ್ದು, ನರಕ ದರ್ಶನವಾಗಲಿ ಎಂದು ನಾನು ಹೇಳುತ್ತೇನೆ” ಎಂದು ಟ್ರಂಪ್ ಶ್ವೇತಭವನದಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
ಗಾಜಾದಲ್ಲಿ ವಾಸಿಸುವ ಪ್ಯಾಲೆಸ್ತೀನಿಯನ್ನರನ್ನು ಶಾಶ್ವತವಾಗಿ ಸ್ವೀಕರಿಸುವ ಅಮೆರಿಕದ ಬೇಡಿಕೆಯನ್ನು ಈಜಿಪ್ಟ್ ಮತ್ತು ಜೋರ್ಡಾನ್ ವಿರೋಧಿಸಿದರೆ, ಅವರಿಗೆ ನೀಡುವ ಸಹಾಯವನ್ನು ಕಡಿತಗೊಳಿಸಲಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ. ಜೋರ್ಡಾನ್ ಮತ್ತು ಈಜಿಪ್ಟ್‌ನ ನಾಯಕರು ಗಾಜಾದಿಂದ ಪ್ಯಾಲೆಸ್ತೀನಿಯನ್ನರನ್ನು ಸ್ವೀಕರಿಸುವಂತೆ ಟ್ರಂಪ್ ಒತ್ತಾಯಿಸಿದ್ದರು ಮತ್ತು ಗಾಜಾವನ್ನು ತಾವು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೇವೆ ಎಂದು ಹೇಳಿದ್ದರು.
ಅದಾಗ್ಯೂ, ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಈ ಪ್ರಸ್ತಾವನೆಯನ್ನು ಜೋರ್ಡಾನ್ ಮತ್ತು ಈಜಿಫ್ಟ್, ಪಶ್ಚಿಮ ದಂಡೆ ಪ್ರದೇಶವನ್ನು ನಿಯಂತ್ರಿಸುವ ಪ್ಯಾಲೆಸ್ತೀನಿ ಪ್ರಾಧಿಕಾರ ಮತ್ತು ಹಮಾಸ್ ತಿರಸ್ಕರಿಸಿವೆ.
ಮಂಗಳವಾರ ಟ್ರಂಪ್ ಅವರನ್ನು ಭೇಟಿಯಾದ ನಂತರ ಪ್ರತಿಕ್ರಿಯಿಸಿದ ಜೋರ್ಡಾನ್ ರಾಜ ಅಬ್ದುಲ್ಲಾ II ಬಿನ್ ಅಲ್-ಹುಸೇನ್, ಗಾಜಾ ಮತ್ತು ಪಶ್ಚಿಮ ದಂಡೆಯಿಂದ ಪ್ಯಾಲೆಸ್ತೀನಿಯನ್ನರ ಸ್ಥಳಾಂತರದ ವಿರುದ್ಧ ಜೋರ್ಡಾನ್ ನಿಲುವು ಮತ್ತು “ಏಕೀಕೃತ ಅರಬ್ ನಿಲುವು” ಒಂದೇ ಆಗಿದೆ ಎಂದು ಪುನರುಚ್ಚರಿಸಿದ್ದೇನೆ ಎಂದು ಹೇಳಿದ್ದಾರೆ. “ಪ್ಯಾಲೆಸ್ತೀನಿಯನ್ನರನ್ನು ಸ್ಥಳಾಂತರಿಸದೆ ಗಾಜಾವನ್ನು ಪುನರ್ನಿರ್ಮಿಸುವುದು ಮತ್ತು ಭೀಕರ ಮಾನವೀಯ ಪರಿಸ್ಥಿತಿಯನ್ನು ಪರಿಹರಿಸುವುದು ಎಲ್ಲರಿಗೂ ಆದ್ಯತೆಯಾಗಿರಬೇಕು” ಎಂದು ಅವರು ಹೇಳಿದ್ದಾರೆ.
ಗಾಜಾ ಕದನ ವಿರಾಮದ ಮೊದಲ ಆರು ವಾರಗಳ ಹಂತವು ಜನವರಿ 19 ರಂದು ಪ್ರಾರಂಭವಾಯಿತು. ಇದು ಇಸ್ರೇಲ್‌ನಲ್ಲಿರುವ ನೂರಾರು ಪ್ಯಾಲೆಸ್ತೀನಿ ಬಂಧಿತರಿಗೆ ಬದಲಾಗಿ ಹಮಾಸ್ ಬಳಿಯಿರುವ 33 ಒತ್ತೆಯಾಳುಗಳ ವಿನಿಮಯವನ್ನು ಒಳಗೊಂಡಿದೆ. ಹಮಾಸ್ ಇಲ್ಲಿಯವರೆಗೆ 16 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದು, ಇಸ್ರೇಲ್ 566 ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಿದೆ.
ಹಮಾಸ್ ದಕ್ಷಿಣ ಇಸ್ರೇಲ್‌ಗೆ ಆಕ್ರಮಣ ಮಾಡಿ 1,200 ಜನರನ್ನು ಕೊಂದು 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳನ್ನಾಗಿ ತೆಗೆದುಕೊಂಡು ಹೋಗಿತ್ತು. ಇದರ ನಂತರ ಅಕ್ಟೋಬರ್ 7, 2023 ರಂದು ಗಾಜಾ ವಿರುದ್ಧ ಇಸ್ರೇಲ್ ಮಿಲಿಟರಿ ದಾಳಿ ಪ್ರಾರಂಭ ಮಾಡಿತ್ತು. ಅಂದಿನಿಂದ ಗಾಜಾದಲ್ಲಿ 17,400 ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ 47,700 ಕ್ಕೂ ಹೆಚ್ಚು ಜನರನ್ನು ಇಸ್ರೇಲ್ ಕೊಂದಿದೆ. ಈ ಸಂಘರ್ಷದಲ್ಲಿ ಸುಮಾರು 400 ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.
ಕೆಲವು ಒತ್ತೆಯಾಳುಗಳನ್ನು ನವೆಂಬರ್ 2023 ರಲ್ಲಿ ಸಂಕ್ಷಿಪ್ತ ಕದನ ವಿರಾಮ ಒಪ್ಪಂದದ ಭಾಗವಾಗಿ ಬಿಡುಗಡೆ ಮಾಡಲಾಯಿತು ಮತ್ತು ಕೆಲವರು ಯುದ್ಧದ ಪರಿಣಾಮವಾಗಿ ಕೊಲ್ಲಲ್ಪಟ್ಟರು.
ಪ್ರಸ್ತುತ ಕದನ ವಿರಾಮದ ಒಪ್ಪಂದವು ಲಕ್ಷಾಂತರ ಸ್ಥಳಾಂತರಗೊಂಡ ಪ್ಯಾಲೆಸ್ತೀನಿಯನ್ನರು ಗಾಜಾದಲ್ಲಿನ ತಮ್ಮ ಪ್ರದೇಶಗಳಿಗೆ ಮರಳಲು ಅವಕಾಶ ನೀಡುತ್ತದೆ. ವಿಶ್ವಸಂಸ್ಥೆಯ ಪ್ಯಾಲೆಸ್ತೀನ್ ನಿರಾಶ್ರಿತರ ಸಂಸ್ಥೆಯ ಪ್ರಕಾರ, ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಸುಮಾರು 19 ಲಕ್ಷ ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಅಲ್ಲದೆ, ಇಸ್ರೇಲಿ ದಾಳಿಯಲ್ಲಿ ಗಾಜಾದಲ್ಲಿನ 92% ವಸತಿ ಘಟಕಗಳು ನಾಶವಾಗಿವೆ ಅಥವಾ ಹಾನಿಗೊಳಗಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇದನ್ನೂಓದಿ: ಮತ್ತೊಂದು ಮಸೀದಿ ‘ಅಕ್ರಮ’ ನಿರ್ಮಾಣ ಎಂದ ಬಜರಂಗದಳ: ತನಿಖೆಗೆ ಯೋಗಿ ಆದೇಶ
ಮತ್ತೊಂದು ಮಸೀದಿ ‘ಅಕ್ರಮ’ ನಿರ್ಮಾಣ ಎಂದ ಬಜರಂಗದಳ: ತನಿಖೆಗೆ ಯೋಗಿ ಆದೇಶ


