ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರವನ್ನು ರದ್ದು ಮಾಡಿದೆ ಎಂದು ಸೋಮವಾರ ದಕ್ಷಿನ ಕನ್ನಡ ಸಂಸದ ನಳಿನ್ ಕುಮಾರ್ ಹೇಳಿದ್ದಾರೆ. ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯು ನಿರಂತರ ಆರು ವರ್ಷಗಳಿಗಿಂತಲೂ ಹೆಚ್ಚು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದು, ಹೋರಾಟಗಾರರ ನಿರಂತರ ಹೋರಾಟಕ್ಕೆ ಬಿಜೆಪಿ ಸರ್ಕಾರ ಕೊನೆಗೂ ಮಣಿದಿದೆ.
ಈ ಹಿಂದೆ ರಾಜ್ಯ ಸರ್ಕಾರ ಕೂಡಾ ಇದು ಅಕ್ರಮ ಟೋಲ್ ಎಂದು ಒಪ್ಪಿಕೊಂಡು, ಟೋಲ್ ತೆರವು ಮಾಡುವುದಾಗಿ ಹೇಳಿಕೊಂಡಿತ್ತು. ಸರ್ಕಾರ ಅದನ್ನು ಅಕ್ರಮ ಎಂದು ಹೇಳಿದ ನಂತರ ಕೂಡಾ ಅಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವುದನ್ನು ನಿಲ್ಲಿಸಿರಲಿಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಹೀಗಾಗಿ ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಳೆದ ಅಕ್ಟೋಬರ್ 18ರಂದು ಟೋಲ್ ಮುತ್ತಿಗೆ ನಡೆಸಿ, ಬಂಧನಕ್ಕೆ ಒಳಗಾಗಿದ್ದರು. ಅದಾಗ್ಯೂ ಟೋಲ್ ಸಂಗ್ರಹ ನಿಲ್ಲದ ಕಾರಣಕ್ಕೆ ಟೋಲ್ ಕೇಂದ್ರದ ಹತ್ತಿರವೆ ಅನಿರ್ಧಿಷ್ಠಾವಧಿ ಧರಣಿಯನ್ನು ಕೈಗೊಂಡಿದ್ದರು. ಈ ಧರಣಿಯೂ ಇದೀಗ 18ನೇ ದಿನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ವಿರೋಧಿ ಹೋರಾಟ; ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್ ಎಚ್ಚರಿಕೆ
ಇಂದು ಸುರತ್ಕಲ್ ಟೋಲ್ ಕೇಂದ್ರದ ಬಗ್ಗೆ ಟ್ವೀಟ್ ಮಾಡಿರುವ ಸಂಸದ ನಳಿನ್ ಕುಮಾರ್, “ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದೆ” ಎಂದು ಹೇಳಿದ್ದಾರೆ. ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಒಕ್ಕೂಟ ಸರ್ಕಾರದ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ” ಎಂದು ಹೇಳಿದ್ದಾರೆ.
ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ, “ನಳಿನ್ ಕುಮಾರ್ ಟ್ವೀಟ್ ಮಾಡಿದ ನಂತರ ಅಧಿಸೂಚನೆ ಹೊರಟಿದೆ ಎಂದು ಸುದ್ದಿಯಿದೆ. ಆದರೆ ಈ ಬಗ್ಗೆ ನಮಗೆ ಖಾತರಿಯಾವುದು ಇಲ್ಲಿನ ಟೋಲ್ ಕೇಂದ್ರದಲ್ಲಿ ಹಣ ಸಂಗ್ರಹ ನಿಂತ ಮೇಲೆಯಷ್ಟೆ” ಎಂದು ಹೇಳಿದ್ದಾರೆ.
“ಅಲ್ಲದೆ, ಈ ವರೆಗೆ ನಮಗೆ ಜಿಲ್ಲಾಡಳಿತ ಆಗಲಿ, ಬೇರೆ ಅಧಿಕಾರಿಗಳಾಲಿ ಯಾವುದೆ ಮಾಹಿತಿ ನೀಡಿಲ್ಲ. ಮಾಧ್ಯಮಗಳಲ್ಲಿ ಸುದ್ದಿಯಷ್ಟೆ ಹರಿದಾಡುತ್ತಿದೆ. ಹಣ ಸಂಗ್ರಹ ನಿಲ್ಲಿಸಿದ ನಂತರವೇ ನಾವು ಇಲ್ಲಿಂದ ತೆರಳುವುದು. ಅಲ್ಲಿವರೆಗೂ ಇಲ್ಲಿ ಪ್ರತಿಭಟನೆ ನಡೆಯುತ್ತದೆ” ಎಂದು ನಾನುಗೌರಿ.ಕಾಂ ಜೊತೆಗೆ ಮಾತನಾಡುತ್ತಾ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್‌ಗೇಟ್ ವಿರೋಧಿ ಹೋರಾಟಗಾರರ ವಿರುದ್ಧ 2 ಪ್ರತ್ಯೇಕ FIR ದಾಖಲು
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಕೂಡಾ ಬರೆದಿರುವ ಮುನೀರ್ ಕಾಟಿಪಳ್ಳ, “ಟೋಲ್ ತೆರವು ಹೋರಾಟ ಗೆಲುವಿನ ಸನಿಹ ತಲುಪಿದೆ. ಬಾಯಿ ಮಾತು, ಟ್ವೀಟ್, ಪೋಸ್ಟ್ ಗಳನ್ನು ನಂಬಿ ಹಗಲು ರಾತ್ರಿ ಧರಣಿ ನಿಲ್ಲಿಸಲಾರೆವು. ಅಧಿಕೃತ ಆದೇಶ ಕೈ ಸೇರಿ, ಅಕ್ರಮ ಟೋಲ್‌ನಲ್ಲಿ ಸಂಗ್ರಹ ಸ್ಥಗಿತಗೊಂಡ ಮೇಲಷ್ಟೆ ಹಗಲು ರಾತ್ರಿ ಧರಣಿ ಮುಕ್ತಾಯಗೊಳ್ಳುತ್ತದೆ” ಎಂದು ಹೇಳಿದ್ದಾರೆ.


