Homeಅಂತರಾಷ್ಟ್ರೀಯರಫೇಲ್ ರಾದ್ಧಾಂತ: ಮೋದಿ ಭವಿಷ್ಯದ ಮೇಲೆ `ಸುಪ್ರೀಂ' ಹೊಸ ತೀರ್ಪಿನ ಪರಿಣಾಮ ಹೇಗಿರಲಿದೆ ಗೊತ್ತಾ?

ರಫೇಲ್ ರಾದ್ಧಾಂತ: ಮೋದಿ ಭವಿಷ್ಯದ ಮೇಲೆ `ಸುಪ್ರೀಂ’ ಹೊಸ ತೀರ್ಪಿನ ಪರಿಣಾಮ ಹೇಗಿರಲಿದೆ ಗೊತ್ತಾ?

- Advertisement -
- Advertisement -
| ಗಿರೀಶ್ ತಾಳಿಕಟ್ಟೆ |
ಸುಪ್ರೀಂ ಕೋರ್ಟ್ ರಫೇಲ್ ವ್ಯವಹಾರದ ಕುರಿತು ಮಹತ್ವದ ತೀರ್ಪು ಹೊರಹಾಕಿದೆ. ತಮ್ಮನ್ನು ನೇರ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಷ್ಟು ಸಮರ್ಥವಾಗಿರುವ, ಯಾವ ದಾಖಲೆಗಳ ವಿರುದ್ಧ ಕೇಂದ್ರ ಸರ್ಕಾರ ತನ್ನ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಮೂಲಕ ‘ಕದ್ದ ದಾಖಲೆ’ಗಳು ಎಂದು ಆರೋಪಿಸಿತ್ತೊ ಆ ಮೂರೂ ದಾಖಲೆಗಳನ್ನು ಸರ್ವೋಚ್ಛ ನ್ಯಾಯಾಲಯ ಗಂಭೀರ ‘ಸಾಕ್ಷ್ಯ’ಗಳಾಗಿ ಪರಿಗಣಿಸಲು ನಿರ್ಧರಿಸಿದೆ. ಇದರಿಂದಾಗಿ 2018ರ ಡಿಸೆಂಬರ್ 14ರಂದು ‘ಮುಚ್ಚಿದ ಲಕೋಟೆ’ಯೊಳಗಿನ ಮಾಹಿತಿಯನ್ನು ಆಧರಿಸಿ ತಾನೇ, ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿದ್ದ ರಫೇಲ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮತ್ತೆ ವಿಚಾರಣೆಗೆತ್ತಿಕೊಳ್ಳಲು ಮುಂದಾಗಿದೆ.

ಸಹಜವಾಗಿಯೇ ಇದು, ಸರ್ಕಾರಕ್ಕೆ ಮುಖ್ಯವಾಗಿ ನರೇಂದ್ರ ಮೋದಿಯವರಿಗೆ ಎರಡು ಕಾರಣಗಳಿಂದ ದೊಡ್ಡ ಹಿನ್ನಡೆ. ಮೊದಲನೆಯದು, ಕಾಂಗ್ರೆಸ್ ಮತ್ತು ದೂರುದಾರರು ಆರಂಭದಿಂದಲೂ ಆರೋಪಿಸುತ್ತಿರುವಂತೆ ದೇಶದ ಬೊಕ್ಕಸಕ್ಕೆ ಸುಮಾರು ಅರವತ್ತು ಸಾವಿರ ಕೋಟಿ ಲುಕ್ಸಾನು ಮಾಡಿದ ಈ ಹಗರಣದಲ್ಲಿ ಮೋದಿಯವರ ಕೈವಾಡ ಸಾಬೀತಾದರೆ ಅವರು ವೈಯಕ್ತಿಕವಾಗಿ ನ್ಯಾಯಾಂಗದ ಸಂಕಟಕ್ಕೆ ಈಡಾಗಬೇಕಾಗುತ್ತದೆ. ಎರಡನೆಯದು, ಇದು ಸಾರ್ವತ್ರಿಕ ಚುನಾವಣೆ ಸಮಯವಾಗಿರೋದರಿಂದ ಇಂಥಾ ಸಂದರ್ಭದಲ್ಲಿ ಹೊರಬಿದ್ದಿರುವ ಈ ಸುಪ್ರೀಂ ತೀರ್ಪು ಬಿಜೆಪಿಯನ್ನು ಮುತ್ತಿರುವ ಗಂಭೀರ ಆರೋಪವೊಂದರ ಗುಮಾನಿಯನ್ನು ಜನರ ಮನಸ್ಸಲ್ಲಿ ಮತ್ತಷ್ಟು ದಟ್ಟವಾಗಿಸಲಿದೆ. ಇದು ಫಲಿತಾಂಶದ ಮೇಲೆ ಖಂಡಿತ ಪ್ರಭಾವ ಬೀರಬಲ್ಲದು. ಅದಕ್ಕಿಂತಲೂ ಮುಖ್ಯವಾಗಿ, ಈ ಚುನಾವಣೆಯಲ್ಲಿ ಸಾಕಷ್ಟು ಆತ್ಮವಿಶ್ವಾಸದ ಕೊರತೆ ಅನುಭವಿಸುತ್ತಿರುವ ಬಿಜೆಪಿ ವಲಯವನ್ನು ಇದು ಇನ್ನಷ್ಟು ಅಧೀರರನ್ನಾಗಿಸುವ ಸಾಧ್ಯತೆ ಇದೆ.

ಇದೇ ಏಪ್ರಿಲ್ 4ರಂದು, ಬಿಜೆಪಿಯ ಮಾತೃಭೂಮಿಯಾದ ನಾಗ್ಪುರದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರು ‘ತಾವು ಅಧಿಕಾರಕ್ಕೆ ಬಂದದ್ದೇ ಆದಲ್ಲಿ, ರಫೇಲ್ ಹಗರಣವನ್ನು ವಿಚಾರಣೆಗೊಳಪಡಿಸಿ ಮೋದಿಯವರನ್ನು ಜೈಲಿಗೆ ಕಳಿಸುತ್ತೇವೆ’ ಎಂಬ ಹೇಳಿಕೆ ನೀಡಿದ್ದರು. ಇದಾದ ನಂತರ ಮೋದಿಯವರು ಹಲವು ಚುನಾವಣಾ ರ‍್ಯಾಲಿಗಳಲ್ಲಿ ಭಾಗವಹಿಸಿದ್ದಾರೆ. ಕರ್ನಾಟಕದ್ದೇ ನೆಲದಲ್ಲಿ ಭಾಷಣ ಮಾಡಿದ್ದಾರೆ. ಅಲ್ಲೆಲ್ಲ ತಮ್ಮ ಯಥಾ ಧಾಟಿಯ ಹಿಂದೂತ್ವ, ಪಾಕಿಸ್ತಾನ, ಭಯೋತ್ಪಾದನೆ, ಸೈನಿಕರು ಎಂಬ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆಯೇ ವಿನಾಃ ರಾಹುಲ್ ಮಾಡಿದ ಗಂಭೀರ ಸ್ಟೇಟ್‌ಮೆಂಟ್‌ಗೆ ತಿರುಗೇಟು ನೀಡಲಿಲ್ಲ. ಮೋದಿ ಮಾತ್ರವಲ್ಲ, ಬಿಜೆಪಿಯ ಯಾವ ನಾಯಕರೂ ತಮ್ಮ ಪರಮೋಚ್ಛ ನಾಯಕನನ್ನು ಜೈಲಿಗಟ್ಟುವ ಗಂಭೀರ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿಲ್ಲ. ಇನ್ನು ರಾಹುಲ್ ಹೇಳಿಕೆಯ ಮಾರನೇ ದಿನವೇ ಎಬಿಪಿ ನ್ಯೂಸ್ ಚಾನೆಲ್‌ಗೆ ಮೋದಿಯವರು ಒಂದು ಅಪರೂಪದ(!) ಸಂದರ್ಶನ ಕೊಟ್ಟರು. ಆ ಸಂದರ್ಶನದ ವೈಖರಿಯನ್ನು ಗಮನಿಸಿದವರು ಸಂದರ್ಶನದ ಪತ್ರಿಕೋದ್ಯಮ ಪ್ರಾಮಾಣಿಕತೆಯನ್ನೇ ಪ್ರಶ್ನಿಸುತ್ತಿದ್ದಾರಾದರು, ನೆಪಕ್ಕೂ ಸಹಾ ಅಲ್ಲಿ ರಫೇಲ್ ಪ್ರಶ್ನೆ, ರಾಹುಲ್ ಕಮೆಂಟ್ ನುಸುಳಲೇ ಇಲ್ಲ. ಇದರಿಂದ ಒಂದು ಅಂಶವಂತೂ ಸ್ಪಷ್ಟವಾಗುತ್ತದೆ, ಏನೆಂದರೆ ಈ ಚುನಾವಣೆಯ ಸಂದರ್ಭದಲ್ಲಿ ಯಾವ ಕಾರಣಕ್ಕೂ ರಫೇಲ್ ಚರ್ಚೆಯನ್ನು ಬೆಳೆಸದಿರಲು ಬಿಜೆಪಿ ದೃಢವಾಗಿ ನಿರ್ಧರಿಸಿದೆ. ಆರೋಪ-ಪ್ರತ್ಯಾರೋಪಗಳು ಮುಗಿಲುಮುಟ್ಟಬೇಕಾದ ಚುನಾವಣೆಯ ಹೊತ್ತಿನಲ್ಲಿ ಬಿಜೆಪಿ ರಫೇಲ್ ಚರ್ಚೆಯನ್ನು isolate ಮಾಡಲು ಯತ್ನಿಸುತ್ತಿರುವುದು ಯಾಕಿರಬಹುದು?
ಈ ಪ್ರಕರಣವನ್ನು ಸಿಬಿಐ ಮತ್ತು ನ್ಯಾಯಾಲಯದ ಕಟಕಟೆಗೆ ಒಯ್ದಿರುವ ಬಿಜೆಪಿಯ ಹಿರಿಯ ನಾಯಕರುಗಳಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ರಫೇಲ್ ವ್ಯವಹಾರದ ಮೇಲೆಬಿದ್ದು ದಿನಕ್ಕೊಂದು ಅಚ್ಚರಿ ಹೊರಗೆಡವುತ್ತಿರುವ ‘ದಿ ಹಿಂದೂ’ ಪತ್ರಿಕೆಯ ಆತ್ಮವಿಶ್ವಾಸ ಮತ್ತು ಬದ್ಧತೆಯನ್ನು ಗಮನಿಸಿದರೆ ಪ್ರಧಾನಿಯವರು ಮತ್ತು ಅವರ ಆಪ್ತರು ಈ ಕೇಸಿನಲ್ಲಿ ಭಾಗಿಯಾಗಿರುವುದಕ್ಕೆ ಸಾಕಷ್ಟು ಸಮರ್ಥ ಪುರಾವೆಗಳನ್ನು ಒಟ್ಟಾಗಿಸಿಕೊಂಡೇ ಹೋರಾಟಕ್ಕಿಳಿದಂತೆ ಕಾಣುತ್ತಿದೆ. ರಕ್ಷಣಾ ಇಲಾಖೆಯ ಒಪ್ಪಂದದಕ್ಕು ಪ್ರಧಾನಿಯವರು ಹಸ್ತಕ್ಷೇಪ ಮಾಡಿದ್ದಾಗಲಿ, ಅನುಭವಿ ಎಚ್.ಎ.ಎಲ್. ಅನ್ನು ಹೊರಗಿಟ್ಟು ಆಗಷ್ಟೇ ಹುಟ್ಟಿಕೊಂಡ ಗೆಳೆಯ ಅನಿಲ್ ಅಂಬಾನಿಯ ರಿಲಾಯನ್ಸ್ ಏರೋಸ್ಟ್ರಕ್ಚರ್ ಲಿಮಿಟೆಡ್ ಕಂಪನಿಗೆ ಆಫ್‌ಸೆಟ್ ಪಾಲುದಾರನ ಸ್ಥಾನ ಸಿಗುವಂತೆ ಮಾಡಿದ್ದಾಗಲಿ, ತಂತ್ರಜ್ಞಾನ ಸಮೇತ 126 ಯುದ್ಧ ವಿಮಾನಗಳನ್ನು ತಲಾ ಅಂದಾಜು 550-600 ಕೋಟಿಗೆ ಖರೀದಿಸಲು ಯುಪಿಎ ಮಾಡಿಕೊಳ್ಳು ಅಂತಿಮಗೊಳಿಸಿದ್ದ ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿ ಕೇವಲ 36 ವಿಮಾನಗಳನ್ನು ಅದೂ ತಂತ್ರಜ್ಞಾನವಿಲ್ಲದೆ ಮೂರುಪಟ್ಟು ಹೆಚ್ಚು ಹಣ ತೆತ್ತು ಕೊಂಡುಕೊಳ್ಳುವ ನಿರ್ಧಾರ ಪ್ರಕಟಿಸಿದ್ದಾಗಲಿ, ಫ್ರಾನ್ಸ್‌ನ ಡೆಸ್ಸಾಲ್ಟ್ ಕಂಪನಿಯಿಂದ ಬ್ಯಾಂಕ್ ಖಾತ್ರಿ ಅಥವಾ ಆ ದೇಶದ ‘ಸಾವರೀನ್ ಗ್ಯಾರಂಟಿ’ಯನ್ನೂ ಪಡೆದುಕೊಳ್ಳದೆ ದೇಶದ ಬೊಕ್ಕಸಕ್ಕೆ ಲುಕ್ಸಾನು ಮಾಡಿದ್ದಾಗಲಿ…. ಹೀಗೆ ಯಾವಯಾವ ಆರೋಪಗಳನ್ನು ದೂರುದಾರರು ಲಿಖಿತ ರೂಪದಲ್ಲಿ ದಾಖಲಿಸಿದ್ದಾರೊ ಅವುಗಳೆಲ್ಲವನ್ನೂ ಅವರು ದಾಖಲೆಸಹಿತ ಜನರ ಮುಂದಿಡುತ್ತಿದ್ದಾರೆ ಮತ್ತು ಅವೇ ದಾಖಲೆಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಿದ್ದಾರೆ. ಹಾಗಾಗಿ ರಫೇಲ್ ಹಗರಣದ ಆರೋಪ ಗಾಳಿಯಲ್ಲಿ ಕಲ್ಲು ಎಸೆದಂತ ಒಂದು ಬೇಕಾರ್ ಆರೋಪವಾಗಿರದೆ ಒಂದು ವ್ಯವಸ್ಥಿತ ಆರೋಪವಾಗಿದೆ. ಇದು ಬಿಜೆಪಿಗೆ ಮನದಟ್ಟಾಗಿರುವುದರಿಂದಲೇ, ಚರ್ಚೆ ಬೆಳೆಸಿ ಖೆಡ್ಡಾಕ್ಕೆ ಬೀಳುವ ಬದಲು, ಆ ಬಗ್ಗೆ ಬರುವ ಎಂಥದೇ ಗಂಭೀರ ಹೇಳಿಕೆಗೂ ಪ್ರತ್ಯುತ್ತರ ನೀಡಬಾರದು ಎಂದು ಬಿಜೆಪಿ ನಿರ್ಧರಿಸಿಕೊಂಡಿದೆಯಾ ಎಂಬ ಅನುಮಾನ ಖಂಡಿತ ಕಾಡುತ್ತದೆ.
ಕೇವಲ ನ್ಯಾಯಾಲಯದ ಅಂಗಳದ ಹೋರಾಟ ಮಾತ್ರವಾಗಿರದೆ ‘ರಫೇಲ್’ ಜನರ ನಡುವಿನ ಟ್ರೆಂಡಿಂಗ್ ಚರ್ಚೆಯಾಗಿ ಬೆಳೆದಿರುವುದು ಸಹಾ ಬಿಜೆಪಿಯನ್ನು ಕಂಗಾಲು ಮಾಡಿರಲಿಕ್ಕೆ ಸಾಕು. ರಾಜಸ್ಥಾನದ ಪೋಖ್ರಾನ್‌ನಲ್ಲಿ ರಾಹುಲ್ ಗಾಂಧಿಯವರು ರಫೇಲ್ ಹಗರಣವನ್ನು ಪರಿಗಣಿಸಿ ಮೊದಲ ಬಾರಿ ಉಲ್ಲೇಖಿಸಿದ ‘ಚೌಕಿದಾರ್ ಚೋರ್ ಹೈ’ ಸ್ಲೋಗನ್ ಯಾವ ಪರಿ ಜನರ ನಡುವೆ ವ್ಯಾಪಿಸಿದೆಯೆಂದರೆ, ಇದನ್ನು ಮಟ್ಟಹಾಕುವುದಕ್ಕೆಂದೇ ವ್ಯಾಪಕ ಐಟಿ ಜಾಲ ಮತ್ತು ಪೇಯ್ಡ್ ಮೀಡಿಯಾಗಳ ನೆರವಿನಿಂದ ಮೋದಿಯವರು ಕರೆಕೊಟ್ಟ ‘ಮೈ ಭೀ ಚೌಕಿದಾರ್’ ಅಭಿಯಾನ ಕೂಡಾ ಬಿಜೆಪಿ ಮತ್ತು ಸಂಘ ಪರಿವಾರದ ವ್ಯಾಪ್ತಿ ಬಿಟ್ಟು ಹೊರಬರಲಿಲ್ಲ. ಸ್ವತಃ ಬಿಜೆಪಿಯ ಸುಬ್ರಹ್ಮಣಿಯನ್ ಸ್ವಾಮಿಯೇ ‘ನಾನು ಬ್ರಾಹ್ಮಣ. ಚೌಕಿದಾರನಾಗುವುದಿಲ್ಲ’ ಎಂದದ್ದು ಮೋದಿಯವರ ಅಭಿಯಾನಕ್ಕೆ ದೊಡ್ಡ ಹಿನ್ನಡೆ ಮಾತ್ರವಲ್ಲ, ಆ ಅಭಿಯಾನದ ಯಶಸಿನ ಮಿತಿಯನ್ನೂ ತೋರಿಸುವಂತಿತ್ತು. ಇದಕ್ಕೆ ಪ್ರತಿಯಾಗಿ ‘ಚೌಕಿದಾರ್ ಚೋರ್ ಹೈ’ ಕೂಗು ಈಗ ನಡೆಯುತ್ತಿರುವ ಐಪಿಎಲ್ ಕ್ರೀಡಾಂಗಣಗಳಲ್ಲೂ ಮೊಳಗುತ್ತಿದೆ. ಈ ಎಲ್ಲಾ ಕಾರಣಗಳಿಂದ ರಫೇಲ್ ಚರ್ಚೆಯಿಂದ ಬಿಜೆಪಿ ದೂರವುಳಿಯಲು ಯತ್ನಿಸುತ್ತಿರುವಂತಿದೆ.
ಆದರೆ ಸುಪ್ರೀಂ ಕೋರ್ಟ್‌ನ ಹೊಸ ತೀರ್ಪು ಆ ರಫೇಲ್ ವಿವಾದವನ್ನು ಚುನಾವಣೆಯ ನಡುವೆ ಚರ್ಚೆಗೆ ತರಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಚುನಾವಣಾ ರಾಜಕಾರಣದಲ್ಲಿ ಮೋದಿವರಿಗೆ ಮತ್ತು ಬಿಜೆಪಿಗೆ ದೊಡ್ಡ ಏಟನ್ನೇ ನೀಡಲಿದೆ.
ಸಿಜೆಐ ರಂಜನ್ ಗೊಗಾಯ್, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಸಂಜಯ್ ಕಿಶನ್ ಕೌಲ್ ಅವರಿರುವ ತ್ರಿಸದಸ್ಯ ಪೀಠವು ಸರ್ಕಾರದ ಆಕ್ಷೇಪಣೆಯನ್ನು ಪಕ್ಕಕ್ಕೆ ತಳ್ಳಿ, ದೂರುದಾರರು ಸಲ್ಲಿಸಿರುವ ದಾಖಲೆಗಳ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿರುವುದರಿಂದ ವೈಯಕ್ತಿಕವಾಗಿ ಮೋದಿಯವರ ಸಂಕಟ ಮತ್ತಷ್ಟು ಹೆಚ್ಚಾಗಿದೆ.
ಇಲ್ಲೊಂದು ವಿಚಾರವನ್ನು ನಾವು ಗಮನಿಸಲೇಬೇಕು, 2019ರ ಈ ಚುನಾವಣೆ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನು ನಿರ್ಧರಿಸುವುದಕ್ಕಿಂತಲೂ ಹೆಚ್ಚಾಗಿ, ಫಲಿತಾಂಶದ ನಂತರ ಮೋದಿ ಎಷ್ಟು ಪ್ರಭಾವಿಯಾಗಿ ಉಳಿಯುತ್ತಾರೆ, ರಾಜಕೀಯವಾಗಿ ಎಷ್ಟು ದುರ್ಬಲರಾಗುತ್ತಾರೆ ಎಂಬುದನ್ನು ನಿರ್ಧರಿಸುವ ಮಾನದಂಡವಾಗಿದೆ. ಪ್ರಸ್ತುತ ಸರ್ಕಾರದ ವಿರುದ್ಧ ಜನರ ಮನದಲ್ಲಿ ಆಡಳಿತವಿರೋಧಿ ಅಲೆ ಇದ್ದಾಗ್ಯೂ, ಕಾಂಗ್ರೆಸ್ ಪಕ್ಷವಾಗಲಿ ಅಥವಾ ಅದರ ಯುಪಿಎ ಸಂರಚನೆಯಾಗಲಿ ಅಥವಾ ತೃತೀಯ ಶಕ್ತಿಗಳಾಗಲಿ ಎನ್‌ಡಿಎ ಕೂಟವನ್ನು ಓವರ್‌ಟೇಕ್ ಮಾಡಿಬಿಡುವಂತ ರಾಜಕೀಯ ಸನ್ನಿವೇಶ ಸದ್ಯದಲ್ಲಿ ಇಲ್ಲ. ಎನ್‌ಡಿಎ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿದರೂ ಇತರೆ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳ (ಎನ್‌ಡಿಯ ಮೈತ್ರಿಕೂಟದಲ್ಲಿಲ್ಲದ) ನೆರವಿನೊಂದಿಗೆ ಬಹು ಪ್ರಯಾಸದಿಂದ ಸರ್ಕಾರ ರಚಿಸಬೇಕಾದ ಸಾಧ್ಯತೆಯೇ ದಟ್ಟವಾಗಿ ಕಾಣುತ್ತಿದೆ. ಅಂಥಾ ಸಂದರ್ಭದಲ್ಲಿ ತಾನೇ ತಾನಾಗಿ ಸೃಷ್ಟಿಸಿಕೊಂಡಿರುವ ‘attitude nature’ನಿಂದ ಬಹುಪಾಲ ರಾಜಕೀಯ ನಾಯಕರಿಗೆ ಬೇಡವಾಗಿರುವ ಮೋದಿಯನ್ನು ಪಕ್ಕಕ್ಕೆ ಸರಿಸಲು ಪಕ್ಷದೊಳಗೇ ಇರುವ ಮೋದಿ-ವಿರೋಧಿಗಳಿಗೆ ಈ ರಫೇಲ್ ಹಗರಣ ಮತ್ತು ಸುಪ್ರೀಂ ಕೋರ್ಟ್‌ನ ಈ ತೀರ್ಪು ದೊಡ್ಡ ಅಸ್ತ್ರಗಳಾಗಿ ಬಳಕೆಯಾಗುವ ಸಾಧ್ಯತೆಯುಂಟು.
ಇನ್ನು ಕೊನೆಯದಾಗಿ, ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ವಿಚಾರಣೆ ದೂರುದಾರರ ಪರವಾಗಿಯೇ ಸಾಗಿ ಆರೋಪಿಗಳಿಗೆ ಶಿಕ್ಷೆ ಆಗಿಯೇ ಬಿಡುತ್ತೆ ಎಂಬ ಅತೀ-ಕಲ್ಪನೆಯೂ ಸಲ್ಲದು. ಯಾಕೆಂದರೆ ಬೋಫೋರ್ಸ್ ಹಗರಣದಿಂದ, ಬಾಬ್ರಿ ಮಸೀದಿ ಧ್ವಂಸದವರೆಗೆ ಈ ದೇಶ ಕಂಡ ಘನಘೋರ ಪ್ರಕರಣಗಳ ವಿಚಾರಣೆ ಸಾಗುತ್ತಿರುವ ವೇಗ ನೋಡಿದರೆ ಅಥವಾ ಜನರೇ ದಿಗ್ಭ್ರಮೆಗೊಳ್ಳುವಂಥಾ ಅಚಾನಕ್ ತೀರ್ಪುಗಳು ಹೊರಬಿದ್ದ ನಿದರ್ಶನಗಳನ್ನು ನೋಡಿದರೆ ಯಾವುದನ್ನೂ ಹೀಗೇ ಎಂದು ಊಹಿಸುವುದು ಕಷ್ಟ. ಆದರೆ ಒಂದಂತೂ ಸತ್ಯ, ಕಳೆದ ವರ್ಷ ಡಿಸೆಂಬರ್ 14ರಂದು ಇದೇ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ನೋಡಿ ನ್ಯಾಯಾಂಗದ ಮೇಲೆ ವಿಶ್ವಾಸವನ್ನೇ ಕಳೆದುಕೊಂಡಿದ್ದವರಿಗೆ ನ್ಯಾಯಾಂಗದ ಮೇಲೆ ಮತ್ತೆ ವಿಶ್ವಾಸ ಮೂಡಿದೆ, ಮುಖ್ಯವಾಗಿ ರಫೇಲ್ ದೂರುದಾರರ ಹುಮ್ಮಸ್ಸು ಎಷ್ಟರಮಟ್ಟಿಗೆ ಹೆಚ್ಚಾಗಿದೆಯೆಂದರೆ, ಈ ವಿಚಾರಣೆಯಲ್ಲೂ ತಮಗೆ ವ್ಯತಿರಕ್ತ ತೀರ್ಪು ಹೊರಬಂದರೂ, ಮತ್ತೊಮ್ಮೆ ಮೇಲ್ಮನವಿಗೆ ಹೋಗುವಷ್ಟು ಚೈತನ್ಯ ಅವರ ಮಾತುಗಳಲ್ಲಿ ಕಾಣುತ್ತಿದೆ. ಅಷ್ಟರಲ್ಲಾಗಲೆ, ಬಹುಶಃ ಅಧಿಕಾರದಿಂದ ದೂರವಾಗಿಸಲ್ಪಟ್ಟ ಅಥವಾ ದುರ್ಬಲ ಅಧಿಕಾರಸ್ಥನ ಸ್ಥಾನದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಮೋದಿಯವರ ಸಂಕಟದ ಅಸಲೀ ಕಾರಣಗಳಿರುವುದೇ ಅವರ ಆ ಚೈತನ್ಯಗಳಲ್ಲಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...