ಹತ್ರಾಸ್ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ವರದಿ ಮಾಡಲು ತೆರಳಿದ್ದಾಗ ಉತ್ತರ ಪ್ರದೇಶ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಲು ನಿರಾಕರಿಸಿದೆ.
ನವೆಂಬರ್ 20 ರ ಶುಕ್ರವಾರದಂದು ಪ್ರಕರಣದ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದಿರುವ ಸುಪ್ರೀಂಕೋರ್ಟ್, ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಕೋರಿ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ
ಕೇರಳ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಎಸ್.ಎ. ಬೊಬ್ಡೆಯವರ ನೇತೃತ್ವದ ಪೀಠ, ಅರ್ಜಿದಾರರು ಜಾಮೀನಿಗಾಗಿ ಅಲಹಾಬಾದ್ ಹೈಕೋರ್ಟನ್ನು ಯಾಕೆ ಸಂಪರ್ಕಿಸಿಲ್ಲ ಎಂದು ಕೇಳಿದೆ.
ಇದಕ್ಕೆ ಉತ್ತರಿಸಿದ ಸಿದ್ದೀಕ್ ಕಪ್ಪನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, “ ಅವರನ್ನು ಭೇಟಿಯಾಗಲು ಕೂಡ ಸಾಧ್ಯವಾಗುತ್ತಿಲ್ಲ. ಇನ್ನು ಹೈಕೋರ್ಟ್‌ಗೆ ಹೋಗುವುದು ಹೇಗೆ. FIR ನಲ್ಲಿ ಸಿದ್ದೀಕ್ ಕಪ್ಪನ್ ಹೆಸರಿಲ್ಲ, ಯಾವುದೇ ಅಪರಾಧಗಳ ಆರೋಪವಿಲ್ಲ ಅದರೂ ಅಕ್ಟೋಬರ್ 5 ರಿಂದ ಅವರು ಜೈಲಿನಲ್ಲಿದ್ದಾರೆ” ಎಂದರು.
ದಲಿತ ಯುವತಿಯ ಅತ್ಯಾಚಾರ ಹಾಗೂ ಕೊಲೆಯ ಬಗ್ಗೆ ವರದಿ ಮಾಡುವುದಕ್ಕಾಗಿ ದೆಹಲಿಯಿಂದ ಹತ್ರಾಸ್‌ಗೆ ಹೊರಟಿದ್ದ ಸಿದ್ದೀಕ್ ಅವರನ್ನು ಅಕ್ಟೋಬರ್ 6 ರಂದು ಉತ್ತರ ಪ್ರದೇಶ ಪೊಲೀಸರು PFI ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಮಥುರಾದಲ್ಲಿ ಬಂಧಿಸಿದ್ದರು.
ಇದನ್ನೂ ಓದಿ: PFI ಸಂಬಂಧ ಆರೋಪ; ಹತ್ರಾಸ್‌ಗೆ ಹೊರಟ ಕೇರಳದ ಪತ್ರಕರ್ತ ಸೇರಿ ಮೂವರ ಬಂಧನ


