Homeಮುಖಪುಟಮೋದಿ-ಮೀಡಿಯಾ-ಆರೆಸೆಸ್: ಇದು ಯಾರ ಗೆಲುವು?

ಮೋದಿ-ಮೀಡಿಯಾ-ಆರೆಸೆಸ್: ಇದು ಯಾರ ಗೆಲುವು?

ಮೋದಿ ಎಂದರೆ, ಆರೆಸ್ಸೆಸ್ ಎಂದರೆ ಅದು ಒಬ್ಬ ವ್ಯಕ್ತಿ ಅಥವಾ ತೆರೆಮರೆಯಲ್ಲಿ ಕೆಲಸ ಮಾಡುವ ಒಂದು ಸಂಘಟನೆ ಅಷ್ಟೇ ಅಲ್ಲ. ಅದು ದೇಶಾದ್ಯಂತ ಹಬ್ಬಿರುವ ಬೃಹತ್ ಸಂಘಟಿತ ಜಾಲ.

- Advertisement -
- Advertisement -

| ಡಾ. ಎಚ್.ವಿ ವಾಸು |

ನರೇಂದ್ರ ಮೋದಿ ಗೆದ್ದಿದ್ದಾರೆ. ಬಿಜೆಪಿಯು 300 ಸೀಟುಗಳನ್ನು ಗೆದ್ದಿದೆ. ತನ್ನೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳನ್ನೂ ಅದು ಗೆಲುವಿನತ್ತ ಕೊಂಡೊಯ್ದಿದೆ. ಈ ಗೆಲುವು ಸೋಲುಗಳ ಒಟ್ಟಾರೆ ವಿಶ್ಲೇಷಣೆಯನ್ನು ಪತ್ರಿಕೆಯ ಈ ಸಂಚಿಕೆಯಲ್ಲಿ ಹಲವರು ಮಾಡಿದ್ದಾರೆ. ಆದರೆ, ಒಂದು ಮುಖ್ಯ ಪ್ರಶ್ನೆ ಬಹಳ ಮುಖ್ಯವಾದುದಾಗಿದೆ. ಈ ಪ್ರಶ್ನೆಗಿರುವ ಉತ್ತರವು ಮುಂದಿನ ದಿನಗಳಲ್ಲಿ ಅನಾವರಣಗೊಳ್ಳಲಿರುವ ಸರ್ಕಾರ ಮತ್ತು ಸಮಾಜವನ್ನು ನಿರ್ಧರಿಸಲಿದೆ. ಅಷ್ಟೇ ಅಲ್ಲದೇ, ಈ ಸರ್ಕಾರಕ್ಕೆದುರು ರೂಪಿತಗೊಳ್ಳಬೇಕಾದ ರಾಜಕೀಯ ಶಕ್ತಿಯ ಸ್ವರೂಪವನ್ನೂ ನಿರ್ಧರಿಸಲಿದೆ.

ಬಿಜೆಪಿಯ ಮಾತೃಸಂಸ್ಥೆ ಆರೆಸ್ಸೆಸ್. ಇಂದು ದೇಶದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿಯಿದ್ದರೂ, ಅದರ ನಿಯಂತ್ರಣ, ಉಸ್ತುವಾರಿ ಆರೆಸ್ಸೆಸ್‍ದೇ. ಜೊತೆಗೆ ಆರೆಸ್ಸೆಸ್ ದೇಶದ ಅತೀ ದೊಡ್ಡ ಸಂಘಟನೆಯೂ ಹೌದು. ಈ ಗೆಲುವಿನಲ್ಲಿ ಅದರ ಪಾತ್ರವೇನು?

ಬಿಜೆಪಿಗಿಂತ, ಆರೆಸ್ಸೆಸ್‍ಗಿಂತ ದೊಡ್ಡದಾಗಿ ಮೋದಿ ಬೆಳೆದು ನಿಂತಿದ್ದಾರೆ ಎಂಬ ಮಾತಿದೆ. ಆರೆಸ್ಸೆಸ್‍ನ ತೀವ್ರಗಾಮಿ ಮುಖಗಳಲ್ಲೊಂದಾದ ಗಿರಿರಾಜ್ ಕಿಶೋರ್, ಬೇಗುಸರಾಯ್‍ನಲ್ಲಿ ಗೆದ್ದ ನಂತರ ಇಂಡಿಯಾ ಟುಡೇ ಟಿವಿ ಚಾನೆಲ್ ಜೊತೆಗೆ ಮಾತಾಡುತ್ತಾ ಒಂದು ಮಾತು ಹೇಳಿದರು. ತನ್ನ ಗೆಲುವಿನ ಮೂಲ ಕಾರಣವೇನು ಎಂಬ ಪ್ರಶ್ನೆಗೆ, ‘ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಯಾಗಿದ್ದು ಮೋದಿಯವರೇ. ಹಾಗಾಗಿ ಅವರೇ ಗೆಲುವಿನ ಕಾರಣ’ ಎಂದರು. ಹೌದೇ?

ಇನ್ನು ಮೂರನೆಯದಾಗಿ ದೇಶದ ಮಾಧ್ಯಮಗಳಲ್ಲಿ ಶೇ.90ಕ್ಕೂ ಹೆಚ್ಚು ಮೋದಿ ಹಾಗೂ ಬಿಜೆಪಿಯ ಪರವಾಗಿದ್ದವು. ಸರಿಯಾಗಿ ಹೇಳಬೇಕೆಂದರೆ ಮೋದಿಯ ಪರವಾದ ಪ್ರಚಾರದಲ್ಲಿ ಅವು ಬಹಳ ತೀವ್ರವಾಗಿ (Passionate) ತೊಡಗಿಕೊಂಡಿದ್ದವು. ಮೋದಿ ಸರ್ಕಾರದ ಆರ್ಥಿಕ ನೀತಿಗಳು, ಗೋ ರಕ್ಷಣೆಯ ಪರಿ ಸೇರಿದಂತೆ ಹಲವು ವಿದ್ಯಮಾನಗಳು ಜನರನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದರೂ, ಅಂಥವು ಯಾವುವೂ ಮುನ್ನೆಲೆಗೆ ಬರದಂತೆ ನೋಡಿಕೊಂಡದ್ದು ಇವೇ ಮಾಧ್ಯಮಗಳು. ಹಾಗಾಗಿ ಜನಾಭಿಪ್ರಾಯ ಮೂಡಿಸುವಲ್ಲಿ ಮಾಧ್ಯಮಗಳು (ಮತ್ತು ಸಾಮಾಜಿಕ ಮಾಧ್ಯಮಗಳು) ವಹಿಸಿದ ಪಾತ್ರದ ಕಾರಣಕ್ಕೆ ಅವುಗಳಿಗೆ ಹೆಚ್ಚಿನ ಕ್ರೆಡಿಟ್ ಕೊಡಬೇಕೇ?

ಈ ಮೂರೂ ಅಂಶಗಳಿಗೂ, ದೇಶದ ಅತೀ ದೊಡ್ಡ ಮತ್ತು ಸರ್ಕಾರದ ಜೊತೆಗೆ ಸಂಬಂಧ ಹೊಂದಿ ಭಾರೀ ಪ್ರಮಾಣದ ಸಂಪತ್ತನ್ನು ತಮ್ಮದಾಗಿಸಿಕೊಳ್ಳುತ್ತಿರುವ ಕಾರ್ಪೋರೇಟ್ ಸಂಸ್ಥೆಗಳಿಗೂ ಹತ್ತಿರದ ಸಂಬಂಧವಿದೆ. ಬಿಜೆಪಿಯ ಜೊತೆ ಹತ್ತಿರದ ಸಂಬಂಧ ಹೊಂದಿದ್ದಂತೆ ಕಾಣದ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಒಂದು ವಾರದ ಕೆಳಗಷ್ಟೇ ನಾಗಪುರಕ್ಕೆ ಹೋಗಿ ಆರೆಸ್ಸೆಸ್‍ನ ಸರಸಂಘ ಚಾಲಕ ಮೋಹನ್ ಭಾಗವತ್ ಜೊತೆಗೆ ಚರ್ಚಿಸಿಕೊಂಡು ಬಂದರು ಎಂಬುದನ್ನು ಇಲ್ಲಿ ಕಾಣಿಸಬೇಕು. ಹೀಗಿದ್ದ ಮೇಲೆ ಅಂಬಾನಿಗಳು, ಅದಾನಿ, ಎಸ್ಸಾರ್‍ನ ರುಯ್ಯಗಳೇ ಮೊದಲಾದವರು ಯಾವ ರೀತಿ ಜೊತೆಗಿದ್ದಾರೆಂಬುದನ್ನು ಊಹಿಸಬಹುದು. ಇನ್ನು ಮೋದಿ ಸರ್ಕಾರದ ಅತೀ ದೊಡ್ಡ ಫಲಾನುಭವಿಗಳು ಅವರೇ ಆಗಿದ್ದಾರೆ ಮತ್ತು ಶೇ.90ರಷ್ಟು ಮೀಡಿಯಾ ಸಹಾ ಅವರ ಕೈಯ್ಯಲ್ಲೇ ಇದೆ. ಹಾಗಾಗಿಯೇ ಅವರನ್ನು ಪ್ರತ್ಯೇಕವಾಗಿ ಹೆಸರಿಸದೇ ಮೂರರ ಜೊತೆಗೂ ಇದ್ದಾರೆಂದು ಹೇಳಿದರೆ ಅವರ ಮಹತ್ವ ಗೊತ್ತಾಗುತ್ತದೆ.

ಆರೆಸ್ಸೆಸ್ ಬಿಜೆಪಿಯ ಸಕಲ ಆಗುಹೋಗುಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಇನ್ನೂ ಪರ್ಯಾಯ ನಾಯಕತ್ವ ರೂಪುಗೊಳ್ಳುವ ಮುಂಚೆಯೇ ಅಡ್ವಾಣಿಯಂಥವರನ್ನೂ ಮೂಲೆಗೆ ಸರಿಸುವ ಪ್ರಮಾಣದಲ್ಲಿ ಅದರ ಹಿಡಿತ ಪಕ್ಷದ ಮೇಲೆ ಇದೆ. ಹಾಗಾಗಿಯೇ ಮೋದಿಯನ್ನು ಪಕ್ಕಕ್ಕೆ ಸರಿಸಿ ಗಡ್ಕರಿಯನ್ನು ಮುನ್ನೆಲೆಗೆ ತರಲು ಆರೆಸ್ಸೆಸ್ ಬಯಸಿದೆ ಎಂತಲೂ, ಆರೆಸ್ಸೆಸ್ ಮತ್ತು ಮೋದಿಯ ನಡುವೆ ವೈರುಧ್ಯಗಳಿವೆ ಎಂತಲೂ ಸುದ್ದಿಯಾಗಿತ್ತು. ಮುಖ್ಯಮಂತ್ರಿಯಾದ ನಂತರ 2002ರಲ್ಲಿ ಗುಜರಾತ್‍ನಲ್ಲಿ ಮುಸ್ಲಿಮರ ಹತ್ಯಾಕಾಂಡ ನಡೆದಾಗ ಅಧಿಕಾರದಲ್ಲಿದ್ದ ಮೋದಿ ಹಿಂದುತ್ವದ ಅಪರಾವತಾರ. ಆದರೆ ಪ್ರವೀಣ್ ತೊಗಾಡಿಯಾ ಥರದ ಆರೆಸ್ಸೆಸ್‍ನ ಮುಂಚೂಣಿ ನಾಯಕರನ್ನು ಗುಜರಾತ್‍ನ ಒಳಕ್ಕೇ ಬಿಟ್ಟುಕೊಂಡಿರಲಿಲ್ಲ. ಇವೇನೇ ಇದ್ದರೂ, ಆರೆಸ್ಸೆಸ್‍ನ ಅಜೆಂಡಾವನ್ನು ಜಾರಿಗೆ ತರಲು ಮೋದಿಗಿಂತ ಸಮರ್ಥರಿಲ್ಲ ಎಂಬುದು ಅದಕ್ಕೆ ಗೊತ್ತಿದೆ.

ಇದನ್ನು ಬಹಳ ಹಿಂದೆಯೇ ಪುಣ್ಯ ಪ್ರಸೂನ್ ಬಾಜಪೈ ತಮ್ಮ ವಿಡಿಯೋ ಒಂದರಲ್ಲಿ ಹೇಳಿದ್ದರು. ಈ ಸಾರಿ ಮೋದಿ ಗೆಲ್ಲದಿದ್ದರೆ, ಆರೆಸ್ಸೆಸ್‍ನ ಅಜೆಂಡಾಕ್ಕೇ ಪೆಟ್ಟು ಬೀಳುತ್ತದೆ; ಹಾಗಾಗಿ ಅದು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಕಣಕ್ಕಿಳಿಯಲಿದೆ ಎಂಬುದು ಅವರ ಅಭಿಮತವಾಗಿತ್ತು. ಈ ಚುನಾವಣೆಯಲ್ಲೂ ಆರೆಸ್ಸೆಸ್ ಅತ್ಯಂತ ಸಕ್ರಿಯ ಪಾತ್ರವನ್ನು ವಹಿಸಿದೆ. ಒಂದು ಅಂದಾಜಿನ ಪ್ರಕಾರ 80,000 ಆರೆಸ್ಸೆಸ್ ಕಾರ್ಯಕರ್ತರನ್ನು ಸಂಪೂರ್ಣವಾಗಿ ಈ ಕೆಲಸದ ಮೇಲೆಯೇ ಕಣಕ್ಕಿಳಿಸಲಾಗಿತ್ತು.
ಎಲ್ಲಕ್ಕಿಂತ ಮುಖ್ಯವಾಗಿ ಮೋದಿ, ಅಮಿತ್‍ಷಾರೇ ಆರೆಸ್ಸೆಸ್‍ನ ಉತ್ಪನ್ನಗಳು. ಸ್ವತಃ ಮೋದಿ ಸುದೀರ್ಘ ಕಾಲದಿಂದ ಪೂರ್ಣಾವಧಿ ಪ್ರಚಾರಕರು. ಆರೆಸ್ಸೆಸ್‍ನ ಸಕಲ ಸಂಘಟನಾ ನೆಟ್‍ವರ್ಕ್ ಮತ್ತು ಅಮಿತ್‍ಷಾ ಬಿಜೆಪಿಯ ಮೂಲಕ ಕಟ್ಟಿದ ಬೃಹತ್ ಕಾರ್ಯಜಾಲದ ನೆಟ್‍ವರ್ಕ್ ಎರಡೂ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಮೋದಿ-ಅಮಿತ್‍ಷಾ ಮತ್ತು ಆರೆಸ್ಸೆಸ್ ಒಂದರಿಂದ ಇನ್ನೊಂದು ಬಿಡಿಸಲಾರದ ಪ್ಯಾಕೇಜ್.

ಹಾಗೆಂದು ಮೋದಿ ಮತ್ತು ಅಮಿತ್‍ಷಾರಿಗೆ ವಿಶೇಷ ಪಾತ್ರವಿಲ್ಲವೆಂದಲ್ಲ. ಅಮಿತ್‍ಷಾ ಸಮರ್ಥವಾಗಿ ಸಂಘಟನಾ ಕೆಲಸವನ್ನು ನಿರ್ವಹಿಸುವ ಚಾತುರ್ಯವುಳ್ಳವರು. ಮೇ 17ರಂದು (ಕಡೆಯ ಸುತ್ತಿನ ಮತದಾನದ ಪ್ರಚಾರದ ಅವಧಿ ಮುಗಿದ ದಿನ) ಮೋದಿಯನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಬಿಜೆಪಿಯ ಪ್ರಚಾರ ಹೇಗೆ ನಡೆಯಿತೆಂಬುದನ್ನು ಅಮಿತ್‍ಷಾ ಬಿಚ್ಚಿ ಹೇಳಿದರು. ಆ ಪತ್ರಿಕಾಗೋಷ್ಠಿಯಲ್ಲಿ ಮೋದಿ ಕಡಿಮೆ ಮಾತಾಡಿದರು ಮತ್ತು ಯಾವ ಪ್ರಶ್ನೆಯನ್ನೂ ತೆಗೆದುಕೊಳ್ಳಲಿಲ್ಲ ಎಂಬುದೇ ಹೆಚ್ಚು ಸುದ್ದಿಯಾಯಿತು. ನಿಜಕ್ಕೂ ಸುದ್ದಿಯಾಗಬೇಕಿದ್ದದ್ದು ಅಮಿತ್‍ಷಾ ಬಿಡಿಸಿಟ್ಟ ಸಂಘಟನಾ ನೆಟ್‍ವರ್ಕ್. ಇದನ್ನೇ ಚುನಾವಣಾ ಯಂತ್ರಾಂಗ ಎಂತಲೂ ಕರೆಯಬಹುದು. ಬಿಜೆಪಿಯ ಚುನಾವಣಾ ಯಂತ್ರಾಂಗವನ್ನು ಸರಿಗಟ್ಟಬಲ್ಲ ಇನ್ನಾವುದೇ ಪಕ್ಷ (ಸಣ್ಣ ಪ್ರಮಾಣದಲ್ಲಾದರೂ) ಈ ದೇಶದಲ್ಲಿ ಹಿಂದೆಂದೂ ಇರಲಿಲ್ಲ, ಈಗಲೂ ಇಲ್ಲ.

ಮಿಕ್ಕ ಪಕ್ಷಗಳಿಗೆ ಬೂತ್ ಮಟ್ಟದಲ್ಲೂ ಸಮಿತಿಗಳಿಲ್ಲದಾಗ (ಕಾಂಗ್ರೆಸ್‍ನ ಜಿಲ್ಲಾ ಮತ್ತು ಬ್ಲಾಕ್ ಸಮಿತಿಗಳೂ ಕೆಲಸ ಮಾಡುವುದಿಲ್ಲ) ಅಮಿತ್‍ಷಾ ಪೇಜ್‍ಪ್ರಮುಖ್‍ಗಳನ್ನು ನೇಮಿಸಿದ್ದರು. ಅಂದರೆ, ಮತದಾರರ ಪಟ್ಟಿಯ ಒಂದೊಂದು ಪೇಜ್ (ಪುಟ)ಗೂ ಒಬ್ಬೊಬ್ಬ ಉಸ್ತುವಾರಿ. ಇದಲ್ಲದೇ, ಎರಡು ಚುನಾವಣೆಗಳ ಮಧ್ಯೆ ‘ವಿಸ್ತಾರಕ್’ಗಳು. ಇವರ ಕೆಲಸವೇ ಇದುವರೆಗಿನ ಬಿಜೆಪಿಯ ಮತದಾರರ ನೆಲೆಯನ್ನು ವಿಸ್ತರಿಸುವುದು. ಮೋದಿ ಸರ್ಕಾರದ ಸಾಧನೆಗಳನ್ನು (ಅವ್ಯಾವೆಂದು ಕೇಳಬೇಡಿ) ವಿವರಿಸಿ, ‘ಮುಂದಿನ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ನೀವು ಬಿಜೆಪಿಗೇ ಮತ ಹಾಕಬೇಕು’ ಎಂದು ಮನವರಿಕೆ ಮಾಡಿಕೊಡುವುದು ಅವರ ಕರ್ತವ್ಯ. ನಿವೃತ್ತ ಕಾಲೇಜು ಪ್ರಾಂಶುಪಾಲರಿಂದ ಹಿಡಿದು, ಐಟಿ ಇಂಜಿನಿಯರ್‍ಗಳವರೆಗೆ ಎಷ್ಟೋ ಜನ ಈ ಕೆಲಸದಲ್ಲಿ ನಿರತರಾಗಿದ್ದರು.
ಇದಲ್ಲದೇ, ಮೇ 17ರಂದು ಅಮಿತ್‍ಷಾ ವಿವರಿಸಿದಂತೆ, ಕ್ಷೇತ್ರವೊಂದರಲ್ಲಿ 2,000 ಪೂರ್ಣಾವಧಿ ಕಾರ್ಯಕರ್ತರು 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಇವೆಲ್ಲವೂ ಸೇರಿದರೆ ಅದು ಮೋದಿ, ಅಮಿತ್‍ಷಾ ಮತ್ತು ಆರೆಸ್ಸೆಸ್.

ಮೋದಿಯ ಮಹತ್ವ ಅಷ್ಟೇ ಅಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಮೋದಿಯೆಂಬ ವ್ಯಕ್ತಿತ್ವವನ್ನು ಜಗತ್ತಿನ ಸರ್ವಶ್ರೇಷ್ಠ ವ್ಯಕ್ತಿತ್ವವೆಂದು ಬಿಂಬಿಸಲು ಇಷ್ಟೇ ಮಹತ್ವವುಳ್ಳ ಏಜೆನ್ಸಿ, ಯಂತ್ರಾಂಗ, ಹಣಕಾಸು ಸಂಪನ್ಮೂಲವು ನಿಯೋಜಿತವಾಗಿವೆ. ಅವರ ಸುತ್ತಲೂ ಸುತ್ತುವ ಕ್ಯಾಮೆರಾಗಳು, ಅವು ತಾವೇ ಸೃಷ್ಟಿ ಮಾಡಿಕೊಡುವ ವಿಡಿಯೋ ಫೂಟೇಜ್ ಮತ್ತು ಫೋಟೋಗಳು, ಅವನ್ನು ಮಾಧ್ಯಮಗಳಿಗೆ ‘ಪ್ಯಾಕೇಜ್’ ಸಮೇತ ತಲುಪಿಸುವ ವ್ಯವಸ್ಥೆ ಎಲ್ಲವೂ ಅತ್ಯಂತ ಅಚ್ಚುಕಟ್ಟಾಗಿ ನಡೆಯುತ್ತವೆ. ಈ ಚುನಾವಣೆಯ ಹೊತ್ತಿನಲ್ಲಿ ನಡೆದ ಮೋದಿಯ ಸಂದರ್ಶನಗಳನ್ನು ನೀವು ಒಮ್ಮೆ ತಿರುಗಿ ನೋಡಿದರೆ ಎಲ್ಲವೂ ಅರ್ಥವಾಗುತ್ತವೆ.

ಹಾಗಾದರೆ, ‘ಪ್ಯಾಕೇಜ್’ಗಾಗಿ ತಮಗೆ ಬಂದದ್ದೆಲ್ಲವನ್ನೂ ಮಾಧ್ಯಮಗಳು ಯಥಾವತ್ತಾಗಿ ಪ್ರಸಾರ ಮಾಡುತ್ತವೆಯೇ? ಇಲ್ಲ, ಅದಕ್ಕೂ ಮೀರಿ ಅವರು ಮೋದಿಯ ಭಜನೆ ಮಾಡುತ್ತವೆ. ನಿತ್ಯವೂ ತಾವೇ ಹೊಸ ಹೊಸ ಕಥೆಗಳನ್ನು ಹೊಸೆದು ಪ್ರಸಾರ ಮಾಡುವುದೇ ಅವರ ಕೈಂಕರ್ಯವಾಗಿರುತ್ತದೆ. ಅಷ್ಟು ಮಾತ್ರವಲ್ಲದೇ ಬಿಜೆಪಿ-ಆರೆಸ್ಸೆಸ್‍ನ ಐಟಿ ಸೆಲ್ಲುಗಳು ಮುಂದಿಡುವ ಕಥಾನಕವನ್ನು ಅತ್ಯಂತ ಸಮರ್ಥವಾಗಿ ಜನರ ಮುಂದಿಡುತ್ತವೆ. ಅದರ ಜೊತೆಗೆ ಸೋಷಿಯಲ್ ಮೀಡಿಯಾದ ಅತ್ಯಂತ ಪ್ರಬಲ ಜಾಲವಿದೆ. ನೆಹರೂ ಕುಟುಂಬ ಮುಸ್ಲಿಂ ಕುಟುಂಬವೆಂಬ ಹಸೀ ಸುಳ್ಳಿನಿಂದ ಹಿಡಿದು ಏನನ್ನು ಬೇಕಾದರೂ ಪ್ರಸಾರ ಮಾಡುತ್ತವೆ.

ಅದರ ಜೊತೆಗೆ, ಯಾವ ಸಮಯದಲ್ಲಿ ಯಾರ ವಿರುದ್ಧ ಹೆಚ್ಚೆಚ್ಚು ಸುದ್ದಿಗಳನ್ನು ಪ್ರಸಾರ ಮಾಡಬೇಕು ಮತ್ತು ಅದು ರವಾನಿಸಬೇಕಾದ ಸಂದೇಶ ಯಾವುದು ಎಂಬುದರಲ್ಲೂ ನಿಖರತೆ ಇರುತ್ತದೆ. ಒಂದು ಉದಾಹರಣೆ ಹೇಳಬೇಕೆಂದರೆ, 2018ರ ವಿಧಾನಸಭಾ ಚುನಾವಣೆಗೆ ಮುಂಚೆ ಈ ಸೆಲ್ಲುಗಳು ಮತ್ತು ಮಾಧ್ಯಮಗಳ ಪ್ರಧಾನ ಟಾರ್ಗೆಟ್ ಎಂದರೆ ಸಿದ್ದರಾಮಯ್ಯನವರಾಗಿದ್ದರು. ಅವರನ್ನು ಯಾವ್ಯಾವ ರೀತಿಯಲ್ಲಿ ಬದ್ನಾಮ್ ಮಾಡಬಹುದೋ ಆ ಎಲ್ಲಾ ರೀತಿಯಲ್ಲಿ ಮಾಡಲಾಯಿತು. ಆದರೆ, ಚುನಾವಣೆ ಮುಗಿದು ಕುಮಾರಸ್ವಾಮಿ ಸಿಎಂ ಆದ ನಂತರ, ಪ್ರಧಾನವಾದ ಟಾರ್ಗೆಟ್ ಗೌಡರ ಕುಟುಂಬವಾಯಿತು. ಸಿದ್ದರಾಮಯ್ಯ ಎಂದರೆ ನಿದ್ದೆರಾಮಯ್ಯ ಇತ್ಯಾದಿಗಳನ್ನು ಪ್ರತಿಷ್ಠಾಪಿಸಲಾಯಿತು. ಸೋಷಿಯಲ್ ಮೀಡಿಯಾದಲ್ಲಿ ಈಗ ಎಚ್‍ಡಿಕೆ ಕುಟುಂಬದ ವಿರುದ್ಧ ಬರುವ ಮೀಮ್‍ಗಳು ಇತ್ಯಾದಿಗಳನ್ನು ನೋಡಿದರೆ ಅದರ ಅರಿವಾಗುತ್ತದೆ.

ಇದರ ಎಷ್ಟೋ ಪಟ್ಟು ಹೆಚ್ಚು ದಾಳಿಯನ್ನು ರಾಹುಲ್‍ಗಾಂಧಿ ಕುಟುಂಬದ ಮೇಲೆ ನಡೆಸಲಾಯಿತು. ಇಡೀ ದೇಶದಲ್ಲಿ ಹಲವು ಬಗೆಯ ಪ್ರಚಾರ ಮಾಡಲಾಯಿತು. ಅವನ್ನು ಸ್ವೀಕರಿಸಿ ದಾಳಿಯ ಮಾಧ್ಯಮವಾಗಲು ಚಾನೆಲ್‍ಗಳು ಮತ್ತು ಪತ್ರಿಕೆಗಳು ತುದಿಗಾಲಲ್ಲಿ ನಿಂತಿದ್ದವು. ಬಹುಮುಖೀ ಆಯಾಮಗಳಿಂದ ಬಂದು ಬಿದ್ದ ಸುಳ್ಳು ಮಾಹಿತಿ, ಫೇಕ್ ವಿಶ್ಲೇಷಣೆ, ಫೇಕ್ ವಿಡಿಯೋ, ದುಷ್ಪ್ರಚಾರ, ಇಮೇಜರಿ ಇತ್ಯಾದಿಗಳು ಜನರ ಮನಸ್ಸನ್ನು ನಿರ್ದಿಷ್ಟವಾದ ರೀತಿಯಲ್ಲಿ ರೂಪಿಸುತ್ತಾ ಹೋದವು. ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ರೂಪಿಸಿರುವ ಮನಸ್ಥಿತಿ ಅಷ್ಟು ಸುಲಭದಲ್ಲಿ ನಿಲುಕಿಗೆ ಸಿಗುವಂಥದ್ದಲ್ಲ. ಇದರ ಆಯಕಟ್ಟಿನ ಜಾಗಗಳಲ್ಲಿ ಒಂದು ನಿರ್ದಿಷ್ಟ ಜಾತಿಯವರೇ ಇರುವುದು ಆಕಸ್ಮಿಕವೇನಲ್ಲ.

ಇವೆಲ್ಲವೂ ಸಾವಿರಾರು ಕೋಟಿಗಳ ವಹಿವಾಟು. ಸಾವಿರಾರು ಕೋಟಿಗಳನ್ನು ಹೊಂದಿಸಿಕೊಳ್ಳುವುದು ಮೋದಿ ಷಾ ಕೂಟಕ್ಕೆ ಚಿಟಿಕೆ ಹೊಡೆದಷ್ಟು ಸುಲಭವಾಗಿತ್ತು. ಹಣಕಾಸಿನ ಸಂಪನ್ಮೂಲವೂ ಸೇರಿದಂತೆ ಈ ಎಲ್ಲವನ್ನೂ ರೂಢಿಸಿಕೊಳ್ಳುವುದು ವಿರೋಧ ಪಕ್ಷಗಳಿಗೆ ಸಾಧ್ಯವೇ ಇರಲಿಲ್ಲ. ಇಡೀ ದೇಶದ ಎಲ್ಲಾ ವಿರೋಧ ಪಕ್ಷಗಳ ಇಡೀ ಯಂತ್ರಾಂಗ, ಮಾಧ್ಯಮ ಬೆಂಬಲಗಳು ಒಂದು ಬಿಜೆಪಿ ಪಕ್ಷದ ಅರ್ಧಕ್ಕೂ ಇಲ್ಲ.

ಇಂತಹದೊಂದು ಮನಸ್ಥಿತಿ ರೂಪಿಸಿರುವಾಗ, ಅದರ ಮೇಲೆ ಪುಲ್ವಾಮಾ ದಾಳಿ, ಬಾಲಾಕೋಟ್ ಸ್ಟ್ರೈಕ್‍ಗಳು ನಡೆದರೆ ಏನಾಗಬೇಡ? ಹಾಗೆ ನೋಡಿದರೆ ಇದೇ ಸಂಚಿಕೆಯ ಮತ್ತೊಂದು ಲೇಖನದಲ್ಲಿ ಹೇಳಿರುವ ಹಾಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 500 ಸೀಟುಗಳನ್ನೇ ಗೆದ್ದಿರಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಅಥವಾ ಯಾವುದೇ ಸಮಾಜದಲ್ಲಿ ಎಲ್ಲಾ ಕ್ರಿಯೆಗಳಿಗೆ ಪ್ರತಿಯಾಗಿ ಪ್ರತಿ ಧ್ರುವೀಕರಣವು ಸ್ವಲ್ಪ ಪ್ರಮಾಣದಲ್ಲಾದರೂ ಆಗುತ್ತದಾದ್ದರಿಂದ ಹಾಗೆ ಆಗಿಲ್ಲ ಅಷ್ಟೇ.

ಮೋದಿ ಎಂದರೆ, ಆರೆಸ್ಸೆಸ್ ಎಂದರೆ ಅದು ಒಬ್ಬ ವ್ಯಕ್ತಿ ಅಥವಾ ತೆರೆಮರೆಯಲ್ಲಿ ಕೆಲಸ ಮಾಡುವ ಒಂದು ಸಂಘಟನೆ ಅಷ್ಟೇ ಅಲ್ಲ. ಅದು ದೇಶಾದ್ಯಂತ ಹಬ್ಬಿರುವ ಬೃಹತ್ ಸಂಘಟಿತ ಜಾಲ, ಅದರ ಜೊತೆ ನಿರಂತರವಾಗಿ ಕೊಡು-ಕೊಳೆ ವ್ಯವಹಾರ ನಡೆಸುವ ಕಾರ್ಪೋರೇಟ್‍ಗಳು ಮತ್ತು ಅದರ ಪರವಾಗಿ ಕೈ ಜೋಡಿಸಿರುವ ಮಾಧ್ಯಮ ಮತ್ತು ಇವೆಲ್ಲವೂ ಸೇರಿ ಹಬ್ಬಿಸಿರುವ ಸಾಮೂಹಿಕ ಮನಸ್ಥಿತಿ. ಅದೇ ಈ ಸಾರಿ ಗೆದ್ದಿದೆ. ಇದನ್ನು ಪ್ರಜಾಪ್ರಭುತ್ವ ಎನ್ನಬೇಕೇ ಬೇಡವೇ ಎಂಬುದು ಓದುಗರ ಮನಸ್ಥಿತಿಗೆ ಬಿಟ್ಟದ್ದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...