ಧರ್ಮಸ್ಥಳಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂಬ ಪ್ರಕರಣದ ಸುತ್ತ ಗೊಂದಲ ಸೃಷ್ಟಿಯಾಗಿದೆ. ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಹೇಳಿಕೆಗಳು ಈ ಗೊಂದಲಗಳಿಗೆ ಕಾರಣವಾಗಿದೆ.
ಶುಕ್ರವಾರ (ಆ.22) ‘ಇನ್‌ಸೈಟ್‌ರಶ್’ ಎಂಬ ಯೂಟ್ಯೂಬ್ ಚಾನೆಲ್ ಅಪ್ಲೋಡ್ ಮಾಡಿದ್ದ ವಿಡಿಯೋದಲ್ಲಿ ಮಾತನಾಡಿದ ಸುಜಾತಾ ಭಟ್, “ಅನನ್ಯಾ ಭಟ್ ನನ್ನ ಮಗಳು ಎನ್ನುವುದು ಸುಳ್ಳು. ನನಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ. ಕೆಲ ವ್ಯಕ್ತಿಗಳು ಆ ರೀತಿ ಹೇಳುವಂತೆ ಒತ್ತಡ ಹೇರಿದ್ದರಿಂದ ನಾನು ಸುಳ್ಳು ಕಥೆ ಹೆಣೆದೆ ಎಂದು ಸ್ಪಷ್ಟಪಡಿಸಿದ್ದರು. ಆ ವ್ಯಕ್ತಿಗಳು ಯಾರು ಎಂದು ವರದಿಗಾರ್ತಿ ಕೇಳಿದಾಗ, ಗಿರೀಶ್ ಮಟ್ಟಣ್ಣವರ್ ಮತ್ತು ಜಯಂತ್ ಟಿ ಎಂದು ಹೆಸರು ಹೇಳಿದ್ದರು.
ಮುಂದುರಿದು, ಆಸ್ತಿ ವಿವಾದ ಇತ್ತು ಅದಕ್ಕೆ ನಾನು ಅನನ್ಯಾ ಭಟ್ ಕಥೆ ಹೇಳಿದೆ. ನನ್ನ ಅಜ್ಜನ ಆಸ್ತಿಯನ್ನು ದಾನವಾಗಿ ದೇವಸ್ಥಾನಕ್ಕೆ ಕೊಡುವಾಗ ಮೊಮ್ಮಗಳಾದ ನನ್ನ ಸಹಿ ತೆಗೆದುಕೊಳ್ಳಬೇಕಿತ್ತು. ನನಗೆ ಹಕ್ಕಿದೆ, ಆದರೆ ಹಾಗೆ ಮಾಡದೆ ದಾನವಾಗಿ ನಮ್ಮ ತಾತನ ಜಮೀನನ್ನು ಧರ್ಮಸ್ಥಳಕ್ಕೆ ಬರೆದುಕೊಟ್ಟರು. ನನ್ನನ್ನು ಸತ್ತಂತೆ ಪರಿಗಣಿಸಿದರು. ಅದು ನನಗೆ ತುಂಬಾ ನೋವು ಕೊಟ್ಟಿತು. ಹಾಗಾಗಿ ಅವರು ಹೇಳಿದಂತೆ ಮಾಡಿದ್ದೇನೆ. ನಾನು ತೋರಿಸಿರುವ ಫೋಟೋ ಎಲ್ಲವೂ ನಕಲಿ. ನಾನು ಧರ್ಮಸ್ಥಳ ಕ್ಷೇತ್ರ ಅಥವಾ ಅಲ್ಲಿನ ಯಾವುದೇ ವ್ಯಕ್ತಿ ವಿರುದ್ಧ ದೂರು ಕೊಟ್ಟಿಲ್ಲ, ಧರ್ಮಸ್ಥಳ ಗ್ರಾಮದಲ್ಲಿ ಎಂದು ದೂರು ಕೊಟ್ಟಿದ್ದೆ ಎಂದಿದ್ದರು.
ನನಗೆ ಈ ಕುರಿತು ಯಾರೂ ಹಣದ ಆಮಿಷ ಒಡ್ಡಿಲ್ಲ. ಕೇವಲ ಒಂದು ಬಾರಿಯಷ್ಟೇ ಅವರನ್ನು ಭೇಟಿಯಾಗಿದ್ದೇನೆ. ಮಗಳ ಕಥೆ ಹೇಳಿ ಎಂದು ಹೇಳಿಕೊಟ್ಟರು. ನನ್ನ ತಲೆಗೆ ತುರುಕಿದರು. ಅದರಂತೆ ಹೇಳಿದ್ದೇನೆ. ಆದರೆ, ಅದು ಈ ಮಟ್ಟಕ್ಕೆ ಹೋಗುತ್ತದೆ, ಇಷ್ಟೊಂದು ತೇಜೋವಧೆ ಆಗುತ್ತದೆ ಎಂದು ಯಾವತ್ತೂ ಭಾವಿಸಿರಲಿಲ್ಲ. ನಾನು ಲೀವಿಂಗ್ ಟುಗೆದರ್‌ನಲ್ಲಿ ಇದ್ದದ್ದು ನಿಜ. ಆದರೆ, ಆ ವ್ಯಕ್ತಿಯನ್ನು (ಸಂಗಾತಿಯನ್ನು) ನಾನೇ ದುಡಿದು ಸಾಕಿದ್ದೇನೆ. ಯಾರ ಮುಂದೆಯೂ ಕೈಚಾಚಿದವಳು ಅಲ್ಲ ಎಂದು ಸುಜಾತಾ ಭಟ್ ಅವರು ಹೇಳಿದ್ದರು.
ನಾನು ಮೊದಲು ಎಸ್‌ಐಟಿ ಮುಂದೆ ಹೇಳಿಕೆ ಕೊಡುತ್ತೇನೆ. ಆ ಬಳಿಕ ಮಾಧ್ಯಮಗಳ ಮುಂದೆ ಮಾತನಾಡುತ್ತೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನಾನು ಇನ್ನು ಎಸ್‌ಐಟಿ ಮುಂದೆಯೇ ಹೇಳಿಕೆ ಕೊಡುತ್ತೇನೆ. ಎಸ್‌ಐಟಿಯವರು ಮಾಧ್ಯಮಗಳಿಗೆ ಹೇಳಿಕೆ ಕೊಡದಂತೆ ಸೂಚಿಸಿದ್ದಾರೆ. ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಿದ ಬಗ್ಗೆ ನನ್ನ ವಕೀಲರ ಜೊತೆ ಮಾತನಾಡಿದ್ದೇನೆ. ಅವರು ಎಸ್‌ಐಟಿ ಮುಂದೆ ಹೋಗೋಣ ಎಂದಿದ್ದಾರೆ. ಹಾಗಾಗಿ, ನಾನು ಎಸ್ಐಟಿ ಮುಂದೆ ಎಲ್ಲವನ್ನೂ ಹೇಳುತ್ತೇನೆ ಎಂದು ಸುಜಾತಾ ಭಟ್ ತಿಳಿಸಿದ್ದಾರೆ.
2003ರಲ್ಲಿ ಸ್ನೇಹಿತೆಯರ ಜೊತೆ ಧರ್ಮಸ್ಥಳಕ್ಕೆ ತೆರಳಿದ್ದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ತಾಯಿ ಸುಜಾತಾ ಭಟ್ 2025ರ ಜುಲೈ 15ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, “ಮಗಳ ನಾಪತ್ತೆ ಬಗ್ಗೆ ಈ ಹಿಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ಕೊಟ್ಟಿದ್ದರೂ ನನಗೆ ನ್ಯಾಯ ಸಿಕ್ಕಿಲ್ಲ. ಈಗ ಅನಾಮಿಕ ಕೊಟ್ಟ ದೂರಿನಂತೆ ಎಸ್‌ಐಟಿ ತನಿಖೆ ನಡೆಯುತ್ತಿರುವುದರಿಂದ ನನಗೆ ಆಶಾ ಭಾವನೆ ಮೂಡಿದೆ. ಎಸ್‌ಐಟಿಯವರು ನನ್ನ ಮಗಳ ನಾಪತ್ತೆ ಪ್ರಕರಣವನ್ನೂ ಬೇಧಿಸಿ, ಅವಳ ಅಸ್ತಿ ಹುಡುಕಿ ಕೊಟ್ಟರೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುತ್ತೇನೆ” ಎಂದಿದ್ದರು.
ಸುಜಾತಾ ಭಟ್ ಅವರ ಸಂಪೂರ್ಣ ಹೇಳಿಕೆಯ ಲಿಂಕ್ ಇಲ್ಲಿದೆ
ಅನನ್ಯಾ ಭಟ್ ನಾಪತ್ತೆ ದೂರು ಧರ್ಮಸ್ಥಳ ಠಾಣೆಯಿಂದ ಆಗಸ್ಟ್ 20, 2025ರಂದು ಎಸ್‌ಐಟಿಗೆ ವರ್ಗಾವಣೆಯಾಗಿದೆ. ಎಸ್‌ಐಟಿಯವರು ವಿಚಾರಣೆಗೆ ಹಾಜರಾಗುವಂತೆ ಸುಜಾತಾ ಭಟ್ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಸುದ್ದಿ ವಾಹಿನಿಯೊಂದು ಸುಜಾತಾ ಭಟ್ ಅವರಿಗೆ ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ ಎಂದು ನಿರಂತರ ಸುದ್ದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಜಾತಾ ಭಟ್, ಯುವತಿಯೊಬ್ಬರ ಫೋಟೋ ಬಿಡುಗಡೆ ಮಾಡಿ, “ಇದೇ ಅನನ್ಯಾ ಭಟ್” ಎಂದಿದ್ದರು. ಆದರೆ, ಸುದ್ದಿವಾಹಿನಿ ಮತ್ತು ಕೆಲ ಯೂಟ್ಯೂಬ್ ಚಾನೆಲ್‌ಗಳು ಆ ಫೋಟೋ ನಕಲಿ ಎಂದು ಆರೋಪಿಸಿತ್ತು. ವಾಸಂತಿ ಎನ್ನುವವರ ಫೋಟೋವನ್ನು ಯೂಟ್ಯೂಬರ್ ಸಮೀರ್ ಎಐ ಮೂಲಕ ಬದಲಾಯಿಸಿ ಅನನ್ಯಾ ಭಟ್ ಎಂದು ಬಿಂಬಿಸಿದ್ದಾರೆ ಎಂದಿತ್ತು.
ಸುಜಾತಾ ಭಟ್ ಅವರಿಗೆ ಅನನ್ಯಾ ಎಂಬ ಮಗಳೇ ಇರಲಿಲ್ಲ ಎಂಬುವುದಕ್ಕೆ ಸುದ್ದಿವಾಹಿನಿ, ಸುಜಾತಾ ಭಟ್ ಸಂಬಂಧಿಕರು ಎನ್ನಲಾದ ಕೆಲ ವ್ಯಕ್ತಿಗಳಿಂದ ಹೇಳಿಕೆಯನ್ನೂ ಪಡೆದಿತ್ತು. ಇದನ್ನು ಗಮನಿಸಿದ ಜನರು ಸುಜಾತಾ ಭಟ್ ಆರೋಪ ನಿಜವೋ, ಸುಳ್ಳೋ ಎಂಬ ಗೊಂದಲಕ್ಕೀಡಾಗಿದ್ದರು.
ಈ ಬೆನ್ನಲ್ಲೇ ‘ಇನ್‌ಸೈಟ್‌ರಶ್’ ಯೂಟ್ಯೂಬ್ ಚಾನೆಲ್‌ಗೆ ಸುಜಾತಾ ಭಟ್ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿತ್ತು. ಇದಾಗಿ, ಗಂಟೆಯೊಳಗೆ “ನನ್ನಿಂದ ಬಲವಂತವಾಗಿ ಹೇಳಿಕೆ ಕೊಡಿಸಲಾಗಿದೆ” ಎಂಬ ಸುಜಾತಾ ಮಾತು ಜನರಲ್ಲಿ ಗೊಂದಲ ಉಂಟು ಮಾಡಿದೆ. ಹಾಗಾಗಿ, ಅನನ್ಯಾ ಭಟ್ ಪ್ರಕರಣದ ಸತ್ಯಾಸತ್ಯತೆ ಎಸ್‌ಐಟಿ ತನಿಖೆಯಿಂದಲೇ ಬಯಲಾಗಬೇಕಿದೆ.
15 ದಿನದಿಂದ ‘ಮಾರ್ವಾಡಿ ಗೋ ಬ್ಯಾಕ್’ ಪ್ರತಿಭಟನೆಗಳು: ಹೈದರಾಬಾದ್‌ನಲ್ಲಿ ಹೆಚ್ಚಿದ ಉದ್ವಿಗ್ನತೆ, ಪೊಲೀಸರು ಹೈ ಅಲರ್ಟ್


