Homeಕರ್ನಾಟಕರಾಜ್ಯದಲ್ಲಿ ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆಯೇ? - ಸಿದ್ದರಾಮಯ್ಯ ಪ್ರಶ್ನೆ

ರಾಜ್ಯದಲ್ಲಿ ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆಯೇ? – ಸಿದ್ದರಾಮಯ್ಯ ಪ್ರಶ್ನೆ

ತಮ್ಮನ್ನು ಮಂತ್ರಿಯೂ ಮಾಡಬೇಕು ಹಾಗೂ ಉಪಚುನಾವಣೆಯಲ್ಲಿ ಹಣವನ್ನೂ ಖರ್ಚು ಮಾಡಬೇಕೆಂದು ಯಡಿಯೂರಪ್ಪ ಅವರ ಜೊತೆ ಅನರ್ಹರು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು.

- Advertisement -
- Advertisement -

ನಾನು ಜೆಡಿಎಸ್ ಬಿಡಲಿಲ್ಲ, ನನ್ನನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ದರು. ಧರಂಸಿಂಗ್ ಸರ್ಕಾರದಲ್ಲಿ ನಾನು ಉಪಮುಖ್ಯಮಂತ್ರಿಯಾಗಿದ್ದೆ, ಆ ಸ್ಥಾನದಿಂದ ನನ್ನನ್ನು ವಜಾ ಮಾಡಿದರು. ಇದಾದ ಒಂದು ವರ್ಷದ ನಂತರ ನಾನು ಕಾಂಗ್ರೆಸ್ ಸೇರಿದ್ದು. ನಾನು ಕಾಂಗ್ರೆಸ್ ಸೇರುವಾಗ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿಲ್ಲ, ವಿರೋಧ ಪಕ್ಷದ ಸ್ಥಾನದಲ್ಲಿತ್ತು. ಹಣ, ಅಧಿಕಾರದಾಸೆಗೆ ಬೇರೆಯವರಂತೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಇನ್ನೊಂದು ಪಕ್ಷ ಸೇರಿದವನಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಾಜಾರೋಷವಾಗಿ ಬಿಜೆಪಿ ಪಕ್ಷ ದುಡ್ಡು ಹಂಚ್ತಿದೆ, ಸಚಿವ ಕಾರಜೋಳ ದುಡ್ಡು ಹಂಚಿದ್ದು ಟಿವಿಯಲ್ಲಿ ಬರ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಜಾತಿ ಮೇಲೆ ಮತ ಕೇಳ್ತಿದ್ದಾರೆ, ಮಂತ್ರಿ ಮಾಡ್ತೀನಿ, ತಾಲ್ಲೂಕು ಮಾಡ್ತೀನಿ ಎಂದು ಆಶ್ವಾಸನೆ ಕೊಡ್ತಿದ್ದಾರೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೂ ಕ್ರಮ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗ ಅಸ್ತಿತ್ವದಲ್ಲಿದೆಯೇ? ಹದಿನೇಳು ಶಾಸಕರನ್ನು ಬಿಜೆಪಿ ದುಡ್ಡು ಕೊಟ್ಟೇ ಖರೀದಿಸಿದ್ದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಈಗಿನ ಡಿಸಿಎಂ ಅಶ್ವಥನಾರಾಯಣ, ಶಾಸಕರಾದ ವಿಶ್ವನಾಥ್, ಲಿಂಬಾವಳಿ ಮತ್ತು ಯೋಗೇಶ್ವರ್ ಮನೆಗೆ ಬಂದು 5 ಕೋಟಿ ರೂ. ನೀಡಿದ್ದರು ಎಂದು ಮಾಜಿ ಸಚಿವ ಶ್ರೀನಿವಾಸಗೌಡ ವಿಧಾನಸಭೆಯಲ್ಲಿಯೇ ಹೇಳಿಲ್ವೆ? ಇನ್ನು ಏನು ಸಾಕ್ಷಿ ಬೇಕು? ದೇವದುರ್ಗಕ್ಕೆ ಯಡಿಯೂರಪ್ಪ ಹೋಗಿ ಜೆಡಿಎಸ್ ಶಾಸಕನ ಖರೀದಿಗೆ ಯತ್ನಿಸಿದ್ದು ಅಡಿಯೋ ಟೇಪ್‌ನಲ್ಲಿಲ್ವೇ? ಅದು ತಮ್ಮದೇ ಧ್ವನಿ ಎಂದು ಅವರು ಒಪ್ಪಿಕೊಂಡಿಲ್ವೆ? ಇದರ ಅರ್ಥ ಏನು? ಆತ್ಮಸಾಕ್ಷಿಗಿಂತ ಮಿಗಿಲಾದ ಸಾಕ್ಷಿ ಯಾವುದು? ಎಂದು ಕಿಡಿಕಾರಿದ್ದಾರೆ.

ತಮ್ಮನ್ನು ಮಂತ್ರಿಯೂ ಮಾಡಬೇಕು ಹಾಗೂ ಉಪಚುನಾವಣೆಯಲ್ಲಿ ಹಣವನ್ನೂ ಖರ್ಚು ಮಾಡಬೇಕೆಂದು ಯಡಿಯೂರಪ್ಪ ಅವರ ಜೊತೆ ಅನರ್ಹರು ಮೊದಲೇ ಒಪ್ಪಂದ ಮಾಡಿಕೊಂಡಿದ್ದರು. ಹಾಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಕೋಟಿಗಟ್ಟಲೆ ಹಣ ಸುರಿಯುತ್ತಿದೆ, ನಮ್ಮ ಪಕ್ಷದಲ್ಲಿ ಹಣವಿಲ್ಲ‌. ಹಣ ಖರ್ಚು ಮಾಡುವ ವಿಚಾರದಲ್ಲಿ ಬಿಜೆಪಿ ಜೊತೆ ಸ್ಪರ್ಧೆ ಅಸಾಧ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -