| ಸುನೀಲ್ ಶಿರಸಿಂಗಿ |
ಕರ್ನಾಟಕ ಕಾಂಗ್ರೆಸ್‍ನ ದಂಡನಾಯಕನಾಗಿ, ಯಶಸ್ವಿ ಮುಖ್ಯಮಂತ್ರಿಯಾಗಿ 5 ವರ್ಷ ಪೂರೈಸಿ, ಬಡ ಮಧ್ಯಮ ವರ್ಗದ ಆಶಾಕಿರಣವಾಗಿದ್ದ ಸಿದ್ಧರಾಮಯ್ಯ ಇಂದು ಅದೇ ಕಾಂಗ್ರೆಸ್ ಪಕ್ಷದ ವಿಲನ್ ಆಗಿ ಕಾಣುತ್ತಿದ್ದಾರೆ. ಎಕ್ಸಿಟ್ ಪೋಲ್ ಬಂದತಕ್ಷಣ ಭಿನ್ನಮತದ ಮಾತುಗಳನ್ನು ಆಡಲು ಶುರು ಮಾಡಿದ ರೋಷನ್‍ಬೇಗ್‍ರ ಪ್ರಧಾನ ಟಾರ್ಗೆಟ್ ಸಿದ್ದರಾಮಯ್ಯನವರೇ ಆಗಿದ್ದರು. ಬಹುಶಃ ಈ ವರಸೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಕಾಂಗ್ರೆಸ್ ವಲಯದಿಂದ ಹೊರಬಿದ್ದ ಅಸಮಾಧಾನದ ದನಿಗಳು ಹೀಗಿವೆ. ‘ನಾವು ಹೀಗೆ ಹೇಳಿದರೆ ಬೇರೆಯವರು ನಂಬದಿರಬಹುದು. ಆದರೆ, ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕನಾಗಿ ಮಿಂಚುತ್ತಿರುವ ಸಿದ್ಧರಾಮಯ್ಯನವರಿಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ನೀಡಿದೆ. ಅವರ ಕನಸಾಗಿದ್ದ ಮುಖ್ಯಮಂತ್ರಿ ಪಟ್ಟವನ್ನು ಕಟ್ಟಿದೆ.. ಆದರೆ ಇದು ನಿಜ. ಕಳೆದೆರಡು ವರ್ಷಗಳಲ್ಲಿ ಅವರ ನಡೆಗಳನ್ನು ನೋಡುತ್ತಾ ಬಂದರೆ, ಅವರ ರಾಜಕೀಯ ಲೆಕ್ಕಾಚಾರದ ಒಳಸುಳಿಗಳನ್ನು ಬಿಡಿಸುತ್ತಾ ಬಂದರೆ ಕಾಣುವುದು ಅವರ ಸ್ವಾರ್ಥ ರಾಜಕೀಯ ಮತ್ತು ದುರಹಂಕಾರದ ನಡೆ ಬಿಟ್ಟು ಮತ್ತೇನು ಇಲ್ಲ.’
‘ಮುಖ್ಯಮಂತ್ರಿಯ ಪಟ್ಟ ತಪ್ಪಿದ್ದರಿಂದ ಹತಾಶಗೊಂಡಿದ್ದ ಅಹಿಂದ ನಾಯಕ ಸಿದ್ಧರಾಮಯ್ಯರನ್ನು, ಕಾಂಗ್ರೆಸ್ ಪಕ್ಷ ರತ್ನಗಂಬಳಿ ಹಾಸಿ ಸ್ವಾಗತಿಸಿತು. ನಂತರ ಪಕ್ಷದ ನಿಷ್ಠಾವಂತ ಮಲ್ಲಿಕಾರ್ಜುನ ಖರ್ಗೆಯವರ ಹಿರಿತನವನ್ನು ಕಡೆಗಣಿಸಿ ಮುಖ್ಯಮಂತ್ರಿಯನ್ನಾಗಿ ಮಾಡಿತು. ಅಧಿಕಾರ ಸಿಕ್ಕ ಕೆಲದಿನಗಳ ಮಟ್ಟಿಗೆ ಶಾಂತವಾಗಿದ್ದ ಸಿದ್ದು, ನಂತರ ತಮ್ಮ ಬತ್ತಳಿಕೆಯಿಂದ ಒಂದೊಂದೆ ಬಾಣಗಳನ್ನು ಬಿಡತೊಡಗಿದರು. ತಮ್ಮನ್ನು ಕಾಂಗ್ರೆಸ್ ಪಕ್ಷದಲ್ಲಿ ಸ್ಥಾಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಎಚ್.ವಿಶ್ವನಾಥ್‍ರನ್ನು ನಿರ್ಲಕ್ಷಿಸಿ ದೂರ ಮಾಡಿಕೊಂಡರು.’
ಈ ಅವಧಿಯಲ್ಲಿ ಕಾಂಗ್ರೆಸ್‍ನ ಜನಪ್ರಿಯತೆಯನ್ನು ಹೆಚ್ಚಿಸಿದ್ದು ಮತ್ತು 2018ರ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಮತಪ್ರಮಾಣ ಹೆಚ್ಚಿಸುವಲ್ಲಿ ಸಿದ್ದರಾಮಯ್ಯನವರ ಪಾತ್ರ ಇಲ್ಲವೇ? ‘ಹೌದು ಇದೆ. ಅದರಲ್ಲಿ ಸಂಶಯವಿಲ್ಲ. ಜೊತೆಗೆ ಈ ಅವಧಿಯಲ್ಲಿ ಅವರು ಯಡಿಯೂರಪ್ಪನವರಿಗಿಂತ ದೊಡ್ಡ ಮಾಸ್ ಲೀಡರ್ ಆಗಿ ಬೆಳೆದರು. ಅವರನ್ನು ಯಾರೂ ನಿರ್ಲಕ್ಷಿಸಲಾಗದ ಪ್ರಮಾಣಕ್ಕೆ ಸಿದ್ದರಾಮಯ್ಯನವರ ಶಕ್ತಿ ಹೆಚ್ಚಿತು. ಅದೇ ಮುಳುವಾದದ್ದು. ಏಕೆಂದರೆ, ಒಂದು ಸಮತೋಲನ ಕಾಪಾಡಬೇಕಿದ್ದ ಕಾಂಗ್ರೆಸ್ ಪಕ್ಷ ಸಿದ್ದುರ ಅಲೆಯಲ್ಲಿ ತೇಲಿ ಹೋಯಿತು. ನಂತರ ಮಲ್ಲಿಕಾರ್ಜುನ ಖರ್ಗೆ ಹೆಗಲ ಮೇಲೆ ಬಂದೂಕ ಇಟ್ಟು ಮುಸ್ಲಿಂ ನಾಯಕ ಖಮರುಲ್ ಇಸ್ಲಾಂ ಮತ್ತು ಹಳೆ ಮೈಸೂರು ಭಾಗದ ಹಿರಿಯ ದಲಿತ ನಾಯಕ ಶ್ರೀನಿವಾಸ ಪ್ರಸಾದ್ ಮೇಲೆ ಗುಂಡು ಹಾರಿಸಿದರು. ಅಂದರೆ ಒಂದು ಹಂತದಲ್ಲಿ ರಾಜಕೀಯವಾಗಿ ಗೆದ್ದರು. ಆದರೆ ನಾಯಕನಾಗಿ, ಮುತ್ಸದ್ದಿಯಾಗಿ ಸೋಲುತ್ತಾ ಸಾಗಿದ್ದರು.’
‘2018ರ ವಿಧಾನ ಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸ್ಪಷ್ಟ ಸಾಧ್ಯತೆಗಳಿದ್ದವು. ಆದರೆ ಅವರ ಕೆಲವು ತಪ್ಪು ನಡೆ ಮತ್ತು ಅತೀ ಆತ್ಮವಿಶ್ವಾಸದಿಂದ ಆ ಅವಕಾಶವನ್ನು ಹಾಳುಮಾಡಿದರು. ಮೊದಲಿಗೆ ತಮ್ಮ ಸ್ವಂತ ಕ್ಷೇತ್ರವಾದ ವರುಣಾದಲ್ಲಿ ರಾಜಕೀಯದ ಆಸಕ್ತಿಯೇ ಇಲ್ಲದಿದ್ದ ತಮ್ಮ ಮಗನನ್ನು ಸ್ಥಾಪಿಸಲು ಹೊರಟಿದ್ದರು. ತಾವು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಹಾರಿದ್ದು ಒಂದೆಡೆಯಾದರೆ, ಬಾದಾಮಿಯಲ್ಲಿ ಸ್ಪರ್ಧಿಸಿದ್ದು ಪಕ್ಷಕ್ಕೆ ದೊಡ್ಡ ಹೊಡೆತ ಕೊಟ್ಟಿತು. ಜೊತೆಗೆ ರಾಜ್ಯದಲ್ಲಿ ಪ್ರಬಲ ಕೋಮುಗಳ ಧೃವೀಕರಣದ ಸ್ಪಷ್ಟ ಸೂಚನೆಗಳಿದ್ದರು, ಅದಕ್ಕೆ ಪ್ರತಿ ತಂತ್ರ ಹೆಣೆಯುವುದನ್ನು ಬಿಟ್ಟು ದೊಡ್ಡಗೌಡರನ್ನು ಏಕವಚನದಲ್ಲಿ ನಿಂದಿಸುತ್ತಾ ಸಾಗಿದ್ದು ಪಕ್ಷಕ್ಕೆ ಇನ್ನಷ್ಡು ಹೊಡೆತ ಕೊಟ್ಟಿತು’.
‘ಪಕ್ಷ ಬಹುಮತ ಪಡೆಯದೆ JDS ಜೊತೆ ಅಧಿಕಾರ ಹಂಚಿಕೊಳ್ಳಬೇಕಾಗಿ ಬಂದಿದ್ದರಿಂದ ಇನ್ನಾದರು ಸಿದ್ದು ನಡೆಗಳಿಗೆ ಬ್ರೇಕ್ ಬೀಳುತ್ತೆ ಅಂತ ಅಂದುಕೊಂಡಿದ್ದ ಅವರ ಅಭಿಮಾನಿಗಳಿಗೆ ಭಾರಿ ನಿರಾಶೆ ಕಾದಿತ್ತು. ದೋಸ್ತಿ ಸರಕಾರದಲ್ಲಿ ಬಂಡಾಯವೆದ್ದ ಕಾಂಗ್ರೆಸ್ ಪಕ್ಷದ ಶಾಸಕರ ಬೆನ್ನಿಗೆ ಸಿದ್ದು ಕೈ ಇದ್ದದ್ದು ಹೈಕಮಾಂಡ್ ಗಮನಿಸಲೇ ಇಲ್ಲ.’ ಇಲ್ಲಿಂದಾಚೆಗೆ ಹೇಳುವ ಮಾತುಗಳು ಆಶ್ಚರ್ಯಕರವಾಗಿದೆ. ‘ಇಷ್ಟಾದರು ಸುಮ್ಮನಾಗದ ಸಿದ್ಧರಾಮಯ್ಯ ರಾಜ್ಯ ಕಾಂಗ್ರೆಸ್ ಪಕ್ಷದ ಪಕ್ಷಾತೀತ ನಾಯಕನಾಗಲು ಹೊರಟರು. ಅದರ ಭಾಗವಾಗಿ ಅವರ ಮುಂದಿನ ಗುರಿ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ.
ಅದಕ್ಕಾಗಿ ಬತ್ತಳಿಕೆಯಿಂದ ಹೊರಬಿದ್ದ ಬಾಣವೇ ಉಮೇಶ್ ಜಾಧವ್. ಧರ್ಮಸಿಂಗ್ ಸಾವಿನ ನಂತರ ಅನಾಥವಾಗಿದ್ದ ಜಾಧವರನ್ನು ಬಳಸಿ ಮಲ್ಲಿಕಾರ್ಜುನ ಖರ್ಗೆ ಬಗ್ಗುಬಡೆಯುವ ಪ್ಲಾನ್ ಮಾಡಿದರು. ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ಧರಾಮಯ್ಯ ದ್ರೋಹ ಬಗೆದರು. ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಖರ್ಗೆ ಅವರು ಸಿದ್ಧರಾಮಯ್ಯರ ಜೊತೆಗೆ ನಿಂತಿದ್ದರು. ಖರ್ಗೆ ಅವರ ವಿರುದ್ಧ ಉಮೇಶ್ ಜಾಧವ ಅವರನ್ನು ಕಳಿಸುವ ಆಟ ಆಡಲು ಪ್ರಯತ್ನಿಸಿದರು. ಅದು ಕೈಮೀರಿ ಹೋದ ನಂತರ ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಿಜೆಪಿ ಸೇರಲಿಕ್ಕೆ ಜಾರಕಿಹೊಳಿ ಜೊತೆ ಮುಂಬೈಗೆ ಹೋದ ಜಾಧವ್ ನಂತರ ಕಾಂಗ್ರೆಸ್ಸಿಗರ ಕೈಗೆ ಸಿಗಲಿಲ್ಲ.’
‘ಮಂಡ್ಯದಲ್ಲಿ ಗೌಡರ ಕುಟುಂಬವನ್ನು ಹತೋಟಿಯಲ್ಲಿ ಇಡುವುದಕ್ಕಾಗಿ ಚಿತ್ರನಟ ಅಂಬರೀಶ ಅವರ ಪತ್ನಿ ಸುಮಲತಾ ಅವರನ್ನು ಕಣಕ್ಕೆ ಇಳಿಯುವಂತೆ ನೋಡಿಕೊಂಡರು. ಸುಮಲತಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಸಿದ್ಧರಾಮಯ್ಯ ಅವರ ಬಣದ ಕಾಂಗ್ರೆಸ್ಸಿಗರು ಅವರ ಜೊತೆಗಿದ್ದರು ಎಂಬುದು ಗುಟ್ಟಿನ ಸಂಗತಿಯೇನಲ್ಲ. ಸುಮಲತಾ ಅವರಿಗೆ ದೊರೆತ ಕಾಂಗ್ರೆಸ್ ಬೆಂಬಲದ ಕಾರಣದಿಂದ ಮೈಸೂರು ಮತ್ತಿತರ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‍ಗೆ ಜೆಡಿಎಸ್ ತನ್ನ ಸಂಪೂರ್ಣ ಸಹಕಾರ ನೀಡಲು ಸಾಧ್ಯವಾಗಲಿಲ್ಲ. ಕಲಬುರ್ಗಿಯ ಖರ್ಗೆಯವರ ಹಿನ್ನಡೆ ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ ಕ್ಷೇತ್ರಗಳ ಮೇಲೆಯೂ ಪರಿಣಾಮ ಬೀರಿತು. ಜೆಡಿಎಸ್ ತನ್ನ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಹೆಣಗಾಡುವಂತೆ ಮಾಡಿದ ಕಾಂಗ್ರೆಸ್ ಮತ್ತು ಸಿದ್ಧರಾಮಯ್ಯ ಅದಕ್ಕಾಗಿ ಬೆಲೆ ತೆರಬೇಕಾಯಿತು.’
ಮೇಲಿನ ಮಾತುಗಳೆಲ್ಲವೂ ಸತ್ಯ ಎಂದು ಹೇಳಲಾಗದೇ ಇದ್ದರೂ, ಸಂಪೂರ್ಣ ಅಲ್ಲಗಳೆಯುವುದೂ ಸಾಧ್ಯವಿಲ್ಲ ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯನವರ ನಡೆಗಳಿವೆ. ಮೋದಿ ಎದುರು ಸಮರ್ಥವಾದ ಸೈದ್ಧಾಂತಿಕ ನಾಯಕತ್ವ ನೀಡುವರೆಂಬ ನಿರೀಕ್ಷೆ ಹುಟ್ಟಿಸಿದ್ದ ಸಿದ್ದರಾಮಯ್ಯನವರು ಹೀಗೆ ಮಾಡಿದ್ದು ಹೌದೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.


