HomeUncategorizedಬೀದಿ ನಾಟಕ; ಕತ್ತಿ ಯಾವುದಾದರೇನು?: ಪ್ರೊ. ಶಿವರಾಮಯ್ಯ

ಬೀದಿ ನಾಟಕ; ಕತ್ತಿ ಯಾವುದಾದರೇನು?: ಪ್ರೊ. ಶಿವರಾಮಯ್ಯ

- Advertisement -
- Advertisement -

ದೃಶ್ಯ-ಒಂದು
ರೈತ ಯುವಕ ಯುವತಿಯರು ಎರಡು ಗುಂಪುಗಳು ಎದುರುಬದುರಾಗಿ ಕುವೆಂಪು ’ರೈತನ ದೃಷ್ಟಿ’ ಕವನದ ನಾಟ್ಯಾಭಿನಯ ಮಾಡುತ್ತಿರುತ್ತಾರೆ.
ಗುಂಪು-1: ಕರಿಯರದೊ ಬಿಳಿಯರದೊ ಯಾರದಾದರೇನು? ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ! (ನಿರ್ಗಮನ)
ಗುಂಪು-2: ವಿಜಯನಗರವೊ? ಮೊಗಲರಾಳ್ವಿಕೆಯೊ? ಇಂಗ್ಲಿಷರೊ? ಎಲ್ಲರೂ ಜಿಗಣಿಗಳೆ ನನ್ನ ನೆತ್ತರಿಗೆ! (ನಿರ್ಗಮನ)
ಗುಂಪು-1+2: ಕತ್ತಿ ಪರದೇಶಿಯದಾದರೆ ಮಾತ್ರ ನೋವೆ? ನಮ್ಮವರೆ ಹದ ಹಾಕಿ ತಿವಿದರದು ಹೂವೆ? (ನಿರ್ಗಮನ)
ಗುಂಪು-1: ಸೋಮಾರಿಗಳಿಗೆ ಸುಖಿಗಳಿಗೆ ರಸಿಕರಿಗಲ್ತೆ ಸ್ವರಾಜ್ಯವೆಂಬುದದು ಕಾಮಧೇನು? (ನಿರ್ಗಮನ)
ಗುಂಪು-2: ನೃಪ ಎಂಬ ಹೆಸರೊಡನೆ ಮುಡಿಯೊಂದನಾಂತೊಡನೆ ಕಳ್ಳರೊಡೆಯನು ಕೃಪೆಯ ಮೂರ್ತಿಯೇನು? (ನಿರ್ಗಮನ)
ಗುಂಪು-1+3: ತಿಂದುಂಡು ಮೆರೆವವರ ಮೆರವಣಿಗೆಗಾನು ಬಾಯ್ದೆರೆದು ನೋಳ್ಪ ಬೆಪ್ಪಾಗಬೇಕೇನು? (ನಿರ್ಗಮನ)
ಗುಂಪು-1: ಹರಕೆ ಯಾರದೊ? ಹಬ್ಬವಾರಿಗೊ? ಅದಾವಗಂ ಸಾಮ್ರಾಜ್ಯಕಾಳಿಗಾನಲ್ತೆ ಕುರಿ ಕೊಲೆಗೆ? (ನಿರ್ಗಮನ)
ಗುಂಪು-2: ಕುಯ್ಗಿರಿಯನೆಂತಂತೆ ಸಾವು ಬದುಕಿನ ನಡುವೆ ಕರುಣೆ ಗರಗಸದಿಂದೆ ಸೀಳುವರು ಬೆಲೆಗೆ. (ನಿರ್ಗಮನ)
ಗುಂಪು-1: ನೇಗಿಲಿನ ಮೇಲಾಣೆ! ಬಸವಗಳ ಮೇಲಾಣೆ! ನೆತ್ತರಿಲ್ಲದೆ ಸುಕ್ಕಿ ಸೊರಗಿದೆನ್ನಾಣೆ! (ನಿರ್ಗಮನ)
ಗುಂಪು-2: ಸಾಮ್ರಾಜ್ಯ ಶೂರ್ಪನಖಿ ಮೋಹಿನಿಯ ರೂಪಕ್ಕೆ ಮರುಳಾಗಗೆನೆಂದಿಗೂ, ಸೀತೆ ಮೇಲಾಣೆ! (ನಿರ್ಗಮನ)
ಗುಂಪು-1 : ಬಡತನದ ಗೊಬ್ಬರವನುದಿನಂ ಹೀರಿ ಹಿಡಿಸದೋ ಸಾಮ್ರಾಜ್ಯ ಸಿರಿಯ ಕಸ್ತೂರಿ! (ನಿರ್ಗಮನ)
ಗುಂಪು-2: ಸಾಕೆನಗೆ, ಸಾಕಯ್ಯ, ಸಾಮ್ರಾಜ್ಯ ಪೂಜೆ: ಸಿಡಿಮದ್ದಿನಕ್ಷತೆಗೆ ಗುಂಡು ಚರೆ ಲಾಜೆ! (ನಿರ್ಗಮನ)
ಗುಂಪು-1+2 : ಕತ್ತಿಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ?
ಎರಡೂ ಗುಂಪುಗಳೊಂದಿಗೆ ಮತ್ತಷ್ಟು ರೈತರು, ಮಹಿಳೆಯರು, ಮಕ್ಕಳು, ಮುದುಕರು ಒಟ್ಟಾಗುವರು
ಗುಂಪು-1: ಮುಂದೇನು ಮಾಡುವುದೊ ಅಣ್ಣಾ?
ಗುಂಪು-2: ರಾಜಧಾನಿ ಮುತ್ತಿಗೆಯೊ ತಮ್ಮಾ!
ಗುಂಪು-1: ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಮಸೂದೆ-2020ಅನ್ನು ರದ್ದುಗೊಳಿಸಬೇಕು.
ಗುಂಪು-2: ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆಯನ್ನೂ..
ಗುಂಪು-1: ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ-2020ಅನ್ನೂ…
ಗುಂಪು-2: ಸರ್ಕಾರ ಬೇಷರತ್ತಾಗಿ ಹಿಂತೆಗೆದುಕೊಳ್ಳಬೇಕು.
ಗುಂಪು-1: ಯಾಕೆಂದರೆ, ಕೇಂದ್ರ ಸರ್ಕಾರ ಮಾಡಿರುವುದೇನು ಗೊತ್ತಾಯಿತಾ?
ಗುಂಪು-2: ಸರ್ಕಾರ ಎಪಿಎಂಸಿ ವ್ಯವಸ್ಥೆಯನ್ನೇ ಸಂಪೂರ್ಣ ಮುಚ್ಚುವಂತೆ ಮಾಡುವ ತಿದ್ದುಪಡಿ ತಂದಿದೆ ಅಲ್ವಾ?
ಗುಂಪು-1: ಎಪಿಎಂಸಿ ವ್ಯವಸ್ಥೆಗೆ ಬದಲಾಗಿ ಶ್ರೀಮಂತ ಬಂಡವಾಳಗಾರರಿಗೆ ಮಂಡಿಗಳ ಸ್ಥಾಪನೆಗೆ ಅವಕಾಶ ಮಾಡಿ ಕೊಟ್ಟಿದೆ ತಮ್ಮಾ.
ಗುಂಪು-2: ಈಗಿರುವ ಕಾಯ್ದೆಯಲ್ಲಿ ಎಪಿಎಂಸಿ ವ್ಯವಹಾರದ ಮೇಲೆ ತೆರಿಗೆ ಮತ್ತು ಶುಲ್ಕ ವಿಧಿಸುವ ಹಕ್ಕು ಸರ್ಕಾರಕ್ಕಿತ್ತಲ್ಲಾ?
ಗುಂಪು-1: ಹೌದು, ಆದರೆ ಹೊಸ ಕಾಯ್ದೆಯಲ್ಲಿ ಖಾಸಗಿ ಮಂಡಿಗಳಿಗೆ ಶುಲ್ಕ ವಿಧಿಸುವುದಿಲ್ಲವಂತೆ.
ಗುಂಪು-2: ಅವರಿಗೆ ತೆರಿಗೆ ಮತ್ತು ಶುಲ್ಕ ವಿನಾಯಿತಿಯನ್ನೂ ನೀಡಿದೆಯಂತೆ.
ಗುಂಪು-1: ಇದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಖಾಸಗಿಯವರಿಗೆ ಲಾಭ ಮಾಡಿಕೊಡುತ್ತದೆಯಲ್ಲವೆ ಅಣ್ಣಾ?
ಗುಂಪು-2: ಯಾಕ್ಹಿಂಗ್ ಮಾಡ್ತರೋ ಅಣ್ಣಾ?
ಗುಂಪು-1: ಯಾಕೆಂದರೆ, ಖಾಸಗಿ ಕಂಪನಿಗಳು ಆರಂಭದಲ್ಲಿ ನಮ್ಮ ಉತ್ಪನ್ನಗಳಿಗೆ ಹೆಚ್ಚು ಬೆಲೆ ನೀಡುತ್ತವೆ ನಿಜ. ಆಗ ನಾವು ಅವರಿಗೇ ಮಾರುತ್ತೇವೆ.
ಗುಂಪು-2: ಆಗ ಎಪಿಎಂಸಿಗಳು ಬಾಗಿಲು ಮುಚ್ಚಿಕೊಳ್ಳುತ್ತವೆ. ಏನಂತಿಯಾ?
ಗುಂಪು-1: ಆಮೇಲೆ ಖಾಸಗಿ ಕಂಪನಿಗಳ ಮತ್ತು ಬೃಹತ್ ಕಂಪನಿಗಳ ಆಟ ಶುರುವಾಗುತ್ತದೊ ತಮ್ಮಾ!
ಗುಂಪು-2: ಕ್ರಮೇಣ ಕಂಪನಿಗಳು ತಮ್ಮ ಕೊಳ್ಳುವ ಬೆಲೆಯನ್ನು ಇಳಿಸುತ್ತವೆ. ಹೆಚ್ಚಿನ ಬೆಲೆಗೆ ಮಾರಿ ತಮ್ಮ ಲಾಭವನ್ನೂ ಹೆಚ್ಚಿಸಿಕೊಳ್ಳುತ್ತವೆ.
ಗುಂಪು-1+2: ಆಗ ನಾವು ಅನಿವಾರ್ಯವಾಗಿ ಖಾಸಗಿ ಕಂಪನಿಗಳಿಗೆ ನಮ್ಮ ಉತ್ಪನ್ನಗಳನ್ನು ಮಾರಬೇಕಾಗುತ್ತದೆ ಅಲ್ವೇನಣ್ಣಾ?
ಗುಂಪು-1: ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತದೆ ಎಂದು ಹೇಳ್ತಾ ಇದಾರಲ್ಲಣ್ಣಾ..
ಗುಂಪು-2: ಹೌದು, ಕನಿಷ್ಠ ಬೆಂಬಲ ಬೆಲೆಯೂ ಸಿಗುತ್ತದೆ ಎಂದು ಸರ್ಕಾರ ಬಾಯಿಮಾತಿನಲ್ಲಿ ಹೇಳುತ್ತಿದೆ ಅಷ್ಟೇ.
ಗುಂಪು-1+2: ಹಾಗಾದರೆ ಬೆಂಬಲ ಬೆಲೆ ರದ್ದಾಗದು ಎಂದು ಲಿಖಿತ ವಾಗ್ದಾನ ನೀಡಲ್ಲ ಯಾಕೆ ಈ ಸರ್ಕಾರ?
ಗುಂಪು-1: ಸಮಸ್ಯೆಯ ಕೇಂದ್ರ ಬಿಂದು ಇದೇ ಕಣಣ್ಣಾ! ಬೆಂಬಲ ಬೆಲೆ ರದ್ದಾಗದು ಎಂದು ಒಂದು ಸಾಲು ಸೇರಿಸುತ್ತಿಲ್ಲ ಯಾಕೆ?
ಗುಂಪು-2: ಯಾಕೆಂದರೆ ಅಷ್ಟೂ ಗೊತ್ತಿಲ್ಲವೆ ಸರ್ಕಾರಕ್ಕೆ? ಲಿಖಿತ ವಾಗ್ದಾನ ಕೊಟ್ಟರೆ ನಾವು ಕೋರ್ಟಿಗೆ ಹೋಗಿರುತ್ತೇವೆ ಎಂದು.
ಗುಂಪು-1: ಕಾಗೆ ಬಾಯಿಂದ ಮಾಂಸದ ಚೂರು ಕಸಿಯಲು ಹೊಗಳುವ ಈ ನರಿ ಬುದ್ಧಿ ನಮಗೇನು ಅರ್ಥವಾಗುವುದಿಲ್ಲವೆ?
ಗುಂಪು-2: ಒಂದೆಡೆ ಅನ್ನದಾತ, ನೇಗಿಲಯೋಗಿ ಎಂದೆಲ್ಲಾ ಹೊಗಳುವುದು.
ಗುಂಪು-1: ಇನ್ನೊಂದೆಡೆ ಅವನ ರಕ್ತ ಹೀರುವುದು! ಇದೆಂಥ ರೈತಪರ ಸರ್ಕಾರವೊ?
ಗುಂಪು-1+2: ಈ ಕಾಯ್ದೆ ಜಾರಿಯಾದರೆ ಕೆಲವೇ ವರ್ಷಗಳಲ್ಲಿ ರೈತರಿಗೆ ನೀಡಲಾಗುತ್ತಿದ್ದ ಬೆಂಬಲ ಬೆಲೆಯೂ ತಾನೇ ತಾನಾಗಿ ರದ್ದಾಗುತ್ತದೆ.
ಗುಂಪು-1: ಪಡಿತರ ವ್ಯವಸ್ಥೆ ನಿಯಮವೂ ಹೋಗುತ್ತದೆಯಂತೆ.
ಗುಂಪು-2: ಜತೆಗೆ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟದ ವ್ಯವಸ್ಥೆಯೂ ನಿಂತು ಹೋಗುತ್ತದೆ. ಅಷ್ಟೇ ಅಲ್ಲ ಬಡವರ ಮಕ್ಕಳ ಓದುವ ಹಕ್ಕು ಸಹ ಇಲ್ಲವಾಗುತ್ತದೆ.
ಗುಂಪು-1+2: ಒಟ್ಟಿನಲ್ಲಿ ದೇಶದಲ್ಲಿ ರೈತರು, ಬಡವರು ಮತ್ತಷ್ಟು ಶೋಷಣೆಗೆ ಒಳಗಾಗುತ್ತಾರೆ ತಾನೆ?
ಗುಂಪು-1: ಹಾಗಾದರೆ ಯಾರಿಗೆ ಬಂತು ಸ್ವರಾಜ್ಯ?
ಗುಂಪು-2: ಕಾರ್ಪೊರೆಟ್ ಕಂಪನಿಗಳಿಗೆ ಬಂತು ಸ್ವರಾಜ್ಯ.
ಗುಂಪು-1+2: ಎಪಿಎಂಸಿ ಅಧಿಕಾರಿಗಳನ್ನು, ದಲ್ಲಾಳಿಗಳನ್ನು, ವರ್ತಕರನ್ನು ಕಂಟ್ರೋಲ್ ಮಾಡಲಾರದ ಸರ್ಕಾರ ’ನೆಗಡಿ ಬಂದರೆ ಮೂಗು ಕತ್ತರಿಸಿದರು’ ಎಂಬಂತೆ ವರ್ತಿಸುತ್ತಿದೆ. ಆದ್ದರಿಂದ ಈ ಕಾಯ್ದೆಗಳೇ ರದ್ದಾಗಬೇಕು.
ಗುಂಪು-1: ಬೆಲೆ ಖಾತರಿ ಮತ್ತು ಸೇವಾ ಒಪ್ಪಂದ ಕಾಯ್ದೆ ರದ್ದಾಗಬೇಕು.
ಗುಂಪು-2: ಯಾಕೆಂದರೆ ಮುಕ್ತ ಮಾರುಕಟ್ಟೆಯಲ್ಲಿ ರೈತರ ಕೃಷಿ ವಲಯದಲ್ಲಿ ಕಾರ್ಪೊರೆಟ್ ಹೂಡಿಕೆಗೆ ಬಲ ಒದಗಿಸುತ್ತದೆ.
ಗುಂಪು-1: ಸುಗ್ಗಿಯ ಕಾಲದಲ್ಲಿ ಬೆಲೆಗಳ ಏರಿಳಿತಗಳಿಂದ ರೈತರಿಗೆ ಇದು ರಕ್ಷಣೆ ಕೊಡುತ್ತದೆ ಎನ್ನಲಾಗಿದೆ.
ಗುಂಪು-2: ಆದರೆ ಇದು ಖಾಸಗಿ ಕಂಪನಿಗಳಿಗೆ ಹೆಚ್ಚು ಬೆಂಬಲ ಕೊಡುವ ಕಾಯ್ದೆಯೇ ಆಗಿದೆ.
ಗುಂಪು-1+2: ಕಂಪನಿಗಳ ವಂಚನೆಯ ವಿರುದ್ಧ ನಮಗೆ ಅಗತ್ಯ ಸುರಕ್ಷಾ ಕ್ರಮಗಳಿಲ್ಲ. ಕಂಪನಿಗಳ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ.
ಗುಂಪು-1: ಅಗತ್ಯ ವಸ್ತುಗಳ ಖರೀದಿ, ಸಾಗಾಣೆ ಮತ್ತು ದಾಸ್ತಾನಿನ ಮೇಲೆ ಇದ್ದ ನಿರ್ಬಂಧ ರದ್ದು ಆಗುವುದಿಲ್ಲವಂತೆ?
ಗುಂಪು-2: ಇದರಿಂದ ಕಾರ್ಪೊರೆಟ್ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದಾಗಿದೆ.
ಗುಂಪು-1+2: ಆದ್ದರಿಂದ ನಾವು ಈ ಮೂರೂ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತೇವೆ. ಅಲ್ಲಿವರೆಗೆ ನಮ್ಮ ಮುತ್ತಿಗೆಯನ್ನು ಎತ್ತುವುದಿಲ್ಲ. (ಧರಣಿ ಕೂರುವರು)
– ತೆರೆ –

ದೃಶ್ಯ – ಎರಡು

ಪುನಃ ಹಾಡು : ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?

ಕಾರ್ಮಿಕರ ಒಕ್ಕೂಟ ಗುಂಪುಗುಂಪಾಗಿ ರಂಗ ಪ್ರವೇಶ.
ಗುಂಪು-1: ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಖಾಸಗಿ ಕಂಪನಿಗಳಿಗೆ ಬಿಟ್ಟುಕೊಡಬಾರದು.
ಗುಂಪು-2: ಖಾಸಗಿ ಕಂಪನಿಗಳು ಲಾಭಕೋರತನದಿಂದ ಕಡಿಮೆ ವೇತನಕ್ಕೆ ನಮ್ಮಿಂದ ಹೆಚ್ಚು ದುಡಿಸಿಕೊಳ್ಳುತ್ತವೆ.
ಗುಂಪು-1: ಕಾರ್ಮಿಕರ ಜೀವವಿಮಾ ರಕ್ಷಣೆಗೆ ಸೂಕ್ತ ಕಾನೂನಿಲ್ಲ.
ಗುಂಪು-2: ಬಡ್ತಿ ನಿಯಮಗಳನ್ನು ಪಾಲಿಸುವುದಿಲ್ಲ.
ಗುಂಪು-1+2: ಉದ್ಯೋಗ ಮೀಸಲಾತಿಗೆ ಅವಕಾಶವೇ ಇಲ್ಲ. ಸಾಮಾಜಿಕ ನ್ಯಾಯ ಕೇಳುವಂತೆಯೇ ಇಲ್ಲ.
ಗುಂಪು-1: ಗುತ್ತಿಗೆದಾರ ಕಂಪನಿ ಮಾಲೀಕ ಷರೀಕಾಗಿ ಬಡ ಕಾರ್ಮಿಕರ ಜೀವ ತೆಗೀತಾರೆ. ಜೀತ ತಪ್ಪಿದ್ದಲ್ಲ.
ಗುಂಪು-2: ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದಾಗಲಿ.
ಗುಂಪು-1+2: ಖಾಸಗೀಕರಣ ಬೇಡ, ರಾಷ್ಟ್ರೀಕರಣ ಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಮೂರು

ಹಾಡು : ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ಮಹಿಳೆಯರು ಗುಂಪು ಗುಂಪಾಗಿ ಪ್ರವೇಶ
ಕೈಯಲ್ಲಿ ಸತ್ತ ಗಂಡಂದಿರ-ಮಕ್ಕಳ ಚಿತ್ರಪಟಗಳು ಇವೆ.
ಗುಂಪು-1: ನಮಗೆ 50:50 ಅನುಪಾತದಲ್ಲಿ ಉದ್ಯೋಗಾವಕಾಶ ಬೇಕು.
ಗುಂಪು-2: ಭೂಮಿಯ ಒಡೆತನ 50:50 ಅನುಪಾತದಲ್ಲಿರಬೇಕು.
ಗುಂಪು-1: ರೈತ ಹೋರಾಟದಲ್ಲಿ ವಯಸ್ಸಾದ ಮಹಿಳೆಯರನ್ನು ಮನೆಗೆ ಹಿಂತಿರುಗುವಂತೆ ಮನವೊಲಿಸಿ.
ಗುಂಪು-2: ಇಲ್ಲವಾದರೆ ಈ ಸಂಬಂಧ ಆದೇಶ ನೀಡಬೇಕಾದೀತು.
ಗುಂಪು-1+2: ನ್ಯಾಯಾಲಯದ ಈ ಸಲಹೆ ನಮ್ಮ ಅಸ್ಮಿತೆಗೆ ಮಾಡಿದ ಅವಮಾನ ಅಲ್ಲವೇ ಅಕ್ಕಾ?
ಗುಂಪು-1: ನಮ್ಮ ಮಕ್ಕಳು ಅತ್ತ ಗಡಿ ಕಾಯುತ್ತಿದ್ದಾರೆ.
ಗುಂಪು-2: ಇತ್ತ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಗುಂಪು-1: ರೈತ ಹೋರಾಟದಲ್ಲಿರುವ ಮಹಿಳೆಯರು ಕೂಲಿ ಹೋರಾಟಗಾರರೇ ಅಲ್ಲ ಎಂದು..
ಗುಂಪು-2: ತುತ್ತೂರಿ ಊದುವ ಮಾಧ್ಯಮದವರೇ…
ಗುಂಪು-1: ನೀವೇನು ಉತ್ತಿದ್ದೀರಾ? ಬಿತ್ತಿದ್ದೀರಾ?
ಗುಂಪು-2: ಕಳೆ, ಕೊಯ್ಲು ಮಾಡಿ ಒಕ್ಕಿದ್ದೀರಾ?
ಗುಂಪು-1+2: ನಾವು ಮನೆಗೆ ಹೋಗಬೇಕೆ? ತಾಕತ್ತಿದ್ದರೆ ನಮ್ಮನ್ನು ಹಿಂತಿರುಗಿಸಿ.. ರೈತ ವಿರೋಧಿ ಮೂರೂ ಕಾಯ್ದೆಗಳು ರದ್ದಾಗಬೇಕು.
(ಧರಣಿ ಕೂರುವರು)
-ತೆರೆ –

ದೃಶ್ಯ – ನಾಲ್ಕು
ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ರೈತ, ಕಾರ್ಮಿಕ, ಮಹಿಳಾ ಒಕ್ಕೂಟ ನಾಯಕರ ಪ್ರವೇಶ.
ತಂಡ-1: ರೈತ ವಿರೋಧಿ ಮಸೂದೆಗಳು ಕೊರೊನಾ ಲಾಕ್‌ಡೌನ್‌ನಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ ಹಿಂದಿರುವ ರಾಜ ರಹಸ್ಯವೇನು ತಮ್ಮಾ?
ತಂಡ-2: ಅಷ್ಟೂ ಗೊತ್ತಾಗಲ್ವಾ ಅಣ್ಣಾ? ಯಾಕೆಂದ್ರೆ-ಲಾಕ್‌ಡೌನ್‌ನಲ್ಲಿ ಎಲ್ಲ ಬಾಯಿಗೆ ಮಾಸ್ಕ್ ಹಾಕಿರುತ್ತಾರೆ, ಹೋರಾಟಕ್ಕೆ ಹೊರಗೆ ಬರಲಾರರೆಂದಲ್ವಾ?
ತಂಡ-1+2: ಸರ್ಕಾರ ನಮ್ಮನ್ನು ಅಜ್ಞಾನಿಗಳು ಎಂದೇ ಭಾವಿಸಿದಂತಿದೆ ತಮ್ಮಾ – ನಾವು ಮುಷ್ಕರ ಹೂಡಿ ವರ್ಷ ಕಳಿತಾ ಬಂತು. ನಮ್ಮ ಹತ್ತಿರ ಯಾರೂ ಬರಲಿಲ್ಲ. ನಾವೆಂದರೆ ಅಷ್ಟು ಅಸಡ್ಡೆ ನಮ್ಮ ಪ್ರಧಾನಿಗೆ.
ತಂಡ-1: ಅಕ್ಕಂದಿರಾ, ತಂಗೀರಾ, ಈಗ ನಮಗೂ ನ್ಯಾಯ ಯಾವ್ದು? ಅನ್ಯಾಯ ಯಾವ್ದು? ಅಂತ ತಿಳಿಯುತ್ತದೆ.

ತಂಡ-2: ಸಂಸತ್ತಿನಲ್ಲಿ ಚರ್ಚೆ ಆಗಬೇಡವೇ, ಅಣ್ಣಾ?
ತಂಡ-1+2: ಕಾಟಾಚಾರಕ್ಕೆ ಆಮೇಲೆ ಮಾಡಿದರಲ್ಲ ತಮ್ಮಾ?
ತಂಡ-1: ನಮಗೆ ಬೇಡಾದರೆ ಹಿಂಪಡೆಯುವುದಕ್ಕೇನು ಅಡ್ಡಿ ಇವರಿಗೆ?
ತಂಡ-2: ಬಂಡವಾಳಿಗ ಕಾರ್ಪೊರೆಟ್ ಕಂಪನಿಗಳ ಕೈಗೊಂಬೆ ಸರ್ಕಾರಕ್ಕೆ ಸುಗ್ರೀವಾಜ್ಞೆ ಅಲ್ಲದೆ ಬೇರೆ ದಾರಿ ಇಲ್ಲ ತಮ್ಮಾ.
ತಂಡ-1+2: ನಮ್ಮ ಸಂಸದರು ಸಚಿವರು ರೈತ ಪರ ಅಂತ ಹೇಳಿಯೇ ಹೇಳ್ತಾರೆ, ಅವರೇನು ಮಾಡ್ತಾರೆ ಅಲ್ಲಿ?
ತಂಡ-1: ಮೊಸಳೆ ಕಣ್ಣೀರು ಹಾಕಿದಂತೆ ಮಾಡಿ ಕೂತಿರುತ್ತಾರೆ. ನಮಗಿಂತ ಅವರಿಗೆ ಪಕ್ಷ ನಿಷ್ಠೆಯೇ ಹೆಚ್ಚು.
ಗುಂಪು-2: ಸುಗ್ರೀವಾಜ್ಞೆಗೆ ಮೊದಲು ರೈತ ಪ್ರತಿನಿಧಿಗಳೊಡನೆ ಮಾತಾಡಬಹುದಿತ್ತಲ್ವಾ?
ಗುಂಪು-1+2: ನಮ್ಮನ್ನೇನು ಕೇಳೊದು ಅಂತ ಉಪೇಕ್ಷೆ ಸರ್ಕಾರಕ್ಕೆ, ಅಲ್ವಾ ತಮ್ಮಾ?
ಗುಂಪು-1: ಕೋಳಿ ಕೇಳಿ ಮೆಣಸು ಅರಿತಾರೇನಣ್ಣಾ? ಹಂಗಾ?
ಗುಂಪು-2: ಹಾಗೇ ಆಯ್ತೋ ತಮ್ಮಾ..
ತಂಡ-1+2: ಬಹುಮತ ಇದ್ದಾಗ ಈ ಹಮ್ಮು ಬಿಮ್ಮು ಸಹಜ ತಾನೇ? ಹಾಗೆ ಮಾಡಿದ್ದು ನಮ್ದೇ ತಪ್ಪು ಕಣಪ್ಪೊ!
ಗುಂಪು-1: ಈ ಸರ್ವಾಧಿಕಾರಿ ಧೋರಣೆಗೆ.. ಧಿಕ್ಕಾರ! ಪರಿಸರ ಪರ, ರೈತ ಪರ, ಕಾರ್ಮಿಕರ ಪರ ದನಿ ಎತ್ತಿದ ನೌದೀಪ್ ಕೌರ್, ದಿಶಾರವಿ ಅಂತ ಮಹಿಳೆಯರ ಮೇಲೆ ’ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಎಫ್‌ಐಆರ್ ಹಾಕಿ ದೇಶದ್ರೋಹದ ಆಪಾದನೆ ಹೊರಿಸಿ ಜೈಲಿಗಟ್ಟುವುದು ಇನ್ನು ಮುಂದೆ ನಿಲ್ಲಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಐದು

ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?

ವಿದ್ಯಾರ್ಥಿ ಯುವಜನ ತಂಡಗಳು
ತಂಡ-1: ನಮಗೆ ಬೇಕೇ ಬೇಕು.
ತಂಡ-2: ಉದ್ಯೋಗ ಬೇಕು.
ತಂಡ-1: ಎಲ್ಲಿಗಂಟ ಹೋರಾಟ?
ತಂಡ-2: ಉದ್ಯೋಗ ಖಾತ್ರಿ ಆಗತನಕ ಹೋರಾಟ!
ಸಾಹಿತಿ ಕಲಾವಿದರ ತಂಡಗಳು.
ತಂಡ-1: ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಬೇಕು. ಇದು ಸಂವಿಧಾನದತ್ತ ಹಕ್ಕು.
ತಂಡ-2: ಎಲ್ಲಿತನಕ ಹೋರಾಟ?
ತಂಡ 1+2: ಅಭಿವ್ಯಕ್ತಿ ಸ್ವಾತಂತ್ರ್ಯ ಸಿಕ್ಕೋ ತನಕ ಹೋರಾಟ!
ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ತಂಡಗಳು.
ತಂಡ-1: ಸಾಮಾಜಿಕ ನ್ಯಾಯಕ್ಕೆ ದನಿ ಎತ್ತಿದರೆ ಜೈಲುವಾಸ ತಪ್ಪಬೇಕು.
ತಂಡ-1+2: ನಾವು ಭಾರತೀಯರು, ನಾವು ವಲಸಿಗರಲ್ಲ.
ತಂಡ-1: ಇಲ್ಲಿ ಹುಟ್ಟಿ ಇಲ್ಲೇ ಮಡಿವೆವು ನಾವು.
ತಂಡ-1+2: ಅಲ್ಪಸಂಖ್ಯಾತರ ವರದಿಗಳು ಜಾರಿಯಾಗಬೇಕು.
ತಂಡ-1: ಶಿಕ್ಷಣದಲ್ಲಿ ಮೀಸಲಾತಿ ಬೇಕು.
ತಂಡ-2: ಉದ್ಯೋಗದಲ್ಲಿ ಮೀಸಲಾತಿ ಬೇಕು.
ತಂಡ-1+2: ಇದು ಸಂವಿಧಾನಬದ್ಧ ಹಕ್ಕು ಭಿಕ್ಷೆ ಅಲ್ಲ.
ದಲಿತ ಸಂಘಟನೆಗಳ ತಂಡ
ತಂಡ-1: ಸಂವಿಧಾನಬದ್ಧ ಮೀಸಲಾತಿ ನಮ್ಮ ಹಕ್ಕು.
ತಂಡ-2: ಅಪ್ರಸ್ತುತ ಆದರೆ ನಾವು ಬಿಡುವುದಿಲ್ಲ.
ತಂಡ-1+2: ನಮ್ಮ ಹಕ್ಕುಗಳಿಗಾಗಿ ನಾವು ಕೊನೆಯವರೆಗೂ ಹೋರಾಡುತ್ತೇವೆ.
ಮಹಿಳಾ ತಂಡ
ತಂಡ-1: ನಮ್ಮ ಮೇಲಿನ ಅತ್ಯಾಚಾರ, ದೌರ್ಜನ್ಯ, ಅವಮಾನ,
ತಂಡ-2: ನಿಲ್ಲಬೇಕು, ನಿಲ್ಲಬೇಕು
ತಂಡ-1+2: ಸಂಬಂಧಪಟ್ಟ ಸರ್ಕಾರಗಳನ್ನೇ ಹೊಣೆ ಮಾಡಬೇಕು.
(ಧರಣಿ ಕೂರುವರು)
– ತೆರೆ –

ದೃಶ್ಯ – ಆರು
ಹಾಡು: ಕತ್ತಿ ಯಾವುದಾದರೇನು? ನಮ್ಮವರೆ ಹದಹಾಕಿ ತಿವಿದರದು ಹೂವೆ?
ನಾಗರಿಕರ ತಂಡಗಳು
ತಂಡ-1: ಪೆಟ್ರೋಲ್ ದರ ಏರುತ್ತಲೇ ಇದೆ.
ತಂಡ-2: ಲೀಟರ್‌ಗೆ ನೂರು ರೂಪಾಯಿ ಆಯ್ತಲ್ಲಾ ಸಾರ್!
ತಂಡ-1+2: ಕಾರ್ಪೊರೆಟ್ ಕಂಪನಿಗಳ ಲಾಭಕೋರತನ..
ತಂಡ-2: ಅಧಿಕಾರಿ ವರ್ಗದ ಲಂಚಕೋರತನ..
ತಂಡ-1+2: ಸಾಬೀತಾದರೆ ಶಿಕ್ಷೆಯಾಗಬೇಕು – ಶಿಕ್ಷೆಯಾಗಬೇಕು!
ಐಕ್ಯ ಹೋರಾಟಗಾರರು: ಪ್ರಶ್ನಿಸಿದವರು ರಾಜದ್ರೋಹಿಗಳೇ? ನ್ಯಾಯ ಕೇಳಿದರೆ ಭಯೋತ್ಪಾದಕರೆ?
ಪ್ರಜಾ ವಿರೋಧಿ ಮಸೂದೆಗಳು ಭೇಷರತ್ ರದ್ದಾಗಬೇಕು
ಗುಂಪು-1+2: ಅಲ್ಲಿವರೆಗೂ ಮುತ್ತಿಗೆ ಎತ್ತಲ್ಲ

ಜಾಗಬಿಟ್ಟು ಏಳಲ್ಲ
ಧಿಕ್ಕಾರ! ಧಿಕ್ಕಾರ!!
ರೈತವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಸರ್ವಾಧಿಕಾರಿ ಧೋರಣೆ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಮಹಿಳಾ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಕಾರ್ಮಿಕ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
ಮೀಸಲಾತಿ ವಿರೋಧಿ ಸರ್ಕಾರಕ್ಕೆ
ಧಿಕ್ಕಾರ! ಧಿಕ್ಕಾರ!!
(ಧರಣಿ ಕೂರುವರು)
– ತೆರೆ –

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...