Homeಮುಖಪುಟನನ್ನ ನೆನಪಿನ ಚಿತ್ರಶಾಲೆಯಲ್ಲಿ ಗಾಂಧಿ - ಸುಭಾಷ್ ರಾಜಮನೆ

ನನ್ನ ನೆನಪಿನ ಚಿತ್ರಶಾಲೆಯಲ್ಲಿ ಗಾಂಧಿ – ಸುಭಾಷ್ ರಾಜಮನೆ

- Advertisement -
- Advertisement -

ಅನಕ್ಷರಸ್ಥರಾದ ನನ್ನ ತಂದೆ ತಾಯಿಗಳು ಅದು ಹೇಗೋ ಅಕ್ಷರ ಕಲಿಯಲು ನನ್ನನ್ನು ಶಾಲೆಗೆ ಸೇರಿಸಿದರು. ದನಗಳನ್ನು ಕಾಯುವುದಕ್ಕಿಂತ ಶಾಲೆಗೆ ಹೋಗುವುದೇ ಇನ್ನಿಲ್ಲದ ಖುಷಿ ಕೊಟ್ಟಿತು. ಶಾಲೆಯಲ್ಲಿ ಪಾಠಕ್ಕಿಂತ ಆಟಗಳೇ ಹೆಚ್ಚಾಗಿರುತ್ತಿದ್ದವು. ನಮ್ಮನ್ನು ಗಂಟೆಗಟ್ಟಲೆ ಆಟಕ್ಕೆ ಬಿಟ್ಟು ಮಾಸ್ತರರು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಸೇರಿಕೊಂಡು ಹರಟೆಯಲ್ಲಿ ತನ್ಮಯರಾಗಿರುತ್ತಿದ್ದರು. ಸಾಮಾನ್ಯವಾಗಿ ಮುಖ್ಯೋಪಾಧ್ಯಾಯರ ಖೋಲಿಯ ಮುಂದೆ ನಮ್ಮನ್ನು ಅಡ್ಡಾಡಲು ಬಿಡುತ್ತಿರಲಿಲ್ಲ. ವಿದ್ಯಾರ್ಥಿಗಳಾದ ನಮಗೆ ಅಲ್ಲಿ ಒಳಗೆ ಪ್ರವೇಶವೂ ಇರುತ್ತಿರಲಿಲ್ಲ. ಅದರ ಮುಂದುಗಡೆಯಿಂದ ಹೋಗುವಾಗ ಮತ್ತು ಬರುವಾಗಲೆಲ್ಲ ಗೋಡೆಯ ಮೇಲೆ ತೂಗು ಹಾಕಲಾಗಿದ್ದ ಫೋಟೊಗಳು ಕಣ್ಣಿಗೆ ಬೀಳುತ್ತಿದ್ದವು. ನಮ್ಮ ಮನೆಯ ಗೋಡೆಯ ಮೇಲೆ ದೇವರ ಫೋಟೊಗಳಿದ್ದವು.

ನನಗೆ ಶಾಲೆಯಲ್ಲಿ ಕಾಣುತ್ತಿದ್ದ ಫೋಟೊಗಳು ಯಾರವು ಎಂಬುದನ್ನು ತಿಳಿಯುವ ಯಾವ ಕುತೂಹಲವೂ ಆ ವಯಸ್ಸಿನಲ್ಲಿ ಇದ್ದಿರಲಿಲ್ಲ. ಆ ಫೋಟೊಗಳಲ್ಲಿರುವ ವ್ಯಕ್ತಿಗಳಿಗೂ ಮತ್ತು ನಾವು ಓದುತ್ತಿರುವ ಶಾಲೆಗೂ ಇರುವ ಸಂಬಂಧವಾದರೂ ಏನೆಂಬುದನ್ನು ತಿಳಿದುಕೊಳ್ಳುವಷ್ಟು ಆಸಕ್ತಿಯೂ ಬೆಳೆದಿರಲಿಲ್ಲ. ಆಗಸ್ಟ್ ಹದಿನೈದರಂದು ಗೋಡೆಯ ಮೇಲಿದ್ದ ಫೋಟೊಗಳು ಕೆಳಗೆ ಇಳಿಯುತ್ತಿದ್ದವು. ನಾವು ಅವುಗಳ ಮೇಲಿದ್ದ ಧೂಳನ್ನು ಒರೆಸಬೇಕಾಗಿತ್ತು. ಊರಿನ ಗಣ್ಯರನ್ನು ಕರೆದು ಆ ಫೋಟೊಗಳಿಗೆ ಹೂಮಾಲೆಗಳನ್ನು ಹಾಕಿಸಿ ಪೂಜೆಯನ್ನು ಮಾಡಿಸಲಾಗುತ್ತಿತ್ತು. ನಮಗೆ ಕಲಿಸುತ್ತಿದ್ದ ಮಾಸ್ತರರು ಆ ದಿನ ಗಾಂಧಿ, ನೆಹರು, ಸರ್ದಾರ ಪಟೇಲ್, ಸುಭಾಷ್‍ಚಂದ್ರ ಬೋಸ್ ಮೊದಲಾದವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದನ್ನು ಆವೇಶದಿಂದ ಕೂಗಿ ಹೇಳುತ್ತಿದ್ದರು. ನಾವು ಬೆಳಗಿನ ಹೊಂಬಿಸಿಲಿನಲ್ಲಿ ಆ ಭಾಷಣಗಳಿಗೆ ಆಗಾಗ ಚಪ್ಪಾಳೆ ಹೊಡೆಯುತ್ತ ಕೂತಿರಬೇಕಾಗಿತ್ತು. ಪ್ರಾಯಶಃ ಗಾಂಧಿಜಿಯವರನ್ನು ನಾನು ಮೊದಲು ನೋಡಿದ್ದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೂವುಗಳಿಂದ ಅಲಂಕೃತಗೊಂಡಿದ್ದ ಫೋಟೊದಲ್ಲಿಯೇ ಇದ್ದಿರಬಹುದು.

ಪ್ರಾಯಶಃ ನಾನು ಮೂರನೆಯ ಅಥವಾ ನಾಲ್ಕನೆಯ ತರಗತಿಯಲ್ಲಿದ್ದಾಗ ಕನ್ನಡ ಪಠ್ಯಪುಸ್ತಕದಲ್ಲಿ ಗಾಂಧೀಜಿಯವರ ಬಾಲ್ಯದ ಜೀವನವನ್ನು ಆಧರಿಸಿದ ಒಂದು ಪಾಠವಿತ್ತು. ಉತ್ಸಾಹಶೀಲ ಶಿಕ್ಷಕರಾದ ಚಂದ್ರಶೇಖರ ಮೇಲಿನಮನಿಯವರು ಮೋಹನದಾಸ್ ಕರಮಚಂದ್ ಗಾಂಧೀಜಿ ಬಗ್ಗೆ ಅನೇಕ ಸಂಗತಿಗಳನ್ನು ವಿವರಿಸಿದರು. ಮೋಹನದಾಸ್ ಬಾಲ್ಯದಲ್ಲಿ ತನ್ನ ಮನೆಯಲ್ಲಿಯೇ ಚಿನ್ನವನ್ನು ಕದ್ದದ್ದು, ತನ್ನ ಗೆಳೆಯರೊಂದಿಗೆ ಸೇರಿಕೊಂಡು ಮಾಂಸ ತಿಂದದ್ದು, ಯಾರಿಗೂ ತಿಳಿಯದಂತೆ ಬೀಡಿ ಸೇದಿದ್ದು-ಇಂತಹ ಅನೇಕ ವಿಷಯಗಳನ್ನು ಹೇಳಿದರು. ನಂತರದಲ್ಲಿ ಮೋಹನದಾಸ್ ಸತ್ಯಹರಿಶ್ಚಂದ್ರ ನಾಟಕ ನೋಡಿ ಸತ್ಯವಂತನಾಗಲು ಪ್ರಯತ್ನಿಸಿದ್ದನ್ನು ನಮಗೆಲ್ಲ ನೀತಿಪಾಠವಾಗಿತ್ತು. ಆದರೆ ಮುಂದೆ ಗಾಂಧೀಜಿಯವರು ಮಾಂಸಾಹಾರವನ್ನು ಏಕೆ ತಿನ್ನಲಿಲ್ಲವೆಂಬುದು ಆಗ ನನಗೆ ಗೊತ್ತಾಗಲಿಲ್ಲ. ನಮ್ಮ ಮನೆಯಲ್ಲಿ ವಾರಕ್ಕೊಮ್ಮೆಯಾದರು ಮಾಂಸದ ಅಡುಗೆ ಇರುತ್ತಿತ್ತು. ಆದರೆ ನನಗೆ ಅದನ್ನು ಎಂದೂ ಬಿಡುವ ಮನಸ್ಸಾಗಲಿಲ್ಲ.

ನಾನು ಏಳನೆಯ ತರಗತಿಯಲ್ಲಿದ್ದಾಗ ಆಗಾಗ ಶಾಲೆಯನ್ನು ತಪ್ಪಿಸಬೇಕಾಗುತ್ತಿತ್ತು. ಜೂನ್-ಜುಲೈ ತಿಂಗಳು ಬಿತ್ತನೆಯ ಕಾಲವಾಗಿರುತ್ತಿತ್ತು. ಆಗಿನ ಕಾಲದಲ್ಲಿ ಅಷ್ಟೇನೂ ನೀರಾವರಿ ಇಲ್ಲದಿರುವ ಒಣ ಜಮೀನುಗಳಲ್ಲಿ ಜೋಳ ಬೆಳೆಯುವುದು ಮಾಮೂಲಾಗಿತ್ತು. ಜೋಳ ಬಿತ್ತನೆ ಮಾಡಿದ ಒಂದು ತಿಂಗಳಲ್ಲಿಯೇ ಎತ್ತುಗಳನ್ನು ಬಳಸಿ ಎಡೆಯನ್ನು ಹೊಡೆದು ಕಳೆನಾಶ ಮಾಡಬೇಕಾಗುತ್ತಿತ್ತು. ಜೋಳದ ಎರಡು ಸಾಲುಗಳ ನಡುವಿನ ಕಳೆಯನ್ನು ಕಿತ್ತಾಕುವ ಕೂರಿಗೆಯನ್ನು ಹಿಡಿದುಕೊಂಡು ಎತ್ತುಗಳೊಂದಿಗೆ ದಿನವೆಲ್ಲ ನಡೆದುಕೊಂಡು ಸಾಗಬೇಕು. ಈ ಕೆಲಸಕ್ಕಾಗಿ ಇಪ್ಪತ್ತು ರೂಪಾಯಿ ಕೂಲಿ ಸಿಗುತ್ತಿತ್ತು.

ಒಂದು ದಿನ ಶಾಲೆಗೆ ಹೋಗದೆ ನಮ್ಮ ಊರಿನಿಂದ ನಾಲ್ಕೈದು ಕಿ.ಮೀ. ದೂರದ ಜಮೀನಿಗೆ ಎಡೆ ಹೊಡೆಯಲು ಹೋಗಿದ್ದೆ. ಮಧ್ಯಾಹ್ನದ ಹೊತ್ತಿಗೆ ನನ್ನ ಅಪ್ಪ ಸೈಕಲ್ ಹೊಡೆದುಕೊಂಡು ನನ್ನನ್ನು ಹುಡುಕಿಕೊಂಡು ಬಂದ. ಶಾಲೆಗೆ ಸಾಹೇಬರು ಬಂದಿದ್ದಾರೆಂದು, ಮೇಲಿನಮನಿ ಮಾಸ್ತರರು ನನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದ. ನಾನು ಎಡೆ ಹೊಡೆಯುವ ಕೆಲಸವನ್ನು ಬಿಟ್ಟು ಸೈಕಲ್ ಹೊಡೆದುಕೊಂಡು ಶಾಲೆಗೆ ಹೋದೆ. ನನ್ನಪ್ಪ ನನ್ನ ಪಾಲಿನ ಕೆಲಸವನ್ನು ಮುಂದುವರೆಸಿದ. ಶಾಲೆಗೆ ಗೈರುಹಾಜರಾಗಿದ್ದಕ್ಕೆ ಮಾಸ್ತರರಿಂದ ಹಿಗ್ಗಾಮುಗ್ಗಾ ಬೈಸಿಕೊಂಡೆ. ಸಾಹೇಬರು ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿದ್ದರು. ಆಗಾಗ ಸಾಹೇಬರು ಬಂದಾಗಲೆಲ್ಲ ಮಾಸ್ತರರು ಆತಂಕದಿಂದ ಓಡಾಡುತ್ತಿದ್ದರು. ಚಹಾ ತರಲು ಹೋದವನನ್ನು ಎಷ್ಟು ತಡವೆಂದು ಕಣ್ಣು ಕೆಂಪಾಗಿಸಿಕೊಂಡು ನೋಡುತ್ತಿದ್ದರು. ಮಾಸ್ತರರ ಉದ್ವೇಗ ಕಂಡು ನಾವು ಕೂಡ ಭಯಭೀತರಂತೆ ನಟಿಸುತ್ತಿದ್ದೆವು. ನಾನು ಹೋಗಿ ನನ್ನ ತರಗತಿಯಲ್ಲಿ ಎಲ್ಲರೊಂದಿಗೆ ಕುಳಿತುಕೊಂಡೆ. ತರಗತಿಗೆ ಬಂದ ಸಾಹೇಬರು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿದರು. ಸಾಹೇಬರು ಕೇಳುವ ಪ್ರಶ್ನೆಗಳಿಗೆ ಯಾರಿಗೆ ಉತ್ತರ ಗೊತ್ತಿರುತ್ತದೆಯೋ ಅವರು ಥಟ್ಟನೇ ಎದ್ದು ನಿಂತು ಉತ್ತರ ಹೇಳಬೇಕಾಗಿತ್ತು. ನಾನು ಅನೇಕ ಪ್ರಶ್ನೆಗಳಿಗೆ ಎದ್ದು ನಿಂತು ಕೈಕಟ್ಟಿಕೊಂಡು ಉತ್ತರಿಸಿದೆ. ಗಾಂಧೀಜಿಯವರ ಬಗ್ಗೆಯೇ ಹೆಚ್ಚು ಪ್ರಶ್ನೆಗಳಿದ್ದವು. ಗಾಂಧೀಜಿ ವಿಶೇಷ ವ್ಯಕ್ತಿಯೇ ಇರಬೇಕು ಅನ್ನಿಸಿತು.

ನನ್ನ ಚಿಕ್ಕಪ್ಪನಾದ ರೋಹಿದಾಸ್ ಮನೆಯಲ್ಲಿ ನಾಟಕಗಳನ್ನು ಬರೆಯುತ್ತಿದ್ದ. ಆತ ಆಗಸ್ಟ್ ಹದಿನೈದರ ಸಲುವಾಗಿ ಸುಮಾರು ಹತ್ತಾರು ಪುಟಗಳ ಭಾಷಣವನ್ನು ಬರೆದು ಕೊಟ್ಟ. ಅದರಲ್ಲಿ ಗಾಂಧೀಜಿಯ ಬಗ್ಗೆ ಹೆಚ್ಚು ವಿವರಣೆಗಳಿದ್ದವು. ಅದನ್ನೆಲ್ಲ ಮತ್ತೆ ಮತ್ತೆ ಓದಿ ಕಂಠಪಾಠ ಮಾಡಿಕೊಂಡು ವೇದಿಕೆಯ ಮೇಲೆ ನಿಂತುಕೊಂಡು ಹೇಳಲು ಪರದಾಡುತ್ತಿದ್ದೆ. ಸ್ವಾತಂತ್ರ್ಯ ದಿನಾಚರಣೆ ಮುಗಿದಮೇಲೆ ಮತ್ತೆ ಗಾಂಧಿ, ನೆಹರು, ಸುಭಾಷಚಂದ್ರ ಭೋಸ್-ಇವರ ಫೋಟೊಗಳನ್ನು ಜೋಪಾನವಾಗಿ ಕೊಠಡಿಗೆ ಎತ್ತಿಕೊಂಡು ಹೋಗುವ ಕೆಲಸವೂ ಇರುತ್ತಿತ್ತು. ತಪ್ಪಿಸಿಕೊಂಡು ಮನೆಗೆ ಓಡಲು ಮಾಸ್ತರರು ಬಿಡುತ್ತಿರಲಿಲ್ಲ! ಹೀಗೆ ನಾನು ಬೆಳಗಾವಿ ಜಿಲ್ಲೆಯ ಅಥಣಿ ಸೀಮೆಯ ಗ್ರಾಮೀಣ ಪ್ರದೇಶದ ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಗಾಂಧೀಜಿ ನನಗೆ ಪರಿಚಯವಾಗಿದ್ದು. ತೊಂಬತ್ತರ ದಶಕದ ಆರಂಭಿಕ ಕಾಲಘಟ್ಟದ ಶೈಕ್ಷಣಿಕ ಪಾಠಗಳಲ್ಲಿ ಹಾಗೂ ಮಾಸ್ತರರ ಭಾಷಣಗಳಿಂದ ಗಾಂಧೀಜಿ ಎಂದರೆ ಆಗಸ್ಟ್ 15 ಮತ್ತು ಅಕ್ಟೋಬರ್ 2 ರಂದು ಅವರ ಬಗ್ಗೆ ಏನಾದರು ಮಾತಾಡುವುದೆಂದು ಗೊತ್ತಾಯಿತು.ಆಗೆಲ್ಲ ನಮಗೆ ಕಲಿಸುತ್ತಿದ್ದ ಮಾಸ್ತರರೇ ಜ್ಞಾನದ ಗಣಿಗಳಾಗಿದ್ದರು. ಜಗತ್ತಿನ ಎಲ್ಲ ಜ್ಞಾನವೂ ಅವರ ಮೂಲಕವೇ ನಮ್ಮ ತಲೆಗೆ ಬರುತ್ತದೆ ಎಂದು ನಂಬಿದ್ದ ಕಾಲವೂ ಅದಾಗಿತ್ತು.

ಹೈಸ್ಕೂಲ್ ಮೆಟ್ಟಿಲು ಹತ್ತುವುದರೊಂದಿಗೆ ಒಂದಿಷ್ಟು ಪ್ರಶ್ನಿಸುವ ಮನೋಭಾವ ಬೆಳೆಯತೊಡಗಿತು. ಆಗ ಜನಪ್ರಿಯವಾಗಿದ್ದ ‘ದಿಕ್ಸೂಚಿ’, ‘ಸಂತೃಪ್ತಿ’ ಮತ್ತು ‘ಚುಟುಕು’ಗಳಂತಹ ಮಾಸಿಕಗಳ ಓದಿನೊಂದಿಗೆ ನನ್ನ ಸ್ವಂತ ಆಯ್ಕೆಯ ಓದು ಶುರುವಾಯಿತೆಂದು ಹೇಳಬಹುದು. ವಿರೇಂದ್ರ ಸಿಂಪಿ (ಸಿಂಪಿ ಲಿಂಗಣ್ಣನವರ ಮಗ) ಅವರು ‘ದಿಕ್ಸೂಚಿ’ಯಲ್ಲಿ ‘ವಿಚಾರಧಾರೆ’ ಎಂಬ ಅಂಕಣವನ್ನು ಬರೆಯುತ್ತಿದ್ದರು. ಒಮ್ಮೆ ಗಾಂಧೀಜಿಯವರ ಸತ್ಯ, ಅಹಿಂಸೆ ಮತ್ತು ಸತ್ಯಾಗ್ರಹಗಳ ಬಗ್ಗೆ ಬರೆದಿದ್ದರು. ಹಳ್ಳಿಗಾಡು ಪ್ರದೇಶದಲ್ಲಿ ಇಂತಹ ಅಲ್ಪ ಓದಿನ ಮೂಲಕವೇ ಜಗತ್ತನ್ನು ನೋಡುವ ಅವಕಾಶ ಸಿಗುತ್ತಿತ್ತು. ಬದುಕಿನ ದುರ್ಭರ ಜಂಜಾಟಗಳಲ್ಲಿ ಇಂತಹ ಪತ್ರಿಕೆಗಳೇ ಜ್ಞಾನದ ಬೆಳಕಿಂಡಿಗಳಾಗಿದ್ದವು. ಪ್ರಖ್ಯಾತ ಚಿತ್ರಕಲಾವಿದರಾದ ನಂದಲಾಲ್ ಬೋಸ್ ಅವರ ರೇಖೆಯಲ್ಲಿ ಅರಳಿದ ಗಾಂಧಿ ಚಿತ್ರವನ್ನು ನಾನು ಮೊದಲು ನೋಡಿದ್ದು ಕೂಡ ಇಂತಹ ಪತ್ರಿಕೆಯಲ್ಲಿಯೇ.
ನಾನು ಹೈಸ್ಕೂಲ್‍ನಲ್ಲಿ ಹತ್ತನೆಯ ತರಗತಿಯಲ್ಲಿದ್ದಾಗ ಗಂಗಾಧರ ಚಿತ್ತಾಲ ಅವರ ‘ಮಹಾತ್ಮ’ ಎಂಬ ಕವಿತೆಯೊಂದು ಪಠ್ಯವಾಗಿತ್ತು. ನಮಗೆ ಕನ್ನಡ ವಿಷಯವನ್ನು ಬೋಧಿಸುತ್ತಿದ್ದ ಕಲಕೇರಿ ಮಾಸ್ತರರು ಈ ಕವಿತೆಯನ್ನು ಓದಿ ಹೇಳಿದ ಪರಿಣಾಮದಿಂದ ನನ್ನ ನೆನಪಿನಲ್ಲಿದೆ.

ನಿನ್ನ ನೆತ್ತರು ನೆಲಕೆ ಚೆಲ್ಲಿದಂದು
ಮಣ್ಣು ನಡುಗಿತು, ಹಗಲ ಹೂ ಬಾಡಿತು
ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ
ಉತ್ತಮರ ಬಲಿ ಇಲ್ಲಿ-ಬಾನಾಡಿತು

ಕಲಕೇರಿ ಮಾಸ್ತರರು ಗಾಂಧೀಜಿಯವರ ಹತ್ಯೆಯನ್ನು ‘ನಿನ್ನ ನೆತ್ತರು ನೆಲಕೆ ಚೆಲ್ಲಿದಂದು/ ಮಣ್ಣು ನಡುಗಿತು, ಹಗಲಹೂ ಬಾಡಿತು’ಎಂಬ ಸಾಲುಗಳನ್ನು ಓದುವಾಗ ಭೂಮಿ-ಆಕಾಶ ಒಂದಾಗುವಂತೆ ತಮ್ಮ ಕೈಯನ್ನು ಚಾಚಿ ಅಭಿನಯಿಸಿ ತೋರಿಸಿದ್ದರು. ಅವರು ಕವಿತೆಯನ್ನೊ ಗದ್ಯಪಾಠವನ್ನೊ ಧ್ವನಿಪೂರ್ಣವಾಗಿ ಓದಿ ಅರ್ಥ ಹೇಳುವುದರ ಜೊತೆಯಲ್ಲಿಯೇ ಅದನ್ನು ಆಂಗಿಕವಾಗಿಯೂ ಅಭಿನಯಿಸುತ್ತಿದ್ದರು. ಇದರಿಂದಾಗಿ ಎಷ್ಟೋ ಕವಿತೆಯ ಸಾಲುಗಳು ನನ್ನ ನೆನಪಿನಲ್ಲಿ ಇಂದಿಗೂ ಉಳಿದುಕೊಂಡಿವೆ. ಹೀಗೆ ಕವಿತೆಯೊಂದರ ಮೂಲಕ ಗಾಂಧೀಜಿಯವರ ಪ್ರಭಾವ ಎಂತಹದ್ದು ಎಂಬುದು ನನ್ನ ಅರಿವಿಗೆ ಬಂದಿತು. ನಮ್ಮ ಬೀಳ್ಕೊಡುಗೆಯ ಸಮಾರಂಭದಲ್ಲಿ ಮೇಕನಮರ್ಡಿ ಮಾಸ್ತರರು ತಮ್ಮ ಭಾಷಣದಲ್ಲಿ ಓದಲೇಬೇಕಾದ ಪುಸ್ತಕಗಳಲ್ಲಿ ಗಾಂಧೀಜಿಯವರ ‘ಮೈ ಎಕ್ಸಪರಿಮೆಂಟ್ಸ್ ವಿತ್ ಟ್ರೂಥ್’ಆತ್ಮಕತೆಯು ಅತ್ಯಂತ ಮಹತ್ವದ್ದು ಎಂದು ಹೇಳಿದರು. ಅವರು ಬೇರೆ ಮಾಸ್ತರರಿಗಿಂತ ಭಿನ್ನವಾಗಿ ಆಲೋಚನೆ ಮಾಡುವವರಾಗಿದ್ದರು. ಅವರು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತರಗತಿಯಲ್ಲಿ ಮತ್ತು ಭಾಷಣಗಳಲ್ಲಿ ಆಗಾಗ ಕೋಟ್ ಮಾಡುತ್ತಿದ್ದರು.

ಹತ್ತನೇ ತರಗತಿ ಮುಗಿದ ನಂತರದಲ್ಲಿ ನಾನು ಪಿಯುಸಿ ಶಿಕ್ಷಣ ಪಡೆಯಲೆಂದು ಧಾರವಾಡಕ್ಕೆ ಹೋದೆ. ಅಲ್ಲಿ ‘ಸಮಾಜ ಪುಸ್ತಕಾಲಯ’ದಲ್ಲಿ ಮೊದಲು ಕೊಂಡ ಪುಸ್ತಕಗಳೆಂದರೆ ಗಾಂಧೀಜಿಯವರ ಆತ್ಮಕತೆ ಮತ್ತು ಅಂಬೇಡ್ಕರ್ ಅವರ ಜೀವನಚರಿತ್ರೆ. ಕೆಲವೇ ದಿನಗಳಲ್ಲಿ ಆತ್ಮಕತೆಯನ್ನು ಓದಿದೆ. ಅದರ ಕೆಲವು ಭಾಗಗಳು ಈಗಲೂ ನನ್ನ ನೆನಪಿನಲ್ಲಿವೆ. ಅದರಲ್ಲಿ ಗಾಂಧೀಜಿಯವರು ಜಾನ್ ರಸ್ಕಿನ್‍ನ ‘ಅನ್‍ಟು ದಿಸ್ ಲಾಸ್ಟ್’ ಎಂಬ ಕಿರುಹೊತ್ತಿಗೆಯನ್ನು ಓದಿ ಒಬ್ಬ ವೈದ್ಯ, ವಕೀಲ, ಕ್ಷೌರಿಕ, ಚಮ್ಮಾರ-ಇವರ ಎಲ್ಲ ಕೆಲಸಗಳೂ ಸಮಾನವಾದವು ಎಂದು ಪರಿಭಾವಿಸಿದರು; ತಾವು ವಕೀಲರಾಗಿದ್ದರೂ ಕೂಡ ತಮ್ಮ ಪಾದಗಳಿಗೆ ತಾವಾಗಿಯೇ ಜೋಡುಗಳನ್ನು ಹೊಲಿದುಕೊಂಡರು; ತಮ್ಮ ತಲೆಯನ್ನು ತಾನೇ ಕ್ಷೌರ ಮಾಡಿಕೊಂಡರು-ಇಂತಹ ಹಲವಾರು ಗುಣಗಳಿಂದ ಗಾಂಧೀಜಿ ನನ್ನ ಮೆಚ್ಚಿನ ವ್ಯಕ್ತಿಯಾಗಿದ್ದರು. ಅವರ ನಿಜವಾದ ಪ್ರಯೋಗಗಳು ದಕ್ಷಿಣ ಆಫ್ರಿಕಾದಲ್ಲಿಯೇ ಆರಂಭವಾದವು. ಅವಮಾನ, ಅಸಮಾನತೆ, ವರ್ಣಭೇದಗಳ ವಿರುದ್ಧ ತಮ್ಮ ಪ್ರತಿಭಟನೆಯ ಅಸ್ತ್ರಗಳನ್ನು ಸಮರ್ಥವಾಗಿ ಬಳಸಿದರು. ತಮ್ಮ ಹೋರಾಟದಲ್ಲಿ ಎಲ್ಲ ವರ್ಗದ ಜನರ ವಿಶ್ವಾಸವನ್ನು ಪಡೆದುಕೊಂಡರು. ಅದರ ಜೊತೆಯಲ್ಲಿಯೇ ತಮ್ಮನ್ನು ತಾವು ನಿರಂತರ ಅಗ್ನಿಪರೀಕ್ಷೆಗೆ ಒಡ್ಡಿಕೊಳ್ಳುತ್ತಲೇ ನಡೆದರು. ಆದ್ದರಿಂದ ನನಗೂ ಕೂಡ ಆ ವಯಸ್ಸಿನಲ್ಲಿ ಗಾಂಧೀಜಿ ಎಲ್ಲರಂತಲ್ಲ ಎಂಬ ಭಾವನೆ ಬೆಳೆಯಿತು.

ನನ್ನ ಸೋದರ ಮಾವನಾದ ನಾಮದೇವ ಟೋಣಪೆ ಅವರು ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ನೌಕರರಾಗಿದ್ದರು. ಅವರು ರಸ್ತೆಯಲ್ಲಿ ನಡೆದುಕೊಂಡು ಆಫೀಸಿಗೆ ಹೋಗುವಾಗ ದ್ವಿಚಕ್ರ ವಾಹನವೊಂದು ಅವರ ಕಾಲಿನ ಮೇಲೆ ಹಾಯ್ದು ಹೋಗಿತ್ತು. ಕಾಲಿಗೆ ಫ್ರ್ಯಾಕ್ಚರ್ ಆಗಿದ್ದರಿಂದ ಅವರನ್ನು ನೋಡಿಕೊಳ್ಳುವುದಕ್ಕಾಗಿ ನಾನು ಆಕಸ್ಮಿಕವಾಗಿ ಬೆಂಗಳೂರಿಗೆ ಬರಬೇಕಾಯಿತು. ಹಾಗೆ ಬಂದವನು ಪಿಯುಸಿ ಶಿಕ್ಷಣವನ್ನು ಇಲ್ಲಿಯೇ ಮುಂದುವರಿಸಿದೆ. ತರುವಾಯ ಸಂಜೆ ಹೊತ್ತು ಸದಾಶಿವ ನಗರದಲ್ಲಿದ್ದ ಕ್ಲಬ್‍ನಲ್ಲಿ ಪಾರ್ಟ್‍ಟೈಮ್ ಕೆಲಸವನ್ನು ಮಾಡಿಕೊಂಡು ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಎ ಪದವಿ ಓದಿದೆ. ಆಗ ‘ಗಾಂಧಿ ಅಧ್ಯಯನ ಕೇಂದ್ರ’ದವರು ಪದವಿ ವಿದ್ಯಾರ್ಥಿಗಳಿಗಾಗಿ ಗಾಂಧೀಜಿಯವರ ಜೀವನ, ಚಿಂತನೆ ಮತ್ತು ಮೌಲ್ಯಗಳ ಕುರಿತು ನಡೆಸುತ್ತಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಗೆ ಅರ್ಜಿ ಸಲ್ಲಿಸುತ್ತಿದ್ದೆ. ಹಣದ ತೀವ್ರ ಕೊರತೆ ಇದ್ದದ್ದರಿಂದ ನಗದು ಬಹುಮಾನ ಇರುವ ಸ್ಪರ್ಧೆಗಳಲ್ಲಿಯೇ ಭಾಗವಹಿಸಲು ಆಸಕ್ತಿ ತೋರಿಸುತ್ತಿದ್ದೆ. ಗಾಂಧೀಜಿ ಬಗ್ಗೆ ಯಾವುದೇ ವಿಷಯ ನೀಡಿದರೂ ಪ್ರಬಂಧ ಬರೆದು ಬಹುಮಾನ ಪಡೆಯುವಷ್ಟು ಶಕ್ತನಾಗಿದ್ದೆ. ಸತತವಾಗಿ ಮೂರು ವರ್ಷವೂ ಮೊದಲ ಬಹುಮಾನಗಳನ್ನು ಪಡೆದುಕೊಂಡಿದ್ದೆ. ಬಹುಮಾನ ವಿತರಣೆಯ ಸಮಾರಂಭದಲ್ಲಿ ಪ್ರಬಂಧಗಳ ಮೌಲ್ಯಮಾಪಕರಾಗಿದ್ದ ನೀಲತ್ತಳ್ಳಿ ಕಸ್ತೂರಿ ಅವರು ನನ್ನ ಬರವಣಿಗೆಯ ಶೈಲಿಯನ್ನು ಮೆಚ್ಚಿಕೊಂಡಿದ್ದರು; ನನ್ನ ಬಳಿಗೆ ಬಂದು ಬರೆಯುವುದನ್ನು ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದ್ದರು.

ಪ್ರೈಮರಿಯಿಂದ ಗ್ರ್ಯಾಜುಯೇಶನ್‍ವರೆಗೂ ನನಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಗಾಂಧಿ ಬೇರೆ ಬೇರೆ ಸ್ವರೂಪಗಳಲ್ಲಿ ನನ್ನ ತಿಳಿವಿಗೆ ಬಂದ ಪರಿ ಇದಾಗಿದೆ. ಇಷ್ಟೆಲ್ಲ ಬರೆಯುವಾಗಲೂ ಇಂದಿನ ವರ್ತಮಾನದ ನೆಲೆಯಲ್ಲಿಯೇ ಭೂತಕಾಲದ ನೆನಪುಗಳನ್ನು ಕೆದಕಿ ತೆಗೆಯುತ್ತೇವೆ. ಆ ನೆನಪುಗಳಲ್ಲಿ ಎಷ್ಟೋ ಸಂಗತಿಗಳು ಮಸುಕಾಗಿರುವ ಸಾಧ್ಯತೆಗಳಿರುತ್ತವೆ. ಬದುಕಿನ ಕಾಲಪ್ರವಾಹದಲ್ಲಿ ಗಾಂಧಿ ಚಿಂತನೆಗಳ ಕೇಂದ್ರಿತ ನನ್ನ ಗ್ರಹಿಕೆಗಳು ಬದಲಾಗುತ್ತಲೇ ಬಂದಿವೆ. ಇತ್ತೀಚಿನ ವರ್ಷಗಳಲ್ಲಿ ಅದೇಕೆ ನಾನು ಓದುತ್ತಿದ್ದ ಶೈಕ್ಷಣಿಕ ಪಠ್ಯಗಳಲ್ಲಿ ದಲಿತರ ಸಮಾನತೆ, ಸ್ವಾತಂತ್ರ್ಯ ಮತ್ತು ಹಕ್ಕುಗಳಿಗಾಗಿ ಅವಿರತ ಹೋರಾಟ ನಡೆಸಿದ ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ-ಮೊದಲಾದವರ ಬಗ್ಗೆ ಪಾಠಗಳಿರಲಿಲ್ಲ ಎನ್ನುವ ಪ್ರಶ್ನೆ ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅಂದು ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಗಾಂಧೀಜಿಯ ಬಗ್ಗೆ ಉತ್ಸಾಹ ಮತ್ತು ಆವೇಶದಿಂದ ಮಾತಾಡುವಂತೆಯೇ ಅಂಬೇಡ್ಕರರ ಬಗ್ಗೆ ಏಕೆ ಮಾತನಾಡುತ್ತಿರಲಿಲ್ಲ ಎಂದು ನನಗೆ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಇಂತಹ ಸಾಂಸ್ಕøತಿಕ ರಾಜಕಾರಣಗಳು ಎಗ್ಗಿಲ್ಲದೇ ನಡೆಯುತ್ತಿರುತ್ತವೆ. ಮುಂದೆ ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕವಾದ ಮೇಲೆ ನನ್ನೊಳಗಿನ ಗಾಂಧಿ ಚಿಂತನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದೇನೆ. ಅಂಬೇಡ್ಕರ್ ವಿಚಾರಧಾರೆಗಳ ಮಹತ್ವವನ್ನೂ ಮನಗಾಣಿಸಲು ಪ್ರಯತ್ನ ಪಟ್ಟಿದ್ದೇನೆ.

ನಾನು ಹಂಪಿ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ “ಕನ್ನಡ ವಿಮರ್ಶೆಯಲ್ಲಿ ಜಾತಿ ಪ್ರಶ್ನೆಯ ಆಯಾಮಗಳು” ಎಂಬ ವಿಷಯದಲ್ಲಿ ಪಿಎಚ್‍ಡಿ ಮಾಡುವಾಗ ಸಾಹಿತ್ಯ ಪಠ್ಯಗಳ ನಿಕಟ ಓದು ಶುರುವಾಯಿತು. ಸೃಜನಶೀಲ ಸಾಹಿತ್ಯ ಮತ್ತು ವಿಮರ್ಶೆಯನ್ನು ಕೂಡ ಶ್ರೇಣೀಕೃತ ಜಾತಿ ವ್ಯವಸ್ಥೆಯು ನಿಯಂತ್ರಿಸಿರುವ ಸಾಂಸ್ಕøತಿಕ ರಾಜಕಾರಣವನ್ನು ಸೂಕ್ಷ್ಮವಾಗಿ ಮತ್ತು ನಿಕಟವಾಗಿ ಗಮನಿಸಲು ಸಾಧ್ಯವಾಯಿತು. ಅಂಬೇಡ್ಕರ್ ಅವರನ್ನು ಓದದೆ ಗಾಂಧೀಜಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದು ಎನ್ನಿಸಿತು. ಅಂಬೇಡ್ಕರ್ ಅವರನ್ನು ಓದಿದ ಮೇಲೆ ಗಾಂಧಿ ಚಿಂತನೆಗಳ ಮಿತಿಗಳು ಅರಿವಾಗತೊಡಗಿದವು. ಗಾಂಧಿವಾದಿಗಳು ಮೊದಲಿನಿಂದಲೂ ಗಾಂಧೀಜಿಯವರನ್ನು ಬಹುತೇಕವಾಗಿ ವೈಭವೀಕರಣ ಮಾಡುತ್ತಲೇ ಬಂದಿದ್ದಾರೆ. ಇಂದಿನ ಸಮಕಾಲೀನ ಸನ್ನಿವೇಶದಲ್ಲೂ ಗಾಂಧಿ ಚಿಂತನೆಗಳ ಸಾಧ್ಯತೆಗಳನ್ನು ತಾತ್ವಿಕವಾಗಿ ನೋಡದೇ ‘ಸ್ವಚ್ಛ ಭಾರತ’ ಎಂಬುದಕ್ಕಷ್ಟೆ ಸೀಮಿತಗೊಳಿಸಲಾಗಿದೆ. ವಾಸ್ತವವಾಗಿ ಗಾಂಧಿ ಚಿಂತನೆಗಳ ಮೂಲಕ ಜಾತೀಯತೆ, ಅಸ್ಪøಶ್ಯತೆ, ಅಸಮಾನತೆ, ಲಿಂಗ ತಾರತಮ್ಯತೆ, ಅನಕ್ಷರತೆ, ಮೌಢ್ಯತೆಗಳನ್ನು ನಿವಾರಿಸುವ ದೊಡ್ಡ ಅಭಿಯಾನಗಳು ನಡೆಯಬೇಕಿತ್ತು. ಆದರ್ಶದ ಆರಾಧನೆಯಲ್ಲಿ ನಿಜವಾದ ಮೌಲ್ಯಗಳನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಲಾಗಿದೆ.

ಬಾಬಾಸಾಹೇಬ ಅಂಬೇಡ್ಕರ್ ಮತ್ತು ರಾಮಮನೋಹರ ಲೋಹಿಯಾ ಅವರು- ಗಾಂಧೀಜಿ ಬದುಕಿದ್ದಾಗಲೇ ಅವರನ್ನು ನಿಷ್ಠುರವಾದ ವಿಮರ್ಶೆಗೆ ಗುರಿಪಡಿಸುತ್ತಲೇ ತಮ್ಮ ನಿಲುವುಗಳನ್ನು ನಿರ್ಭಿಡೆಯಾಗಿ ಅಭಿವ್ಯಕ್ತಿಸುತ್ತಿದ್ದರು. ಇಂದು ಯಾವುದೇ ಬಗೆಯ ಚಿಂತನೆಗಳನ್ನು ನಿಕಷಕ್ಕೆ ಒಡ್ಡಿ ನೋಡುವ ಅಧ್ಯಯನಶೀಲ ಮನಸ್ಸುಗಳ ಅಗತ್ಯವಿದೆ. ಮೂಲಭೂತವಾದ, ಕೋಮುವಾದ ಮತ್ತು ಜಾತಿವಾದಗಳು ದೇಶದ ಅಭಿವೃದ್ಧಿ ಪಥದಲ್ಲಿ ದೊಡ್ಡ ಗೋಡೆಗಳಾಗಿ ನಿಂತಿವೆ. ಅದರಲ್ಲೂ ಈ ದೇಶದಲ್ಲಿ ಜಾತಿಗಳು ಮಾಡಿದಷ್ಟು ಗಾಯವನ್ನು ಬೇರೆ ಯಾವುದು ಮಾಡಿರಲಾರದು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಚಿಂತನೆಗಳನ್ನು ತಾತ್ವಿಕವಾಗಿ ಮತ್ತು ವಸ್ತುನಿಷ್ಠವಾಗಿ ನೋಡುವ ಅಗತ್ಯವಿದೆ. ಹಾಗಂತ ಗಾಂಧೀಜಿಯವರನ್ನು ಸಂಪೂರ್ಣವಾಗಿ ನಿರಾಕರಿಸಬೇಕಾಗಿಲ್ಲ ಹಾಗೂ ಅತಿಯಾದ ವೈಭವೀಕರಣವನ್ನೂ ಮಾಡಬೇಕಿಲ್ಲ.

ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...