ಕೊರೊನಾ ಪಾಸಿಟಿವಿಟಿ ದರ ಹೆಚ್ಚಿರುವ ಪ್ರದೇಶಗಳಲ್ಲಿಯೂ ಸಹ, ಬಕ್ರೀದ್ ಹಬ್ಬದ ಆಚರಣೆಗಾಗಿ ಕೊವೀಡ್ ನಿಯಮಗಳನ್ನು ಸಡಿಲಗೊಳಿಸಿರುವ ಕೇರಳ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠವು, “ಭಾರತದ ನಾಗರಿಕರ ಆರೋಗ್ಯ ಮತ್ತು ಜೀವಿಸುವ ಹಕ್ಕು ಅತ್ಯುನ್ನತವಾದದ್ದು. ಧಾರ್ಮಿಕ ಆಚರಣೆಗಳಾಗಿರಲಿ, ಬೇರೆ ಇತರ ಭಾವನಾತ್ಮಕ ವಿಚಾರಗಳೇ ಆಗಿರಲಿ ಅವು ಈ ಮೂಲಭೂತ ಮೂಲಭೂತ ಹಕ್ಕಿಗೆ ಅಧೀನವಾಗಿವೆ. ಯಾವುದೇ ರೀತಿಯ, ಧಾರ್ಮಿಕ ಅಥವಾ ಇತರ ಒತ್ತಡದ ಗುಂಪುಗಳು ಬೇರೆ ಯಾವುದೇ ರೀತಿಯಲ್ಲಿ ಜೀವಿಸುವ ಹಕ್ಕಿನಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದೆ.
ಉತ್ತರ ಪ್ರದೇಶ ಸರ್ಕಾರ ಅನುಮತಿ ನೀಡಿದ್ದ ಕನ್ವರ್ ಯಾತ್ರೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶಗಳನ್ನು ಪಾಲಿಸುವಂತೆ ನ್ಯಾಯಾಲಯ ಕೇರಳ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಹಳ್ಳಿಗಳ ಕನ್ನಡ ಹೆಸರು ಮಲಯಾಳೀಕರಣ: ವಿವಾದದ ಬಗ್ಗೆ ಕೇರಳ ಸಿಎಂ ಪ್ರತಿಕ್ರಿಯೆ ಹೀಗಿದೆ!
ಕನ್ವರ್ ಯಾತ್ರೆಯನ್ನು ಅನುಮತಿಸುವ ಯುಪಿ ನಿರ್ಧಾರದ ಕುರಿತು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದ ಬಳಿಕ ಕೊರೊನಾ ಮೂರನೇ ಅಲೆ ಆತಂಕದ ನಡುವೆ ಕನ್ವರ್ ಯಾತ್ರೆಗೆ ಅವಕಾಶ ನೀಡುವುದನ್ನು ಸಹ ಮರುಪರಿಶೀಲಿಸುವಂತೆ ನ್ಯಾಯಮೂರ್ತಿ ನಾರಿಮನ್ ಈ ಹಿಂದೆ ಉತ್ತರ ಪ್ರದೇಶ ರಾಜ್ಯಕ್ಕೆ ನಿರ್ದೇಶನ ನೀಡಿದ್ದರು.
ಬಕ್ರೀದ್ ಹಬ್ಬಕ್ಕಾಗಿ ಕೇರಳದಲ್ಲಿ ಭಾನುವಾರದಿಂದ ಮೂರು ದಿನಗಳವರೆಗೆ ಲಾಕ್ ಡೌನ್ ಸಡಿಲಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸೋಮವಾರ, ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದು, ಕೋವಿಡ್ ನಿರ್ಬಂಧಗಳು ಜನರನ್ನು ಬಹಳಷ್ಟು ಸಂಕಷ್ಟಕ್ಕೆ ತಳ್ಳಿತ್ತು, ಬಕ್ರೀದ್ ಹಬ್ಬದ ಸಮಯದಲ್ಲಿ ಈ ವಸ್ತುಗಳು ಮಾರಾಟವಾಗಿ ಕೊಂಚ ಮಟ್ಟಿಗೆ ತಮ್ಮ ಸಂಕಷ್ಟ ನಿವಾರಣೆಯಾಗಬಹುದು ಎಂದು ಜನರು ಭಾವಿಸಿದ್ದಾರೆ ಎಂದು ತಿಳಿಸಿತ್ತು.
ನ್ಯಾಯಪೀಠವು ಕೇರಳ ಸರ್ಕಾರದ ಈ ನಿರ್ಧಾರವನ್ನು “ಆತಂಕಕಾರಿ” ಎಂದು ಹೇಳಿದೆ. ಅಗತ್ಯ ವಸ್ತುಗಳಲ್ಲದೇ, ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ, ಇದು ತೀವ್ರವಾಗಿ ಸೋಂಕು ಹರಡಲು ಕಾರಣವಾಗುತ್ತದೆ ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ.
ಸಾಧ್ಯವಾದಷ್ಟು, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು ಮಾತ್ರ ಅಂಗಡಿಗಳಿಗೆ ಭೇಟಿ ನೀಡಬೇಕು ಎಂದು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿತ್ತು. ಆದರೂ ಅದರ ಪಾಲನೆ ಬಗ್ಗೆ ಯಾವುದೇ ವಿಶ್ವಾಸವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಕೇರಳ: ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಪ್ರೊಟೆಕ್ಷನ್ ಯೋಜನೆ ಆರಂಭ


