ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡಬಹುದಾಗಿದ್ದರೂ ನೀಡದೆ, ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುವುದು ಹೆಚ್ಚಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯ ಮತ್ತು ಆಕ್ಸ್‌ಫರ್ಡ್ ಹ್ಯೂಮನ್ ರೈಟ್ಸ್ ಹಬ್ ಭಾನುವಾರ ಆಯೋಜಿಸಿದ್ದ ‘ಬರ್ಕ್ಲಿ ಸೆಂಟರ್ ಫಾರ್ ಕಂಪೇರಿಟಿವ್ ಈಕ್ವಲಿಟಿ ಆ್ಯಂಡ್ ಆ್ಯಂಟಿ ಡಿಸ್ಕ್ರಿಮಿನೇಷನ್’ನ 11ನೇ ವಾರ್ಷಿಕ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ನಾವು ಮೊದಲು ಕಾರ್ಯನಿರ್ವಹಿಸುವ ಮತ್ತು ನಂತರ ಕ್ಷಮೆಯನ್ನು ಪಡೆಯುವ ಸಮಾಜದಲ್ಲಿ ವಾಸಿಸುತ್ತಿದ್ದೇವೆ ಎಂದು ತೋರುತ್ತದೆ. ಸಾರ್ವಜನಿಕ ವಲಯದ ಅಧಿಕಾರಿಗಳು ರಾಜಕೀಯ ಪ್ರೇರಿತ ರೀತಿಯಲ್ಲಿ ಹೋರಾಟಗಾರರು, ಶಿಕ್ಷಣ ತಜ್ಞರು, ಪತ್ರಕರ್ತರು ಮತ್ತು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳು ಸೇರಿದಂತೆ ರಾಜಕಾರಣಿಗಳನ್ನು ಬಂಧಿಸುವ ಮೂಲಕ ರಾಜಕೀಯ ಪ್ರೇರಿತ ರೀತಿಯಲ್ಲಿ ವರ್ತಿಸುತ್ತಿದ್ದಾರೆ” ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಜಾನೀನು ನೀಡುವಲ್ಲಿ ನ್ಯಾಯಾಧೀಶರು ಪ್ರತಿ ಪ್ರಕರಣದ ಆಳ-ಅಗಲವನ್ನು ಪರಿಶೀಲಿಸಿ, ವಿವೇಚನೆ ಬಳಸಬೇಕು ಎಂದರು.
ವಿಚಾರಣಾ ನ್ಯಾಯಾಲಯ ಮತ್ತು ಕೆಳ ಹಂತದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಜಾಮೀನು ನೀಡಿದರೆ ಅವರನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ಅತ್ಯಂತ ದೊಡ್ಡ ಸಮಸ್ಯೆ. ಈ ಕಾರಣದಿಂದಲೇ ನ್ಯಾಯಾಧೀಶರು ಹೊಣೆಗಾರಿಕೆಯನ್ನು ಉನ್ನತ ನ್ಯಾಯಾಲಯಗಳಿಗೆ ದಾಟಿಸುತ್ತಿದ್ದಾರೆ. ನ್ಯಾಯಾಧೀಶರ ಮೇಲೆ ನಂಬಿಕೆ ಇರಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕೆಳ ಹಂತದ ನ್ಯಾಯಾಲಯಗಳಲ್ಲಿ ಜಾಮೀನು ಸಿಗದಬೇಕಾದವರಿಗೆ ಸಿಗುತ್ತಿಲ್ಲ. ಈ ಕಾರಣಕ್ಕೆ ಅವರು ಹೈಕೋರ್ಟ್‌ಗೆ ಹೋಗುತ್ತಿದ್ದಾರೆ. ಅಲ್ಲೂ ಜಾಮೀನು ಸಿಗದಿದ್ದಾಗ ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದಾರೆ. ಇದರಿಂದ ಅಕ್ರಮ ಅಥವಾ ಅನಗತ್ಯ ಬಂಧನಕ್ಕೊಳಗಾದವರು ಮತಷ್ಟು ದಿನಗಳ ಕಾಲ ಬಂಧನದಲ್ಲೇ ಇರುವಂತೆ ಆಗಿದೆ ಎಂದು ಸಿಜೆಐ ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ : ಲಡಾಖ್ ರಾಜ್ಯ ಸ್ಥಾನಮಾನದ ಬೇಡಿಕೆ; ಆಗಸ್ಟ್ 15ರಿಂದ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ


