ಬೇಸಿಗೆಯಿಂದ ನೀರಿನ ಅಭಾವ ಎದುರಿಸುತ್ತಿರುವ ದೆಹಲಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಹಿಮಾಚಲ ಪ್ರದೇಶ ಸರ್ಕಾರಕ್ಕೆ ಆದೇಶಿಸಿದ್ದು, ಈ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುವಂತೆ ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ.
ಹಿಮಾಚಲ ಪ್ರದೇಶ ಸರ್ಕಾರಕ್ಕೆ 137 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಈ ನೀರು ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ಗೆ ತಲುಪಲಿದೆ. ಇದರಿಂದ ಹರಿಯಾಣವು ವಝೀರಾಬಾದ್ ಬ್ಯಾರೇಜ್ ಮೂಲಕ ದೆಹಲಿಗೆ ನೀರನ್ನು ವರ್ಗಾಯಿಸಲು ಅನುಕೂಲವಾಗುತ್ತದೆ.
ನೀರಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ರಾಷ್ಟ್ರ ರಾಜಧಾನಿಗೆ ತಕ್ಷಣವೇ ನೀರು ಬಿಡುಗಡೆ ಮಾಡಲು ಹರಿಯಾಣ ರಾಜ್ಯಕ್ಕೆ ನಿರ್ದೇಶನಗಳನ್ನು ಕೋರಿ ದೆಹಲಿ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದೆ.
ಈ ಹಿಂದಿನ ವಿಚಾರಣೆಯ ವೇಳೆ ಎರಡೂ ಭಾಗದವರ ವಾದ ಆಲಿಸಿದ್ದ ನ್ಯಾಯಾಲಯ, ಜೂನ್ 5ರಂದು ಎಲ್ಲಾ ಮಧ್ಯಸ್ಥಗಾರ ರಾಜ್ಯಗಳ ತುರ್ತು ಸಭೆ ನಡೆಸಿ, ಜೂನ್ 6 ರಂದು ವರದಿ ಸಲ್ಲಿಸಲು ಯಮುನಾ ಮೇಲ್ದಂಡೆ ಮಂಡಳಿಗೆ ಸೂಚಿಸಿತ್ತು.
ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬೇಸಿಗೆ ಕಾಲದ ಪೀಠದ ನ್ಯಾಯಾಧೀಶರಾದ ಪ್ರಶಾಂತ್ ಕೆ ಮಿಶ್ರಾ ಮತ್ತು ಕೆ ವಿ ವಿಶ್ವನಾಥನ್ ಅವರು ನೀರಿನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ.
ದೆಹಲಿಗೆ ನೀರು ಹರಿಸಲು ತಮ್ಮದು ಯಾವುದೇ ಅಭ್ಯಂತರವಿಲ್ಲ ಎಂದು ಹಿಮಾಚಲ ಪ್ರದೇಶ ತಿಳಿಸಿದೆ. ಹಿಮಾಚಲದಿಂದ ಬಿಡುಗಡೆಯಾಗುವ ನೀರನ್ನು ಪ್ರತ್ಯೇಕಗೊಳಿಸಿ ದೆಹಲಿಗೆ ಹರಿಸಲು ಯಾವುದೇ ಯಾಂತ್ರಿಕ ಮಾನದಂಡಗಳಿಲ್ಲ ಎಂದು ಹರಿಯಾಣ ಹೇಳಿದೆ.
ಇದನ್ನೂ ಓದಿ : ವಾಲ್ಮೀಕಿ ನಿಗಮದಲ್ಲಿನ ಹಗರಣ ಪ್ರಕರಣ: ಸಚಿವ ಬಿ ನಾಗೇಂದ್ರ ರಾಜೀನಾಮೆ


