ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ಯಾವುದೇ ಅಕ್ರಮ ಕಂಡುಬಂದರೆ ಮಧ್ಯಪ್ರವೇಶಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ (ಸೆ.15) ಹೇಳಿದೆ. ಈ ಕುರಿತು ಅರ್ಜಿಗಳ ಅಂತಿಮ ವಾದಗಳನ್ನು ಅಕ್ಟೋಬರ್ 7ರಂದು ಆಲಿಸಲಿದೆ.
ಚುನಾವಣಾ ಆಯೋಗ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 1ರಂದು ಪ್ರಕಟಿಸಲಿದೆ. ಅದಕ್ಕೂ ಮುನ್ನ ಅಂತಿಮ ವಾದ ಆಲಿಸುವಂತೆ ಅರ್ಜಿದಾರರು ಕೋರಿದ್ದರು. ಆದರೆ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ದಿನಾಂಕ ಬದಲಾಯಿಸಲು ನಿರಾಕರಿಸಿದೆ.
ಅಂತಿಮ ಪಟ್ಟಿ ಪ್ರಕಟಗೊಂಡರೂ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಅಕ್ರಮ ಕಂಡು ಬಂದರೆ ನ್ಯಾಯಾಲಯ ಮಧ್ಯಪ್ರವೇಶಿಸಲಿದೆ ಎಂದು ನ್ಯಾಯಪೀಠ ಒತ್ತಿ ಹೇಳಿದೆ.
ಬಿಹಾರದ ಎಸ್‌ಐಆರ್‌ಗೆ ಸಂಬಂಧಪಟ್ಟಂತೆ ನ್ಯಾಯಾಲಯ ನೀಡುವ ತೀರ್ಪು ಇಡೀ ದೇಶದ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅನ್ವಯಿಸಲಿದೆ. ಆದರೆ, ಬಿಹಾರದಂತೆ ಇತರ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದಂತೆ ನಾವು ಚುನಾವಣಾ ಆಯೋಗವನ್ನು ತಡೆಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಅಲ್ಲದೆ, ಅಕ್ಟೋಬರ್ 7ರಂದು ಬಿಹಾರ ಎಸ್‌ಐಆರ್ ವಿರುದ್ಧದ ಅರ್ಜಿದಾರರಿಗೆ ಇಡೀ ದೇಶದ ಎಸ್‌ಐಆರ್ ಬಗ್ಗೆಯೂ ವಾದಿಸಲು ಪೀಠ ಅವಕಾಶ ನೀಡಿತು.
ಈ ಮಧ್ಯೆ, ಬಿಹಾರದ ಎಸ್‌ಐಆರ್‌ನಲ್ಲಿ 12 ನೇ ದಾಖಲೆಯಾಗಿ ಆಧಾರ್ ಕಾರ್ಡ್ ಅನ್ನು ಪರಿಗಣಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದ ಸೆಪ್ಟೆಂಬರ್ 8ರ ಆದೇಶವನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಆಧಾರ್ ಪೌರತ್ವದ ದಾಖಲೆಯಲ್ಲಿ. ಮತದಾರರ ಪಟ್ಟಿಯಲ್ಲಿ ಸೇರಿಸಲು ಮತದಾರರು ಸಲ್ಲಿಸಿದ ನಂತರ ಚುನಾವಣಾ ಆಯೋಗ ಅದರ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 8ರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು.
ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳಿಗೆ ಸುಪ್ರೀಂ ಕೋರ್ಟ್ ತಡೆ


