Homeಮುಖಪುಟಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷ ತುಂಬಿ ಕೆಲವು ತಿಂಗಳಾಗಿತ್ತಷ್ಟೇ. 1949 ಜನವರಿ 30ರ ಇಳಿಸಂಜೆ ಸ್ವತಂತ್ರ ದೇಶ ನಡುಗಿಹೋಗುವಂತ ಹತ್ಯೆ ನಡೆದೇಹೋಗಿತ್ತು. ಅಹಿಂಸೆಯೂ ಹೋರಾಟದ ಅಸ್ತ್ರವಾಗಬಲ್ಲದು ಎಂದು ಇಡೀ ವಿಶ್ವಕ್ಕೆ ಭೋದಿಸಿದ್ದ ಮಹಾತ್ಮ ಗಾಂಧಿ, ಮತಾಂಧನೊಬ್ಬನ ಕ್ರೌರ್ಯಕ್ಕೆ ತಮ್ಮದೇ ನೆಲದಲ್ಲಿ ರಕ್ತದ ಮಡುವಿನಲ್ಲಿ ಪ್ರಾಣ ಚೆಲ್ಲಿದ್ದರು. ಆದರೆ, ಹೀಗೆ ಈ ಮಣ್ಣನ್ನು ತ್ಯಜಿಸುವಾಗಲು ಗಾಂಧಿ ಎಂಬ ಮಹಾನ್ ವ್ಯಕ್ತಿ, ರಾಜಕೀಯ ಹೋರಾಟದಲ್ಲಿ ಗಾಂಧಿ ಮಾರ್ಗವನ್ನು ತುಳಿಯುವ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾರಂತಹ ಸಾವಿರಾರು ಜನರನ್ನು ವಿಶ್ವದಾದ್ಯಂತ ಪ್ರಭಾವಿಸಿ, ಶಾಂತಿ ಎಂಬ ಬೃಹತ್ ಅಸ್ತ್ರವನ್ನು ಈ ಜಗತ್ತಿಗೆ ಉಡುಗೊರೆಯಾಗಿ ನೀಡಿಯೇ ಹೋಗಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇದೇ ಮಣ್ಣಲ್ಲಿ ನಿಂತು ಗಾಂಧಿಯ ಕುರಿತು ಯೋಚಿಸಿದಂತೆಲ್ಲಾ ಆ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ಪ್ರತಿ ವರ್ಷ ಹೊಸಹೊಸ ಚಿಂತನ-ಮಂಥನಗಳಾಗುತ್ತಿವೆ. ಬದುಕಿನುದ್ದಕ್ಕೂ ಅವರೋರ್ವ ಹೋರಾಟಗಾರರಾಗಿದ್ದರು, ಅರ್ಥಶಾಸ್ತಜ್ಞರಾಗಿದ್ದರು, ಸಂತನಾಗಿದ್ದರು, ಸತ್ಯ ಅಹಿಂಸೆಯ ಪರಿಪಾಲಕರಾಗಿದ್ದರು, ತಮ್ಮ ಹೋರಾಟದ ಬದುಕನ್ನೇ ಸಂದೇಶವನ್ನಾಗಿ ನೀಡಿದ್ದರು. ಆದರೂ ಅವರು ಈ ದೇಶದಲ್ಲಿ ಕೊಲ್ಲಲು ಅರ್ಹ ವ್ಯಕ್ತಿಯಾಗಿ ಹೋಗಿದ್ದರು ಎಂಬುದೇ ಇಲ್ಲಿನ ದುರಂತ!

PC : Arab News (ಮಹಮ್ಮದ್ ಅಲಿ ಜಿನ್ನಾ)

ಹೀಗೆ ಹಲವು ವಲಯಗಳಲ್ಲಿ ತಮ್ಮ ಪ್ರಭಾವ ಬೀರಿದ್ದ ವ್ಯಕ್ತಿಗಳು ಭಾರತದಲ್ಲಿ ವಿರಳವೇ ಎನ್ನಬಹುದು. ಇಡೀ ಮನುಕುಲವನ್ನು ಪ್ರೀತಿಸಿದ್ದ ಗಾಂಧಿ ಎಂಬ ಮಹಾನ್ ಚೇತನವನ್ನು, ಸಹ ಜೀವಿಯನ್ನು, ಮನುಷ್ಯನನ್ನಾಗಿ ನೋಡಲಾಗದೆ ಮತಾಂಧತೆಯ ಅಮಲು ಕೊಂದು ಹಾಕಿದ್ದು ಎಂದಿಗೂ ಮರೆಯಲಾಗದ ಸಂಗತಿಯಾಗಿ ಉಳಿದುಕೊಂಡಿದೆ. ಅಸಲಿಗೆ ಗಾಂಧಿಯನ್ನು ಕೊಂದು ನಾವು ಪಡೆದದ್ದಾದರೂ ಏನು? ಎಂಬುದನ್ನು ಕುರಿತು ಪ್ರಶ್ನಿಸುತ್ತಾ ಸಾಗಿದಂತೆಲ್ಲಾ ಇಂದಿನ ಪರಿಸ್ಥಿತಿ ನಮ್ಮ ಕಣ್ಣಮುಂದೆ ಬಂದು, ಗಾಢವಾದ ನೋವು ಮತ್ತು ಹತಾಶೆ ನಮ್ಮೆದುರು ಆವರಿಸುವುದು ದಿಟ.

ಜಗತ್ತಿನಲ್ಲಿ ಕೊಂದು ಉಳಿಸಿಕೊಳ್ಳುವ ಧರ್ಮವಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವುದೇ ಸನಾತನ ಧರ್ಮ ಎಂದು ಸಾರಿ, ತನ್ನ ಬದುಕಿನುದ್ದಕ್ಕೂ ಸತ್ಯ ಅಹಿಂಸೆಯೇ ಮೂಲಧ್ಯೇಯ ಎಂದು ನಂಬಿ ಬದುಕಿದ್ದ, ವಿಶ್ವಕ್ಕೆ ಶಾಂತಿಯನ್ನು ಪ್ರೀತಿಯನ್ನು ಹಂಚಿ ಉಂಡಿದ್ದ, ಸನಾತನ ಧರ್ಮವನ್ನು ಸುಧಾರಿಸಲು ಶ್ರಮಿಸಿದ್ದ ಮಹಾತ್ಮ ಗಾಂಧಿಗೆ ಭಾರತೀಯರು ಕೊನೆಗೆ ನೀಡಿದ್ದು ಕೇವಲ ನೋವನ್ನಷ್ಟೆ. ಅವರು ಗತಿಸಿದ ಮೇಲೆಯೂ ಅವರ ಆಶಯಗಳನ್ನು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿದೆ.

ಗಾಂಧಿ ಈ ನೆಲದಲ್ಲಿ ಹುಟ್ಟಿ 152 ವರ್ಷ ಗತಿಸಿದ್ದರೆ, ಅವರು ಗತಿಸಿ 72 ವರ್ಷಗಳಾಗಿವೆ. ಗಾಂಧಿಯನ್ನು ಕೊಂದ ಅದೇ ಜನ ಈ ವರ್ಷಗಳಲ್ಲಿ ಗಾಂಧಿ ಬದುಕು ಮತ್ತು ಕೆಲಸಗಳು ಕಟ್ಟಿಕೊಟ್ಟ ಗಾಂಧಿವಾದವನ್ನು ಕೊಲ್ಲುವ ಪ್ರಕ್ರಿಯೆಯಲ್ಲಿದ್ದಾರೆ. ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ, ಬಹಿರಂಗವಾಗಿ ಗಾಂಧಿ ಹತ್ಯೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತ ಸಮಾಜದಲ್ಲಿ ವಿಷಬೀಜವನ್ನು ಬಿತ್ತುವಲ್ಲಿ ನಿರತರಾಗಿದ್ದಾರೆ. ಗೋಡ್ಸೆ ಸಂಸ್ಕೃತಿಯ ಬಾಹುಗಳನ್ನು ವಿಸ್ತರಿಸುತ್ತಿದ್ದಾರೆ. ಯಾವುದೇ ಸಮಾಜಕ್ಕೆ ಇದು ಆಘಾತಕಾರಿ ಬೆಳವಣಿಗೆ ಎಂದು ಬೇರೆ ಬಿಡಿಸಿ ಹೇಳಬೇಕಿಲ್ಲ.

ಅಂದಿನ ಗೋಡ್ಸೆ ಮನಸ್ಥಿತಿ 7 ದಶಕ ಕಳೆದರೂ ಕಿಂಚಿತ್ತೂ ಬದಲಾಗಿಲ್ಲ ಎಂಬುದು ವಿಷದನೀಯ. ಬದಲಾಗಿ ಇಷ್ಟು ವರ್ಷಗಳ ನಂತರ ಮತಾಂಧತೆ ಎಂಬುದು ಗೋಡ್ಸೆ 2.0 ವರ್ಷನ್ ಆಗಿ ಬದಲಾಗಿದೆ, ಮತ್ತಷ್ಟು ವಿಕೃತವಾಗಿದೆ. ಹೀಗಾಗಿ ಇಂದಿನ ಮತಾಂಧತೆ ಎಂಬುದು ಎಷ್ಟರಮಟ್ಟಿಗೆ ವಿಕೃತಿಯನ್ನು ತನ್ನೊಡಲೊಳಗಿಟ್ಟುಕೊಂಡು ಬೆಳೆದಿದೆ ಎಂಬುದನ್ನು ಅರಿಯಲು ಮತ್ತೆ ಇತಿಹಾಸದ ಕಡೆಗೆ ಹೊರಳಲೇಬೇಕು.

ಗಾಂಧಿ ಹತ್ಯೆ ಮತ್ತು ಗೋಡ್ಸೆ ಸಂಸ್ಕೃತಿ

1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಮೂರು ಶತಮಾನಗಳ ಕಾಲ ನಮ್ಮನ್ನು ದಾಸ್ಯಕ್ಕೊಳಪಡಿಸಿದ್ದ ಬ್ರಿಟಿಷ್ ಪಾರುಪತ್ಯ ಅಂದಿಗೆ ಅಂತ್ಯವಾಗಿತ್ತು. ಇಡೀ ರಾಷ್ಟ್ರದಾದ್ಯಂತ ಹರ್ಷಾಚರಣೆಗಳು ಮುಗಿಲು ಮುಟ್ಟಿದ್ದವು. ಆದರೆ, ಮಹಾತ್ಮಾ ಗಾಂಧಿ ಈ ಹರ್ಷಾಚರಣೆಯ ಭಾಗವಾಗಲಿಲ್ಲ. ಬದಲಿಗೆ, ಅವರು ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ, ಅದು ದಕ್ಕಿದ ಮೇಲೂ ಅದೇ ದಿನ ಬಂಗಾಳದ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು, ಕೋಮುಗಲಭೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದು ವ್ಯಕ್ತಿಯೊಬ್ಬನೊಳಗಿನ ಪ್ರಬುದ್ಧತೆಯ ಪ್ರತಿರೋಧದ ದ್ಯೊತಕವಾಗಿತ್ತು.

PC : The Indian Express

ರಾಜಕೀಯ ಅಧಿಕಾರವಷ್ಟೇ ಅವರ ಗುರಿಯಾಗಿರದೆ, ಸಾಮಾಜಿಕ ಸಾಮರಸ್ಯ, ಬದಲಾವಣೆ ಅವರ ಮಾರ್ಗವಾಗಿತ್ತು. ಆ ಮಾರ್ಗ ಮರೆತು, ಅಂತ್ಯದಲ್ಲಿ ಮೈಮರೆತವರೂ ಕೂಡ ಎಷ್ಟೋ ಜನ!

ಭಾರತದ ಇತಿಹಾಸದಲ್ಲಿ 1945 ರಿಂದ 1947 ರಾಜಕೀಯ ಸಂದಿಗ್ಧತೆಯ ಕಾಲ. ಹಿಂದೂಗಳ ಪರವಾಗಿ ಹಿಂದೂ ಮಹಾಸಭಾ ಹಾಗೂ ಗೋಡ್ಸೆಯಂತವರು ಬಯಸಿದ್ದನ್ನೆ, ಮುಸ್ಲಿಮರ ಪರ ಮಹಮ್ಮದ್ ಅಲಿ ಜಿನ್ನಾ ಬಯಸಿದ್ದರು ಹಾಗೂ ಅದನ್ನು ಪಡೆಯುವಲ್ಲೂ ಸಫಲವಾಗಿದ್ದರು. ಇದಕ್ಕೆ ಬ್ರಿಟಿಷ್ ಆಳರಸರ ತೆರೆಮರೆಯ ಬೆಂಬಲವೂ ಇತ್ತು. ಕೊನೆಗೂ 1947 ಆಗಸ್ಟ್ 14 ನಡುರಾತ್ರಿ ದೇಶದ ಸ್ವಾತಂತ್ರ್ಯದ ಜೊತೆಗೆ ಮತಾಂಧತೆ ಎಂಬ ಕಟುಕನ ಕತ್ತಿಯಿಂದ ದೇಶ ಇಬ್ಭಾಗವಾಗಿತ್ತು. ಪರಿಣಾಮ ಎರಡೂ ದೇಶಗಳಲ್ಲೂ ಕೋಮುಗಲಭೆಯ ಕಿಚ್ಚು ಹೊತ್ತಿಕೊಂಡಿತ್ತು.

ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರ ಹೆಣ ಬಿದ್ದವು. ಭಾರತ ಇಬ್ಭಾಗವಾಗುವುದನ್ನು ತಡೆಯಲು ಗಾಂಧಿ ಪಣತೊಟ್ಟಿದ್ದರು. ಆದರೆ, ಅವರ ಎಷ್ಟೋ ಹೋರಾಟಗಳು ಕೈಗೂಡದೇ ಹೋದಂತೆ ಅದೂ ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೆ ಕೋಮು ಗಲಭೆಯಿಂದ ನಲುಗಿದ್ದ ಪೂರ್ವ ಬಂಗಾಲದ ನವಾಖಲಿಗೆ ತೆರಳಿ ಹಿಂದೂ-ಮುಸ್ಲಿಮರ ಸಾಮರಸ್ಯಕ್ಕೆ ಸತ್ಯಾಗ್ರಹ ಹೂಡಿದರು. ಬಿಹಾರದ ಮುಸಲ್ಮಾನರ ರಕ್ಷಣೆಗಾಗಿ ವಕಾಲತ್ತು ವಹಿಸಿದ್ದರು. ಕೊಲ್ಕತ್ತೆಯಲ್ಲಿ ಉಪವಾಸ ಮಾಡಿ ಹಿಂದೂ ಹಾಗೂ ಮುಸ್ಲಿಮರು ಶಸ್ತ್ರತ್ಯಾಗ ಮಾಡುವಂತೆ ಹಲವರನ್ನು ಪ್ರಭಾವಿಸಿದರು. ತಮ್ಮಿಂದ ಸಾಧ್ಯವಾದಷ್ಟು ಶಾಂತಿ ಸ್ಥಾಪನೆಗೆ ಮುಂದಾಗಿದ್ದರು. ಏನಾದರೇನು? ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದ ಮತೀಯ ಬೆಂಕಿಯನ್ನು ತನ್ನ ಶಾಂತಿಯ ಮಂತ್ರದಿಂದ ನಂದಿಸಲು ಪ್ರಯತ್ನಿಸಿದ ಗಾಂಧಿ ಕೊನೆಗೂ ಸೋತಿದ್ದರು. ದೇಶದ ವಿಭಜನೆ ಆಗಿಯೇ ಹೋಯಿತು. ತಾವೇ ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ಕಾಂಗ್ರೆಸ್ ಮತೀಯ ಗಲಭೆಗೆ ಹೆದರಿ ವಿಭಜನೆಗೆ ಒಪ್ಪಿಗೆ ಸೂಚಿಸಿತ್ತು. ವಿಭಜನೆಯೇ ಗಾಂಧಿಯ ಜೀವವನ್ನು ಒಂದು ಮಟ್ಟಕ್ಕೆ ಕೊಂದುಹಾಕಿತ್ತು.

ಗಾಂಧಿಯನ್ನು ಕೊಲ್ಲಲು ನಿರ್ಧಾರ ಮಾಡಿದ ಬಳಿಕ, ಆಪ್ಟೆ ಹಾಗೂ ಗೋಡ್ಸೆ ಜನವರಿ.20ಕ್ಕೆ ಆ ಕೆಲಸ ಮಾಡಿ ಮುಗಿಸಲು ದಿನಾಂಕ ನಿಗದಿ ಮಾಡಿದ್ದರು. ಬಳಿಕ ಯೋಜನೆ ಬದಲಿಸಿ ಜನವರಿ.30ಕ್ಕೆ ನಿಗದಿಪಡಿಸಲಾಯಿತು. ಅಂದು ಬೂದು ಬಣ್ಣದ ಅಂಗಿ ಧರಿಸಿದ ವ್ಯಕ್ತಿಯೊಬ್ಬ ಬಿರ್ಲಾ ಗೇಟ್ ಮೂಲಕ ಪ್ರವೇಶಿಸಿದಾಗ ಯಾರೂ ಆತನನ್ನು ತಪಾಸಣೆ ಮಾಡಲಿಲ್ಲ. ಈ ಹಿಂದೆ ಕೂಡ ಗಾಂಧಿಯವರನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಗಾಂಧೀಜಿ ಜನತೆಯತ್ತ ಕೈಬೀಸುತ್ತಾ ಪ್ರಾರ್ಥನೆಗೆ ತೆರಳುವ ಹೊತ್ತಿಗೆ ಕೇವಲ ಕೆಲವೇ ಅಡಿಗಳ ಮುಂದೆ ನಿಂತಿದ್ದ
ಗೋಡ್ಸೆ ನೋಡನೋಡುತ್ತಿದ್ದಂತೆ ಅವರ ಎದೆಗೆ ನಾಲ್ಕು ಗುಂಡುಗಳನ್ನು ಹೊಕ್ಕಿಸಿದ್ದ. ತನ್ನ ಜೀವಮಾನವಿಡೀ ಶಾಂತಿಸ್ಥಾಪನೆಗಾಗಿ ಹೋರಾಡಿದ್ದ ಬಾಪು ಕೊನೆಗೂ ರಕ್ತದೋಕುಳಿಯಲ್ಲಿ ಕೊನೆಯುಸಿರೆಳೆದಿದ್ದರು. ಸ್ವತಂತ್ರ ಭಾರತವನ್ನು ಬೆಚ್ಚಿಬೀಳಿಸಿದ ಹತ್ಯೆ ಹೀಗೆ ನಡೆದುಹೋಗಿತ್ತು. ಸಾಮರಸ್ಯದ ಸ್ವರಾಜ್ಯವೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿತ್ತು!

ಹತ್ಯೆಗೆ ಗೋಡ್ಸೆಯ ಸಮರ್ಥನೆ ಏನು?

ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್ ವಿಚಾರಣೆಯಲ್ಲಿ ’ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ’ ಎಂದು ಗೋಡ್ಸೆ ತನ್ನ ಪರ ವಾದವನ್ನು ಸವಿವರವಾಗಿ ಮಂಡಿಸಿ, ಗಾಂಧಿಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಗಾಂಧೀಜಿ ವಿರುದ್ಧ ಆತನ ತಕರಾರುಗಳಲ್ಲಿ ಕೆಲವು ಹೀಗಿದ್ದವು…

1. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು!

2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ!

3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು, ಇದು ಸರಿಯಲ್ಲ!

4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು!

5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿಮೌನ ವಹಿಸಿದ್ದರು!

6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು!

7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು!

PC : India Today

8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೋರಲಿಲ್ಲ!

9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ!

10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ!

ಇವು ಗಾಂಧಿ ಹತ್ಯೆಗೆ ಗೋಡ್ಸೆ ನೀಡಿದ ಸಮರ್ಥನೆಗಳಲ್ಲಿ ಕೆಲವು. ಆದರೆ, ನಿಜದಲ್ಲಿ ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಕೋಮುದಳ್ಳುರಿಯ ಮಾರಣಹೋಮದಲ್ಲಿ ಗಾಂಧಿ ಪಾಲ್ಗೊಳ್ಳಲಿಲ್ಲ. ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಗಾಂಧೀಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು.

ಮಾನವೀಯತೆಯ ಪರ ಇದ್ದವರು. ಮನುಷ್ಯತ್ವವನ್ನು ನಂಬಿ ಆಚರಣೆಗೆ ತಂದಿದ್ದವರು. ಅಂತಹ ತಳಹದಿಯಲ್ಲಿ ಸನಾತನ ಧರ್ಮ ಸುಧಾರಣೆಗೊಳ್ಳಬೇಕು ಎಂದು ನಂಬಿದ್ದವರು. ಎಲ್ಲರೂ ದೇವರ ದೃಷ್ಟಿಯಲ್ಲಿ ಸಮಾನರು ಎಂಬ ಗಾಂಧಿಯ ತತ್ವದ ಅಗಾಧತೆಯನ್ನು ಮತ್ತು ಅದರ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳುವಲ್ಲಿ ಗೋಡ್ಸೆ ವಿಫಲನಾಗಿದ್ದ. ಆ ರೀತಿ ನಂಬಿದ್ದ ಅಸಂಖ್ಯಾತ ಮತಾಂಧರ ಸಂಕೇತವಾಗಿದ್ದ ಗೋಡ್ಸೆ. ವಿಪರ್ಯಾಸವೆಂದರೆ ಗಾಂಧಿಯ ನಿಜದ ತತ್ವ ಇಂದಿಗೂ ಗೋಡ್ಸೆ ಆರಾಧಕರಿಗೆ ಅರ್ಥವಾಗಿಲ್ಲ, ಅರ್ಥವಾದರೂ ಅದನ್ನು ಜೀರ್ಣಿಸಿಕೊಳ್ಳುವಷ್ಟು ಪ್ರೀತಿ ಮತ್ತು ಮಾನವೀಯತೆಯ ಎಸಳು ಅವರ ಹೃದಯದಲ್ಲಿಲ್ಲ ಎಂಬುದೇ ದಿಟ. ಈ ಮತಾಂಧತೆ ಅಂದು ಗಾಂಧಿ ಎಂಬ ವ್ಯಕ್ತಿಯನ್ನಷ್ಟೇ ಆಹುತಿ ತೆಗೆದುಕೊಳ್ಳಲಿಲ್ಲ, ಇಡೀ ದೇಶದ ಹೃದಯವಾಗಬೇಕಿದ್ದ ಮಾನವತೆಯನ್ನು ಅದು ಬಲಿ ತೆಗೆದುಕೊಂಡಿತು. ಆ ಕೊಲೆಯನ್ನು ಇನ್ನೂ ವಿಜೃಂಭಿಸುತ್ತಿರುವ ಮನಸ್ಸುಗಳು ಸುಧಾರಣೆಯಾಗದ ಹೊರತು ನಿಜ ಗಾಂಧೀ ಜಯಂತಿಗೆ ಅರ್ಥವೆಂತು?


ಇದನ್ನೂ ಓದಿ: ಅಸಮ್ಮತಿಸುತ್ತಿರುವ ಅಧಿಕಾರಿಗಳು ಮತ್ತು ಸಂವಿಧಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...