Homeಮುಖಪುಟರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

ರಾಜ್ಯ ಅಲಿಯಾಸ್ ಪ್ರಭುತ್ವ ಅಂದರ ಏನಂತ ಗೊತ್ತೇನು? : ಸುದ್ದಿಯೇನೇ, ಮನೋಲ್ಲಾಸಿನಿ ಬೈ ಐ.ವಿ.ಗೌಲ್

- Advertisement -
- Advertisement -

ನಿಮ್ಮ ಫೋನಿನ ಹೃದಯದೊಳಗ ಇರೋ ವಾಟ್ಸಪ್ಪು ಯುನಿವರ್ಸಿಟಿಯೊಳಗ ನಿಮಗೊಂದು ಜೋಕು ಬಂದಿರಲಿಕ್ಕೇ ಬೇಕು. “ಈ ದೇಶದಾಗ ಒಂಬತ್ತು ಜನ ಅಪರಾಧಿಗಳು ತಪ್ಪಿಸಿಕೊಂಡರೂ ಸರಿ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಅಂತ ಒಂದು ಕಾನೂನು ಇದೆ. ಇಂತಹ ಬ್ರಿಟಿಷರು ಮಾಡಿದ ಕಾನೂನುಗಳನ್ನು ನಮಗೆ ಬೇಡ. ಇಂತಹ ಅನೇಕ ಕಾನೂನುಗಳನ್ನು ತಿದ್ದಲೆಂದೇ ನಾವು ಬಂದಿದ್ದೇವೆ” ಅಂತ.

ಇದನ್ನ ನೋಡಿದಾಗ ನಿಮಗೂ ಅನ್ನಿಸಿರಬಹುದು. ‘ಹೌದಲ್ಲಾ ಅ ಬ್ರಿಟಿಷ್ ನನ ಮಕ್ಕಳು ಏನೇನು ಮಾಡಿ ಹೋಗ್ಯಾರ. ಇದನ್ನೆಲ್ಲಾ ಬದಲಾಯಿಸಬೇಕು. ಅದಕ್ಕೊಬ್ಬ ಸೂಪರ್ ಹೀರೋ ಬೇಕು’ ಅಂತ. ಆದರ ಅದರ ಹಿಂದಿನ ತಥ್ಯವನ್ನು ನೋಡೋಣ.

ಭಾರತದ ಸಂವಿಧಾನದಾಗ 12 ನೇ ಕಲಂ ಅಂತ ಒಂದು ಮೂರು ಸಾಲಿನ ಒಂದು ಪ್ಯಾರಾ ಐತಿ.
ಅದೇನಪಾ ಅಂದರ ರಾಜ್ಯ ಅಂದರ ಏನು ಅನ್ನೋದರ ವ್ಯಾಖ್ಯಾನ.

ಸಂವಿಧಾನದ ಭಾಷಾದಾಗ ರಾಜ್ಯ ಅಂದ್ರ ಕರ್ನಾಟಕ, ತಮಿಳುನಾಡು, ಕಾಶ್ಮೀರ ಅಂತ ಅವ ಅಲ್ಲಾ, ಹಿಂತಾ ರಾಜ್ಯ ಅಲ್ಲ. ಅದರ ಪ್ರಕಾರ ರಾಜ್ಯ ಅಂದ್ರ ಅಕೆಡೆಮಿಕ್ ಭಾಷಾದಾಗ ಪ್ರಭುತ್ವ. ’ಹಂಗಂದರ ಏನು ಮತ್ತ ಎಲ್ಲಿ ಸಿಗತದ’ ಅಂತ ನೀವು ಜವಾರಿ ಭಾಷಾದಾಗ ಕೇಳಿದರ ಅದಕ್ಕ ನಿಮಗ 12ನೇ ಕಲಂ ನೋಡು ಅಂತ ಉತ್ತರ ಸಿಗಬಹುದು.

ಅದರ ಪ್ರಕಾರ ಸಂಸತ್ತು ಹಾಗೂ ರಾಜ್ಯ ಶಾಸನಸಭೆಗಳು ಪ್ರಭುತ್ವದಾಗ ಬರತಾವ. ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಭುತ್ವದಾಗ ಬರತಾವ. ಈವಲ್ಲದನ, ನಗರ ಸಭೆ, ಪಂಚಾಯಿತಿ ಮುಂತಾದ ಸ್ಥಳೀಯ ಸಂಸ್ಥೆಗಳನ್ನು ಸಹ ಇದರಾಗ ಕೂಡಿಸ್ಯಾರ. ಮಜಾ ಏನಂದರ ಸರಕಾರದ ಸಂಸ್ಥೆಗಳು ಅಥವಾ ಸರಕಾರದಿಂದ ನಿಯಂತ್ರಿತವಾದ ಸಂಸ್ಥೆಗಳು ಇವೆಲ್ಲವೂ ಪ್ರಭುತ್ವ ಎನ್ನಿಸಿಕೊಳ್ಳುತ್ತವೆ ಎನ್ನುವುದು ಇದರ ಸಾರಾಂಶ.

ಈ ಪ್ರಭುತ್ವದ ಮುಖ್ಯ ಕೆಲಸ ಏನಪಾ ಅಂದ್ರ ರಾಷ್ಟ್ರ ರಕ್ಷಣೆ, ಶಾಂತಿ ಕಾಪಾಡುವಿಕೆ, ನ್ಯಾಯ ನಿರ್ಣಯ, ಜನ ಕಲ್ಯಾಣ ಹಾಗೂ ದಿನನಿತ್ಯದ ಆಡಳಿತ. ಬರಬರತಾ ಸರಕಾರಗಳ ಕೆಲಸ ಜಾಸ್ತಿ ಆಗಿ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವ್ಯಾಪಾರ ವ್ಯವಹಾರ -(ಅದು ಸರಕಾರಿ ಸಂಸ್ಥೆ ಇರಬಹುದು ಅಥವಾ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆ ಪಾಲುದಾರಿಕೆ ಇರಬಹುದು) ದೊಳಗನ ಹೆಚ್ಚಿನ ಟೈಂ ಹೋಗಲಿಕ್ಕೆ ಹತ್ತೇದ. ಈಗಿನ ಕೇಂದ್ರ ಸರಕಾರ ಮಾತ್ರ ತಮ್ಮ ಕೆಲಸ ಬ್ಯಾರೆ ಏನೂ ಅಲ್ಲ, ಬರೇ ರಕ್ಷಣೆ ಒಂದ ಅಂತ ನಮಗ ಹೇಳಲಿಕ್ಕೆ ಹತ್ತೇದ. ಒಬ್ಬ ವಿದ್ಯಾರ್ಥಿ ಪರೀಕ್ಷೆಯೊಳಗ ಹತ್ತರೊಳಗ ಬರೇ ಒಂದ ಪ್ರಶ್ನೆ ಉತ್ತರ ಬರದು ನನಗ ಮೊದಲನೆ ದರ್ಜೆ ಕೊಡರಿ ಅಂತ ಹೇಳಿದಂಗ!. ಇರಲಿ ಅದು ಬೇರೆ.

ಹಿಂದಿನ ಕಾಲದ ಚಕ್ರವರ್ತಿಗಳಿಗೆ ಶಾಸನ ಮಾಡೋದು, ಜಾರಿ ಮಾಡೋದು, ಕಾನೂನು ಪಾಲಿಸದವರಿಗೆ ಶಿಕ್ಷಾ ಕೊಡೋದು ಇವೆಲ್ಲಾ ಅಧಿಕಾರ ಇತ್ತು. ಇತ್ತೋ ಅಥವಾ ಅವರಾಗೇ ತೊಗೊಂಡಿದ್ದರೋ ಅದು ಬ್ಯಾರೆ. ಆದರ ಆಧುನಿಕ ದಿನಮಾನದಾಗ ಇಂತಹ ಪ್ರಭುತ್ವಕ್ಕ ಮೂರು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಎಲ್ಲಾ ಶಕ್ತಿ ಕೊಡಬಾರದು ಅಂತ ಒಂದು ಥಿಯರಿ ಅದ. ಅದರ ಪ್ರಕಾರ ನಮ್ಮ ಜನಸತ್ತಾದೊಳಗ ಈ ಮೂರು ಜವಾಬ್ದಾರಿಗಳನ್ನು ಬೇರೆ ಬೇರೆ ಅಂಗಗಳಿಗೆ ಹಂಚ್ಯಾರ.

ಆದರೂ ಸರಕಾರಗಳು ಮೂರೂ ರೀತಿಯ ಅಧಿಕಾರಗಳನ್ನ ಬಳಸತಾವು. ಉದಾಹರಣೆಗೆ ಪೊಲೀಸರನ್ನು ನೇಮಕ ಮಾಡೋದು ಪ್ರಭುತ್ವ, ಅವರಿಗೆ ಕೆಲಸ ಹೇಳೋದು ಸರಕಾರ. ನ್ಯಾಯಾಲಯಗಳನ್ನು ಆರಂಭಿಸಿ, ನ್ಯಾಯಾಧೀಶರನ್ನು ನೇಮಿಸಿ ಅವರ ಮುಂದೆ ಕೇಸು ತೊಗೊಂಡು ಹೋಗೋದು ಪ್ರಭುತ್ವ. ಹಿಂಗಿದ್ದಾಗ ನ್ಯಾಯಾಲಯಗಳಲ್ಲಿ ಬರೇ ಸರಕಾರದ ದನಿ ಕೇಳಿ ಗರೀಬ ಆರೋಪಿತರ ದನಿ ಅಡುಗಿಹೋಗಬಾರದು ಅಂತ ಕೆಲವು ನಿಯಮ ಅವ. ಅವಕ್ಕ ಪ್ರಕ್ರಿಯಾ ಕಾನೂನು ಅಂತ ಹೆಸರು. ಉದ್ದೇಶದ ಜೊತೆ ಪ್ರಕ್ರಿಯಾನೂ ಸರಿ ಇರಬೇಕು ಅಂತ ಅದರ ನೇಮ.

ಅವು ಯಾಕ ಬೇಕಂದ್ರ ಸರಕಾರ ಅನ್ನೋದು ಸರ್ವಾಧಿಕಾರ ಆಗಬಾರದು ಅಂತ.

ಅದು ಯಾವಾಗ ಆಗಬಹುದಪಾ ಅನ್ನಲಿಕ್ಕೆ ಕೆಲವು ಉದಾಹರಣೆ ನೋಡೋಮು.

ಹರಿಯಾಣಾದ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ ಚೌಟಾಲಾ ಅವರ ಮೊಮ್ಮಗ ಅಜಯ ಚೌಟಾಲಾ ಅವರಿಗೆ ಎರಡು ವಾರದ ಸಜಾ ಕಾಲದ ರಜೆ ಸಿಕ್ಕದ. ಅದರ ಹಿಂದಿನ ದಿವಸ ಅಜಯ ಅವರ ಮಗ ದುಷ್ಯಂತ ಚೌಟಾಲಾ ಅವರು ಬಿಜೆಪಿಗೆ ಬೆಂಬಲ ಸೂಚಿಸಿ ಹಂಗಾಗಿದ್ದ ಹರಿಯಾಣಾ ವಿಧಾನಸಭೆಯನ್ನು ಹಂಗ ಮಾಡಿದ್ದರು. ಅದಕ್ಕೂ ಇದಕ್ಕೂ ಸಂಬಂಧ ಇರಬಹುದು ಅನ್ನುಕೊಳ್ಳುವುದು ಅಂದುಕೊಂಡವರ ಚಿತ್ತ. ಸಜಾ ಕಾಲದ ರಜೆ (ಫರಲೋ) ಹಾಗೂ ಸಜಾ ಕಾಲದ ಬಿಡುಗಡೆ ( ಪರೋಲ್) ಗೂ ಫರ್ಕು ಏನಪಾ ಅಂದರ ಫರಲೋ ಅನ್ನುವುದು ಒಬ್ಬ ಕೈದಿಯ ಹಕ್ಕು. ಪರೋಲ್ ಅನ್ನುವುದು ಹಕ್ಕಲ್ಲ. ಅದು ಸರಕಾರದ ಹಾಗೂ ನ್ಯಾಯಾಲಯದ ಚಿತ್ತ. ಜಂಬೂ ದ್ವೀಪದ ಮಹಾನ್ ನಾಯಕ ಸಂಜೂ ಬಾಬಾ ಅವರು ಸುಮಾರು 39 ಸರೆ ಫರಲೋ ಹಾಗೂ ಪರೋಲ್ ಸೌಭಾಗ್ಯ ಪಡೆದಿದ್ದರು. ಅವರು ಪಡೆದು ಬಂದವರು.

ಜನರ ಸಲುವಾಗಿ ಹೋರಾಟ ಮಾಡೋ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಅವರ ಬಂಧನ ಆಗೇದ. ಅವರನ್ನ 25 ವರ್ಷ ಹಳೆಯ ಕೇಸೊಂದರಲ್ಲಿ ಭಾಗಿಯಾಗಿದ್ದ ವಿನೋದ ಎನ್ನುವ ವ್ಯಕ್ತಿಯೆಂದರೆ ಇವನೇ ಅಂತ ಹೇಳಿ ರಾಯಚೂರು ಪೊಲೀಸರು ಹಿಡಕೊಂಡು ಹೋಗ್ಯಾರ. ಹಂಗಂತ ಅವರೇನು ಬೆಂಗಳೂರ ತನಾ ಬಂದು ಅವರನ್ನ ಹಿಡಕೊಂಡು ಹೋಗಿಲ್ಲ. ರಾಯಚೂರು ಕಾರ್ಯಕ್ರಮಕ್ಕ ಹೋದಾಗ ಪೊಲೀಸ್ ಟೇಸನಕ್ಕ ಬರ್ರಿ ಅಂತ ಹೇಳಿ ಕರಿಸಿಕೊಂಡು ಅರೆಸ್ಟು ಮಾಡ್ಯಾರ

ಬೆಂಗಳೂರಾಗ ಎಲ್ಲಾರ ಎದುರಿಗೆ ಖುಲ್ಲಂಖುಲ್ಲಾ ಓಡಾಡಿಕೊಂಡು ಇದ್ದ ಈ ಮನುಷ್ಯ 25 ವರ್ಷ ತಲೆ ಮರೆಸಿಕೊಂಡಿದ್ದ ಅಂತ ಪೊಲೀಸರು ಕತಿ ಹೇಳ್ಯಾರ. ಅದಕ್ಕ ಅವರಿಗೆ ಸರಿಯಾದ ಸಾಕ್ಷಿ ಇಲ್ಲ. ಅವರಿಗೆ ಇರೋ ಸಾಕ್ಷಿ ಅಂದರ ಒಬ್ಬ ಮಾಜಿ ಪೊಲೀಸ್ ಸಿಬ್ಬಂದಿಯ ನೆನಪಿನ ಶಕ್ತಿ. ಇದು ಭಾರತೀಯ ದಂಡಸಂಹಿತೆ ಹಾಗೂ ಸಂವಿಧಾನದ ಪ್ರಕಾರ ಲಾಗೂ ಆಗೋದಿಲ್ಲ. ಆದರೆ ಅದು ನ್ಯಾಯಾಧೀಶರ ಎದುರಿಗೆ ವಾದಕ್ಕ ಬಂದಾಗಿನ ಮಾತು. ಅಲ್ಲಿ ತನಕಾ ಸರಕಾರದ ಮಾತೇ ಸರಿ.

ಗುಜರಾತು ಪೊಲೀಸರು ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರನ್ನು 13 ತಿಂಗಳ ಹಿಂದೆ ಬಂಧಿಸಿದ್ದಾರೆ. ಅವರಿಗೆ ಇನ್ನೂ ಬೇಲು ಸಿಕ್ಕಿಲ್ಲ. ಅವರು 22 ವರ್ಷದ ಹಿಂದ ಪೊಲೀಸ ಅಧೀಕ್ಷಕರಾಗಿದ್ದಾಗ ತಮ್ಮ ವ್ಯಾಪ್ತಿಯಲ್ಲಿ ನಡೆದ ಪೊಲೀಸ್ ಅಧಿಕಾರಿಗಳ ಅಧಿಕಾರ ದುರ್ಬಳಕೆ ಪ್ರಸಂಗವೊಂದರಲ್ಲಿ ಅವರನ್ನು ಆರೋಪಿ ಅಂತ ಮಾಡ್ಯಾರ. ಮೂವತ್ತು ವರ್ಷ ಸಂವಿಧಾನ, ನ್ಯಾಯ ಪ್ರಕ್ರಿಯೆ, ಸರಕಾರಿ ಕಾನೂನುಗಳಿಗೆ ತಕ್ಕಂತ ನೌಕರಿ ಮಾಡಿದ ಮನಿಷಾಗ ಕಾನೂನಿನ ಬಗ್ಗೆ ನಂಬಿಕಿ ಇಲ್ಲಾ ಅಂತ ಹೇಳಿ ಸರಕಾರ ಅವರಿಗೆ ಬೇಲು ಕೊಡಿಸಿಲ್ಲ.

ಕಾರ್ಮಿಕ ಮುಖಂಡರಾದ ಸುಧಾ ಭಾರದ್ವಾಜ ಮತ್ತು 10 ಜನ ಜನನಾಯಕರನ್ನು ಒಳಗ ಹಾಕಿ 14 ತಿಂಗಳ ಆತು. ಅದರೊಳಗ ಒಬ್ಬರ ಮನಿಯೊಳಗ ’ವಾರ್ ಆಂಡ್ ಪೀಸ್’ ಅನ್ನೋ ಕಾದಂಬರಿ ಇತ್ತು ಅದು ಅಲ್ಯಾಕ ಇತ್ತು ಅನ್ನೋದು ಭಾರಿ ಸುದ್ದಿ ಆಗಿತ್ತು. ಇದರಾಗೂನು ಅವರ ವಿಚಾರಣೆ ಅನ್ನೋದು ಸುರೂನ ಆಗಿಲ್ಲ. ಅಧಿಕೃತವಾಗಿ ಸರಕಾರದ ತನಿಖೆ ಮುಗದೇ ಇಲ್ಲ.

ಪ್ರಭುತ್ವ ಅನ್ನುವುದು ಸರ್ವಾಧಿಕಾರ ಆಗಬಾರದು. ಯಾಕಂದ್ರ ಭಾರತದೊಳಗ ಆಳುವ ಪಕ್ಷ, ವಿರೋಧ ಪಕ್ಷ ಅಂತ ಯಾವೂ ಇಲ್ಲ. ಇಲ್ಲಿ ಇರೋದು ಇವತ್ತಿನ ಆಳುವ ಪಕ್ಷ, ನಿನ್ನೆಯ ಆಳುವ ಪಕ್ಷ ಹಾಗೂ ನಾಳೆಯ ಆಳುವ ಪಕ್ಷ ಅಂತ ಅಷ್ಟ. ಅವರು ಮಾಡ್ಯಾರ ಅಂತ ಇವರು ತಿನ್ನೋದು ಇವರಿಬ್ಬರೂ ಮಾಡ್ಯಾರ ಅಂತ ಮೂರನೆಯವರು ಮಾಡೋದು ಸರಿ ಅಲ್ಲ. ಇವತ್ತು ಆಳುವವರು ನ್ಯಾಯ ನಿಷ್ಟುರತೆ, ಪಾರದರ್ಶಕ ನೀತಿ ಹಾಗೂ ನಿಷ್ಪಕ್ಷಪಾತ ನಡೆ ಯನ್ನು ಪಾಲಿಸದಿದ್ದರೆ ನಾಳೆ ಬಂದವರೂ ಪಾಲಿಸಲಿಕ್ಕಿಲ್ಲ. ಆವಾಗ ಇವರು ಝಗಳಾ ತಗೀಲಿಕ್ಕೆ ಬರೋದಿಲ್ಲ. ನೀವು ಹಿಂಗ ಮಾಡಿದಿರಿ ಅಂದರ ನೀವು ಮಾಡಿಲ್ಲೇನು ಅಂತ ಅವರು ಅನ್ನಬಹುದು.
ಅದರ ಜನರಿಗೆ ಇವು ಯಾವುವೂ ಬ್ಯಾಡ. ಸಮಾನತೆ ಹಾಗೂ ಶಾಂತಿ ಬೇಕು. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...