‘ದೆಹಲಿಯಲ್ಲಿ ಕೆಲವರು ನನಗೆ ಪ್ರಜಾಫ್ರಭುತ್ವದ ಪಾಠವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ. ಇದ್ದರೆ ಅದು ನಿಮ್ಮ ಕಲ್ಪನೆಯಲ್ಲಿ ಮಾತ್ರ. ಪ್ರಧಾನಿ ಮೋದಿ ಕ್ರೋನಿ ಕ್ಯಾಪಿಟಲಿಸ್ಟ್‌ಗಳಿಗಾಗಿ ಹಣ ಸಂಪಾದಿಸುತ್ತಿದ್ದಾರೆ. ಅವರ ವಿರುದ್ಧ ದನಿಯೆತ್ತಲು ಪ್ರಯತ್ನಿಸುವ ರೈತರು, ಕಾರ್ಮಿಕರು ಅಥವಾ RSS ಮುಖಂಡ ಮೋಹನ್ ಭಾಗವತ್ ಆವರೇ ಆಗಿದ್ದರೂ ಸಹ ಅವರನ್ನೂ ಭಯೋತ್ಪಾದಕರು ಎಂದು ಕರೆಯಲಾಗುತ್ತದೆ” ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಪ್ರಧಾನಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ: ಪ್ರಧಾನಿ ವಿರುದ್ಧ ದನಿಯೆತ್ತಿದರೆ ಮೋಹನ್ ಭಾಗವತ್ ಕೂಡಾ ಭಯೋತ್ಪಾದಕರೇ! – ರಾಹುಲ್ ಗಾಂಧಿ
ಇಂದು ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿ ಮಾತನಾಡಿದ ಪ್ರಧಾನಿ, “ದೆಹಲಿಯಲ್ಲಿ ಯಾವಾಗಲೂ ನನ್ನನ್ನು ಕೆಣಕುವ ಮತ್ತು ಅವಮಾನಿಸುವ ಜನರಿದ್ದಾರೆ. ಅವರು ನನಗೆ ಪ್ರಜಾಪ್ರಭುತ್ವದ ಪಾಠಗಳನ್ನು ಕಲಿಸಲು ಬಯಸುತ್ತಿದ್ದಾರೆ. ಅವರಿಗೆ ಜಮ್ಮು ಮತ್ತು ಕಾಶ್ಮೀರದ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ) ಚುನಾವಣೆಗಳನ್ನು ಪ್ರಜಾಪ್ರಭುತ್ವದ ಉದಾಹರಣೆಯಾಗಿ ತೋರಿಸಲು ಬಯಸುತ್ತೇನೆ” ಎಂದು ಹೇಳಿದರು.
“ಕೆಲವು ರಾಜಕೀಯ ಶಕ್ತಿಗಳು ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸ ನೀಡುತ್ತಲೇ ಇರುತ್ತವೆ. ಆದರೆ ಇದರಲ್ಲಿ ಅವರ ದ್ವಂದ್ವತೆಯನ್ನು ಕಾಣಬಹುದು. ಪುದುಚೇರಿಯಲ್ಲಿ ಆಡಳಿತ ನಡೆಸುವ ಪಕ್ಷವು, ಸುಪ್ರೀಂ ಕೋರ್ಟ್‌ನ ಆದೇಶದ ಹೊರತಾಗಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಿಲ್ಲ. ಆದರೆ ಜಮ್ಮು ಮತ್ತು ಕಾಶ್ಮೀರ ಒಕ್ಕೂಟದ ಭಾಗವಾದ ನಂತರ ಒಂದು ವರ್ಷದೊಳಗೆ ಪಂಚಾಯತ್ ಮಟ್ಟದ ಚುನಾವಣೆಗಳನ್ನು ನಡೆಸಿದೆ” ಪ್ರಧಾನಿ ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಈ ರೈತ ದೆಹಲಿಯ ರೈತ ಹೋರಾಟದಲ್ಲಿ ಮೃತಪಟ್ಟಿದ್ದಾರೆಯೇ?
ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಯ ಚುನಾವಣೆಯು “ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಿದೆ” ಎಂದು ಹೇಳಿದ ಪ್ರಧಾನಿ, ಏಳು ಹಂತದ ಚುನಾವಣೆಯಲ್ಲಿ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಅಭಿನಂದಿಸಿದರು.
ಕೊರೊನಾ ನಂತರ ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ನಡೆದ ಮೊದಲ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಯಲ್ಲಿ ಫಾರೂಕ್ ಅಬ್ದುಲ್ಲಾ ನೇತೃತ್ವದ ಗುಪ್ಕರ್ ಮೈತ್ರಿ ಕೂಟವು 13 ಜಿಲ್ಲೆಗಳಲ್ಲಿ ಜಯಗಳಿಸಿತ್ತು. ಜಮ್ಮುವಿನಲ್ಲಿ ಆರು ಜಿಲ್ಲೆಗಳಲ್ಲಿ ಬಿಜೆಪಿ ಜಯಗಳಿಸಿತ್ತು.
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ತಿಂಗಳು ಪೂರೈಸಿದ ರೈತರ ಹೋರಾಟ: ಕರಗದ ಮೋದಿ


