ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್, ತನ್ನನ್ನು ಜೈಲಿನ ಸೆಲ್ಲಿನಿಂದ ಹೊರ ಬರಲು ಹಾಗೂ ಯಾರನ್ನೂ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದು, ಇದು ಏಕಾಂತ ಬಂಧನದ ರೂಪ ಎಂದು ಹೇಳಿದ್ದಾರೆ.
ಹೆಚ್ಚುವರಿ ಜೈಲು ಅಧೀಕ್ಷಕರ ಆದೇಶದ ಮೇರೆಗೆ ಇದನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದು, ಭದ್ರತೆಯ ಹೆಸರಿನಲ್ಲಿ ಈ ರೀತಿಯ ಶಿಕ್ಷೆ ಆಗುತ್ತಿದೆ ಎಂದು ಅವರು ಕೋರ್ಟ್‌ನಲ್ಲಿ ವಿಚಾರಣೆಯ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ಉಮರ್ ಖಾಲಿದ್ ಬಿಡುಗಡೆಗೆ 200ಕ್ಕೂ ಹೆಚ್ಚು ತಜ್ಞರು, ಚಿಂತಕರ ಪಟ್ಟು
ಕಳೆದ ಕೆಲವು ದಿನಗಳಿಂದ ತಾನು ಆರೋಗ್ಯವಾಗಿಲ್ಲ. ದೈಹಿಕ ಮಾತ್ರವಲ್ಲದೆ ಮಾನಸಿಕವಾಗಿಯೂ ಅಸ್ವಸ್ಥತೆ ಅನುಭವಿಸುತ್ತಿದ್ದೇನೆ ಎಂದು ಖಾಲಿದ್ ಹೇಳಿದ್ದಾರೆ.

ನಂತರ ನ್ಯಾಯಾಲಯವು ಜೈಲು ಅಧೀಕ್ಷಕರನ್ನು ಕರೆಸಿತು ಮತ್ತು ಹೆಚ್ಚಿನ ವಿಚಾರಣೆಗೆ ಪ್ರಕರಣವನ್ನು ಮುಂದೂಡಿದೆ. ಅಕ್ಟೋಬರ್ 17 ರಂದು ನ್ಯಾಯಾಲಯ ಖಾಲಿದ್‌ಗೆ ಸಾಕಷ್ಟು ಭದ್ರತೆ ನೀಡುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.
ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಖಾಲೀದ್ ಅವರನ್ನು ”ಭಯೋತ್ಪಾದನಾ ವಿರೋಧಿ ಕಾನೂನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ”ಯ ಅಡಿ ಬಂಧಿಸಲಾಗಿತ್ತು.
ದೆಹಲಿ ನ್ಯಾಯಾಲಯ ಸೆಪ್ಟೆಂಬರ್ 24 ರಂದು ಅವರನ್ನು ಅಕ್ಟೋಬರ್ 22 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇಂದು ಬಂಧನದ ಕೊನೆಯ ದಿನವಾಗಿದ್ದು, ಖಾಲೀದ್ ಅವರನ್ನು ಇನ್ನೊಂದು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಶುಕ್ರವಾರ ಈ ವಿಷಯವನ್ನು ಆಲಿಸಲಿದ್ದು, ದೆಹಲಿ ಪೊಲೀಸರ ಅರ್ಜಿಯ ಆದೇಶವನ್ನು ಅಂಗೀಕರಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಉಮರ್ ಖಾಲಿದ್ ಮತ್ತು ಕೆ.ಎಲ್.ಅಶೋಕ್: ನಮ್ಮ ಕಣ್ಣೆದುರಿಗಿನ ಸತ್ಯವೊಂದನ್ನು ಚರ್ಚಿಸೋಣ.


