ಮೇ 15, 2024ರಂದು ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ದ ಕೊಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ಸಾಮಾಜಿಕ ಹೋರಾಟಗಾರರೂ ಆಗಿರುವ ಕೆ.ಆರ್ ಸೌಮ್ಯ ಅವರು ತಮ್ಮ ಪುತ್ರಿ ಪ್ರಬುದ್ದ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಅದೆಷ್ಟೋ ಜನರ ಪರವಾಗಿ ಹೋರಾಟ ಮಾಡಿರುವ ನಾನೀಗ, ನನ್ನ ಮಗಳ ಕೊಲೆ ಪ್ರಕರಣದಲ್ಲಿ ನ್ಯಾಯ ಪಡೆಯಲು ಆಗುತ್ತಿಲ್ಲ. ಸುಬ್ರಹ್ಮಣ್ಯಪುರ ಪೊಲೀಸರು ನನಗೆ ನ್ಯಾಯ ಕೊಡುವ ಬದಲು ಆರೋಪಿಗಳೊಂದಿಗೆ ಸೇರಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಸಿಎಂ, ಸಿಐಡಿ ತನಿಖೆಗೆ ವಹಿಸಿದ್ದಾರೆ.
“ಬೆಂಗಳೂರಿನ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಕ್ರಿಯಾಶೀಲೆಯಾದ ನನ್ನ ಮಗಳು ಪ್ರಬುದ್ಧಳನ್ನು 2024ರ ಮೇ 15ರಂದು ಸಾಯಂಕಾಲ ನನ್ನ ಮನೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಮೊದಲ ದಿನದಿಂದಲೂ ಸುಬ್ರಮಣ್ಯಪುರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಮತ್ತು ಅವರ ತಂಡ ಸಂಶಯಾಸ್ಪದವಾಗಿ ವರ್ತಿಸುತ್ತಾ ನನ್ನ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಪದೇ ಪದೇ ಹೇಳಿದರೂ ಕೇಳಿಸಿಕೊಳ್ಳದ ತನಿಖಾ ತಂಡ, ಮೊದಲ ಮೂರ್ನಾಲ್ಕು ದಿನಗಳ ಕಾಲ ಘಟನೆಯನ್ನು ಆತ್ಮಹತ್ಯೆ ಎಂದೇ ಬಿಂಬಿಸುವ ಪ್ರಯತ್ನ ಮಾಡಿತ್ತು. ಕೊಲೆಗಡುಕನಿಗೆ ಎಲ್ಲಾ ರೀತಿಯ ಸಹಾಯ ಮಾಡಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದೆ. ಕೊಲೆಗಡುಕನ ತಂದೆ, ತಾಯಿಯರನ್ನೂ ರಕ್ಷಿಸುವ ದುರುದ್ದೇಶದ ಕೃತ್ಯಗಳನ್ನು ಮಾಡುತ್ತಲೇ ಬರುತ್ತಿದ್ದಾರೆ” ಎಂದು ಕೆ.ಆರ್ ಸೌಮ್ಯ ಆರೋಪಿಸಿದ್ದಾರೆ.
“ಮಗಳನ್ನು ಕಳೆದುಕೊಂಡ ನೋವಿನಲ್ಲೂ ನಾನು ನ್ಯಾಯಕ್ಕಾಗಿ ಶ್ರಮವಹಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಒತ್ತಾಯಿಸಿದ್ದೇನೆ. ಆದರೆ, ಪೊಲೀಸರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನಗೆ ಗೊತ್ತಿರುವ ಸತ್ಯವನ್ನು ಕೇಳಿಸಿಕೊಳ್ಳಲೂ ನಿರಾಕರಿಸುತ್ತಿದ್ದಾರೆ. ಕೊಲೆಗಾರನ ತಂದೆ ಸ್ಥಳೀಯ ಠಾಣಾ ವ್ಯಾಪ್ತಿಯಲ್ಲಿ ಬಾರ್ ನಡೆಸುತ್ತಿದ್ದು, ಪೊಲೀಸರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದಾರೆ. ಸಾಕ್ಷ್ಯಗಳನ್ನು ನಾಶಪಡಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಕಾಟಾಚಾರಕ್ಕೆ ಮಹಜರು ನಡೆಸಿದ್ದಾರೆ. ಆಪಾದಿತನು ಹತ್ತೇ ದಿನಕ್ಕೆ ಜಾಮೀನು ಪಡೆದು ನಿಶ್ಚಿಂತನಾಗಿ ಓಡಾಡಿಕೊಂಡಿದ್ದಾನೆ” ಎಂದಿದ್ದಾರೆ.
“ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಕಷ್ಟಪಟ್ಟು ಓದಿಸುತ್ತಿದ್ದ ನನಗೆ, ಈಗ ಜೀವ ಭಯವೂ ಉಂಟಾಗಿದೆ. ನನ್ನ ವಯಸ್ಸಾದ ತಾಯಿ ಮತ್ತು ಮಗನ ಕುರಿತೂ ಆತಂಕವಾಗಿದೆ. ಪೊಲೀಸರ ತನಿಖೆಯ ಕುರಿತ ನನಗೆ ಆತಂಕ ಹಾಗೂ ಸಂದೇಹಗಳಿವೆ. ಪ್ರಬುದ್ಧ ಹತ್ಯೆಯನ್ನು ಸಿಐಡಿಗೆ ವಹಿಸಿ ಅಪರಾಧಿ ಮತ್ತು ಅವನಿಗೆ ಬೆಂಬಲ ನೀಡಿದವರಿಗೆ ತಕ್ಕ ಶಿಕ್ಷೆ ವಿಧಿಸಲು ನೆರವಾಗಿ ಎಂದು ಮನವಿಯಲ್ಲಿ ಪ್ರಬುದ್ಧ ತಾಯಿ ಕೆ.ಆರ್.ಸೌಮ್ಯ ಕೋರಿದ್ದಾರೆ.
ಹಣದ ವಿಚಾರಕ್ಕೆ ಕೊಲೆ ಎಂದ ಪೊಲೀಸರು
ಹತ್ಯೆಯಾದ ಪ್ರಬುದ್ದ ಅವರ ಸಹೋದರ ಹಾಗೂ ಆರೋಪಿ ಸ್ನೇಹಿತರಾಗಿದ್ದು, ಅದೇ ಸಲುಗೆಯಲ್ಲಿ ಆರೋಪಿ ಆಗಾಗ ಪ್ರಬುದ್ದಳ ಮನೆಗೆ ಬಂದು ಹೋಗುತ್ತಿದ್ದ. ಆಟವಾಡುವಾಗ ತನ್ನ ಇನ್ನೊಬ್ಬ ಸ್ನೇಹಿತನ ಕನ್ನಡಕ ಮುರಿದಿದ್ದ ಆರೋಪಿಗೆ, ಅದನ್ನು ಸರಿ ಮಾಡಿಸಿಕೊಡಲು ಹಣದ ಅವಶ್ಯಕತೆಯಿತ್ತು. ಕೃತ್ಯಕ್ಕಿಂತ ಕೆಲವು ದಿನಗಳ ಹಿಂದಷ್ಟೇ ಪ್ರಬುದ್ಧಳ ಮನೆಗೆ ಬಂದಿದ್ದ ಆತ, ಇದಕ್ಕಾಗಿಯೇ ಆಕೆಯ ಪರ್ಸ್ನಲ್ಲಿದ್ದ 2 ಸಾವಿರ ರೂ. ಹಣ ಕಳ್ಳತನ ಮಾಡಿದ್ದ. ಈ ವಿಚಾರ ಆಕೆಗೆ ಗೊತ್ತಾಗಿದ್ದರಿಂದ ವ್ಯವಸ್ಥಿತವಾಗಿ ಕೊಲೆಗೈದು, ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದ ಎಂದು ತನಿಖೆ ನಡೆಸಿದ್ದ ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ : ಕಾಂಗ್ರೆಸ್ ಬೆಂಬಲಿಸುವ ಅನೇಕ ಸಮುದಾಯಗಳಿಗೆ ಡಿಸಿಎಂ ಪ್ರಾತಿನಿಧ್ಯ ನೀಡಬೇಕು: ಕೆ.ಎನ್. ರಾಜಣ್ಣ


