2024ರ ಲೋಕಸಭೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ನೀತಿ ನಿರ್ಧಾರಗಳಲ್ಲಿ ನ್ಯಾಯಾಂಗವು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ ಪರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ, ಚುನಾವಣೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಿ ಎಂದು ನಾವು ಆದೇಶಿಸಲಾಗುವುದಿಲ್ಲ. ಇದೊಂದು ಶುದ್ಧ ನೀತಿ ನಿರ್ಧಾರದ ವಿಷಯವಾಗಿದೆ. ಇದನ್ನು ತಳ್ಳಿ ಹಾಕುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಅಂಗವಿಕಲರಾಗಿದ್ದಲ್ಲಿ ತಮ್ಮ ಅಂಗವೈಕಲ್ಯ ಸ್ಥಿತಿಯ ಬಗ್ಗೆ, ಯಾವುದಾದರೂ ಇದ್ದರೆ, ನಾಮನಿರ್ದೇಶನ ನಮೂನೆಗಳಲ್ಲಿ ಬಹಿರಂಗಪಡಿಸಲು ಕೇಳಿಕೊಳ್ಳಬೇಕೆಂದು ಪಿಐಎಲ್‌ನಲ್ಲಿನ ಮನವಿಯನ್ನು ಸಲ್ಲಿಸಲಾಗಿತ್ತು. ಇದನ್ನು ಯಾಕೆ ಬಹಿರಂಗಪಡಿಸಬೇಕೆಂದು ಪೀಠವು ಪ್ರಶ್ನಿಸಿದೆ. ನಾಮನಿರ್ದೇಶನದಲ್ಲಿ ವ್ಯಕ್ತಿಯೊಬ್ಬ ಅಂಗವಿಕಲ ಎಂದು ಏಕೆ ಬಹಿರಂಗಪಡಿಸಬೇಕು ಎಂದು ಪೀಠವು ಪ್ರಶ್ನಿಸಿದೆ.
ದೆಹಲಿಯ ದ್ವಾರಕಾ ನಿವಾಸಿ ಜಯಂತ್ ರಾಘವ್ ಎಂಬವರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.



ವಿಕಲಚೇತನರಿಗೆ ರಾಜಕೀಯ ಸ್ಥಿರತೆಗಾಗಿ ಮೀಸಲಾತಿ ನೀಡಬೇಕು ಎಂದು ವಿಕಲಚೇತನರ ರಾಜಕೀಯ ಮೀಸಲಾತಿ ಹೋರಾಟ ಸಮಿತಿ ಹಲವು ವರ್ಷಗಳಿಂದ ಬೇಡಿಕೆಯನ್ನು ಮುಂದಿಡುತ್ತಾ ಬಂದಿತ್ತು. ಕರ್ನಾಟಕವೊಂದರಲ್ಲೇ 17 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಆದರೆ, ಅವರಿಗೆ ಒಬ್ಬ ಚುನಾಯಿತ ಪ್ರತಿನಿಧಿ ಇಲ್ಲ. ಆದ್ದರಿಂದ ಅಂಗವಿಕಲರು ತಮ್ಮ ಹಕ್ಕುಗಳನ್ನು ರಕ್ಷಿಸಲು ಸಂಸತ್ತಿನ ಮಟ್ಟದಲ್ಲಿ ಅವರನ್ನು ಪ್ರತಿನಿಧಿಸಲು ಪ್ರತಿನಿಧಿಯ ಅಗತ್ಯವಿದೆ ಎನ್ನವುದು ವಿಕಲ ಚೇತನರ ಆಗ್ರಹ. ಭಾರತೀಯ ಚುನಾವಣಾ ಆಯೋಗವು ಅಂಗವಿಕಲರಿಗೆ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿಕಲಚೇತನರು ಆಗ್ರಹಿಸಿದ್ದರು.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರ ಪಟ್ಟಣ ಶಾಸಕರ, ಸಂಸದರ ಅನುದಾನ ಮತ್ತು ಇನ್ನಿತರೆ ಅನುದಾನ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಕಾರಣ ಅಂಗವಿಕಲರ ಪ್ರತಿನಿಧಿಗಳು ಶಾಸನ ರಚನೆ ಮಾಡುವ ಸಂದರ್ಭದಲ್ಲಿ ಇಲ್ಲದ ಕಾರಣ ಪೂರಕ ಕ್ರಿಯಾ ಯೋಜನೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅಂಗವಿಕಲರ ಸಮಿತಿಯು ಹೇಳಿಕೊಂಡಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆ 2016ರ ಕಾಯ್ದೆಯ ಅಡಿಯಲ್ಲಿ ಕಲಂ 34ರ ಅನ್ವಯ ಅಂಗವಿಕಲರಿಗೆ ರಾಜಕೀಯ ಮೀಸಲಾತಿ ಕಲ್ಪಿಸಲು ಕಾನೂನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂಬವುದು ಅಂಗವಿಕಲರ ಸಮಿತಿಯ ಆಗ್ರಹವಾಗಿದೆ.
ಇದನ್ನು ಓದಿ: ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಕಳೆದ 6 ತಿಂಗಳಲ್ಲಿ ಅತಿ ಹೆಚ್ಚಳ: ವರದಿ