Homeಮುಖಪುಟಅಣೇಕಟ್ಟೆ ವಿಶ್ವನಾಥ್‌ನವರ ಕಥೆ: 'ಸಿಲ್ವರ್ ಓಕ್'

ಅಣೇಕಟ್ಟೆ ವಿಶ್ವನಾಥ್‌ನವರ ಕಥೆ: ‘ಸಿಲ್ವರ್ ಓಕ್’

ಪಕ್ಕದಲ್ಲಿ ತೇಗದ ಮರಗಳಿದ್ದರೂ ಅಲ್ಲಿ ಹಕ್ಕಿಗಳು ಗೂಡು ಕಟ್ಟಿಲ್ಲ. ಈ ಸಿಲ್ವರ್ ಓಕ್ ಮರದ ಎಲೆಗಳು ಸಣ್ಣ ಇದ್ದು, ಕಡ್ಡಿಗಳು ಹತ್ತಿರ ಹತ್ತಿರ ಪೊದೆಯಂತೆ ಇರುವುದರಿಂದ ಇಲ್ಲಿ ಗೂಡುಕಟ್ಟಲು ಅನುಕೂಲಕರ.

- Advertisement -
- Advertisement -

ಈ ಸಿಲ್ವರ್ ಓಕ್ ಮರದ ಕೆಳಗೆ ಬಿದ್ದಿದ್ದ ಒಡೆದ ಗಾಜಿನ ಬಾಟೆಲ್ ತನಿಖೆಯ ದಿಕ್ಕನ್ನೆ ಬದಲಿಸಿಬಿಟ್ಟಿತು. ಈ ಬುಡದಲ್ಲಿ ಅರ್ಧ ಸತ್ತ ಸಿಲ್ವರ ಓಕ್ ಮರಗಳಿಗೆ ಏನಾಗಿದೆ ಎಂಬ ಹುಡುಕಾಟದೊಳಗೆ ಇಷ್ಟೊಂದು ವಿಚಾರಗಳಿವೆ ಎಂದು ಗೊತ್ತಿರಲಿಲ್ಲ. ನಾನು ಪಿಯುಸಿ ಓದುವಾಗ ಇವುಗಳನ್ನು ತೋಟದ ಸುತ್ತಾ ಒಂದು ಮೀಟರ್ ಒಳಗೆ ನೆಟ್ಟಿದ್ದೆ. ಅವು ಈಗ ದೊಡ್ಡ ಮರಗಳಾಗಿವೆ. ಒಂದೆರಡು ಮರಗಳನ್ನು ತಬ್ಬಲೂ ಸಾಧ್ಯವಿಲ್ಲ. ಕಳೆದ ಲಾಕ್ ಡೌನ್ ನಲ್ಲಿ ಊರಿಗೆ ಹೋದಾಗ ಇದೇ ದೊಡ್ಡ ಮರಕ್ಕೆ ಜೋಕಾಲಿ ಕಟ್ಟಲು ಮರ ಹತ್ತಲು ಹೋದಾಗ ಮರದ ಬುಡದಲ್ಲಿ ಏನೋ ಆಗಿರುವುದು ಗಮನಕ್ಕೆ ಬಂತು. ನನ್ನ ಮಗಳನ್ನು ಜೋಕಾಲಿಯಲ್ಲಿ ತೂಗುತ್ತಿದ್ದಾಗ ಕತ್ತನ್ನೆತ್ತಿ ನೋಡಿದರೆ, ಈ ಸಿಲ್ವರ್ ಮರ ಎಷ್ಟೊಂದು ಪ್ರಾಣಿ ಪಕ್ಷಿಗಳಿಗೆ ಗೂಡು ಕಟ್ಟಿ ಕೊಟ್ಟಿತ್ತು ಎಂದರೆ ಆಶ್ಚರ್ಯವಾಗುತ್ತದೆ. ಅನೇಕ ಸಣ್ಣ ಸಣ್ಣ ಹಕ್ಕಿಗಳು ಒಣಗಿದ ಕಡ್ಡಿಗಳ ಬಳಸಿ ಪುಟ್ಟ ಪುಟ್ಟ ಗೂಡುಗಳನ್ನು ಕಟ್ಟಿದ್ದು ಕಾಣುತ್ತಿತ್ತು. ಅಳಿಲುಗಳಿಗೂ ಅದು ಮನೆಯಾಗಿತ್ತು. ಅಗಲ ಎಲೆ ಇರುವ ತೇಗದ ಮರಗಳಲ್ಲಿ ಗೂಡುಕಟ್ಟಲು ಕಷ್ಟ. ಪಕ್ಕದಲ್ಲಿ ತೇಗದ ಮರಗಳಿದ್ದರೂ ಅಲ್ಲಿ ಹಕ್ಕಿಗಳು ಗೂಡು ಕಟ್ಟಿಲ್ಲ. ಈ ಸಿಲ್ವರ್ ಓಕ್ ಮರದ ಎಲೆಗಳು ಸಣ್ಣ ಇದ್ದು, ಕಡ್ಡಿಗಳು ಹತ್ತಿರ ಹತ್ತಿರ ಪೊದೆಯಂತೆ ಇರುವುದರಿಂದ ಇಲ್ಲಿ ಗೂಡುಕಟ್ಟಲು ಅನುಕೂಲಕರ. ಅಷ್ಟೆ ಅಲ್ಲ, ಮರವೂ ತುದಿಯಿಂದ ಕೆಳಗೆ ‘ವಿ’ ಆಕಾರದಲ್ಲಿ ಇರುವುದರಿಂದ, ಮಳೆ ನೀರು ಗೂಡಿನ ಮೇಲೆ ಬೀಳುವ ಸಾಧ್ಯತೆ ಕಡಿಮೆ ಇರುವ ಜಾಗ ಮರದಲ್ಲಿ ತುಂಬಾ ಇರುತ್ತದೆ. ಆದ್ದರಿಂದ ಈ ಸಿಲ್ವರ್ ಓಕ್ ಮರ ಹಕ್ಕಿಪಕ್ಕಿಗಳಿಗೆ ಆಶ್ರಯತಾಣ. ಹತ್ತಿರವೇ ಕವಳೆ ಹಣ್ಣಿನ ಮರಗಳು ಇರುವುದರಿಂದ ಇಲ್ಲಿ ಜೋಡಿ ಜೋಡಿಯಾಗಿ ತಿರುಗುವ ಗ್ರೇ ಹಾರ್ನ್ ಬಿಲ್ ಗಳು ರೆಸ್ಟ್ ಮಾಡಲು ಈ ಮರಕ್ಕೆ ಬರುತ್ತಿದ್ದವೇನೊ, ನಾನು ಅನೇಕಬಾರಿ ಈ ಮರಗಳಲ್ಲಿ ಗ್ರೇ ಹಾರ್ನ್ ಬಿಲ್ ಕಂಡಿದ್ದೆ.

ಈ ಸಮಾಜದಲ್ಲಿ ತಾನೊಬ್ಬನೆ ಚೆನ್ನಾಗಿ ಬದುಕಿದರೆ ಏನೂ ಆಗಲ್ಲ, ನಾಲ್ಕಾರು ಜನಕ್ಕೆ ಆಶ್ರಯ ಕೊಟ್ಟು ನೋಡಿ, ನಿಮ್ಮ ಸುತ್ತ ಮುತ್ತ ಇರುವವರ ಕಣ್ಣು ಕೆಂಪಗಾಗುತ್ತೆ. ಈ ಸಿಲ್ವರ್ ಓಕ್ ಮರಕ್ಕೂ ಇದೇ ತರ ಆಗಿದ್ದು. ಮರದ ಬುಡ ಅರ್ಧ ಸತ್ತು ಹೋಗಿದೆ. ಮೂರ್ನಾಲ್ಕು ಮರಗಳ ಬುಡದಲ್ಲಿ ಸುಟ್ಟಿರುವ ಬೂದಿಯಂತೆ ಕಂಡು ಬಂತು. ಆ ಮರಗಳಿಗೆ ತಕ್ಷಣ ಟ್ರೀಟ್ ಮೆಂಟ್ ಮಾಡದೆ ಇದ್ದರೆ ಮರಗಳು ಸತ್ತು ಹೋಗುತ್ತವೆ ಎಂಬುದು ನನಗೆ ಅರ್ಥವಾಗಿತು. ತಕ್ಷಣ ಮರದ ಬುಡದ ಕೆಲವು ಪೋಟೊಗಳನ್ನು ಮೊಬೈಲಿನಲ್ಲಿ ಕ್ಲಿಕ್ಕಿಸಿಕೊಂಡು ಸೀದಾ ಚಿ.ನಾ.ಹಳ್ಳಿ ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಹತ್ತಿರ ಹೋದೆನು.

ಅಲ್ಲಿನ ಅಧಿಕಾರಿ ಮಹಾಲಿಂಗಣ್ಣ ನನಗೆ ಹಳೇ ಪರಿಚಯದವರು. ಈತರಕೀತರ ಎಂದು ಫೋಟೊ ತೋರಿಸಿದೆ. “ವಿಶ್ವಣ್ಣ, ಇದು ನೋಡೋಕೆ ಪಾದರಸ ಹಾಕಿರೊ ತರ ಕಾಣ್ತಿದೆ, ಪಕ್ಕದಲ್ಲಿ ಯಾರಾದರೂ ಆಗದವರು ಇದ್ದಾರಾ?” ಎಂದರು. “ಎಲ್ಲರೂ ಚೆನ್ನಾಗಿದ್ದಾರೆ. ನಮ್ಮ ಪಕ್ಕ ಅಂತವರು ಯಾರು ಇಲ್ಲ” ಎಂದೆನು. ಪಕ್ಕದಲ್ಲಿರುವುದು ಕಣಗಾಲ್ ಪುಟ್ಟಣ್ಣ. ಕಣಗಾಲ್ ಎಂದರೆ ಸಿನಿಮಾ ನಿರ್ದೇಶಕರಲ್ಲ. ಈ ಕಣಗಾಲ್ ಪುಟ್ಟಣ್ಣ ವಿಲೇಜ್ ಅಕೌಂಟೆಂಟ್ ಆಗಿ ನಿವೃತ್ತರಾದವರು. ಅವರು ನಾಟಕಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಕಲಾವಿದರೂ ಹೌದು. ಅದಕ್ಕಾಗಿ ಜನ ಅವರಿಗೆ ‘ಕಣಗಾಲ್’ ಅಂತ ಬಿರುದು ಕೊಟ್ಟಿದ್ದಾರೆ. ಅವರದ್ದು ಅಡಿಕೆ ತೋಟ ನಮ್ಮ ತೋಟದ ಪಕ್ಕ ಇದೆ. ಅವರು ನಮ್ಮ ಕುಟುಂಬ ಸ್ನೇಹಿತರು. ಅವರು ಹೀಗೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಲೆಕ್ಕ ಹಾಕಿದೆ. ಅವರ ನಮ್ಮ ಸ್ನೇಹ ಅಂತದ್ದು, ಇರೋದನ್ನು ಕೊಡ್ತಾ, ಇಲ್ದೇ ಇರೋದನ್ನ ಕೇಳಿ ಇಸ್ಕೊಳ್ತಾ ಇದ್ದದ್ದು ಪುಟ್ಟಣ್ಣನವರ ಮನೆಯಿಂದ ಮಾತ್ರ. ಒಂದ್ ಅಡಿಕೆಪಟ್ಟೆ ಬೇಕಾದರೆ ಅವರ ಅಡಿಕೆ ತೋಟಕ್ಕೆ ಹೋಗಿ ಹೇಳದೆ ಕೇಳದೆ ತಗಳ್ತೀವಿ. ಅವರೂ ಈಕಡೆ ಮೊನ್ನೆ ಮೊನ್ನೆ ಮಾವಿನ ಕಾಯಿ ಕಲ್ಲಿ ತಗೋಂಡೋಗಿದ್ದರು ಇನ್ನೂ ತಂದು ಕೊಟ್ಟಿಲ್ಲ. ಒಂದ್ ಹಾರೆ, ಗುದ್ದಲಿ, ಪಿಕಾಸಿ, ಕೋಲುಗುದ್ದಲಿ, ಪೈಪು, ಕಾಲರ್ರು ಹೀಗೆ ಇರೋದನ್ನು ಕೊಡ್ತಾ, ಇಲ್ದೇ ಇರೋದನ್ನು ನಿಸ್ಸಂಕೋಚವಾಗಿ ಕೇಳಿ ಪಡೆಯೊ ಫ್ರೆಂಡ್ ಶಿಪ್ಪು ನಮ್ದು. ಅವರ ಮೇಲೆ ಸುತಾರಾಂ ಅನುಮಾನ ಇಲ್ಲ.

“ಇರಲಿ ವಿಶ್ವಣ್ಣ, ಹೊಸ ಮೇಡಂ ಬಂದಿದಾರೆ, ಅವರು ಮೂಡಿಗೆರೆಯವರು, ಅವರಿಗೆ ಭಾರಿ ಇಂಟರೆಸ್ಟ್ ಇದೆ. ಇದಕ್ಕೆ ಏನಾದರೂ ಒಂದು ತಿಳಿಸ್ತಾರೆ” ಅಂತ ಮಹಲಿಂಗಣ್ಣ ಹೇಳ್ತು. ಅಲ್ಲೇ ಟೀ ತರಿಸಿ ಕೊಡ್ತು. ಕುಡಿತಾ ಸ್ವಲ್ಪ ಹೊತ್ತು ಹರಟೆ ಹೊಡಿತ್ತಿದ್ದಾಗ, ಮೇಡಂ ಚೇಂಬರ್ ನಲ್ಲಿ ಇದ್ದ ಯಾರೋ ಎದ್ದು ಹೋದರು. ಬನ್ನಿ ಹೋಗೋಣ ಅಂತ ಕರೆದುಕೊಂಡು ಛೇಂಬರ್ ಗೆ ಹೋದರು. ಮಹಲಿಂಗಣ್ಣ ‘ಇವರು ವಿಶ್ವಣ್ಣ ಅಂತ, ತೆಂಗು ಬೆಳೆಗಾರರ ಸಂಘದಲ್ಲಿ ಅಧ್ಯಕ್ಷರು, (ನಾನು ಕಾರ್ಯದರ್ಶಿ ಇರೋದು. ಎಲ್ಲಾ ಮುಖ್ಯ ಕೆಲಸ ನಾನೇ ಮಾಡೋದರಿಂದ ನನ್ನೆ ಅಧ್ಯಕ್ಷ ಅಂದುಕೊಂಡಿದ್ದಾರೆ) ಬುಕ್ಕೆಲ್ಲಾ ಬರೆದಿದಾರೆ, ಹಾಗೇ, ಹೀಗೆ… “ ಅಂತೆಲ್ಲಾ  ಸಕತ್ತಾಗೆ ಪರಿಚಯ ಮಾಡಿದರು. “ನಮಸ್ತೆ ಮೇಡಂ, ನೀವು ಮೂಡಿಗೆರೆಯವರು ಅಂದಾಗ ನನಗೆ ತೇಜಸ್ವಿ ನೆನಪಾದರು. ನಾನು ತೇಜಸ್ವಿಯವರ ಅಭಿಮಾನಿ, ಅವರ ಎಲ್ಲಾ ಪುಸ್ತಕಗಳನ್ನು ಓದಿದೀನಿ ಹಾಗೆ ಹೀಗೆ.. ನಿಮಗೆ ಅವರು ಗೊತ್ತಾ? ಇವರು ಗೊತ್ತಾ?” ಅಂತೆಲ್ಲಾ ನಮ್ ಮಾತುಕತೆ ಓದಿನ ಕಡೆ ತಿರುಗಿತು. “ನಾನು ತುಂಬಾ ಓದ್ತೀನಿ, ಚಿತ್ರ ಬಿಡಿಸ್ತೀನಿ” ಎಂದರು.  ಹೀಗೆ ನಾವು ಸಮಾನ ಆಸಕ್ತಿಗಳ ಬಗ್ಗೆ ಮಾತಾಡ್ತಾ ಉಳಿದೆವು. ಒಂದು ಕಾಲದಲ್ಲಿ, ಮೂಡಿಗೆರೆ ಹತ್ತಿರ ಮಕ್ಕಳು ಹುಟ್ಟಿದ ಪೋಷಕರು ಹೊಸ ಹೆಸರು ಹುಡುಕಿಕೊಡಿ ಅಂತ ತೇಜಸ್ವಿಗೆ ಕೇಳ್ತಾ ಇದ್ದರಂತೆ.  ಯಾವುದಾದರೂ ಹೊಸ ಹೆಸರು ಕೇಳಿದರೆ, ಅದು ತೇಜಸ್ವಿ ಇಟ್ಟಿರೋ ಹೆಸರು ಅಂತ ಫೇಮಸ್ಸಾಗಿದ್ದರಂತೆ ಆ ಕಡೆ. ಹೀಗೆಲ್ಲಾ ಹೇಳುವಾಗ ಮೇಡಂ ಹೆಮ್ಮೆಯಿಂದ “ಆದರೆ ನನ್ನ ಹೆಸರನ್ನು ಮಾತ್ರ ನಮ್ಮ ಅಪ್ಪನೇ ಇಟ್ಟಿದ್ದು” ಅಂದರು. “ಮೇಡಂ, ನಿಮ್ಮ ಹೆಸರು?” ಕುತೂಹಲದಿಂದ ಕೇಳಿದೆ. “ಹಂಸವಿ”. “ವ್ಹಾ!! ಎಷ್ಟು ಸಿಹಿಯಾದ ಹೆಸರು. ನಿಮ್ಮ ತಂದೆ ನಿಜಕ್ಕೂ ಕ್ರಿಯೇಟೀವ್ ಹಾಗೂ ಮಧುರಭಾವದ ಹೊಮ್ಮಿಸೊ ಹೆಸರನ್ನೇ ಇಟ್ಟಿದ್ದಾರೆ” ಎಂದೆ ಹೀಗೆ ಆಪ್ತವಾದೆವು. ಅವರ ಚಿತ್ರಗಳನ್ನೆಲ್ಲಾ ನೊಡುತ್ತಾ ಇನ್ನೊಂದಿಷ್ಟು ಸಮಯ ಹೋಯ್ತು.

ಇವರು ಬಹಳ ಆಸಕ್ತಿ ಇರುವ ಆಫೀಸರ್ ಅಂತ ಕೇಳಿದ್ದೆನು. ನಮ್ಮ ಹಳ್ಳಿಗಳ ದಾರಿಯಲ್ಲಿ ನೆಟ್ಟಿರುವ ಸಾಲುಗಿಡಗಳಿಗೆ ಈ ಬಳ್ಳಾರಿ ಜಾಲಿ ಮುಳ್ಳನ್ನು ಕಟ್ಟಸಿ ಆಡು ಕುರಿ ಬಾಯಿ ಹಾಕದ ಹಾಗೆ ಮಾಡಿದ್ದಾರೆ. ಸ್ವಂತ ಜಮೀನಿನವರು ಈ ತರ ಮರಗಿಡ ಸಂರಕ್ಷಣೆ ಮಾಡುವುದಿಲ್ಲ. ಅಷ್ಟೆ ಅಲ್ಲ, ರಸ್ತೆ ಪಕ್ಕದ ಮರಗಿಡಗಳಿಂದ ಬರುವ ಫಲವನ್ನು ರೈತರೇ ಅನುಭವಿಸಲು ಅರ್ಹರು ಅನ್ನೊ ಹಕ್ಕು ಪತ್ರವನ್ನು ವಿತರಣೆ ಮಾಡಿದ್ದರು. ಇದರಿಂದ ರೈತರೂ ಜವಾಬ್ದಾರಿಯಿಂದ ರಸ್ತೆ ದಂಡೆಯ ಮರಗಳನ್ನು ಸಾಕುತ್ತಿದ್ದಾರೆ. ಅದಿರಲಿ, ಈತರಕೀತರ ನನ್ನ ತೋಟದ ಸಮಸ್ಯೆ ಹೇಳಿದಾಗ, ಆಸಕ್ತಿ ತೋರಿದ ಹಂಸವಿ ಮೇಡಂ, ಇಬ್ಬರು ತಜ್ಞರ ಜೊತೆ ಬರುವುದಾಗಿ ಮಾತು ಕೊಟ್ಟು ಕಳಿಸಿದರು.

ಅಲ್ಲಿಂದ ಹೊರಟು ಬೈಕ್ ಏರಿ ಹೊರಟಾಗ, ಮಹಲಿಂಗಣ್ಣ ‘ನಿಮ್ಮ ಪಕ್ಕದಲ್ಲಿ ಆಗದವರು ಇದ್ದಾರ?’ ಎಂದು ಕೇಳಿದ ಮಾತು ತಲೆಯೊಳಗೆ ಹಾರಿ ಬಂತು. ಈ ಹಾರಿ ಬಂದ ಆಲೋಚನೆಗೆ ತಳುಕು ಹಾಕಿಕೊಂಡು, ಪುಟ್ಟಣ್ಣ ಕಣಗಾಲ್ ಕಳೆದ ವರ್ಷ, ಅವರ ತೋಟದ ದಂಡೆಯಲ್ಲಿರುವ ನಮ್ಮ ಸಿಲ್ವರ್ ಓಕ್ ಮರಗಳು ನಮ್ಮವೇ ತೆಂಗಿನ ಮರಗಳಿಗೆ ಹಾನಿ ಮಾಡ್ತಿವೆ ಎಂದು ತೋರಿಸಿ, ‘ಅವುಗಳಿಂದ ಮುಟ್ಟೇನು ಆಗದು ಕಡಿದು ಮಾರಿಬಿಡು’ ಎಂದು ಹೇಳಿದ್ದ ಮಾತು ನೆನಪಾಯಿತು. ನಮ್ಮ ತೆಂಗಿನ ಮರಗಳ ಬಗ್ಗೆ ಅವರು ಕಾಳಜಿ ತೋರಿಸಿ ಕಡಿದು ಮಾರಾಟ ಮಾಡಲು ಹೇಳಿದ್ದರು.

ಒಂದೆರಡು ದಿನಗಳ ನಂತರ ಹಂಸವಿ ಮೇಡಂ ಫೋನ್ ಮಾಡಿ, ಇಬ್ಬರು ತಜ್ಞರ ಜೊತೆ ನಿಮ್ಮ ತೋಟಕ್ಕೆ ಬರುತ್ತಿರುವುದಾಗಿ ತಿಳಿಸಿದರು. ಒಬ್ಬರು ಎ ಫರ್ನಾಂಡಿಸ್ ಇವರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು -ರೋಗ ತಜ್ಞರು, ಮತ್ತೊಬ್ಬರು ವಿಠ್ಠಲ್ ಎಂದು, ಅರಣ್ಯ ಇಲಾಖೆಯ ರಾಸಾಯನಿಕ ತಜ್ಞರು. ಅವರು ತೋಟಕ್ಕೆ ಬರುತ್ತಿರುವುದರಿಂದ ನಾನು ಅವರಿಗೆ ಎಳನೀರು ಕುಡಿಯಲು ಮೂರ್ನಾಲ್ಕು ಎಳನೀರು ಕಿತ್ತಿಟ್ಟು ಕಾಯುತ್ತಾ ಇದ್ದೆ. ನಾನು ಕಳಿಸಿದ ಲೊಕೇಶನ್ ಗೆ ಬಂದು ಕಾರು ನಿಲ್ಲಿಸಿ, ಇಳಿದು ಬಂದರು.

ಅವರು ಮೂರು ಜನ ಆಫೀಸರ್ ತರ ನನಗೆ ಅನಿಸಲೆ ಇಲ್ಲ. ತುಂಬಾ ಖುಷಿ ಖುಷಿಯಾಗಿ ಅವರು ಕೆಲಸವನ್ನು ಎಂಜಾಯ್ ಮಾಡ್ತಾ ತೋಟದ ಒಳಗೆ ಎಲ್ಲವನ್ನೂ ಗಮನಿಸ್ತಾ, ಈ ರೀತಿ ಡ್ಯಾಮೇಜ್ ಆಗಿರೊ ಮರಗಳ ಹತ್ತಿರ ಬಂದು ನೋಡಿದರು. ಈ ಮರಗಳಿಗೆ ಆಗಿರುವ ಕಾಯಿಲೆಯ ಬಗ್ಗೆ ಅವರು ಏನೆಲ್ಲಾ ಚರ್ಚಿಸಿದರೂ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಫರ್ನಾಂಡೀಸ್ ಹೇಳಿದರು ಇದು ಟರ್ಮೈಟ್ ಅಟ್ಯಾಕ್. ಅಂದರೆ ಒಂದು ಜಾತಿಯ ಹುಳ ಮರವನ್ನು ಕೊರೆದು ತಿನ್ನುತ್ತಾ ಹೋಗುತ್ತದೆ. ನಂತರ ಆ ಒಣಗಿದ ಮರವನ್ನು ಗೆದ್ದಲು ತಿನ್ನುತ್ತಾ ಹೋಗಿದೆ ಎಂದು ತಿಳಿಸಿದರು. ಇದಕ್ಕಾಗಿ ನೀವು ಕ್ಲೋರೋಫೆರಿಫಾಸ್ ಪ್ರತಿ ಲೀಟರ್ ನೀರಿ ಗೆ ಎರಡು ಎಂಎಲ್ ಸೇರಿಸಿ ಸಿಂಪಡಿಸಿ. ಎಂದರು. “ನನಗೆ ಅನುಮಾನ ಫರ್ನಾಂಡೀಸ್, ಇದು ಕೀಟದ ಸಮಸ್ಯೆ ಅಂತ ನನಗಿನಸ್ತಾ ಇಲ್ಲ. ಅಷ್ಟಕ್ಕೂ ಈ ಮರದ ಬುಡದಲ್ಲಿ ಸತ್ತು ಹೋಗಿರೊ ಮಣ್ಣಲ್ಲಿ ಅಂತಹ ಕೀಟದ ಮೊಟ್ಟೆಯಾಗಲಿ, ಹುಳದ ಗುರುತಾಗಲಿ ಇಲ್ಲ. ಇದು ರೋಗದ ಕಾರಣದಿಂದ ಬಂದಿದೆ” ಎಂದು ಮತ್ತೊಂದು ಕಾರಣವನ್ನು ಕಂಡು ಹಿಡಿದರು ಹಂಸವಿ ಮೇಡಂ.

ಹಂಸವಿ ಮೇಡಂ ಮೊದಲೆ ಮೂಡಿಗೆರೆಯವರಾದ್ದರಿಂದ ಅಲ್ಲಿ ಕಾಫಿ ಮರವನ್ನು ನೆಡುವ ಮೊದಲು ಅಲ್ಲಿನ ಜನ ಕಾಡನ್ನು ಕಡಿದು ಸಿಲ್ವರ್ ಓಕ್ ನೆಡುತ್ತಾರೆ. ಅಲ್ಲಿ ಕಾಫಿ ಬೆಳೆಯುವುದು ಈ ಸಿಲ್ವರ್ ಓಕ್ ಮರದ ನೆರಳಲ್ಲೇ. ಆದ್ದರಿಂದ ಹೆಚ್ಚು ಅನುಭವ ಇದ್ದ ಕಾರಣದಿಂದ, ಇದು ರಸ ಸೋರುವ ರೋಗ ಎಂದು ಕಾರಣವನ್ನು ಕಂಡು ಹಿಡಿದರು. ನಮ್ಮ ತೆಂಗಿನ ತೋಟದ ಒಳಗೆ ಈ ರಸಸೋರುವರೋಗ ಸಿಕ್ಕಾಪಟ್ಟೆ ಇದೆ. ತೋಟದೊಳಗೆ ಮರದ ನೇಗಿಲಿಂದ ಉಳುತ್ತಿದ್ದಾಗ ಈ ರೋಗ ಇರಲಿಲ್ಲ. ತೋಟದ ಒಳಗೆ ಟ್ರಾಕ್ಟರ್ ಉಳುಮೆ ಬಂದ ಮೇಲೆ, ಈ ರೋಗ ತೋಟಗಳನ್ನು ಬಲಿ ತೆಗೆದುಕೊಂಡಿತು.

ಈ ರೋಗ ಒಂದು ಫಂಗಸ್ ನಿಂದ ಬರುತ್ತದೆ. ಅಂದರೆ ಶಿಲೀಂದ್ರ. ಈ ರೋಗ ಬಂದಿರುವ ಮರದ ಬುಡದಿಂದ ಆಳದ ಟ್ರಾಕ್ಟರ್  ನೇಗಿಲು ಹಾದು ಹೋಗುತ್ತದೆ. ಕೊನೆಯಲ್ಲಿ ಬದುವಿನ ದಂಡೆಯಲ್ಲಿ ನೇಗಿಲನ್ನು ತಿರುಗಿಸಲು ಸಾಧ್ಯವಿಲ್ಲದಿರುವುದರಿಂದ ಅವನು ಅಲ್ಲಿ ನೇಗಿಲನ್ನು ಮೇಲೆತ್ತುತ್ತಾನೆ. ಆಗ ಅಲ್ಲಿ ಬೀಳುವ ಮಣ್ಣಿನಲ್ಲಿ ಇರುವ ಫಂಗಸ್ ಅಲ್ಲಿರುವ ಮರಕ್ಕೆ ಹಬ್ಬುತ್ತದೆ. ಅಷ್ಟೇ ಅಲ್ಲ ಈ ಟ್ರಾಕ್ಟರ್ ಗಳ ತಿರುಗಿಸುವಾಗ ಮರಗಳಿಗೆ ಗುದ್ದಿ ಗಾಯ ಮಾಡುತ್ತಾರೆ. ಇದರಿಂದಲೂ ರಸ ಸೋರುವ ರೋಗ ಜಾಸ್ತಿ ಆಗುತ್ತದೆ. ನಮ್ಮ ತೋಟದಲ್ಲಿ ಆಗಿದ್ದುದೂ ಅದೇ ಆಗಿತ್ತು ಎಂದರು ಹಂಸವಿ ಮೇಡಂ. ತೆಂಗಿನ ಮರದ ಸುತ್ತ ಸುತ್ತಿ ಬಂದ ನೇಗಿಲು ತೋಟದ ಅಂಚಿನಲ್ಲಿರುವ ಸಿಲ್ವರ್ ಓಕ್ ಮರದ ಬುಡದಲ್ಲಿ ನಿಲ್ಲುತ್ತಿದ್ದರಿಂದ ಎಲ್ಲಾ ಸಿಲ್ವರ್ ಓಕ್ ಮರಗಳೂ ಈ ಶಿಲೀಂದ್ರ ರೋಗಕ್ಕೆ ಬಲಿಯಾಗುತ್ತಿದ್ದವು. ಈ ರೋಗ ಬಂದ ಮೇಲೆ ಮರದ ಕಾಂಡದಿಂದ ಒಂದು ರೀತಿಯ ರಸ ಸೋರಲು ಪ್ರಾರಂಭವಾಗಿ ಕೊನೆಯಲ್ಲಿ ಅಂಟಿನಂತ ಗೋಂದು ಬರುತ್ತಿತ್ತು. ಹಾಗೇ ಮಾತನಾಡುತ್ತಾ ಇಡೀ ತೋಟವನ್ನು ಸುತ್ತಾಕುತ್ತಾ ಎಲ್ಲಾ ಮರಗಳಲ್ಲೂ ಈ ಫಂಗಸ್ ಇರುವುದನ್ನು ಹಂಸವಿ ಮೇಡಂ ತೋರಿಸಿದರು.

ಈಗಾಗಲೆ ಕಿತ್ತಿದ್ದ ಎಳನೀರು ಕುಡಿಯುತ್ತಾ ಎಲ್ಲರೂ ನೆರಳಲ್ಲಿ ಕುಳಿತೆವು. ಸದ್ಯ ಇದಕ್ಕೊಂದು ಪರಿಹಾರ ಅಂತ ಸಿಕ್ತು ಎಂದು ನಾನು ನಿರಾಳವಾಗಿದ್ದೆನು. ಈ ವಿಠ್ಠಲ್ ಕೈಯಲ್ಲಿ ಎಂತದೋ ಗಾಜಿನ್ ಬಾಟಲ್ ಹಿಡಿದು ತಿರುಗಿಸಿ ತಿರುಗಿಸಿ ನೋಡುತ್ತಿದ್ದರು. ಆ ಬಾಟಲ್ ಕೂಡ ತಳದಲ್ಲಿ ಒಂದಿಷ್ಟು ಒಡೆದಿತ್ತು. “ಏನ್ರೀ ವಿಠ್ಠಲ್ ಬಾಟಲ್ ಆ ತರ ಸಂಶೋಧನೆ ಮಾಡ್ತಾ ಇದ್ದೀರಾ?” ಹಂಸವಿ ಮೇಡಂ ದನಿಯಲ್ಲಿ ವಿನೋದವೂ, ವಿಠ್ಠಲ್ ಜೊತೆಗಿನ ಸದರವೂ ಇತ್ತು. ವಿಠ್ಠಲ್ ಅಷ್ಟೆ ತಮಾಷೆಯಾಗಿ ಕಾಲೆಳೆಯುತ್ತಾ, “ಬಾಟೆಲ್ ನಲ್ಲಿ ತೂತು ಇದೆಯಲ್ಲಾ, ನೀವು ಸಂಶೋಧನೆ ಮಾಡಿದ್ದು ನಿಲ್ಲುತ್ತಾ ಈ ತೂತಿನಿಂದ ಸೋರಿ ಹೋಗುತ್ತಾ ಅಂತಾ ನೋಡ್ತಾ ಇದೀನಿ.” ಅಂದರು. ಆದರೆ ಆ ಮಾತು ಸಿಡಿಲಿನಂತೆ ಅಬ್ಬರಿಸಿದಂತೆ ಆಯಿತು. ಆಗ ಎಲ್ಲರೂ ಮೌನವಾಗಿ ವಿಠ್ಠಲ್ ಕಡೆ ಕಣ್ಣು ನೆಟ್ಟರು. ಒಂದು ಕ್ಷಣ ಯಾರೂ ಮಾತನಾಡಲಿಲ್ಲ. ಈ ಸಿಲ್ವರ್ ಓಕ್ ಮರದ ಕೆಳಗೆ ಬಿದ್ದಿದ್ದ ಒಡೆದ ಗಾಜಿನ ಬಾಟೆಲ್ ತನಿಖೆಯ ದಿಕ್ಕನ್ನೆ ಬದಲಿಸಿಬಿಟ್ಟಿತು.

ವಿಠ್ಠಲ್ ವಾದ ಏನೆಂದರೆ, ಎಲ್ಲಾ ಮರಗಳಿಗೂ ಹಬ್ಬಿರುವುದು ಈ ರಸಸೋರುವ ರೋಗದ ಫಂಗಸ್ ಎಂಬುದರಲ್ಲಿ ಎರಡು ಮಾತಿಲ್ಲ. ಅರ್ಧದಷ್ಟು ಬುಡ ಸತ್ತಿರುವ ಈ ಮೂರು ಮರಗಳಲ್ಲಿ ರಸ ಸೋರುವ ರೋಗವೂ ಇದೆ. ಈ ಮರಗಳ ಬಿಟ್ಟು ಇನ್ನುಳಿದ ಮರಗಳ ಬುಡ ಏಕೆ ಸತ್ತಿಲ್ಲ? ಅಂದರೆ, ಈ ಮರಗಳ ಬುಡಸಾಯಲು ಫಂಗಸ್ ಕಾರಣ ಅಲ್ಲ. ಇದಕ್ಕೆ ಬಲವಾಗಿ ಸಾಕ್ಷಿಯಂತೆ ಅರ್ಧ ಬುಡ ಸತ್ತ ಮರವೊಂದರ ಹತ್ತಿರ ಸಿಕ್ಕಿರುವ ಈ ಬಾಟೆಲ್. ಇನ್ನೊಂದು ಸಾಕ್ಷಿಯಾಗಿ ಈ ಮಣ್ಣನ್ನು ಒಂದು ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ತಂದಿದ್ದರು ವಿಠ್ಠಲ್. “ಈ ಮಣ್ಣಿನ ವಾಸನೆ ನೋಡಿ. ಇದರಲ್ಲಿ ಕೊಳೆತ ವಾಸನೆಯಿಲ್ಲ. ಮಣ್ಣಿನ ಘಮಲಿಲ್ಲ. ಸತ್ತ ಮಣ್ಣಿನ ಅನುಭವದ ಬದಲು ಘಾಟು ವಾಸನೆ ಇದೆ. ಈ ಮರಗಳು ಈ ಸ್ಥಿತಿಗೆ ಬರಲು ಯಾವುದೋ ರಾಸಾಯನಿಕ ಕಾರಣ ಇದೆ. ಆದ್ದರಿಂದ ನಾನು ಲ್ಯಾಬ್ ಗೆ ಹೋಗಿ ಪರೀಕ್ಷೆ ಮಾಡದೆ ನಿಮ್ಮೊಡನೆ ಯಾವುದೇ ತರ್ಕಕ್ಕೆ ಇಳಿಯಲಾರೆ” ಎಂದು ವಿಠ್ಠಲ್ ಹೇಳಿದಾಗ. ಬಿಟ್ಟಕಣ್ಣಿನಿಂದ ನಾಲಿಗೆ ಬಾಯಿಂದ ಆಚೆ ಹಾಕಿ ಕೇಳಿಸಿಕೊಳ್ಳುತ್ತಿದ್ದರು ಹಂಸವಿ ಮೇಡಂ. ಹೀಗೆ ಯಾವುದೇ ತೀರ್ಮಾನಕ್ಕೆ ಬರದಂತೆ ಚರ್ಚೆ ಮುಗಿಯಿತು. ಲ್ಯಾಬಿನ ವರದಿಯನ್ನು ಆಧರಿಸಿ ನಾವು ಮುಂದಿನ ತನಿಖೆ ಮಾಡೋಣ ಎಂದು ಎಲ್ಲರೂ ಹೊರಟರು.

ಕೆಲವು ದಿನಗಳ ನಂತರ, ಹಂಸವಿ ಮೇಡಂ ಫೋನ್ ಮಾಡಿ “ವಿಶ್ವನಾಥ್, ನಾವು ಮೂರು ಜನ ತೋಟಕ್ಕೆ ಬರ್ತಾ ಇದ್ದೀವಿ. ವಿಠ್ಠಲ್ ಸರ್ ವರದಿ ತಂದಿದಾರೆ, ಫರ್ನಾಂಡೀಸ್ ಕೂಡ ಬರ್ತಿದಾರೆ. ನಿಮ್ಮ ಜೊತೆ ಸ್ವಲ್ಪ ಚರ್ಚೆ ಮಾಡಬೇಕು”. ಆಯ್ತು ಎಂದು ಆತಿಥ್ಯಕ್ಕಾಗಿ ಒಂದು ಹಲಸಿನ ಹಣ್ಣು ಮುರಿದು ಇಟ್ಟೆ. ಬಂದೇ ಬಿಟ್ಟರು. ಹಲಸಿನ ಹಣ್ಣು ತಿನ್ನುತ್ತಲ್ಲೆ ತೋಟದೊಳಗೆ ಚರ್ಚೆ ಶುರುವಾಯಿತು. “ಹೇಳಿ ವಿಠ್ಠಲ್ ನಿಮ್ಮ ವರದಿ ಏನಂತ, ನಮ್ ಸಂಶೋಧನೆ ಕೆಳಗೆ ಸೋರಿಹೋಯ್ತಾ? ತೂತು ಬಾಟಲ್ ನಲ್ಲಿ ನಿಮ್ ಸಂಶೋಧನೆ ಹೇಗೆ ನಿಲ್ತು?” ಮತ್ತೆ ಕಾಲೆಳೆಯುವ ಮಾತುಗಳಿದ್ದವು. ಆದರೆ ನಿಜವಾಗಿಯೂ ತುಂಬಾ ಕುತೂಹಲ ಅವರ ಕಣ್ಣುಗಳಲ್ಲಿ ತುಂಬಿದ್ದವು.

“ಮರದ ಬುಡದಲ್ಲಿ ಸಿಕ್ಕಿದ್ದ ಘಾಟು ವಾಸನೆ ಬರುತ್ತಿದ್ದ ಮಣ್ಣಿನಲ್ಲಿ ಗ್ಲೈ ಫಾಸ್ಫೇಟ್ (C3H8NO5P) ಎಂಬ ರಾಸಾಯನಿಕ ಕಂಡು ಬಂದಿದೆ”. ಎಲ್ಲರೂ ಆಶ್ಚರ್ಯದಿಂದ ಆ ಕಡೆ ನೋಡುತ್ತಾ ಒಂದು ಕ್ಷಣ ಮೌನವಾದರು. ಇವರು ಏನನ್ನೋ ಯೋಚಿಸುತ್ತಿದ್ದಾರೆಂದು ಭಾವಿಸಿ ನಾನು ಕೇಳಿದೆ “ಹಾಗೆಂದರೇನು? ಅದೇನು ಕೆಲಸ ಮಾಡುತ್ತೆ?”. ವಿಠ್ಠಲ್ ನನ್ನನ್ನು ಉದ್ದೇಶಿಸಿ “ ಇದೊಂದು ರಾಸಾಯನಿಕ ವಿಶ್ವನಾಥ್. ಜಾನ್ ಇ.ಎಫ್ ಎಂಬ ವಿಜ್ಞಾನಿ ಇದನ್ನು 1970ರಲ್ಲಿ ಕಂಡು ಹಿಡಿದ. ಈ ರಾಸಾಯನಿಕ ಒಂದು ಗಿಡದ ಮೇಲೆ ಬಿದ್ದರೆ, ಅದರ ಕಾಂಡದ ಒಳಗೆ ಸೇರಿಕೊಳ್ತದೆ. ನಂತರ ಅದು ಬೇರಿನ ತುದಿಗಳು ಬೆಳೆಯದಂತೆ ಹಾಗೂ ಎಲೆಗಳ ಚಿಗುರು ಚಿಗುರದಂತೆ ಸಾಯಿಸುತ್ತಾ ಬರುತ್ತದೆ. ಕೆಳಗೆ ಬೇರಿನಿಂದ ಪೋಷಕಾಂಶ ಸರಬರಾಜಾಗದಿದ್ದರೆ ಹಾಗೂ ಎಲೆಗಳಲ್ಲಿ ಫೋಟೋ ಸಿಂಥೆಸಿಸ್ ಆಗದಿದ್ದರೆ ಅಂದರೆ ದ್ಯುತಿಸಂಶ್ಲೇಷಣೆ ಆಗದೆ ಇದ್ದರೆ, ಆ ಗಿಡ ಸತ್ತು ಹೋಗುತ್ತದೆ. ಇವನ ಸಂಶೋಧನೆಯನ್ನು ಮಾನ್ಸಾಂಟೋ ಅನ್ನು ಕಂಪನಿ 1974 ಪೇಟೆಂಟ್ ಮಾಡಿಕೊಂಡು ಈ ರಾಸಾಯನಿಕವನ್ನು ಜಗತ್ತಿನಾದ್ಯಂತ ರೌಂಡಾಪ್ ಎಂಬ ಕಳೆನಾಶಕ ಎಂಬ ಹೆಸರಿನಲ್ಲಿ ಮಾರಾಟ ಮಾಡ್ತಾ ಇದ್ದಾರೆ. ಈ ಮಾನ್ಸಾಂಟೋ ಕಂಪನಿ 20 ವರ್ಷಗಳ ನಂತರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕುಲಾಂತರಿ ತಂತ್ರಜ್ಞಾನ ಬಳಸಿ ಈ ಗ್ಲೈಫಾಸ್ಫೇಟ್ ಗೆ ಪ್ರತಿರೋಧಕ ಶಕ್ತಿ ಉಳ್ಳ ಸೋಯಾಬೀನ್ ಮತ್ತು ಹತ್ತಿ ಇನ್ನಿತರ ಬೆಳೆಗಳನ್ನು ಮಾರುಕಟ್ಟೆಗೆ ತಂದಿತು. ಇದರಿಂದ ಅದೇ ಕಂಪನಿಯ ಬೀಜಕ್ಕೆ ಅದೇ ಕಂಪನಿಯ ಔಷಧಿ ಹೊಡೆಯಬೇಕಾದ ಅನಿವಾರ್ಯತೆ ರೈತರಿಗೆ ಬಿತ್ತು. ಅದೇ ಕಂಪನಿ ಔಷಧಿ ಹೊಡೆದಾಗ ಆ ಬೆಳೆಗಳು ಮಾತ್ರ ಸಾಯದೆ ಕಳೆಗಳು ಮಾತ್ರ ಸಾಯುತ್ತವೆ. ಇಂತಹ ಕಳೆನಾಶಕಗಳು ಆಹಾರದ ಮೂಲಕ ಮನುಷ್ಯದ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ. ಈ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಎತ್ತಿ ಹಿಡಿದಿದೆ. ಆದರೆ ಮಾನ್ಸಾಂಟೋ ಎನ್ನುವ ಕಂಪನಿ ಇಂದು ಅಮೇರಿಕಾ ದೇಶದ ಸರ್ಕಾರವನ್ನೆ ಅಲುಗಾಡಿಸುವಷ್ಟು ದೈತ್ಯವಾಗಿ ಬೆಳಿದಿದೆ. ಇದನ್ನು ಭಾರತದಲ್ಲಿಯೂ ಬಳಸುತ್ತಿದ್ದಾರೆ. ಭಾರತದಲ್ಲಿಯೂ ಎಲ್ಲಾ ಪಾರ್ಟಿಗಳಿಗೂ ಇವರು ಫಂಡ್ ನೀಡುವುದರಿಂದ ಯಾರೂ ಇವರ ವಿರುದ್ಧ ಮಾತನಾಡಲ್ಲ. ಇದು ನಮ್ ಆಹಾರದ ಮೂಲಕ, ಕುಡಿಯೋ ನೀರಿನ ಮೂಲಕ ನಮ್ ದೇಹ ಸೇರ್ತಿದೆ.  ನಮ್ ಕಡೆ ಇತ್ತೀಚೆಗೆ ಅಡಿಕೆತೋಟದ ಜನ ಕಳೆ ತಗಿಯೋಕೆ, ಅಡಿಕೆ ಆಯೋದು ಕಷ್ಟ ಅಂತ ಸ್ಪ್ರೇ ಮಾಡ್ತಾರೆ.”. ಎಲ್ಲರೂ ಅಚ್ಚರಿಯಿಂ ನೋಡುತ್ತ ಕೇಳುತ್ತಿದ್ದಾಗ ಹಂಸವಿ ಮೇಡಂ ಮಧ್ಯ ಪ್ರವೇಶಿಸಿ, “ನಿಮ್ ಸಂಶೋಧನೆಯೂ ಬಾಟಲೆ ತೂತಿಂದ ಬಿದ್ದು ಹೋಯ್ತಲ್ಲಈಗ”  ಎಂದು ಕಾಲೆಳೆದರು. ಎಲ್ಲರೂ ಹಂಸವಿ ಮೇಡಂ ಕಡೆ ಮುಖ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದರು. “ಈಗ ನೋಡಿ, ನೀವೇ ಹೇಳೋ ತರ ಗ್ಲೈ ಪಾಸ್ಪೇಟ್ ನಿಂದ ಗಿಡ ಸತ್ತೋಗಿದೆ ಅನ್ನೋದಾದರೆ, ಗ್ಲೈ ಫಾಸ್ಪೇಟ್ ಸಸ್ಯಗಳ ಮೇಲೆ ಉಂಟು ಮಾಡೋ ಪರಿಣಾಮದಲ್ಲಿ ಅದು ಇಲ್ಲ. ಅದರ ಕೆಲಸವೇನಿದ್ದರೂ ಗಿಡದ ಬೆಳವಣಿಗೆಯ ಭಾಗಗಳನ್ನು ಸಾಯಿಸುವುದು ಅಲ್ಲವೆ? ಆದರೆ ಇಲ್ಲಿ ಮರವೇನು ಸತ್ತಿಲ್ಲ, ಮರವಿನ್ನೂ ಜೀವಂತವಾಗಿದೆ. ಮರದ ಬುಡದ ಅರ್ಧ ಸತ್ತು ಹೋಗಿದೆ. ಇದು ಗ್ಲೈಫಾಸ್ಪೇಟ್ ಪರಿಣಾಮ ಹೇಗಾಗುತ್ತದೆ?” ಹಲಸಿನ ಹಣ್ಣು ಬಿಡಿಸುತ್ತಲೆ ಹಂಸವಿ ಪ್ರಶ್ನೆ ಎತ್ತಿದರು.

ವಿಠ್ಠಲ್ “ಹೌದು ನೀವು ಹೇಳುತ್ತಿರೋದು ಸರಿ. ನಾನು ಈ ಮರ ಸಾಯಲು ಕಾರಣ ಗ್ಲೈಫಾಸ್ಪೇಟ್ ಕಾರಣ ಅಂತ ಎಲ್ಲೂ ಹೇಳಿಲ್ಲ. ಆ ಮರದ ಬುಡದ ಮಣ್ಣಲ್ಲಿದ್ದ ರಾಸಾಯನಿಕದಲ್ಲಿ ಗ್ಲೈ ಫಾಸ್ಪೇಟ್ ಅಂಶ ಇದೆ ಎಂದೆ ಅಷ್ಟೆ. ಇನ್ನೊಂದು ಸಾಕ್ಷ್ಯದಂತೆ ಇಲ್ಲಿ ಮರದ ಕೆಳಗೆ  ಸಿಕ್ಕಿದ್ದ ಬಾಟೆಲ್ ಕೂಡ ರೌಂಡಪ್ ರಾಸಾಯನಿಕದ್ದು. ಆ ಕಂಪನಿಯ ಬಾಟಲ್ ಜೊತೆ ಹೋಲಿಸಿ ನೋಡಿದೆನು.” ಹೀಗೆ ಚರ್ಚೆ ನಡದು ಸುಮಾರು ಹೊತ್ತಿನ ನಂತರ ಅವರು ವಾಪಸ್ಸು ಹೊರಡಲು ಅನುವಾದರು. ಪಕ್ಕದ ಅಡಿಕೆ ತೋಟದ ಒಳಗಿಂದ ಪುಟ್ಟಣ್ಣ ಕಣಗಾಲ್ “ಹ್ಹಾ.. ಏನಪ್ಪ ವಿಶ್ವಣ್ಣ” ಕೂಗಿದರು. ಅದರಲ್ಲಿ ಬಂದಿರುವವರು ಯಾರು ಎಂಬ ಪ್ರಶ್ನೆ ಇತ್ತು. “ಹ್ಹಾ. ಪುಟ್ಟಣ್ಣರೆ, ಫ್ರೆಂಡ್ಸ್ ಬಂದಿದ್ದರು. ಏನೋ ಕೆಲಸ ಹಿಡಿದಿರೊ ತರ ಐತೆ?” ಎಂದು ನಮ್ಮ ಸಂಭಾಷಣೆ ತೆಗೆದೆ. “ಹ್ಹೇ. ಅಡಿಕೆ ತೋಟದಲ್ಲಿ ಕಳೆ ಜಾಸ್ತಿಯಾಗಿತ್ತು. ಕಳೆ ಔಷಧಿ ಹೊಡಿಸೋಕೆ ಅಂತೆ ಬಂದೆ. ಅವನು ಶಂಕರಪ್ಪ ಇನ್ನೂ ಬಂದಿಲ್ಲ ಕಾಯ್ತಿದಿನಿ”…

  • ಅಣೇಕಟ್ಟೆ ವಿಶ್ವನಾಥ್

(ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಅಣೇಕಟ್ಟೆಯವರಾದ ವಿಶ್ವನಾಥ್‌ರವರು ಕೃಷಿಕರು ಮತ್ತು ತೆಂಗು ಬೆಳೆಗಾರರ ಸಂಘದ ಕಾರ್ಯದರ್ಶಿಗಳು. ತೆಂಗಿನ ಮೌಲ್ಯವರ್ಧನೆ ಇವರ ಆಸಕ್ತಿಯ ಕ್ಷೇತ್ರ.) 


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-4: ಸಹಜ ಕೃಷಿ ಅಲ್ಲ, ಉಳುಮೆ ಇಲ್ಲದ ತೋಟ ನಮ್ಮದು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...