Homeಕರ್ನಾಟಕಸಿಂದಗಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಪೈಪೋಟಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಚಿತ್ತ...

ಸಿಂದಗಿ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಪೈಪೋಟಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಚಿತ್ತ ಏನು?

- Advertisement -
- Advertisement -

ಮಾಜಿ ಸಚಿವ, ಜೆಡಿಎಸ್ ಶಾಸಕ ದಿವಂಗತ ಎಂ.ಸಿ.ಮನಗೊಳಿಯವರ ನಿಧನದಿಂದ ತೆರವಾಗಿರುವ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಅ.30 ರಂದು ಉಪಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರ ರಂಗೇರುತ್ತಿದ್ದು, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವ ಜೆಡಿಎಸ್, ಮತ ವಿಭಜನೆಗೆ ಮುನ್ನುಡಿ ಹಾಡಲು ಯತ್ನಿಸಿದೆ ಎಂಬ ಆರೋಪವನ್ನು ಎದುರಿಸುತ್ತಿದೆ.

ದೀರ್ಘಕಾಲದಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಸಿಂದಗಿಯಲ್ಲಿ ಕಳೆದೆರಡು ದಶಕಗಳಿಂದ ಬಿಜೆಪಿ, ಜೆಡಿಎಸ್ ನಡುವೆ ಸ್ಫರ್ಧೆ ಏರ್ಪಟ್ಟು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿದಿತ್ತು. ಇಲ್ಲಿ ಜೆಡಿಎಸ್ ಕೂಡ ಪಕ್ಷದ ವರ್ಚಸ್ಸಿನಿಂದ ಗೆಲುವು ಸಾಧಿಸುವುದಕ್ಕಿಂತ ಎಂ.ಸಿ.ಮನಗೊಳಿಯವರ ವರ್ಚಸ್ಸಿನಿಂದ ಗೆಲುವು ಪಡೆದಿತ್ತು.

ಈ ಬಾರಿ ಕಾಂಗ್ರೆಸ್, ದಿವಂಗತ ಎಂ.ಸಿ.ಮನಗೊಳಿ ಅವರ ಪುತ್ರ ಅಶೋಕ್ ಮಲ್ಲಪ್ಪ ಮನಗೊಳಿ ಅವರಿಗೆ ಟಿಕೆಟ್ ನೀಡಿದ್ದು, ಅನುಕಂಪದ ಮತಗಳ ಮೇಲೆ ಕಣ್ಣಿಟ್ಟಿದೆ. ಬಿಜೆಪಿಯು ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ, ಕಳೆದ ಚುನಾವಣೆಯಲ್ಲಿ ಎಂ.ಸಿ.ಮನಗೊಳಿ ಎದುರು 9 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ರಮೇಶ್ ಭೂಸನೂರ್ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ತಮ್ಮ ನಾಜಿಯಾ ಅಂಗಡಿಯವರನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೊಳಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರ್ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದ್ದಾರೆ. ಇನ್ನೂ ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಯಾಗಿದ್ದಾರೆ.

ಸಿಂದಗಿ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಸಾಮಾನ್ಯ ವರ್ಗದವರು (ಮುಖ್ಯವಾಗಿ ಲಿಂಗಾಯತ ಮತ್ತು ಇತರ ಸಮುದಾಯದವರದ್ದು). ಎರಡನೇ ಸ್ಥಾನದಲ್ಲಿ ಹಿಂದುಳಿದ ವರ್ಗದವರಿದ್ದಾರೆ. ಮೂರನೇ ಸ್ಥಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. 30 ಸಾವಿರಕ್ಕಿಂತ ಅಧಿಕ ಮುಸ್ಲಿಂ ಸಮುದಾಯದ ಮತಗಳಿವೆ. ಹೀಗಾಗಿ ಮುಸ್ಲಿಂ ಮತಗಳು ಗೆಲುವು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದು ಮತ ವಿಭಜನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಎಂದು ಕಾಂಗ್ರೆಸ್ ಬಹಿರಂಗವಾಗಿಯೇ ಆರೋಪಿಸಿದೆ. ಮತಗಳು ವಿಭಜನೆಯಾದರೆ ಬಿಜೆಪಿಗೆ ತಕ್ಕಮಟ್ಟಿನ ಲಾಭವಿದೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ.

ಕಳೆದ ಬಾರಿಯ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ರಮೇಶ ಭೂಸನೂರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಂ.ಸಿ. ಮನಗೂಳಿ ಸುಮಾರು 9,305 ಮತಗಳ ಅಂತರದಿಂದ ಜಯ ಗಳಿಸಿದ್ದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿರುವ ರಮೇಶ್ ಭೂಸನೂರ್ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ತಾವು ಶಾಸಕರಾಗಿದ್ದಾಗ ಮಾಡಿದ್ದ ಕೆಲಸಗಳು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೆ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂಬ ಮಾತುಗಳನ್ನು ಮುಂದಿಟ್ಟುಕೊಂಡು ಮತ್ತೆ ರಮೇಶ್ ಭೂಸನೂರ್ ಜನರ ಮುಂದೆ ಹೋಗಿದ್ದಾರೆ.

ತಮ್ಮ ತಂದೆಯ ಹೆಸರು, ಅವರ ಅಕಾಲಿಕ ಸಾವಿನ ಅನುಕಂಪ, ಅವರ ವರ್ಚಸ್ಸು, ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಕಾಂಗ್ರೆಸ್ ಜನಪರ ಯೋಜನೆಗಳನ್ನು ಜಾರಿಮಾಡಿದೆಯೆಂದು ಜನರಿಗೆ ತಿಳಿಸುತ್ತಾ ಪ್ರಚಾರ ನಡೆಸುತ್ತಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮಲ್ಲಪ್ಪ ಮನಗೊಳಿ.

ಇನ್ನು ಜೆಡಿಎಸ್ ಅಭ್ಯರ್ಥಿಯಾಗಿರುವ ನಾಜಿಯಾ ಅಂಗಡಿ ಪದವೀಧರೆಯಾಗಿದ್ದು, ಜೆಡಿಎಸ್‌ನಿಂದ ಶಾಸಕರಾಗಿದ್ದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಡುತ್ತಾ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದಾರೆ.

ಈ ಬಾರಿ ಸಿಂದಗಿಯನ್ನು ಬಿಟ್ಟುಕೊಡಬಾರದೆಂಬ ಹಠದಲ್ಲಿರುವ ಕಾಂಗ್ರೆಸ್ ಜಾತಿವಾರು ಸಮಾವೇಶಗಳ ಮೂಲಕ ಪ್ರಚಾರ ನಡೆಸುತ್ತಿದೆ. ಮುಸ್ಲಿಂ ಮತಗಳು ವಿಭಜನೆಯಾಗದಂತೆ ತಡೆಯಲು ಯು.ಟಿ.ಖಾದರ್, ಜಮೀರ್ ಅಹ್ಮದ್ ಅವರಿಂದ ಪ್ರಚಾರ ಮಾಡಿಸುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿ ಹಲವು ನಾಯಕರು ಸಹ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇತ್ತ ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರ ಎಂಬ ಧ್ಯೇಯ ಇಟ್ಟುಕೊಂಡು ಮತಯಾಚಿಸುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಲು ಬಿಜೆಪಿಗೆ ಮತ ನೀಡಬೇಕು ಎಂದು ಹೇಳುತ್ತಿದೆ. ಕಾಂಗ್ರೆಸ್‌ಅನ್ನು ಗುರಿಯಾಗಿಸಿಕೊಂಡು ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕರು ಕಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇನ್ನು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ, ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಸಿಂದಗಿಯಲ್ಲಿ ಠಿಕಾಣಿ ಹೂಡಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. ಚುನಾವಣೆ ಗೆಲ್ಲುವುದಕ್ಕಿಂತ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಅಶೋಕ್ ಮನಗೊಳಿಯವರನ್ನು ಸೋಲಿಸುವುದೇ ಮುಖ್ಯವಾಗಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಿಂದಗಿಯ ಜಾತಿವಾರು ಮತಗಳ ಅಂದಾಜು ಹೀಗಿದೆ. ಕುರುಬ – 40,000; ಗಾಣಿಗ – 35,000; ಪಂಚಮಸಾಲಿ – 34,000; ಬಣಜಿಗ – 25,000; ಮುಸ್ಲಿಂ – 35,000; ಪ.ಜಾ/ಪ.ಪಂ – 32,000; ಗಂಗಾಮತಸ್ಥ- 19,000; ತಳವಾರ ಮತ್ತು ಇತರೆ- 27,000;

ಸಿಂದಗಿಯಲ್ಲಿ ಶೇ.30ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಮೊದಲಿನಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪರವಾಗಿದೆ ಎನ್ನಲಾಗಿದೆ. ಇದರ ಜೊತೆಗೆ, ವಡ್ಡ, ಅಲೆಮಾರಿ, ಲಂಬಾಣಿ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿವೆ ಎನ್ನಲಾಗುತ್ತಿದೆ. ಆದರೆ ಪ್ರಮುಖ ಭಾಗವಾಗಿರುವ ಲಿಂಗಾಯತ ಸಮುದಾಯ ಬಿಜೆಪಿಯತ್ತ ತನ್ನ ಒಲವು ತೋರಿದೆ ಎನ್ನಲಾಗುತ್ತಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ 11,54,55 ಪುರುಷರು, 10,76,04 ಮಹಿಳೆಯರು ಸೇರಿ ಒಟ್ಟು 2,23,059 ಮತದಾರರು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿದ್ದರು. ಸದ್ಯ 2021ರ ಉಪಚುನಾವಣೆಗೆ 1,20,949 ಪುರುಷರು, 1,13,327 ಮಹಿಳೆಯರು ಮತ್ತು ಇತರೆ 33 ಮಂದಿ ಸೇರಿ ಒಟ್ಟು 2,34,309 ಮತದಾರರಿದ್ದಾರೆ.

2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ವಿಜಯಪುರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ. ಸಿಂದಗಿ ಪಟ್ಟಣದಲ್ಲಿ ಅಭಿವೃದ್ಧಿ ಕೊರತೆ ಎದ್ದು ಕಾಣುವಂತಿದೆ. ಸಿಂದಗಿಯಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ನೀರಾವರಿ ಯೋಜನೆಗಳಾದ ಗುತ್ತಿ ಬಸವಣ್ಣ, ಕೃಷ್ಣಾ ಯೋಜನೆಗಳನ್ನು ಮೇಲ್ದರ್ಜೆಗೇರಿಸಿ ಕುಡಿಯುವ ನೀರಿನ ಸೌಲಭ್ಯ ಮತ್ತು ಬೆಳೆಗೆ ನೀರು ದೊರೆಯುವಂತೆ ಮಾಡಬೇಕಿದೆ.

ಇನ್ನು ಉಪಚುನಾವಣೆಯ ಪ್ರಣಾಳಿಕೆಗಳ ಕಡೆಗೆ ಗಮನ ಹರಿಸಿದರೆ ಈ ಕ್ಷೇತ್ರ ಎಷ್ಟು ಅಭಿವೃದ್ಧಿಯಾಗಬೇಕಿದೆ ಎಂಬುದು ತಿಳಿಯುತ್ತದೆ.

ಸಿಂದಗಿಯಲ್ಲಿ ಹೈಟೆಕ್ ಶೌಚಾಲಯ, ಬಿ.ಆರ್. ಅಂಬೇಡ್ಕರ್ ವೃತ್ತ ಅಭಿವೃದ್ಧಿ, ಸಿಂದಗಿ ಪಟ್ಟಣದಲ್ಲಿ ಗ್ರಂಥಾಲಯ, ಪುರಸಭಾ ನೂತನ ಕಟ್ಟಡ ನಿರ್ಮಾಣ, ಪ.ಜಾತಿ ಮತ್ತು ಪ.ಪಂಗಡದ ಕಾಲೋನಿಗಳಲ್ಲಿ ಮೂಲಸೌಕರ್ಯ, ವಿದ್ಯಾರ್ಥಿಗಳಿಗೆ ಸಿಟಿ ಬಸ್ ಸೇವೆ ಆರಂಭ, ಹೈಟೆಕ್ ಬಸ್ ನಿಲ್ದಾಣ, ರೈತರು ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ನಿರ್ಮಾಣ, ಮುರಾರ್ಜಿ ದೇಸಾಯಿ ಶಾಲೆಗಳ ನಿರ್ಮಾಣ, 110 ಕೆವಿ ವಿದ್ಯುತ್ ಕೇಂದ್ರವನ್ನು ನಿರ್ಮಾಣ, ಪಟ್ಟಣದಲ್ಲಿ ಪೂರ್ಣ ಪ್ರಮಾಣದ ತರಕಾರಿ ಮಾರುಕಟ್ಟೆ ನಿರ್ಮಾಣ ಮುಂತಾದವೂ
ಸೇರಿವೆ. ಇಷ್ಟೆಲ್ಲಾ ಸಮಸ್ಯೆಗಳಿರುವ ಕ್ಷೇತ್ರದಲ್ಲಿ ಯಾವ ಬಗೆಯ ರಾಜಕೀಯ ಮೇಲುಗೈ ಪಡೆಯಲಿದೆ ಎಂದು ನವೆಂಬರ್ 2ರಂದು ತಿಳಿಯಲಿದೆ.


ಇದನ್ನೂ ಓದಿ: ಟಿಕ್ರಿ ಗಡಿ ಬಳಿ ದುರ್ಘಟನೆ: ಲಾರಿ ಹರಿದು ಮೂವರು ರೈತ ಮಹಿಳೆಯರ ಸಾವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...