Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳಗಾವಿ ಗ್ರಾಮೀಣ: "ಕುಂದಾ" ಲಕ್ಷ್ಮೀ ಹೆಬ್ಬಾಳ್ಕರ್‌ಗೋ? ರಮೇಶ್ ಜಾರಕಿಹೊಳಿಗೋ?

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳಗಾವಿ ಗ್ರಾಮೀಣ: “ಕುಂದಾ” ಲಕ್ಷ್ಮೀ ಹೆಬ್ಬಾಳ್ಕರ್‌ಗೋ? ರಮೇಶ್ ಜಾರಕಿಹೊಳಿಗೋ?

- Advertisement -
- Advertisement -

ಸಹ್ಯಾದ್ರಿ ತಪ್ಪಲಲ್ಲಿರುವ ಬೆಳಗಾವಿ ಜಿಲ್ಲೆಯ “ರಾಜಧಾನಿ” ಕುಂದಾ ನಗರಿಯ (ಬೆಳಗಾವಿ) ಮಗ್ಗುಲಲ್ಲಿರುವ ಹಳ್ಳಿಗಳನ್ನು ಸೇರಿಸಿ ರಚಿಸಲಾಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ರಾಜ್ಯದ ಹೈವೋಲ್ಟೇಜ್ ಅಖಾಡಗಳಲ್ಲಿ ಒಂದು. ಬೆಳಗಾವಿ ಜಿಲ್ಲೆಯ ಸೇರಿಗೆ ಸವ್ವಾ ಸೇರು ರಾಜಕೀಯ ಒಂದು ತೂಕವಾದರೆ, ಅದಕ್ಕಿಂತ ಒಂದು ಗುಂಜಿ ಹೆಚ್ಚೇ ತೂಗುತ್ತದೆ ಬೆಳಗಾವಿ ಗ್ರಾಮೀಣ ಮತ್ತು ಗೋಕಾಕ್‌ನ ವೈಯಕ್ತಿಕ ರೋಷ-ದ್ವೇಷದ ಹಣಾಹಣಿ! ಬೆಳಗಾವಿ ಗ್ರಾಮೀಣ ಕುರುಕ್ಷೇತ್ರದಲ್ಲಿ ಸಮಷ್ಠಿ ಹಿತ-ಅಭಿವೃದ್ಧಿ-ಪಕ್ಷ ನಿಷ್ಠೆಯ ಜನಪರ ಹೋರಾಟಕ್ಕೆ ಕಿಮ್ಮತ್ತಿಲ್ಲ; ಇಲ್ಲೇನಿದ್ದರೂ “ಖಾಸಗಿ” ಪ್ರತಿಷ್ಠೆಯ ಜಿದ್ದಾಜಿದ್ದಿ. ಕರ್ನಾಟಕ ಕಾಂಗ್ರೆಸ್‌ನ ಮುಂಚೂಣಿ ನಾಯಕಿಯಾಗಿ ಅವತರಿಸಿರುವ ಈ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆಪರೇಷನ್ ಕಮಲ ಸರಕಾರದ ರೂವಾರಿ ಎಂದೇ ’ಹೆಸರುವಾಸಿ’ ಆಗಿರುವ ಹತ್ತಿರದ ಗೋಕಾಕ್ ಎಮ್ಮೆಲ್ಲೆ ರಮೇಶ್ ಜಾರಕಿಹೊಳಿ ಮಧ್ಯದ ’ಈಗೋ’ ಸಂಘರ್ಷದಿಂದಾಗಿ ಬೆಳಗಾವಿ ಗ್ರಾಮೀಣ ರಣಕಣ ಇಡೀ ರಾಜ್ಯದಲ್ಲಿ ಸುದ್ದಿ-ಸದ್ದು ಮಾಡುತ್ತಿದೆ.

ಕಾಂಗ್ರೆಸಿಗರಾಗಿದ್ದ ರಮೇಶ್ ಜಾರಕಿಹೊಳಿ ಹಾಗು ಲಕ್ಷ್ಮೀ ಹೆಬ್ಬಾಳ್ಕರ್ ಕೇಂದ್ರಿತ ಬೆಳಗಾವಿ ರಾಜಕಾರಣದ ಜಿದ್ದಾಜಿದ್ದಿ ಯಡಿಯೂರಪ್ಪರ ಆಪರೇಷನ್ ಕಮಲ ಸರಕಾರ ರಚನೆಗೆ ಕಾರಣ ಆಗಿತ್ತೆಂಬುದು ಇತಿಹಾಸ. ರಮೇಶ್-ಲಕ್ಷ್ಮೀ ಜಗಳದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಎಂಟ್ರಿಯಾಗಿದ್ದು, ಕೆರಳಿದ ರಮೇಶ್ ಸಮ್ಮಿಶ್ರ ಸರಕಾರ ಕೆಡವಿದ್ದು, ಬಿಜೆಪಿ ಸರಕಾರದಲ್ಲಿ ಆಯಕಟ್ಟಿ ಸ್ಥಾನದ ಇನಾಮು ಪಡೆಯುವುದರೊಂದಿಗೆ ರಮೇಶ್ ಪ್ರಭಾವಿಯಾಗಿದ್ದು, ನಂತರ ಸೆಕ್ಸ್ ಸಿಡಿ ಪ್ರಕರಣದಲ್ಲಿ ಸಿಲುಕಿ ಹೀನಾಯವಾಗಿ ಮಂತ್ರಿಗಿರಿ ಬಿಡಬೇಕಾದಂಥ ರೋಚಕ ಪ್ರಸಂಗಗಳು ಬಿರಬಿರನೆ ಒಂದರ ಹಿಂದೊಂದರಂತೆ ನಡೆದುಹೋಯಿತು. ಈಗ ಈ ಕುಸ್ತಿ ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಸೋಲಿಸಲು ರಮೇಶ್ ಮತ್ತು ರಮೇಶ್‌ರನ್ನು ಗೋಕಾಕದಲ್ಲಿ ಮಣಿಸಲು ಲಕ್ಷ್ಮೀ ತಂಡಗಳು “ಶಸ್ತ್ರ”ಸನ್ನದ್ಧ ಆಗುವು ರೊಂದಿಗೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ.

ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಬೆಳಗಾವಿ ಅಸೆಂಬ್ಲಿ ಕ್ಷೇತ್ರದ ಆರ್ಥಿಕ ಜೀವ-ಜೀವಾಳ ಕೃಷಿ ಕಾಯಕ; ವಾಣಿಜ್ಯ ವ್ಯವಹಾರ ಮತ್ತು ನೇಕಾರಿಕೆಯಂಥ ಕಸುಬಿನಿಂದಲು ಒಂದಿಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಇನ್ನೊಂದಿಷ್ಟು ಕುಟುಂಬಗಳು ಪಕ್ಕದ ಬೆಳಗಾವಿ ನಗರದ ಕೈಗಾರಿಕೆಗಳನ್ನು ಅವಲಂಬಿಸಿವೆ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಾಮೀಪ್ಯದಿಂದಾಗಿ ಬೆಳಗಾವಿಯಲ್ಲಿ ಸ್ಥಳೀಯ ಕನ್ನಡ ಸಂಸ್ಕೃತಿಯೊಂದಿಗೆ ಮರಾಠಿ-ಕೊಂಕಣಿ ಸಂಸ್ಕೃತಿಗಳು ಸಮ್ಮಿಳಿತಗೊಂಡಿವೆ. ಈ ವೈವಿಧ್ಯಮಯ ಭಾಷಾ ಸಾಂಸ್ಕೃತಿಕ ನೆಲದಲ್ಲಿ ಉತ್ತರ ಕರ್ನಾಟಕದ ಶಕ್ತಿಕೇಂದ್ರ ಸುವರ್ಣ ಸೌಧ, ಸುಳೇಬಾವಿ ಮಹಾಲಕ್ಷ್ಮೀ ದೇವಸ್ಥಾನ, ಸಾಂಬ್ರಾ ವಿಮಾನ ನಿಲ್ದಾಣ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ರಾಣಿ ಕಿತ್ತೂರು ಚೆನ್ನಮ್ಮ ವಿಶ್ವವಿದ್ಯಾಲಯ, ರಾಜ ಹಂಸಗಡ ಕೋಟೆಯಂಥ ವಿಶೇಷತೆಗಳಿವೆ. ಭಾಷಾ ವೈಷಮ್ಯದ ರಾಜಕಾರಣದ ಆಖಾಡವಾದ ಬೆಳಗಾವಿ ಗ್ರಾಮೀಣದಲ್ಲಿ ಮರಾಠಿ ಮತದಾರರದ್ದೇ ಪ್ರಾಬಲ್ಯ. ಕ್ಷೇತ್ರದ ಹಳ್ಳಿಹಳ್ಳಿಯಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲಾಗಿದೆ; ಶಿವಾಜಿಯೊಂದಿಗಿನ ಮರಾಠರ ಭಾವನಾತ್ಮಕ ಸಂಬಂಧವನ್ನೇ ಬಂಡವಾಳ ಮಾಡಿಕೊಂಡು ಎಲ್ಲ ಪಕ್ಷದವರು ರಣತಂತ್ರ-ಕುತಂತ್ರ ಹೆಣೆಯುವುದು ಮಾಮೂಲಾಗಿದೆ.

ಸದಾ ತಗಾದೆ ತೆಗೆಯಲೆಂದೇ ಇರುವ ಎಂಈಎಸ್

2007ರ ಅಸೆಂಬ್ಲಿ ಕ್ಷೇತ್ರಗಳ ಮರುವಿನ್ಯಾಸ ಪ್ರಕ್ರಿಯೆಯಲ್ಲಿ ಜನ್ಮತಳೆದ “ಬೆಳಗಾವಿ ಗ್ರಾಮೀಣ” ಹೆಚ್ಚುಕಮ್ಮಿ ಹಿಂದಿನ ಉಚಗಾಂವ್ ಕ್ಷೇತ್ರವೇ ಆಗಿದೆ. ಉಚಗಾಂವ್ ಮತ್ತು ಹಿರೇಬಾಗೇವಾಡಿ ಕ್ಷೇತ್ರದ 8 ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳನ್ನು ಒಟ್ಟುಗೂಡಿಸಿ ರಚಿಸಲಾಗಿರುವ ಈ ಕ್ಷೇತ್ರ 1990ರ ದಶಕದ ಅಂತ್ಯದಲ್ಲಾದ ಹಿಂದುತ್ವದ ಧ್ರುವೀಕರಣಕ್ಕಿಂತ ಮೊದಲು ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಈಎಸ್) ಪ್ರಬಲ ನೆಲೆಯಾಗಿತ್ತು. 1967ರಲ್ಲಿ ರಚನೆಯಾಗಿ 2008ರಲ್ಲಿ ರದ್ದಾಗಿರುವ ಉಚಗಾಂವ್ ಕ್ಷೇತ್ರದ 9 ಚುನಾವಣಾ ಮೈಲಿಗಲ್ಲುಗಳ ಮೇಲೆ ಕಣ್ಣಹಾಯಿಸಿದರೆ 1999ರಲ್ಲೊಮ್ಮೆ ಸೋತಿದ್ದು ಬಟ್ಟರೆ ಉಳಿದೆಲ್ಲ ಸಲ ಇಲ್ಲಿ ಎಂಈಎಸ್ ಜಯಭೇರಿ ಬಾರಿಸಿದೆ. 1999ರಲ್ಲಿ ಬಿಜೆಪಿ ಮರಾಠಿ ಅಭ್ಯರ್ಥಿ ಹೂಡುವ ತಂತ್ರಗಾರಿಕೆಯಿಂದ ಎಂಈಎಸ್ ಹಿಡಿತ ತಪ್ಪಿತ್ತು. 2004ರಲ್ಲಿ ಮತ್ತೆ ಎಂಈಎಸ್ಸೇ ಗದ್ದಿತ್ತು. ಆದರೆ ಆನಂತರ ಈ ಎಂಈಎಸ್‌ನ ಕಿತಾಪತಿಗಳಿಂದ ಬೇಸತ್ತ ಮಂದಿ ಕಾಂಗ್ರೆಸ್ ಹಾಗು ಬಿಜೆಪಿಗಳತ್ತ ಮುಖ ಮಾಡಿದ್ದಾರೆ. ಹಾಗಂತ ಎಂಈಎಸ್ ಪೂರ್ಣ ದುರ್ಬಲವೇನೂ ಆಗಿಲ್ಲ; 2008ರಲ್ಲಿ ಬೆಳಗಾವಿ ಗ್ರಾಮೀಣ ಹೆಸರಿನ ಹೊಸ ಕ್ಷೇತ್ರ ರಚನೆಯಾದ ನಂತರ ಬಿಜೆಪಿ ಅಥವಾ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗಿದ್ದರೂ, ಎಂಈಎಸ್ ಗೆಲ್ಲುವ ಮಟ್ಟದ ಪೈಪೋಟಿ ಕೊಡುತ್ತಲೇ ಇದೆ.

ಯಾವ ಅಭ್ಯರ್ಥಿ ತನ್ನ ಪಕ್ಷದ ಸಾಂಪ್ರದಾಯಿಕ ಮತ ಬುಟ್ಟಿಯೊಂದಿಗೆ ನಿರ್ಣಾಯಕರಾಗಿರುವ ಮರಾಠಿ ಭಾಷಿಕರಲ್ಲಿ ಅರ್ಧದಷ್ಟಾದರೂ ಸೆಳೆಯುತ್ತಾರೋ ಆತ ವಿಧಾನಸಭೆ ಪ್ರವೇಶಿಸುತ್ತಾರೆಂಬುದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಗೆಲುವಿನ ಗುಟ್ಟು. ಹಾಗಾಗಿ ಸಕಲ ಪಕ್ಷದವರು ಈ ಮರಾಠಿ ಮಾತುಗಾರರ ಮನ ಒಲಿಸುವ ಕಸರತ್ತು ಮಾಡುತ್ತಾರೆ. ’ಶಿವಾಜಿ ಮಹಾರಾಜ್ ಕೀ ಜೈ’ ಎನ್ನುತ್ತಾರೆ; “ಮರಾಠಿ ಮಾಣುಷ್” ಅಸ್ಮಿತೆಯನ್ನು ತೋರಿಸಿಕೊಳ್ಳುಲು ನಾನಾ ನಮೂನೆಯ ವೇಷ ಕಟ್ಟುತ್ತಾರೆ. ಒಟ್ಟು 2,44,230 ಮತದಾರರಿರವ ಈ ಕ್ಷೇತ್ರದಲ್ಲಿ ಮರಾಠರು-1 ಲಕ್ಷ, ಲಿಂಗಾಯತ-38,000, ಪರಿಶಿಷ್ಠ ಜಾತಿ-28,000, ಮುಸ್ಲಿಮ್-19,000, ಕುರುಬ-17,000, ಜೈನ್-10,000, ಹಣಬರ-8,000, ಪರಿಶಿಷ್ಠ ಪಂಗಡ-8,000, ವಿಶ್ವಕರ್ಮ-3,000, ಬ್ರಾಹ್ಮಣ-2,000 ಮತ್ತು ಇತರ ಸಣ್ಣಪುಟ್ಟ ಸಂಖ್ಯೆಯ ಜಾತಿ ಮತದಾರರು 10,000 ಇರಬಹುದೆಂದು ಅಂದಾಜಿಸಲಾಗಿದೆ. ಮರಾಠ ಸಮುದಾಯದ ಬಿಜೆಪಿ ಅಭ್ಯರ್ಥಿ ಸಂಜಯ್ ಪಾಟೀಲ್ 2008ರ ಕದನದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಜಿ ಶಾಸಕ ಸಿ.ಎಸ್.ಮಾಳಗಿಯವರನ್ನು 8,309 ಮತದಂತರದಿಂದ ಸೋಲಿಸಿದ್ದರು. 2013ರಲ್ಲಿ ಹಿಂದುತ್ವದ ಪೋಸ್ಟರ್ ಬಾಯ್ ಎನ್ನಲಾಗುತ್ತಿದ್ದ ಸಂಜಯ್ ಪಾಟೀಲ್ ಎಂಈಎಸ್ ಹುರಿಯಾಳಾಗಿದ್ದ-ಹಲವು ಬಾರಿ ಆ ಕರ್ನಾಟಕ/ಕನ್ನಡ ವಿರೋಧಿ ಸಂಘಟನೆಯ ಶಾಸಕನಾಗಿದ್ದ ಮನೋಹರ ಕಿಣೇಕರ್ ಎದುರು ಏದುಸಿರು ಬಿಡುತ್ತ ಕೇವಲ 1,335 ಮತದಿಂದ ಗೆದ್ದರು. 2013ರಲ್ಲಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಕಾಂಗ್ರೆಸ್‌ನ ಲಕ್ಷ್ಮೀ ಹೆಬ್ಬಾಳ್ಕರ್ 2018ರಲ್ಲಿ ತನ್ನ ಗಾಡ್‌ಫಾದರ್‌ನಂತಿದ್ದ ರಮೇಶ್ ಜಾರಕಿಹೊಳಿ ಸಹಕಾರದಿಂದ ಭರ್ಜರಿ 51,724 ಮತದಂತರದಿಂದ ಬಿಜೆಪಿಯ ಸಂಜಯ್ ಪಾಟೀಲ್‌ರನ್ನು ಹಿಮ್ಮಟ್ಟಿಸಿ ದಾಖಲೆ ಮಾಡಿದ್ದರು.

ಹೆಬ್ಬಾಳ್ಕರ್ ವರ್ಸೆಸ್ ಜಾರಕಿಹೊಳಿ!

ಬೆಳಗಾವಿಯ ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಸಮಾನಾಂತರವಾಗಿ ಹಿಂದುಳಿದವರ ರಾಜಕಾರಣ ಕಟ್ಟಿದ್ದು ಜಾರಕಿಹೊಳಿ ಬ್ರದರ್ಸ್! ಜಾರಕಿಹೊಳಿ ಸಹೋದರರು ಬೇರೆಬೇರೆ ಪಕ್ಷದಲ್ಲಿದ್ದರೂ ತಮ್ಮ ಪರಿವಾರದ ರಾಜಕಾರಣ ಹಿತಾಸಕ್ತಿಗೆ ಸವಾಲೆದುರಾದಾಗ ಒಂದಾಗಿ ರಹಸ್ಯ ಕಾರ್ಯಾಚರಣೆ ನಡೆಸುತ್ತಾರೆಂಬುದು ಬಹಿರಂಗ ರಹಸ್ಯ. ರಮೇಶ್ ಜಾರಕಿಹೊಳಿ ಮೂಲತಃ ಕಾಂಗ್ರೆಸಿಗ; ಸಹೋದರರಾದ ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿಗಳು ಜನತಾ ಪರಿವಾರದಲ್ಲಿದ್ದಾಗ ರಮೇಶ್ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವಿ ಕಾಂಗ್ರೆಸಿಗನಾಗಿ ಬೆಳೆದಿದ್ದರು. ಹರ್ಷ ಶುಗರ್ಸ್ ಒಡತಿ ಲಕ್ಷ್ಮೀ ಹೆಬ್ಬಾಳ್ಕರ್ 2000ರದ ದಶಕದಲ್ಲಿ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡು, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದಾಗೆಲ್ಲ ರಮೇಶ್ ಜಾರಕಿಹೊಳಿ ಕ್ಯಾಂಪ್‌ನಲ್ಲಿದ್ದರು. 2013ರಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸೋತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ 2018ರಲ್ಲಿ ಮತ್ತೆ ಸ್ಪರ್ಧಿಸಿದಾಗ ರಮೇಶ್ ಜಾರಕಿಹೊಳಿ ಅವರ ಬೆನ್ನಿಗೆ ನಿಂತಿದ್ದರು. ಲಕ್ಷ್ಮೀ ಹೆಬ್ಬಾಳ್ಕರ್ ದೊಡ್ಡ ಅಂತರದಲ್ಲಿ ಚುನಾಯಿತರಾದರು. ಲಕ್ಕ್ಮೀ ತನಗೆ ನಿಷ್ಠೆಯಿಂದ ಇರಬೇಕೆಂದು ರಮೇಶ್ ಬಯಸಿದ್ದರು. ಆದರೆ ತಮ್ಮ ಬೆಂಗಳೂರು ಮಟ್ಟದ ಸಂಪರ್ಕ-ಸ್ಥಳೀಯ ಲಿಂಗಾಯತ ಲಾಬಿ ಬಳಸಿಕೊಂಡು ಲಕ್ಷ್ಮೀ, “ಗುರು” ರಮೇಶ್ ಜಾರಕಿಹೊಳಿ ಮೀರಿ ಬೆಳೆಯಲು ಹವಣಿಸಿದರು ಎಂಬ ಮಾತು ಬೆಳಗಾವಿ ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಲಕ್ಷ್ಮೀಯವರ ನಡೆಯಿಂದ ಯಜಮಾನಿಕೆ ಗುಣಧರ್ಮ, ಸಿಡುಕು ಸ್ವಭಾವದ ಜಾರಕಿಹೊಳಿ ಕೆರಳಿ ಕೆಂಡವಾದರು. ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಈ ಪ್ರತಿಷ್ಠೆಯ ಮೇಲಾಟ ಮಿತಿಮೀರಿಹೋಯಿತು. ಕೈಜೋಡಿಸಿ ರಾಜಕಾರಣ ಮಾಡುತ್ತಿದ್ದವರು ಕೈ-ಕೈ ಮಿಲಾಯಿಸಿದರು! ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ರಮೇಶ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಅಂದಿನ ಸಿಎಂ ಕುಮಾರಸ್ವಾಮಿಗೆ ಆ ಸಮಯದಲ್ಲಿ ಆಪ್ತರಾಗಿದ್ದ ಮಂತ್ರಿ ಡಿಕೆಶಿ ಬಲದಿಂದ ಲಕ್ಷ್ಮೀ ಕೈ ಮೇಲಾಗತೊಡಗಿತು. ಮುಖಭಂಗವಾಯತೆಂದುಕೊಂಡ ರಮೇಶ್ ಸಮ್ಮಿಶ್ರ ಸರಕಾರ ಕೆಡಹುವ ಯಶಸ್ವೀ ಕಾರ್ಯಾಚರಣೆ ನಡೆಸಿದರು; ಯಡಿಯೂರಪ್ಪ ಸರಕಾರದಲ್ಲಿ ಆಯಕಟ್ಟಿನ ಸ್ಥಾನದಲ್ಲಿದ್ದ ರಮೇಶ್ ಸೆಕ್ಸ್ ಸಿಡಿ ವಿವಾದಕ್ಕೆ ಸಿಲುಕಿ ಮಂತ್ರಿಗಿರಿ ಕಳೆದುಕೊಂಡರು. ನನ್ನ ದುರ್ಗತಿಗೆ ಲಕ್ಷ್ಮೀ-ಡಿಕೆಶಿ ಜಂಟಿ ಕಾರ್ಯಾಚರಣೆಯೆ ಕಾರಣ ಎಂದುಕೊಂಡ ರಮೇಶ್ ಜಾರಕಿಹೊಳಿ ಸೇಡು ತೀರಿಸಿಕೊಳ್ಳಲು 2023ರ ಚುನಾವಣೆಗೆ ಕಾಯತೊಡಗಿದರು; ರಮೇಶ್ ಜಾರಕಿಹೊಳಿಯವರನ್ನು ಬಗ್ಗುಬಡಿಯಲು ಲಕ್ಷ್ಮೀ ಪಂಚಮಸಾಲಿ ಅಸ್ತ್ರಕ್ಕೆ ಸಾಣೆ ಹಿಡಿದರು ಎಂದು ಜಿಲ್ಲಾ ರಾಜಕಾರಣದ ಒಳಸುಳಿ ಬಲ್ಲವರು ಜಾರಕಿಹೊಳಿ-ಹೆಬ್ಬಾಳ್ಕರ್ ಸ್ನೇಹ-ಸೇಡಿನ “ಕತೆ” ಹೇಳುತ್ತಾರೆ.

ಸಂಜಯ್ ಪಾಟೀಲ್

ಈ ಪೀಠಿಕೆ ಹಾಕದಿದ್ದರೆ ಬೆಳಗಾವಿ ಅಖಾಡದಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಲಕ್ಷ್ಮೀ ಹೆಬ್ಬಾಳ್ಕರ್ ಸುತ್ತ ರಮೇಶ್ ಜಾರಕಿಹೊಳಿ ಹೆಣೆಯುತ್ತಿರುವ ರಣವ್ಯೂಹ ಮತ್ತದನ್ನು ಬೇಧಿಸಲು ಲಕ್ಷ್ಮೀ ಹೂಡುತ್ತಿರುವ ಬಾಣಗಳ ರೋಚಕತೆ ಅರ್ಥವಾಗುವುದಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯಕ್ಕೆ ಇತಿಶ್ರೀ ಹಾಡುವ ಹಠಕ್ಕೆ ಬಿದ್ದಿರುವ ರಮೇಶ್ ಜಾರಕಿಹೊಳಿ ಕಳೆದ ಮೂರ್‍ನಾಲ್ಕು ತಿಂಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತ ಅಖಾಡ ಹದಮಾಡಿಕೊಳ್ಳುತ್ತಿದ್ದರು. ಹಣ ಎಷ್ಟು ಬೇಕಿದ್ದರೂ ಖರ್ಚಾಗಲಿ; ಮರಾಠ ಅಸ್ತ್ರವೂ ಪ್ರಯೋಗಿಸುತ್ತೇನೆ, ಹೇಗಾದರೂ ಮಾಡಿ ಲಕ್ಷ್ಮೀಯನ್ನು ಸೋಲಿಸಿಯೇ ತೀರುತ್ತೇನೆ ಎಂದು ಬಹಿರಂಗವಾಗಿಯೇ ಗುಡುಗುತ್ತಿದ್ದ ರಮೇಶ್ ಜಾರಕಿಹೊಳಿ ತನ್ನ ಆಜ್ಞಾನುಧಾರಿ ಮರಾಠ ಸಮುದಾಯದ ನಾಗೇಶ್ ಮನ್ನೋಳ್ಕರ್‌ಗೆ ಕೇಸರಿ ಟಿಕೆಟ್ ಕೊಡಿಸಲು ಸಫಲರಾಗಿದ್ದಾರೆ. ಕೇಸರಿ ಕಾರ್ಯಕರ್ತರ ಸಂಪರ್ಕವಿಲ್ಲದ ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ಮನ್ನೋಳ್ಕರ್ ಅಭ್ಯರ್ಥಿಯೆಂದು ಘೋಷಣೆಯಾಗುತ್ತಿದ್ದಂತೆ ಮೂಲ ಬಿಜೆಪಿಗರು ಆಕ್ರೋಶಿತರಾಗಿದ್ದು, ಒಳೇಟಿನ ಭಯ ಬಿಜೆಪಿ ಬಿಡಾರದಲ್ಲಿ ಮೂಡಿದೆ. ಬಿಜೆಪಿ ಅಭ್ಯರ್ಥಿಯಾಗುವ ಉಮೇದಿಯಲ್ಲಿದ್ದ ಮಾಜಿ ಎಮ್ಮೆಲ್ಲೆ ಸಂಜಯ್ ಪಾಟೀಲ್, ಬಿಜೆಪಿಯ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ್ ಜಾಧವ್, ವಿನಯ್ ಕದಮ್ ಮುಂತಾದವರನ್ನು ಸಾಮ-ಭೇದ-ದಂಡ ಬಳಸಿ ಸುಮ್ಮನಾಗಿಸಿಲಾಗಿದೆ ಎನ್ನಲಾಗುತ್ತಿದೆ.

ಕಾಣಿಕೆ ರಾಜಕಾರಣ

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಟಿಕೆಟ್ ದೊರೆತಿದೆ. ಎದುರಾಳಿಗಳಿಗೆ ಬಿಗಿಪಟ್ಟುಗಳನ್ನೇ ಲಕ್ಷ್ಮೀ ಹಾಕುತ್ತಿದ್ದಾರೆ; ಲಕ್ಷ್ಮೀ ಮರಾಠಿಗರ ಹಿತಶತ್ರು; ಲಿಂಗಾಯತ ಜಾತಿವಾದಿ ಎಂಬಂತೆ ಎದುರಾಳಿಗಳು ಬಿಂಬಿಸುತ್ತಿದ್ದಾರೆ. ಲಕ್ಷ್ಮೀ ಸ್ವಜಾತಿ ಲಿಂಗಾಯತರಲ್ಲಿ (ಪಂಚಮಸಾಲಿ) ರಕ್ತಸಂಬಂಧ ಜಾಗೃತಗೊಳಿಸುತ್ತ ತಾನು ಮರಾಠಿಗರ ಹಿತೈಷಿ, ರಾಜ ಹಂಸಗಡ ಕೋಟೆ ಆವರಣದಲ್ಲಿ ಬೃಹತ್ ಶಿವಾಜಿ ಪ್ರತಿಮೆ ತನ್ನ ಒತ್ತಾಸೆಯಿಂದಲೇ ನಿರ್ಮಾಣವಾಗಿದೆ; ಹೊರಗಿನವರ ಮಾತು ನಂಬಬೇಡಿ; ಮನೆ ಮಗಳ ಕೈಬಿಡಬೇಡಿ ಎನ್ನುತ್ತಿದ್ದಾರೆ. ರಮೇಶ್ ಜಾರಕಿಹೊಳಿಯ ಮರಾಠ ಅಸ್ತ್ರದಿಂದ ಡಿಸ್ಟರ್ಬ್ ಆದಂತಿರುವ ಲಕ್ಷ್ಮೀ, ಕೋವಿಡ್ ಲಾಕ್‌ಡೌನ್ ಮತ್ತು ನೆರೆ ಹಾವಳಿ ದಿಕ್ಕೆಡಿಸುತ್ತಿದ್ದಾಗ ತಾನು ನೊಂದವರ ಜತೆಯಲ್ಲಿದ್ದೆ; ಈಗ ಕ್ಷೇತ್ರಕ್ಕೆ ಬಂದು ತನ್ನ ವಿರದ್ಧ ಮಾತಾಡುತ್ತಿರುವ ಹೊರಗಿನ ಸ್ವಯಂಘೋಷಿತ ನಾಯಕರು ಆಗೆಲ್ಲಿದ್ದರು ಎಂದು ರಮೇಶ್ ಜಾರಕಿಹೊಳಿಯನ್ನು ಪರೋಕ್ಷವಾಗಿ ಮೂದಲಿಸುತ್ತಿದ್ದಾರೆ. ಮಾತಿನ ಮಲ್ಲಯುದ್ಧ ಬಿರುಸಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬಾಗಲಕೋಟೆ: ಚರಂತಿಮಠ ವಿರುದ್ಧ ತಿರುಗಿಬಿದ್ದ ಸಂಘ ಪರಿವಾರದ ನಾಯಕರು; ಸುಲಭವಾಗಲಿದೆಯೇ ಮೇಟಿಯವರ ಗೆಲುವು?

ಮರಾಠಿ “ಪ್ರಜ್ಞೆ” ಮತ್ತು “ಹಣಾ”ಹಣಿ ರಮೇಶ್ ಜಾರಕಿಹೊಳಿ ಬತ್ತಳಿಕೆಯಲ್ಲಿನ ಎರಡು ಪ್ರಮುಖ ಬಾಣಗಳೆನ್ನಲಾಗಿದೆ. ರಾಜಹಂಸಗಡ ಕೋಟೆಯಲ್ಲಿ ಸರಕಾರಿ ಹಣದಲ್ಲಿ ಸ್ಥಾಪಿಸಲಾಗಿರುವ ಶಿವಾಜಿ ಪ್ರತಿಮೆ ಅನಾವರಣ ಈಚೆಗೆ ನಡೆದಿದ್ದು, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ರನ್ನು ಹೊರಗಿಟ್ಟು ಸಿಎಂ ಬೊಮ್ಮಾಯಿಂದ ಜಾರಕಿಹೊಳಿ ಅದನ್ನು ಅನಾವರಣಗೊಳಿಸಿ ಚುನಾವಣಾ ಲಾಭದ ಲೆಕ್ಕಾಚಾರ ಹಾಕಿದ್ದಾರೆ; ಇದಕ್ಕೆ ಸಮಾನಾಂತರವಾಗಿ ಶಾಸಕಿ ಲಕ್ಷ್ಮೀ ಸರಕಾರದ ಮಟ್ಟದಲ್ಲಿ ಒತ್ತಡಹಾಕಿ ಅನುದಾನ ತಂದು ಶಿವಾಜಿ ಪ್ರತಿಮೆ ನಿರ್ಮಾಣ ಮಾಡಿದ್ದು ತಾನೆನ್ನುತ್ತಾ ಪ್ರತ್ಯೇಕ ಅನಾವರಣ ಕಾರ್ಯಕ್ರಮ ಮಾಡಿ ಮರಾಠಿಗರ ಓಲೈಕೆಗೆ ಪ್ರಯತ್ನಿಸಿದ್ದಾರೆ. ಜಾರಕಿಹೊಳಿ ಮತ್ತು ಹೆಬ್ಬಾಳಕರ್ ಮೇಲಾಟದಲ್ಲಿ ಅನುಕೂಲ ತಮಗಾಗಬಹುದೆಂದು ಎಂಈಎಸ್ ಬಿಜೆಪಿ-ಕಾಂಗ್ರೆಸ್ ಶಿವಾಜಿ ಮಹಾರಾಜ್‌ಗೆ ಅಪಚಾರ ಮಾಡಿದೆ ಎಂದು ಪ್ರತಿಮೆ ಶುದ್ಧೀಕರಣ ಕೈಗೊಂಡಿದೆ.

ನಾಗೇಶ್ ಮನ್ನೋಳ್ಕರ್‌

ಮತ್ತೊಂದೆಡೆ ಗಿಫ್ಟ್ ಪಾಲಿ’ಟ್ರಿಕ್ಸ್’ನಲ್ಲಿ ಎರಡೂ ಕಡೆಯವರು ನಿರತರಾಗಿದ್ದಾರೆ. ತನ್ನ ಸಕ್ಕರೆ ಕಾರ್ಖಾನೆ ಮೂಲಕ ರಂಗೋಲಿ ಸ್ಪರ್ಧೆ, ಹಳದಿ-ಕುಂಕುಮ್ ಕಾರ್ಯಕ್ರಮ ಮತ್ತು ಮಿಕ್ಸರ್ ಹಂಚಿಕೆ ಮೂಲಕ ಹೆಂಗಳೆಯರ ಸೆಳೆಯಲು ಲಕ್ಷ್ಮೀ ಹವಣಿಸುತ್ತಿದ್ದರೆ, ತಾನೆ ಬಿಜೆಪಿ ಅಭ್ಯರ್ಥಿ ಆಗಬಹುದೆಂಬ ನಿರೀಕ್ಷೆಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಾಟು-ಲೋಟ ಮತದಾರರಿಗೆ ಕೊಟ್ಟು ಕೈಸುಟ್ಟುಕೊಂಡಿದ್ದಾರೆ ಎಂಬ ಆರೋಪಗಳು ಕ್ಷೇತ್ರದೆಲ್ಲೆಡೆ ಕೇಳಿಬರುತ್ತದೆ. ಈಗ ರಮೇಶ್ ಜಾರಕಿಹೊಳಿ ಕ್ಯಾಂಡಿಡೇಟ್ ಮನ್ನೋಳ್ಕರ್ ಸೀರೆ ಹಾಗು ಹಾಟ್ ಬಾಕ್ಸ್ “ಕಾಣಿಕೆ” ಕೊಡುತ್ತಿದ್ದಾರೆ ಎಂಬ ಆರೋಪವೂ ದಟ್ಟವಾಗಿದೆ. ಮನ್ನೋಳ್ಕರ್ ಹೆಸರಿಗಷ್ಟೇ ಹುರಿಯಾಳು; ಸೆಣಸಾಟವೇನಿದ್ದರೂ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ನಡುವೆ. ಸ್ವಜಾತಿ ಮರಾಠಿಗರನ್ನೂ ಮನ್ನೋಳ್ಕರ್‌ಗೆ ಆಕರ್ಷಿಸಲಾಗುತ್ತಿಲ್ಲ. ಕ್ಷೇತ್ರದಲ್ಲಿ ಮನ್ನೋಳ್ಕರ್‌ಗಿಂತ ಎಂಈಎಸ್ ಕಾಂಡಿಡೇಟ್ ಆರ್.ಎಂ.ಚೌಗಲೆಯೇ ಹೆಚ್ಚು ಪರಿಚಿತ ಎನ್ನಲಾಗುತ್ತಿದೆ. ತನ್ನೆಲ್ಲ ಶಕ್ತಿ-ಯುಕ್ತಿ ಪಣಕ್ಕಿಟ್ಟು ರಮೇಶ್ ಜಾರಕಿಹೊಳಿ ಹೋರಾಡುತ್ತಿದ್ದಾರೆ. ತಮಾಷೆಯೆಂದರೆ, ಕಳೆದ ಬಾರಿ ಲಕ್ಷ್ಮೀ ಗೆಲುವಿಗೆ ಬೆವರಿಳಿಸಿದ್ದ ರಮೇಶ್ ಜಾರಕಿಹೊಳಿ ಈಗ ಕಡು ಶತ್ರುವಾಗಿದ್ದಾರೆ; ಹಿಂದೆ ವೈರಿಯಾಗಿದ್ದ ಸತೀಶ್ ಜಾರಕಿಹೊಳಿ ಈ ಸಲ ಲಕ್ಷ್ಮೀ ಗೆಲ್ಲಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅಣ್ಣ-ತಮ್ಮ ಮರಾಠಿ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮತ್ತೆ ಗೆಲ್ಲುವರೇ ಲಕ್ಷ್ಮೀ?

ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡಿದ್ದರೂ ಸುಸಜ್ಜಿತ ಆಸ್ಪತ್ರೆ ಗ್ರಾಮೀಣ ಕ್ಷೇತ್ರದಲ್ಲಿಲ್ಲ; ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಅಭವೃದ್ಧಿಯಾಗಿಲ್ಲ. ಅನ್ನ ಅರಸುತ್ತ ಯುವ ಸಮೂಹ ವಲಸೆ ಹೋಗುವದು ತಪ್ಪಬೇಕು; ರಿಂಗ್ ರಸ್ತೆಗಾಗಿ ವಶಪಡಿಸಿಕೊಂಡ ಜಮೀನಿನ ಪರಿಹಾರ ಸಂತ್ರಸ್ತರಿಗೆ ಸಿಗದೆ ಒದ್ದಾಡುತ್ತಿದ್ದಾರೆ; ರಕ್ಕಸಕೊಪ್ಪ ಜಲಾಶಯದಿಂದ 30ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಯೋಜನೆ ಆಗಬೇಕಿದೆ ಎಂಬ ಕೊರಗಿನ ನಡುವೆಯೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಸ್ತೆಯೇ ಮುಂತಾದ ಮೂಲಸೌಕರ್ಯ ಕಲ್ಪಿಸುವ ಸಮಷ್ಠಿಯ ಕೆಲಸ ಮಾಡಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸದಾ ಜನರ ಮಧ್ಯೆಯಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಅರ್ಥಾತ್ ರಮೇಶ್ ಜಾರಕಿಹೊಳಿಯ “ಡಮ್ಮಿ” ಕ್ಯಾಂಡಿಡೇಟ್ ಪೇಲವವಾಗಿ ಕಾಣಿಸುತ್ತಿದ್ದಾರೆ; ಲಕ್ಷ್ಮೀಯ ವರ್ಚಸ್ಸು-ಹಣ ಎರಡೂ ಒಟ್ಟೊಟ್ಟಿಗೆ ರಣಕಣದಲ್ಲಿ ಕೆಲಸ ಮಾಡುತ್ತಿದೆ. ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಕದನ ಕುತೂಹಲದಲ್ಲಿ ತಮಗೆ ಜಾಕ್‌ಪಾಟ್ ಹೊಡೆಯುತ್ತದೆಂಬ ಉತ್ಸಾಹದಲ್ಲಿ ಎಂಈಎಸ್ ಇದೆ. ಮತದಾನದ ಮೊದಲಿನ ಒಂದು ಹಗಲು ಹಾಗು ಎರಡು ರಾತ್ರಿ ಕುರುಡು ಕಾಂಚಾಣದ ಕುಣಿತ ಬಿರುಸಾಗಲಿದೆ. ಸದ್ಯಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲುವ ಸೂಚನೆ ಗೋಚರಿಸುತ್ತಿದೆ ಎಂದು ಅಖಾಡದಲ್ಲಿನ ಪಟ್ಟು-ಪ್ರತಿ ಪಟ್ಟುಗಳ ಮರ್ಮ ಬಲ್ಲ ಚುನವಣಾ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...