ಮಹಾರಾಷ್ಟ್ರ ಸರ್ಕಾರ ರಚನೆಯ ಅವಧಿ ವಿಸ್ತರಣೆಗೆ ಮನವಿ ಮಾಡಿದ್ದರೂ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಗಣನೆಗೆ ತೆಗೆದುಕೊಳ್ಳದೇ ರಾಷ್ಟ್ರಪತಿ ಆಡಳಿತ ಹೇರಿದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ನಿರ್ಧರಿಸಿತ್ತು. ಆದರೆ ಇಂದು ಸುಪ್ರೀಂಗೆ ಹೋಗುವ ನಿರ್ಧಾರದಿಂದ ಹಿಂದೆ ಸರಿದಿದೆ.
ರಾಜ್ಯಪಾಲರ ನಡೆಯ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದ ಶಿವಸೇನೆ ಏಕಾಏಕಿ ತನ್ನ ಹೆಜ್ಜೆಯನ್ನು ಹಿಂದಕ್ಕಿಟ್ಟಿದೆ. ಇನ್ನೂ ಎನ್‌ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಹಾಗೂ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಹೀಗಾಗಿ ಮೊದಲು ಎನ್‌ಸಿಪಿ ಹಾಗೂ ಕಾಂಗ್ರೆಸ್ ಮುಂದಿಟ್ಟಿರುವ ಮೈತ್ರಿ ಮನವಿ ಯಶಸ್ವಿಯಾಗಲಿ. ನಂತರ ರಾಜ್ಯಪಾಲರು ಅವಧಿ ವಿಸ್ತರಿಸದಿರುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಮೊರೆ ಹೋಗುವುದಾಗಿ ಶಿವಸೇನೆ ತಿಳಿಸಿದೆ.
ಇದನ್ನೂ ಓದಿ: ಮೈತ್ರಿ ಕಸರತ್ತು ಕೈ ಬಿಡದ ಶಿವಸೇನೆ: ಸಿಎಂ ಹುದ್ದೆ ಹಂಚಿಕೆಗೆ ಎನ್‌ಸಿಪಿ ಷರತ್ತು.
ಅಲ್ಲದೇ ಶಿವಸೇನೆ ಪಕ್ಷದ ವಕೀಲರು ಸಹ ಮೊದಲು ಮೈತ್ರಿ ಬಗ್ಗೆ ನಿರ್ಧಾರವಾಗಲಿ. ಅನಂತರ ತುರ್ತು ಅರ್ಜಿ ವಿಚಾರಣೆಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯ ಆದೇಶ ಪ್ರಶ್ನಿಸಲು ಹೊಸ ಅರ್ಜಿ ಸಲ್ಲಿಸುವುದಾಗಿ ಸೇನಾ ವಕೀಲ ಸುನೀಲ್ ಫರ್ನಾಂಡಿಸ್ ತಿಳಿಸಿದ್ದಾರೆ.
ಹೊಸ ಅರ್ಜಿಯನ್ನು ಯಾವಾಗ ಸಲ್ಲಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅರ್ಜಿ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಬಳಿ ಮನವಿ ಮಾಡುವ ಮೊದಲು ಪಕ್ಷಗಳ ನಿಲುವು ದೃಢವಾಗಲಿ ಎಂದು ಫರ್ನಾಂಡಿಸ್ ಸಲಹೆ ನೀಡಿದ್ದಾರೆ.
ಶಿವಸೇನೆಯ ಉದ್ಧವ್ ಠಾಕ್ರೆ ಅವರಿಗೆ ಮೈತ್ರಿ ರಚನೆ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಅಲ್ಲದೇ ಎನ್‌ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಇನ್ನೂ ಸ್ವಲ್ಪ ಕಾಲಾವಕಾಶ ಬೇಕೆಂದು ಹೇಳಿವೆ. ಇನ್ನು ಬಿಜೆಪಿಗೆ ಸರ್ಕಾರ ರಚಿಸಲು ರಾಜ್ಯಪಾಲರು ೪೮ ಗಂಟೆಗಳ ಕಾಲಾವಕಾಶ ನೀಡಿದ್ದರು. ಆದರೆ ಶಿವಸೇನೆಗೆ ಕೇವಲ ೨೪ ಗಂಟೆ ಅವಕಾಶ ನೀಡಿದ್ದರು. ಅವಧಿ ವಿಸ್ತರಣೆಗೆ ಮನವಿ ಮಾಡಿದ್ದರೂ ಗಣನೆಗೆ ತೆಗೆದುಕೊಳ್ಳದೆ, ತಿರಸ್ಕರಿಸಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದೆ.


