ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 30ಕ್ಕೆ (ಜ.30, ಬೆಳಿಗ್ಗೆ 8 ಗಂಟೆಯ ವೇಳೆಗೆ) ಏರಿಕೆಯಾಗಿದೆ. ಕನಿಷ್ಠ 60 ಜನರು ಗಾಯಗೊಂಡಿದ್ದಾರೆ. ಕರ್ನಾಟಕದ ಬೆಳಗಾವಿಯ ನಾಲ್ವರು ಸಾವಿಗೀಡಾಗಿದ್ದಾರೆ.
ಜನವರಿ 29ರಂದು ಬುಧವಾರ ಮೌನಿ ಅಮವಾಸ್ಯೆ ಹಿನ್ನೆಲೆ ಭಾರೀ ಸಂಖ್ಯೆಯಲ್ಲಿ ಜನರು ಕುಂಭ ಮೇಳ ನಡೆಯುತ್ತಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಪ್ರದೇಶದಲ್ಲಿ ಜಮಾಯಿಸಿದ್ದರು. ಈ ವೇಳೆ ಜನರ ಒತ್ತಡ ಹೆಚ್ಚಾಗಿ ಬ್ಯಾರಿಕೇಡ್‌ಗಳು ಕುಸಿದಿದೆ. ನಂತರ ನಡೆದ ನೂಕುನುಗ್ಗಲಿನಿಂದ ಅವಘಡ ಸಂಭವಿಸಿದೆ.
“ಬುಧವಾರ ಬೆಳಗ್ಗಿನ ಜಾವ 1 ರಿಂದ 2 ಗಂಟೆಯ ನಡುವಿನ ‘ಬ್ರಹ್ಮ ಮುಹೂರ್ತ’ದಲ್ಲಿ ಪುಣ್ಯ ಸ್ನಾನ (ಎರಡನೇ ಶಾಹಿ ಸ್ನಾನ) ಮಾಡಲು ಅಖಾರ ಮಾರ್ಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಬ್ಯಾರಿಕೇಡ್‌ಗಳು ಕುಸಿದು ಬಿದ್ದಿವೆ. ಹಾಗಾಗಿ, ಜನರು ಒಂದು ಬದಿಯಿಂದ ಇನ್ನೊಂದು ಬದಿಗೆ ಧಾವಿಸಿದ್ದಾರೆ. ಈ ವೇಳೆ ಬ್ರಹ್ಮ ಮುಹೂರ್ತ ಸ್ನಾನಕ್ಕಾಗಿ ಕಾಯುತ್ತಿದ್ದ 30 ಜನರು ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 60 ಮಂದಿ ಗಾಯಗೊಂಡಿದ್ದಾರೆ” ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ವೈಭವ್ ಕೃಷ್ಣ ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸರ್ಕಾರ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಮೊದಲು ಜನಸಂದಣಿಯನ್ನು ತೆರವುಗೊಳಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಮೃತರನ್ನು ಗುರುತಿಸಿದೆವು ಎಂದು ವೈಭವ್ ಕೃಷ್ಣ ಹೇಳಿದ್ದಾರೆ.
ಮೃತರಲ್ಲಿ ಇದುವರೆಗೆ 25 ಜನರನ್ನು ಗುರುತಿಸಲಾಗಿದೆ. ಅವರಲ್ಲಿ ನಾಲ್ವರು ಕರ್ನಾಟಕದವರು, ಇಬ್ಬರು ಗುಜರಾತ್‌ನವರು ಮತ್ತು ಒಬ್ಬರು ಅಸ್ಸಾಂನವರು. ಕೆಲ ಗಾಯಗೊಂಡ ವ್ಯಕ್ತಿಗಳನ್ನು ಅವರ ಕುಟುಂಬಸ್ಥರು ಕರೆದುಕೊಂಡು ಹೋಗಿದ್ದಾರೆ. ಪ್ರಸ್ತುತ 36 ಜನರು ಸ್ಥಳೀಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಡಿಐಜಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ನಾಲ್ವರು ಸಾವು :
ಮಹಾ ಕುಂಭ ಮೇಳದ ಕಾಲ್ತುಳಿತ ದುರಂತದಲ್ಲಿ ಕರ್ನಾಟಕದ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50), ಅವರ ಮಗಳು ಮೇಘಾ ಹತ್ತರವಾಠ (18), ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಮತ್ತು ಶಿವಾಜಿ ನಗರದ ನಿವಾಸಿ ಮಹಾದೇವಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ತಾಯಿ, ಮಗಳು ಜ್ಯೋತಿ ಹತ್ತರವಾಠ ಮತ್ತು ಮೇಘಾ ಹತ್ತರವಾಠ ಅವರು ಮೂರು ದಿನಗಳ ಹಿಂದೆ ಸಾಯಿರಥ ಎಂಬ ಟ್ರಾವೆಲ್ ಏಜೆನ್ಸಿ ಮೂಲಕ 30 ಜನರ ತಂಡದೊಂದಿಗೆ ಮಹಾ ಕುಂಭ ಮೇಳಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಅವರು ತಮ್ಮ ಪತ್ನಿ ಜೊತೆಗೆ ಕುಂಭ ಮೇಳಕ್ಕೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಶಿವಾಜಿ ನಗರದ ನಿವಾಸಿ ಮಹಾದೇವಿ ಕಾಲ್ತುಳಿತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ತಲಾ 25 ಲಕ್ಷ ಪರಿಹಾರ
ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದಾರೆ. ಸೂಕ್ತ ಬ್ಯಾರಿಕೇಡ್‌ಗಳ ಅಳವಡಿಕೆ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ದುರಂತ ನಡೆದಿರುವುದು ವಿಷಾದನೀಯ ಎಂದಿದ್ದಾರೆ.
ನ್ಯಾಯಾಂಗ ತನಿಖೆ
ಮಹಾ ಕುಂಭ ಮೇಳದ ಕಾಲ್ತುಳಿತ ದುರಂತದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಈ ಆಯೋಗದ ನೇತೃತ್ವವನ್ನು ಅಲಹಾಬಾದ್ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಹರ್ಷ ಕುಮಾರ್ ವಹಿಸಲಿದ್ದಾರೆ. ಅವಘಡಕ್ಕೆ ಕಾರಣವಾದ ಅಂಶಗಳು ಯಾವುವು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುವುದನ್ನು ಆಯೋಗ ಪರಿಶೀಲಿಸಲಿದೆ.
ಮೌನಿ ಅಮಾವಾಸ್ಯೆಯ ಪ್ರಯುಕ್ತ ಜನವರಿ 29ರಂದು ಸಂಜೆ 6 ಗಂಟೆಯವರೆಗೆ 6.99 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಮಹಾ ಕುಂಭ ಆರಂಭವಾದಾಗಿನಿಂದ, 260 ದಶಲಕ್ಷಕ್ಕೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾಗಿ ತಿಳಿಸಿದೆ.


