ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ ಹಿಂದೆ ನೀಡಿದ್ದ ನಿರಾಕರಣೆಗಿಂತ ಇದು ಒಂದು ಹೆಜ್ಜೆ ಮುಂದಿನ ಕ್ರಮ ಎಂದಿದ್ದಾರೆ.
ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದ ಯಾವುದೇ ಕ್ರಮಗಳಿಗಾಗಿ ಮಿಲಿಟರಿ ನೆಲೆಗಳ ಬಳಕೆಯನ್ನಾಗಲಿ ಅಥವಾ ವಾಯುಪ್ರದೇಶದ ಬಳಕೆಯನ್ನಾಗಲಿ ನಾವು ಅನುಮತಿಸುವುದಿಲ್ಲ ಎಂದು ರೋಬಲ್ಸ್ ಮ್ಯಾಡ್ರಿಡ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್ ಸೋಮವಾರ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಈ ಸುದ್ದಿಯನ್ನು ಮೊದಲು ವರದಿ ಮಾಡಿತ್ತು.
ವಾಯುಪ್ರದೇಶದ ಈ ನಿರ್ಬಂಧದಿಂದಾಗಿ, ಮಧ್ಯಪ್ರಾಚ್ಯದ ಗುರಿಗಳತ್ತ ಸಾಗುವ ಮಿಲಿಟರಿ ವಿಮಾನಗಳು ನ್ಯಾಟೋ ಸದಸ್ಯ ರಾಷ್ಟ್ರವಾದ ಸ್ಪೇನ್ ಅನ್ನು ಬಳಸಲಾಗದೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ. ಆದರೆ, ಇದು ತುರ್ತು ಪರಿಸ್ಥಿತಿಗಳನ್ನು ಒಳಗೊಂಡಿರುವುದಿಲ್ಲ ಎಂದು ‘ಎಲ್ ಪೈಸ್’ ವರದಿ ಹೇಳಿದೆ.
ಏಕಪಕ್ಷೀಯವಾಗಿ ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ಆರಂಭಿಸಲಾದ ಯುದ್ಧದಲ್ಲಿ ಭಾಗವಹಿಸದಿರಲು ಅಥವಾ ಬೆಂಬಲ ನೀಡದಿರಲು ಸ್ಪೇನ್ ಸರ್ಕಾರ ಈಗಾಗಲೇ ಕೈಗೊಂಡಿರುವ ನಿರ್ಧಾರದ ಭಾಗವಾಗಿ ವಾಯು ಪ್ರದೇಶ ಮುಚ್ಚಲಾಗಿದೆ ಎಂದು ಸ್ಪೇನ್ ಆರ್ಥಿಕ ಸಚಿವ ಕಾರ್ಲೋಸ್ ಕ್ಯೂರ್ಪೋ ರೇಡಿಯೊ ಕೆಡೆನಾ ಸೆರ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಸ್ಪೇನ್‌ನ ಈ ವಾಯುಪ್ರದೇಶ ನಿರ್ಬಂಧದ ನಿರ್ಧಾರವು ಅಮೆರಿಕದೊಂದಿಗಿನ ಸಂಬಂಧವನ್ನು ಹದಗೆಡಿಸಬಹುದೇ ಎಂಬ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಈ ದಾಳಿಗಳನ್ನು ಅವರು ‘ಬೇಜವಾಬ್ದಾರಿಯುತ ಮತ್ತು ಕಾನೂನುಬಾಹಿರ’ ಎಂದು ಬಣ್ಣಿಸಿದ್ದಾರೆ.
ಯುದ್ಧದಲ್ಲಿ ಅಮೆರಿಕಕ್ಕೆ ತನ್ನ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡದ ಕಾರಣಕ್ಕೆ ಮ್ಯಾಡ್ರಿಡ್ (ಸ್ಪೇನ್ ಸರ್ಕಾರ) ಜೊತೆಗಿನ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.


