ಹಾ….
ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು
ಅನುಭವಿಸಿದ್ದೇನೊ ಕೆಲವು
ಕಂಡದ್ದು ಹಲವು
ಆದರೆ ಎಲ್ಲವೂ ಸ್ವಂತದ್ದು
ಆದರದೇಕೊ ನಕ್ಕೊಮ್ಮೆ ಸುಮ್ಮನಾಗುವೆ ನಾನು
ಹೇಳಲು ಬಹಳಷ್ಟಿದ್ದರು
ಚಿಮಣಿ ಮೇಲಿನ ದೀಪದುರಿಯ ಕಪ್ಪಿನಲಿ
ಹೂತ ಕನಸುಗಳ ಚಿತ್ರವ ಕಂಡು……
ನನ್ನಮ್ಮ ಅಪ್ಪನಿಗೆ ಭರವಸೆಯೊಂದೆ
ಹೊಟ್ಟೆ ತುಂಬಿಸಿದ
ಖಾಲಿ ನೀರವ ರಾತ್ರಿಗಳ ನೆನೆದು
ನೀವು ನಾನಾಗದೆ ನಾನೇ ನೀವಾಗಲೊರಟು
ವಿಳಾಸವಿರದ ಊರಿನಲಿ
ದಾರಿ ತಪ್ಪಿ
ಕೊಳವಾದ ಕಂಗಳಲಿ
ಮಾಡಿದೊಂಟಿ ಯುದ್ಧವ ನೆನೆದು…..
ಸುಮ್ಮನಾದೆ ನಾನು
ಇದ್ದ ಬದುಕಿಗಿಡಿದ ಕನ್ನಡಿಯೆದುರು
ಹೊಸಕಿ – ಕೊಂದ ಕನಸುಗಳ ಬಿಂಬ ಕಂಡು
ಹೆದರಿ ಮುದುರಿ ಮೌನಿಯಾದ ಕ್ಷಣವ ನೆನೆದು
ಸುಮ್ಮನಾಗಿ ಬಿಟ್ಟೆ ನಾನು
ಮಾತು ಬರುವ ಮೂಕಿಯಂತೆ
ಹೇಳಲು ಎಷ್ಟೊ ಅದೆಷ್ಟೋ ಇದ್ದರು
ಶಾಶ್ವತವಲ್ಲದೀ ದುಡ್ಡು
ಮೂಡಿಸಿದ ಶಾಶ್ವತ ಗುರುತುಗಳ
ಲೆಕ್ಕ ಪಟ್ಟಿಯ ಲೆಕ್ಕಗಳಲಿ
ಒದ್ದೆಯಾದ ಕಂಗಳನು
ಹುದುಗಿಸಿಡುತ
ಸುಮ್ಮನಾಗುವೆ ನಾನು
ನಿಮ್ಮಗಳೆದುರು
ನಾಲಿಗೆಯ ತುದಿಯಲ್ಲಿ
ಜಾರಲು ಅವೆಷ್ಟೋ ಮಾತುಗಳು ತವಕಿಸುತ್ತಿದ್ದರು
ಚೆಂದದ ನೋಟ ನಮ್ಮನ್ನಳೆವ ಮಾನದಂಡ
ಬೆಂಗಳೂರಿನಲ್ಲಿಇದೇ ನಾ ಕಲಿತ ಮೊದಲ ಪಾಠ
ಕಲಿಕೆಗೇನು ಕೊನೆಮೊದಲಿಲ್ಲವಲ್ಲ
ಪ್ರದರ್ಶನಕ್ಕೆ ಅಡ್ಡಿ ಮಾಡಿತ್ತು
ಧೂಳು ಹಿಡಿದು ತೂತು ಬಿದ್ದ ಆ ಖಾಲಿ ಪರ್ಸ್
ಅದನ್ನೇ ನೆನೆವೆ………ಅದನ್ನೇ ನೆನೆದು
ಸುಮ್ಮನಾಗಿ ಬಿಡುವೆ ನಾನು
ನಿಮ್ಮೆಲ್ಲರ ಇಂದಿನ ಗೇಲಿಗಳಿಗೆ
ಭರ್ತಿ ಪರ್ಸ್ ಕಿಸೆಯೊಳಗಿದ್ದರು
ಬೊಗಸೆ ತುಂಬ ಸಂಬಳವೆಣಿಸುತ್ತ
ಖರ್ಚಿಗೊಂದು ಬಾರಿ ಸಂಕಲನ ವ್ಯವಕಲನಕ್ಕೆ
ಓರೇ ಹಚ್ಚುವ ನಾನು
ಕೊಂದ ಕನಸುಗಳ, ಮರೆತ ನೋವುಗಳ
ಪಟ್ಟಿ ಇಟ್ಟು ವಾದ ಮಾಡದ ನಾನು
ಜಿಪುಣತನಕ್ಕೊಂದು ಆದರ್ಶ ಉದಾಹರಣೆ
ನಿಮ್ಮಗಳ ಮುಂದೆ
ಆದರು ಅದೇಕೊ
ನಕ್ಕು ಸುಮ್ಮನಾಗುವೆ ನಾನು
ಇಂದಿನಂತಯೇ ……..ಮುಂದೆಯೂ ಕೂಡ
ಉತ್ತರಿಸಲಾರೆ ಎಂದಲ್ಲ
ನಾ ನಡೆದ ಬದುಕಿನ ದಾರಿಯಲಿ
ಹೆಜ್ಜೆ ಕೂಡ ಇಡದ ನಿಮಗೆ
ಪಯಣದ ವರದಿಯ ನೀಡಿ ಸಾಧಿಸುವುದಾದರು ಏನು ? ನಾನು.
ಹಾ….ಸುಮ್ಮನಿದ್ದೇನೆ ನಾನು
ಹೇಳಲು ಬಹಳಷ್ಟಿದ್ದರು.
– ಅನುಷಾ ಚಂದ್ರು

(ಮೂಲತಾ ಚಿಕ್ಕಮಗಳೂರಿನ ಸಖರಾಯಪಟ್ಟಣದವರು. ಕನ್ನಡದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.)
ಇದನ್ನೂ ಓದಿ: ಮೊಳಗುತ್ತಿದೆ ಸೈರನ್! : ಶಂಕರ್ ಸಿಹಿಮೊಗೆಯವರ ಕವನ


