ತಮ್ಮ ಸಂಬಂಧ ‘ಸ್ಥಿರ’ ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ.
ಜನಗಣತಿ ವೆಬ್ಸೈಟ್ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಅಲ್ಲಿ, “ಸಹಜೀವನದಲ್ಲಿರುವ (live-in relationship) ಜೋಡಿಯನ್ನು ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆಯೇ?” ಎಂಬ ಪ್ರಶ್ನೆಗೆ, “ಒಂದು ವೇಳೆ ಆ ಜೋಡಿ ತಮ್ಮ ಸಂಬಂಧವನ್ನು ‘ಸ್ಥಿರ’ ಎಂದು ಹೇಳಿಕೊಳ್ಳುವುದಾದರೆ ಅವರನ್ನು ವಿವಾಹಿತ ದಂಪತಿಯೆಂದು ಪರಿಗಣಿಸಬೇಕು” ಎಂಬುವುದಾಗಿ ಉತ್ತರಿಸಲಾಗಿದೆ ಎಂದು indianexpress.com ವರದಿ ಮಾಡಿದೆ.
2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮಾಡುವಿಕೆ ಮತ್ತು ವಸತಿ ಗಣತಿ ನಡೆಯಲಿದ್ದು, ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ನಿರ್ಧಾರದಂತೆ 2026ರ ಏಪ್ರಿಲ್ನಿಂದ ಸೆಪ್ಟೆಂಬರ್ ನಡುವಿನ 30 ದಿನಗಳಲ್ಲಿ ಮನೆ-ಮನೆಗೆ ತೆರಳಿ ಕ್ಷೇತ್ರ ಕಾರ್ಯವನ್ನು ಪೂರ್ಣಗೊಳಿಸಲಾಗುತ್ತದೆ.
ಮೊದಲ ಹಂತದಲ್ಲಿ ಮನೆಗಳ ಸ್ಥಿತಿಗತಿ, ಕುಟುಂಬದ ವಿವರಗಳು, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಅಡುಗೆಗೆ ಬಳಸುವ ಇಂಧನ ಮತ್ತು ಇಂಟರ್ನೆಟ್ನಂತಹ ಸೌಲಭ್ಯಗಳ ಲಭ್ಯತೆಯ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ರೇಡಿಯೋ, ಟಿವಿ, ಕಂಪ್ಯೂಟರ್, ದ್ವಿಚಕ್ರ ವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳಂತಹ ಆಸ್ತಿಗಳ ವಿವರಗಳನ್ನು ಸಹ ಆಯಾ ಕುಟುಂಬಗಳಿಂದ ಪಡೆಯಲಾಗುತ್ತದೆ.
ಎರಡನೇ ಹಂತದಲ್ಲಿ, ಫೆಬ್ರವರಿ 2027 ರಿಂದ ಭಾರತದಾದ್ಯಂತ ಜನಗಣತಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಆದರೆ ಲಡಾಖ್ ಮತ್ತು ಜಮ್ಮು ಕಾಶ್ಮೀರದ ಹಿಮಪಾತ ಪ್ರದೇಶಗಳು ಹಾಗೂ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಇದನ್ನು ಸೆಪ್ಟೆಂಬರ್ 2026ರಲ್ಲೇ ನಡೆಸಲಾಗುತ್ತದೆ.
ಈ ಹಂತದಲ್ಲಿ ವ್ಯಕ್ತಿಗಳ ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಜಾತಿ, ಧರ್ಮ, ಶಿಕ್ಷಣ, ಭಾಷೆ, ಅಂಗವೈಕಲ್ಯ, ವಲಸೆ, ಉದ್ಯೋಗ ಮತ್ತು ಸಂತಾನೋತ್ಪತ್ತಿಯ (ವಿವಾಹಿತ ಮಹಿಳೆಯರಿಗೆ ಸಂಬಂಧಿಸಿದಂತೆ) ವಿವರಗಳನ್ನು ಸಂಗ್ರಹಿಸಲಾಗುತ್ತದೆ.
ಈ ಬಾರಿ ವಿಶೇಷವೆಂದರೆ, ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಮಾಹಿತಿ ಪಡೆಯುವ ಸಾಂಪ್ರದಾಯಿಕ ವಿಧಾನದ ಜೊತೆಗೆ, ನಾಗರಿಕರು ತಾವಾಗಿಯೇ ಮಾಹಿತಿ ದಾಖಲಿಸಲು ‘ಸ್ವಯಂ-ಗಣತಿ’ (self-enumeration) ಆಯ್ಕೆಯನ್ನು ಸಹ ನೀಡಲಾಗಿದೆ.
ಸ್ವಯಂ-ಗಣತಿಯು ನಾಗರಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವೆಬ್ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ಸ್ವತಃ ಭರ್ತಿ ಮಾಡಲು ಅವಕಾಶ ನೀಡುತ್ತದೆ. ಅಂದರೆ, ವ್ಯಕ್ತಿಯೊಬ್ಬರು ಸ್ವಯಂ-ಗಣತಿ ಪೋರ್ಟಲ್ನಲ್ಲಿ ವಿವರಗಳನ್ನು ನೀಡುವ ಮೂಲಕ ಈ ಆಯ್ಕೆಯನ್ನು ಬಳಸಿಕೊಳ್ಳಬಹುದು. ಇದಾದ ನಂತರ, ಗಣತಿದಾರರು ಆ ಮನೆಗೆ ಭೇಟಿ ನೀಡಿ, ಸ್ವಯಂ-ಗಣತಿಯ ಐಡಿ (SE ID) ಪಡೆದುಕೊಂಡು ಮಾಹಿತಿಯನ್ನು ದೃಢೀಕರಿಸುತ್ತಾರೆ.
ಸಾಮಾನ್ಯ, ಸಾಂಸ್ಥಿಕ ಮತ್ತು ವಸತಿರಹಿತ ಸೇರಿದಂತೆ ಎಲ್ಲಾ ಕುಟುಂಬಗಳು ಸ್ವಯಂ ಗಣತಿ ಮಾಡಬಹುದೇ?
2027ರ ಜನಗಣತಿಯ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ರೀತಿಯ ಕುಟುಂಬಗಳಿಗೆ ಸ್ವಯಂ-ಗಣತಿ (Self-enumeration) ಲಭ್ಯವಿಲ್ಲ.
ಕೇವಲ ಸಾಮಾನ್ಯ ಕುಟುಂಬಗಳಿಗೆ ಮಾತ್ರ ಸ್ವಯಂ-ಗಣತಿ ಮಾಡಲು ಅವಕಾಶ ನೀಡಲಾಗಿದೆ. ಈ ಕುಟುಂಬಗಳು ನಿಗದಿತ ವೆಬ್ ಪೋರ್ಟಲ್ ಮೂಲಕ ತಮ್ಮ ವಿವರಗಳನ್ನು ದಾಖಲಿಸಬಹುದು.
2011ರ ಜನಗಣತಿಯ ಪ್ರಕಾರ, ‘ಸಾಮಾನ್ಯ ಕುಟುಂಬ’ ಎಂದರೆ ಸಾಮಾನ್ಯವಾಗಿ ಒಟ್ಟಿಗೆ ವಾಸಿಸುವ ಮತ್ತು ಒಂದೇ ಅಡುಗೆಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಸೇವಿಸುವ ವ್ಯಕ್ತಿಗಳ ಗುಂಪು. ಕೆಲಸದ ಒತ್ತಡ ಅಥವಾ ಅನಿವಾರ್ಯ ಕಾರಣಗಳಿಂದಾಗಿ ಯಾರಾದರೂ ಹೊರಗಡೆ ಊಟ ಮಾಡಬೇಕಾದ ಸಂದರ್ಭಗಳನ್ನು ಹೊರತುಪಡಿಸಿ, ಈ ಗುಂಪು ಒಂದೇ ಅಡುಗೆಮನೆಯನ್ನು ಅವಲಂಬಿಸಿರುತ್ತದೆ. ಅಂತಹ ಕುಟುಂಬದ ಸದಸ್ಯರು ಪರಸ್ಪರ ಸಂಬಂಧಿಕರಾಗಿರಬಹುದು, ಸಂಬಂಧವಿಲ್ಲದವರಾಗಿರಬಹುದು ಅಥವಾ ಎರಡೂ ರೀತಿಯ ವ್ಯಕ್ತಿಗಳ ಮಿಶ್ರಣವಾಗಿರಬಹುದು.
ಆದಾಗ್ಯೂ, ಸಂಬಂಧವಿಲ್ಲದ ವ್ಯಕ್ತಿಗಳ ಗುಂಪು ಒಂದು ಮನೆಯಲ್ಲಿ ವಾಸವಿದ್ದು, ಒಂದೇ ಅಡುಗೆಮನೆಯಿಂದ ಊಟ ಮಾಡದಿದ್ದರೆ, ಅವರನ್ನು ಒಂದೇ ಕುಟುಂಬದ ಭಾಗವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಪ್ರತ್ಯೇಕ ಕುಟುಂಬವೆಂದು ಪರಿಗಣಿಸಲಾಗುತ್ತದೆ.
ಜನಗಣತಿಯ ಮೊದಲ ಹಂತದಲ್ಲಿ ಸ್ವಯಂ-ಗಣತಿಯನ್ನು ಮಾಡಬಹುದು. ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ 30 ದಿನಗಳ ಕಾಲ ನಡೆಯುವ ಮನೆಗಳ ಪಟ್ಟಿ ಮಾಡುವ ಪ್ರಕ್ರಿಯೆ (Houselisting Operations) ಆರಂಭವಾಗುವ ಮೊದಲು, ಕೇವಲ 15 ದಿನಗಳ ಕಾಲ ಈ ವೆಬ್ ಪೋರ್ಟಲ್ ಸಾರ್ವಜನಿಕರಿಗೆ ತೆರೆದಿರುತ್ತದೆ.


