Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಗೋಳ: ಸಮನ್ವಯತೆ-ಸಂಗೀತದ ನೆಲೆವೀಡಲ್ಲಿ ಹಿಂದುಳಿದಿರುವಿಕೆ-ಧರ್ಮಕಾರಣ ಜುಗಲ್‌ಬಂದಿ!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಕುಂದಗೋಳ: ಸಮನ್ವಯತೆ-ಸಂಗೀತದ ನೆಲೆವೀಡಲ್ಲಿ ಹಿಂದುಳಿದಿರುವಿಕೆ-ಧರ್ಮಕಾರಣ ಜುಗಲ್‌ಬಂದಿ!

- Advertisement -
- Advertisement -

ಕುಂದಗೋಳ ಕೋಮುಸೌಹಾರ್ದ ಇತಿಹಾಸವುಳ್ಳ ಮತ್ತು ಹಿಂದುಸ್ತಾನಿ ಸಂಗೀತ ಪರಂಪರೆಯ ನೆಲೆವೀಡು; ನಿರ್ವ್ಯಾಜ್ಯ ಗುರು-ಶಿಷ್ಯ ಬಾಂಧವ್ಯದ ಬ್ರಾಹ್ಮಣ ಗುರು ಗೋವಿಂದ ಭಟ್ಟ-ಮುಸಲ್ಮಾನ ಶಿಷ್ಯ ಸಂತ ಶಿಶುನಾಳ ಷರೀಫ್ ಮತ್ತು ಸವಾಯಿ ಗಂಧರ್ವರೆಂದು ಜನಪ್ರಿಯರಾಗಿದ್ದ ಹಿಂದುಸ್ತಾನಿ ಸಂಗೀತ ದಿಗ್ಗಜ ರಾಮಬಾವು ಕುಂದಗೋಳ್ಕರ್ ಕರ್ಮಭೂಮಿ. ಶೇ.95ರಷ್ಟು ರೈತರಿರುವ ಮತ್ತು ಮುಕ್ಕಾಲು ಪಾಲು ಮಣ್ಣಿನ ಗುಡಿಸಲುಗಳ ಕುಂದಗೋಳ ಲಾಗಾಯ್ತಿನಿಂದ ಆಳುವವರ ಅವಜ್ಞೆಗೆ ಈಡಾಗುತ್ತಲೆ ಇದೆ; ಮತ್ತೊಂದೆಡೆ ಗುರು ಗೋವಿಂದ ಭಟ್ಟ ಮತ್ತು ಷರೀಪಜ್ಜ, ನೀತಿ ಬೋಧೆ-ತತ್ವ ಪದಗಳ ಮೂಲಕ ಸಹಬಾಳ್ವೆ-ಸಹಿಷ್ಣುತೆ ಸಾರಿದ ನೆಲದಲ್ಲೀಗ ಮತೀಯ ಮಸಲತ್ತಿನ ವರಸೆಗಳ ಪ್ರಯೋಗ ಆಗುತ್ತಿದೆ ಎಂಬ ಆತಂಕದ ಮಾತು ಕೇಳಿಬರುತ್ತದೆ.

ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿ ಎನ್ನಲಾಗುತ್ತಿರುವ ಹುಬ್ಬಳ್ಳಿಯಿಂದ ಕೇವಲ 20 ಕಿ.ಮೀ.ದೂರದಲ್ಲಿರುವ ಕುಂದಗೋಳ ಸ್ವಾತಂತ್ರ್ಯ ಬಂದು ಏಳೂವರೆ ದಶಕಗಳುರುಳಿದರೂ ಅಭಿವೃದ್ಧಿಯ ಹಂಬಲದಲ್ಲೇ ಇದೆ; ಈ ಮಣ್ಣಿನ ಮಕ್ಕಳ ಸೀಮೆ ರಾಜಕೀಯ-ಸಾಮಾಜಿಕ-ವ್ಯಾಪಾರಿ ವಲಯದ ದಲ್ಲಾಳಿಗಳ ಹಾವಳಿಗೆ ಹೈರಾಣಾಗಿಹೋಗಿದೆ. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತವರ ಪುತ್ರ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಹೆತ್ತ ಕುಂದಗೋಳ ಒಂಥರಾ ಅನಾಥಪ್ರಜ್ಞೆಯಲ್ಲಿ ಚಡಪಡಿಸುತ್ತಿರುವುದು ವಿಪರ್ಯಾಸ ಎಂಬ ನೋವಿನ ನಿಟ್ಟುಸಿರು ಸಾಮಾನ್ಯವಾಗಿದೆ.

ಇತಿಹಾಸ-ಸಂಸ್ಕೃತಿ

ಉತ್ತರ ಕರ್ನಾಟಕದ ದೇಶಿ ಸಂಸ್ಕೃತಿಯ ಕುಂದಗೋಳದಲ್ಲಿ ಸಕಲ ಸಂವಹನ ನಡೆಯುವುದು ಸ್ಥಳೀಯ ಲಯದ ಕನ್ನಡದಲ್ಲಿ; ಬರೆಹದ ಕನ್ನಡ ಇರುವುದು ಸರಕಾರಿ ಕಡತದಲ್ಲಷ್ಟೆ! ಉರ್ದು, ಲಮಾಣಿ, ಮರಾಠಿ ಭಾಷೆಗಳೂ ಕೇಳಿ ಬರುತ್ತವೆ. ಕುಂದಗೋಳದ ಸಾಮಾಜಿಕ-ರಾಜಕೀಯ-ಆರ್ಥಿಕ-ಧಾರ್ಮಿಕ ವಲಯಗಳೆಲ್ಲವೂ ವಿವಿಧ ಒಳ ಪಂಗಡಗಳ ಪ್ರಬಲ ಮೇಲ್ಜಾತಿ ಲಿಂಗಾಯತ ಏಕಸ್ವಾಮ್ಯಕ್ಕೆ ಒಳಪಟ್ಟಿವೆ. ಐತಿಹಾಸಿಕ ಪ್ರಾಮುಖ್ಯತೆಯ ಕುಂದಗೋಳ ಹಿಂದೆ ಬ್ರಹ್ಮಪುರ ಆಗಿದ್ದಿರಬೇಕೆಂದು ಸ್ಥಳ ಪುರಾಣ ಹೇಳುತ್ತದೆ. ’ಕುಮುದಗಲ ಕೋಲ’ ಎಂಬ ಕನ್ನಡ ಪದದಿಂದ ಕುಂದಗೋಳ ಹೆಸರಿನ ವ್ಯುತ್ಪತ್ತಿಯಾಗಿದೆ ಎನ್ನಲಾಗುತಿದೆ. ಇದರರ್ಥ ಕಮಲಗಳ (ಕುಮುದ) ಕೊಳದ ನಾಡು.

ಈ ಪ್ರದೇಶ ಪ್ರಾಚೀನ ಕರ್ನಾಟಕದಲ್ಲಿ 300 ಹಳ್ಳಿಗಳನ್ನು ಒಳಗೊಂಡಿತ್ತು. ಅದರ ಆಡಳಿತ ಕೇಂದ್ರ ಕುಂದಗೋಳವಾಗಿತ್ತು. ಈ ಪ್ರಾಂತ್ಯವನ್ನು ಕಲ್ಯಾಣಿ ಚಾಲುಕ್ಯ ಚಕ್ರವರ್ತಿಗಳಾದ ಸೋಮೇಶ್ವರ-1 ಮತ್ತು ವಿಕ್ರಮಾದಿತ್ಯ-4 ಆಳಿದ್ದರು; ಕುಂದಗೋಳ 1948ರ ಪೂರ್ವದಲ್ಲಿ ಜಮಖಂಡಿ ಸಂಸ್ಥಾನಕ್ಕೆ ಒಳಪಟ್ಟಿತ್ತು. 11ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರು ನಿರ್ಮಿಸಿದ ಶಿಲ್ಪಕಲಾ ವೈಭದ ದೇವಾಲಯಗಳಿಗೆ ಕುಂದಗೋಳ ಹೆಸರುವಾಸಿಯಾಗಿದೆ. ಅದರಲ್ಲಿ ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತಿದ ಎನ್ನಲಾಗುವ ಕುಸುರಿ ಕಲೆಯ ಶಂಭುಲಿಂಗೇಶ್ವರ ದೇವಸ್ಥಾನ ಹೆಚ್ಚು ಆಕರ್ಷಕವಾಗಿದೆ. ಈಗ ಮೂಲ ಗುಡಿಯ ಮುಖಮಂಟಪ ಮತ್ತು ಗರ್ಭಗುಡಿಯಷ್ಟೇ ಉಳಿದಿದೆ. ಚಾಲುಕ್ಯ, ಕಳಚೂರಿ, ವಿಜಯನಗರ ಸಾಮ್ರಾಜ್ಯ ಕಾಲದ 11 ಶಿಲಾಶಾಸನಗಳು ಕುಂದಗೋಳದಲ್ಲಿವೆ.

ತತ್ವಪದಗಳ “ಸರ್ವಜನರ ಸಂತ” ಶಿಶುನಾಳ ಷರೀಪ್‌ರ ಹೆಂಡತಿಯ ತವರೂರು ಕುಂದಗೋಳ. ಮಂದಿರ-ಮಸೀದಿ, ನಮನ-ನಮಾಜು, ಪುರಾಣ-ಕುರಾನ್, ಅಲ್ಲಮ-ಅಲ್ಲಾ, ಜಂಗಮ-ಫಕೀರ ಒಂದೇ ಎಂದು ಹೇಳುತ್ತ, ಹೇಳಿದಂತೆ ಬದುಕುತ್ತ ಕುಂದಗೋಳದ ಉದ್ದಗಲಕ್ಕೆ ದಾರ್ಶನಿಕ ಗುರು (ಗೋವಿಂದ ಭಟ್ಟ)-ಶಿಷ್ಯ ಜೋಡಿ ಜೊತೆಯಾಗಿ ನಡೆದಾಡಿದೆ; ಧರ್ಮದ ಹಂಗಿಲ್ಲದೆ ಮನುಷ್ಯ ಸಂಬಂಧ ಕಟ್ಟಿಕೊಳ್ಳುವ ದಾರಿ ತೋರಿಸಿದೆ.

ಕಿರಾಣಾ ಘರಾಣಾ ಹಿಂದುಸ್ತಾನಿ ಸಂಗೀತದ ಶ್ರೇಷ್ಠ ಹಾಡುಗಾರ ಉಸ್ತಾದ್ ಅಬ್ದುಲ್ ಕರೀಮ್ ಖಾನ್ ಶಿಷ್ಯ ರಾಮಬಾವು ಕುಂದಗೋಳ್ಕರ್‌ರಂಥ (ಸವಾಯಿ ಗಂಧರ್ವ) ಹಲವು ಹಿಂದುಸ್ತಾನಿ ಕಲಾವಿದರನ್ನು ಕುಂದಗೋಳ ಪೋಷಿಸಿದೆ! ಇಲ್ಲಿಯ ನಾಡಗೀರ್ ಕುಟುಂಬ ಸಂಗೀತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿತ್ತು; ನಾಡಗೀರ್‌ವಾಡೆ ಸಂಗೀತ ಶಾಲೆಯಂತಾಗಿತ್ತು. ಇವತ್ತಿಗೂ ನಾಡಗೀರ್ ಪರಿವಾರ ಆಧುನಿಕ ಹಿಂದುಸ್ತಾನಿ ಸಂಗೀತ ಪೋಷಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ವಾಡೆಯಲ್ಲೇ ಕುಳಿತು ಸವಾಯಿ ಗಂಧರ್ವರು ಸಂಗೀತ ಅಭ್ಯಾಸ ಮಾಡಿದರು; ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಮತ್ತು ಗಂಗೂಬಾಯಿ ಹಾನಗಲ್‌ರಂಥ ಮೇರು ಹಿಂದುಸ್ತಾನಿ ಕಲಾವಿದರನ್ನು ತರಬೇತುಗೊಳಿಸಿದರು!

ಒಣ ಆರ್ಥಿಕತೆ!

ಶುಷ್ಕ ಹವಾಮಾನ-ಕಪ್ಪು ಮಿಶ್ರಿತ ಫಲವತ್ತಾದ ಮಣ್ಣಿನ ಕುಂದಗೋಳದ ಜೀವ-ಜೀವಾಳ ವ್ಯವಸಾಯ! ಇಡೀ ತಾಲೂಕಿನ ಆರ್ಥಿಕತೆ ಒಣ ಬೇಸಾಯನ್ನು ಅವಲಂಬಿಸಿದೆ. ಗೋಧಿ, ಜೋಳ, ಮಡಕೆ, ಹೆಸರು, ಉದ್ದು, ಕಡಲೆ, ತೊಗರಿ ಮುಂತಾದ ಧಾನ್ಯ ಬೆಳೆದು ಮಣ್ಣಿನ ಮಕ್ಕಳು ಬದುಕು ಕಟ್ಟಿಕೊಂಡಿದ್ದಾರೆ. ಹತ್ತಿ ಎಕ್ಕವ ಯಂತ್ರದ ಘಟಕವೆ ಕುಂದಗೋಳದ ’ಬೃಹತ್ ಕೈಗಾರಿಕೆ’. ಹೊತ್ತು ಮೂಡುತ್ತಲೆ ರೈತರು ಟ್ರ್ಯಾಕ್ಟರ್, ಚಕ್ಕಡಿ ಗಾಡಿ ಏರಿ ಹೊಲದತ್ತ ಹೊರಡುತ್ತಾರೆ; ಯುವಕ-ಯುವತಿಯರು ಬಸ್-ಟಮ್‌ಟಮ್ ಹತ್ತಿ ಫ್ಯಾಕ್ಟರಿಗಳಲ್ಲಿ ದುಡಿಯಲು ಹುಬ್ಬಳ್ಳಿಯತ್ತ ಸಾಗುತ್ತಾರೆ. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಸ್ವಾವಲಂಬಿಗಳಾವ ಔದ್ಯೋಗಿಕ ಅವಕಾಶ ಇಲ್ಲದಾಗಿದೆ ಎಂಬ ಅಳಲು ತಾಲೂಕಲ್ಲಿ ಮಡುಗಟ್ಟಿದೆ.

ಕೃಷಿ ದುಬಾರಿಯಾಗಿದೆ; ಕಳಸಾ-ಬಂಡೂರಿ ನೀರಿನ ಕನಸು ನನಸಾಗುತ್ತಿಲ್ಲ. ಅಸಹಾಯಕ ರೈತರು ಗೋವಾ-ಬೆಂಗಳೂರಿಗೆ ಗುಳೆಹೋಗುತ್ತಿದ್ದಾರೆ. ಯುವ ಸಮುದಾಯ ಕೈಗಾರಿಕೆ-ಉದ್ಯಮ ಬೇಕೆನ್ನುತ್ತಿದೆ. ಇಲ್ಲಿಂದ ಶಾಸಕ, ಸಂಸದರಾದವರಲ್ಲಿ ಯಾರೂ ಕೃಷಿ ಉನ್ನತೀಕರಣಕ್ಕಾಗಲಿ ಅಥವಾ ಕೈಗಾರಿಕೆ ಸ್ಥಾಪನೆಗಾಗಲಿ ಎಂದೂ ಯೋಚನೆ ಮಾಡಿದ ದಾಖಲೆಯೆ ಇಲ್ಲ ಎಂಬ ಆಕ್ರೋಶ-ಬೇಸರದ ಮಾತು ಕೇಳಿಬರುತ್ತದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ನವಲಗುಂದ: ರೈತ ಬಂಡಾಯದ ನೆಲದಲ್ಲಿ ಜಾತಿ ಪ್ರತಿಷ್ಠೆಯ ಪೈಪೋಟಿ!

ಕುಂದಗೋಳ ಪ್ರಗತಿ ಆಗದಿರುವುದಕ್ಕೆ ಸ್ಥಳೀಯ ಸಚಿವ-ಶಾಸಕ-ಸಂಸದರಲ್ಲಿ ದೂರದರ್ಶಿತ್ವ-ಇಚ್ಛಾಶಕ್ತಿ ಇಲ್ಲದಿರುವುದೆ ಪ್ರಮುಖ ಕಾರಣ. ಕಳಸಾ-ಬಂಡೂರಿ ನೀರು ತರಲಾಗದ ದುರ್ಬಲ ಜನಪ್ರತಿನಿಧಿಗಳಿಗೆ, ತಾಲೂಕಿನಲ್ಲಿ ಹರಿಯುವ ಬೆಣ್ಣೆಹಳ್ಳಕ್ಕೆ ಒಡ್ಡು ಅಟ್ಟುವ ಯೋಚನೆಯೂ ಬರುತ್ತಿಲ್ಲ; ಬೆಣ್ಣೆಹಳ್ಳಕ್ಕೆ ಅಣೆಕಟ್ಟು ಕಟ್ಟಿದರೆ ಸಾವಿರಾರು ಹೆಕ್ಟೇರ್ ಬಂಜರು ಭೂಮಿ ಹಸಿರಾಗುತ್ತಿತ್ತು. ಕಾಯಿಪಲ್ಲೆ ಬೆಳೆಯುವುದಕ್ಕೆ ಹಾಗು ತೋಟಗಾರಿಕೆ, ಹೊಲಗಳ ನೀರಾವರಿಗೆ ಅನುಕೂಲವಾಗುತ್ತಿತ್ತು. ತಮಾಷೆಯೆಂದರೆ ಗೋವಾ ಸರಕಾರದವರು ಕುಂದಗೋಳಕ್ಕೆ ಬಂದು ’ಬೆಣ್ಣೆಹಳ್ಳದ ನೂರಾರು ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ; ಈ ನೀರನ್ನು ಸಂರಕ್ಷಿಸಿಟ್ಟುಕೊಂಡರೆ ಕರ್ನಾಟಕಕ್ಕೆ ಮಹದಾಯಿ ನೀರಿನ ಅವಶ್ಯಕತೆಯೆ ಉದ್ಭವಿಸುವುದಿಲ್ಲ’ ಎಂಬ ಸಮೀಕ್ಷಾ ವರದಿ ಸಿದ್ಧಪಡಿಸಿದ್ದಾರೆ.

ಇಲೆಕ್ಷನ್ ಇತಿಹಾಸ

ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣಾ ಚರಿತ್ರೆಯ ಮೇಲೆ ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ 1957ರ ಮೊದಲ ಮೇಲಾಟದಿಂದ ಎಂಟನೇ ಸ್ಪರ್ಧೆಯವರೆಗೆ ಕ್ಷೇತ್ರ ಜಾತ್ಯಾತೀತವಾಗಿರುವುದು ಮನದಟ್ಟಾಗುತ್ತದೆ. ಪರಿಶಿಷ್ಟ ಪಂಗಡದ ತೀರಾ ಸಣ್ಣ ತಳವಾರ ಜಾತಿಯ ಗೋವಿಂದಪ್ಪ ಜುಟ್ಟಲ್ 1989ರ ಜಾತಿ ಸಂಘರ್ಷವಿಲ್ಲದ ಅಖಾಡದಲ್ಲಿ ಮೇಲ್ವರ್ಗ-ಕೆಳವರ್ಗದ ಒಲವು ಗಳಸಿ ಶಾಸಕನಾಗಿ ಗೆದ್ದುಬಂದಿದ್ದರು. 1994ರಿಂದ ಕುಂದಗೋಳದಲ್ಲಿ ಲಿಂಗಾಯತ-ಕುರುಬರ ಹಣಾಹಣಿ ಆರಂಭವಾಯಿತು; ಪಕ್ಕದ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಬಿಜೆಪಿಯ ಕೇಸರಿ ಪತಾಕೆ ಹಾರಾಡುತ್ತಿದ್ದರೂ 2004ರವರೆಗೆ ಇಲ್ಲಿ ಸಂಘ ಪರಿವಾರಕ್ಕೆ ಪ್ರವೇಶ ಸಾಧ್ಯವಾಗಲಿಲ್ಲ! 2008ರಲ್ಲಿ ಜಾತಿಸೂತ್ರದ ಜತೆ ಧರ್ಮಕಾರಣದ ಸಮೀಕರಣ ಸೇರಿಕೊಂಡಿತು; ತತ್ಪರಿಣಾಮವಾಗಿ 2008ರಲ್ಲಿ ಬಿಜೆಪಿ ಮೇಲುಗೈ ಸಾಧಿಸಿತೆಂಬ ತರ್ಕ ಕುಂದಗೋಳದ ರಾಜಕೀಯ ಪಡಸಾಲೆಯಲ್ಲಿದೆ.

ಎಸ್.ಆರ್.ಬೊಮ್ಮಾಯಿ

2007ರಲ್ಲಿ ಮಾಡಲಾದ ಕ್ಷೇತ್ರದಳ ಡಿಲಿಮಿಟೇಷನ್‌ನಲ್ಲಿ ಕಲಘಟಗಿ ಕ್ಷೇತ್ರದಲ್ಲಿದ್ದ ಹುಬ್ಬಳ್ಳಿ ಗ್ರಾಮೀಣದ ಎರಡು ಹೋಬಳಿಗಳನ್ನು ಕುಂದಗೋಳಕ್ಕೆ ಸೇರಿಸಲಾಯಿತು. ಬಿಜೆಪಿ ಒಲವಿನ ಈ ಹೋಬಳಿಗಳ ಸುಮಾರು ಹದಿನಾಲ್ಕು ಹಳ್ಳಿಗಳಿಂದ 2008ರಿಂದ ಚುನಾವಣೆಯ ರೋಚಕತೆ ಹೆಚ್ಚಿದೆ. ಒಟ್ಟು 1,89,281 ಮತದಾರರಿರುವ ಕುಂದಗೋಳದಲ್ಲಿ ವಿವಿಧ ಒಳ ಪಂಗಡಗಳೆಲ್ಲ ಸೇರಿ ಲಿಂಗಾಯತರು 70 ಸಾವಿರದಷ್ಟು ಇದ್ದಾರೆನ್ನಲಾಗಿದ್ದು, ಇದರಲ್ಲಿ ಪಂಚಮಸಾಲಿ ವರ್ಗ ದೊಡ್ಡ ಸಂಖ್ಯೆಯಲ್ಲದೆ. ಜತೆಗೆ ಕುರುಬರು 35 ಸಾವಿರ, ಮುಸ್ಲಿಮರು 30 ಸಾವಿರ, ಎಸ್ಸಿ-ಎಸ್ಟಿ 32 ಸಾವಿರ ಮತ್ತು ಸಣ್ಣಪುಟ್ಟ ಸಮುದಾಯಗಳಾದ ಜೈನ, ಬ್ರಾಹ್ಮಣ, ಇತರ ಒಬಿಸಿ ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. 1957ರಲ್ಲಿ ಕುರುಬ ಸಮುದಾಯದ ಕಾಂಗ್ರೆಸ್ ಕ್ಯಾಂಡಿಡೇಟ್ ಟಿ.ಕೆ.ಕಾಂಬಳಿ (15,819) ಮತ್ತು ಬ್ರಾಹ್ಮಣ ಜಾತಿಯ ಪಕ್ಷೇತರ ಅಭ್ಯರ್ಥಿ ಕೆ.ಆರ್.ನಾಡಿಗೇರ್ (13,458) ಮುಖಾಮುಖಿಯಾಗಿದ್ದರು; 2,367 ಮತದಂತರದಿಂದ ಕಾಂಬಳಿ ಆಯ್ಕೆಯಾದರು. 1962ರಲ್ಲಿ ಶಾಸಕ-ಕಾಂಗ್ರೆಸ್‌ನ ಕಾಂಬಳಿ (13,265) ಮತ್ತು ಪಕ್ಷೇತರ ಹುರಿಯಾಳು ಎಸ್.ಆರ್.ಬೊಮ್ಮಾಯಿ (ಮಾಜಿ ಸಿಎಂ) ನಡುವೆ ಕತ್ತುಕತ್ತಿನ ಹೋರಾಟವಾಯಿತು. ಅಂತಿಮವಾಗಿ ಕಾಂಬಳೆ 1,800 ಮತಗಳ ಅಂತರದಿಂದ ಎರಡನೆ ಬಾರಿ ಎಮ್ಮೆಲ್ಲೆಯಾದರು.

1967ರಲ್ಲಿ ಕಾಂಬಳೆ ಮತ್ತು ಬೊಮ್ಮಾಯಿ ಆಖಾಡಕ್ಕೆ ಧುಮುಕಿದ್ದರು. ಆ ಸ್ಪರ್ಧೆಯಲ್ಲಿ ಪಕ್ಷಾತೀತ ಹುರಿಯಾಳು ಬೊಮ್ಮಾಯಿ ಕಾಂಬಳಿಯವರನ್ನು ಸೋಲಿಸಿದರು. ಕೇವಲ 9,371 ಮತ ಗಳಿಸುವಷ್ಟಕ್ಕೆ ಸುಸ್ತಾದ ಕಾಂಬಳಿಯವರನ್ನು ಭರ್ಜರಿ 10,920 ಮತದಂತರದಿಂದ ಮಣಿಸಿ ಶಾಸನಸಭೆಗೆ ಪ್ರವೇಶ ಪಡೆದರು! ಆದರೆ 1972ರ ಚುನಾವಣಾ ಕಣದಲ್ಲಿ ಸಂಸ್ಥಾ ಕಾಂಗ್ರೆಸ್ ಉಮೇದುವಾರನಾಗಿದ್ದ ಬೊಮ್ಮಾಯಿಯವರಿಗೆ (16,659) ಕಾಂಗ್ರೆಸ್‌ನ ಹೊಸಮುಖ ಆರ್.ವಿ.ರಂಗನಗೌಡರನ್ನು (25,694) ಸೋಲಿಸಲು ಸಾಧ್ಯವಾಗಲಿಲ್ಲ. ಲಿಂಗಾಯತರಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಸಾದರ ಪಂಗಡದ ಬೊಮ್ಮಾಯಿಗೆ ಪ್ರಬಲ ಪಂಚಮಸಾಲಿಗಳು ಬೆಂಬಲಿಸಲಿಲ್ಲ; ರಂಗನಗೌಡರಿಗೆ ಸ್ವಪಂಗಡದ ಪಂಚಮಸಾಲಿ ಮತ ಮತ್ತು ಕಾಂಗ್ರೆಸ್ ಓಟ್‌ಬ್ಯಾಂಕ್ ದಕ್ಕಿದ್ದರಿಂದ ಗೆಲುವು ಸುಲಭವಾಯಿತು ಎನ್ನಲಾಗುತ್ತಿದೆ. 1978ರ ಚುನವಣಾ ಸಮರದ ಸಂದರ್ಭದಲ್ಲಿ ಕಾಂಗ್ರೆಸ್ ವಿಭಜನೆಯಾಗಿದ್ದರಿಂದ ಅಭ್ಯರ್ಥಿಯೂ ಬದಲಾದರು. ಎಂ.ಎಸ್.ಕಟಗಿ (34,761) ಕಾಂಗೈ ಟಿಕೆಟ್ ಪಡೆದರೆ, ಜನತಾ ಪಕ್ಷ ಡಿ.ಎಚ್.ಮುನೀರ್‌ರನ್ನು ಆಖಾಡಕ್ಕೆ ಇಳಿಸಿತು. ಕಾಂಗ್ರೆಸ್ ಹುರಿಯಾಳು ಕಟಗಿ ದೊಡ್ಡ ಅಂತರದಲ್ಲಿ (17,877) ಚುನಾಯಿತರಾದರು.

1983ರ ಸಮರಾಂಗಣದಲ್ಲಿ ಕಾಂಗ್ರೆಸ್‌ನ ವಿ.ಎಸ್.ಕುಬಿಹಾಳ್ ಮತ್ತು ಜನತಾ ಪಕ್ಷದ ಎಸ್.ಆರ್.ಮೂಲ್ಕಿಪಾಟೀಲ್ ಕಾದಾಟ ಆಯಿತು. ರಾಜ್ಯಾದ್ಯಂತ ಎದ್ದಿದ್ದ ಕಾಂಗ್ರೆಸ್ ವಿರೋಧಿ ಅಲೆ ಮತ್ತು ಪಕ್ಕದ ನವಲಗುಂದದ ರೈತ ಬಂಡಾಯದಿಂದ ಜನತಾ ಪಕ್ಷ ಬಲ ವೃದ್ಧಿಸಿತ್ತಾದರೂ ಗೆಲುವಿನ ಗೆರೆ ದಾಟಲಾಗಲಿಲ್ಲ. 28,848 ಮತ ಪಡೆದ ಕುಬಿಹಾಳ್, 6,359 ಮತಗಳ ಅಂತರದಿಂದ ಗೆದ್ದು ಎಮ್ಮೆಲ್ಲೆಯಾದರು. 1985ರ ನಡುಗಾಲ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಲಿಂಗಾಯತ ಸಮೂಹ ಜನತಾ ಪಕ್ಷಕ್ಕೆ ಅಖಂಡ ಬೆಂಬಲ ವ್ಯಕ್ತಪಡಿಸಿತ್ತು. ಒಂದರ್ಥದಲ್ಲಿ ಅಂದು ಬ್ರಾಹ್ಮಣರ ರಾಮಕೃಷ್ಣ ಹೆಗಡೆ ಲಿಂಗಾಯತರ ನಾಯಕನಾಗಿ ಅವತರಿಸಿದ್ದರು. ಈ ಪ್ರಚಂಡ ಜನತಾ ಗಾಳಿಯಲ್ಲಿ 28,038 ಮತ ಬಾಚಿದ ಬಿ.ಎ.ಉಪ್ಪಿನ್ ಕಾಂಗ್ರೆಸ್‌ನ ಶಾಸಕ ಕುಬಿಹಾಳ್‌ರನ್ನು 6,460 ಮತಗಳಿಂದ ಸೋಲಿಸಿದರು.

1989ರ ಇಲೆಕ್ಷನ್ ಹೊತ್ತಲ್ಲಿ ಜನತಾ ಪಕ್ಷ ಹೆಗಡೆ-ದೇವೇಗೌಡರ ಕಿತ್ತಾಟದಿಂದ ಹೋಳಾಗಿತ್ತು; ಅದೇ ವೇಳೆಗೆ ವೀರೇಂದ್ರ ಪಾಟೀಲ್ ಲಿಂಗಾಯತರ ಸರ್ವೋಚ್ಚ ನಾಯಕನಾಗಿ ಕಂಗೊಳಿಸಿದ್ದರು. ಕುಂದಗೋಳದ ಲಿಂಗಾಯತರು ಕಾಂಗ್ರೆಸ್‌ಗೆ ಒಲಿದರು. ಈ ಬಲಾಢ್ಯ ಮೇಲ್ಜಾತಿ ಸಮೀಕರಣದಲ್ಲಿ ಜಾತಿ ಬಲವಿಲ್ಲದ ಪರಿಶಿಷ್ಟ ಸಮುದಾಯದ ಕಾಂಗ್ರೆಸ ಕ್ಯಾಂಡಿಡೇಟ್ ಗೋವಿಂದಪ್ಪ ಜುಟ್ಟಲ್ 36,925 ಓಟು ಗಳಿಸಿ ಜನತಾದಳದ ಆರ್.ವಿ.ದೇಸಾಯಿಯವರನ್ನು 5,521 ಮತಗಳಿಂದ ಸೋಲಿಸಿದರು. ಲಿಂಗಾಯತ ಪ್ರಾಬಲ್ಯದ ಜನರಲ್ ಕ್ಷೇತ್ರದಲ್ಲಿ ದಲಿತರೊಬ್ಬರು ಗೆದ್ದು ಶಾಸಕನಾಗಿದ್ದು ದಾಖಲೆಯಾಯಿತು.

ಜಾತಿ ಸಂಘರ್ಷದ ಅಖಾಡ!

1994ರ ಚುನಾವಣೆ ವೇಳೆ ಶುರುವಾದ ಪ್ರಥಮ ಬಹುಸಂಖ್ಯಾತ ಲಿಂಗಾಯತ ಮತ್ತು ದ್ವಿತೀಯ ಬಹುಸಂಖ್ಯಾತ ಕುರುಬರ ಜಾತಿ ಸಂಘರ್ಷ ಕುಂದಗೋಳದ ರಾಜಕೀಯ ಚಿತ್ರಣವನ್ನೆ ಬದಲಿಸಿಬಿಟ್ಟಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೆಗಡೆ ಹಾಗು ದೇವೇಗೌಡ 1994ರ ಇಲೆಕ್ಷನ್ ಎದುರಾದಾಗ ರಾಜಿಯಾಗಿದ್ದು ಜನತಾದಳಕ್ಕೆ ಚೇತರಿಕೆ ಮೂಡಿಸಿತ್ತು. ಸಾದರ ಲಿಂಗಾಯತರ ಸಾಧು ರಾಜಕಾರಣಿ ಮಲ್ಲಿಕಾರ್ಜುನ ಅಕ್ಕಿ, ಎಸ್.ಆರ್.ಬೊಮ್ಮಾಯಿ ಕೃಪೆಯಿಂದ ಜನತಾ ದಳದ ಟಿಕೆಟ್ ಪಡೆದರು. ಕಾಂಗ್ರೆಸ್ ಶಾಸಕ ಜುಟ್ಟಲ್‌ರನ್ನು ಕಣಕ್ಕೆ ಇಳಿಸಿತು. ಕುರುಬ ಸಮುದಾಯದ ಮುಂದಾಳಾಗಿ ರೂಪುಗೊಂಡಿದ್ದ ಸಿ.ಎಸ್.ಶಿವಳ್ಳಿ ಬಂಗಾರಪ್ಪನವರ ಕೆಸಿಪಿ ಅಭ್ಯರ್ಥಿಯಾದರು. ತ್ರಿಕೋನ ಕಾಳಗ ಏರ್ಪಟ್ಟಿತ್ತು. ಕಾಂಗ್ರೆಸ್ ಬುಟ್ಟಿಯ ಮತ ಶಿವಳ್ಳಿ (19,034 ಹಾಗು ಜುಟ್ಟಲ್ (17,034) ಮಧ್ಯೆ ಹಂಚಿಹೋದ್ದರಿಂದ 32,707 ಓಟು ಪಡೆದ ಜನತಾದಳದ ಅಕ್ಕಿ ಸುಲಭವಾಗಿ ಗೆಲುವು ಸಾಧಿಸಿದರೆಂಬ ತರ್ಕ ಕುಂದಗೋಳದ ರಾಜಕೀಯ ಕಟ್ಟೆಯಲ್ಲಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಬ್ಬಳ್ಳಿ-ಧಾರವಾಡ ಪೂರ್ವ: ಮುಸ್ಲಿಮರ ಕೈಯಿಂದ ಕ್ಷೇತ್ರ ತಪ್ಪಿಸಿದರೂ ಬಿಜೆಪಿಗೇಕೆ ಗೆಲ್ಲಲಾಗುತ್ತಿಲ್ಲ?!

1999ರ ಚುನಾವಣಾ ಚದುರಂಗದಲ್ಲಿ ಬಂಗಾರಪ್ಪ ಕಾಂಗ್ರೆಸ್‌ಗೆ ಮರಳಿದರೆ, ಜನತಾ ದಳ ಜೆಡಿಯು ಮತ್ತು ಜೆಡಿಎಸ್ ಎಂದು ಹೋಳಾಗಿತ್ತು. ಬಂಗಾರಪ್ಪನವರಿಗೆ ತಮ್ಮ ಹಿಂಬಾಲಕ ಶಿವಳ್ಳಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲಾಗಲಿಲ್ಲ; ಪಕ್ಷೇತರನಾಗಿ ಶಿವಳ್ಳಿ ಸ್ಪರ್ಧೆ ಮಾಡಿದರು. ಶಿವಳ್ಳಿ (30,692), ಜನತಾ ದಳ(ಯು) ಪಕ್ಷದ ಎಂ.ಎಸ್.ಅಕ್ಕಿ (20,184), ಕಾಂಗ್ರೆಸ್‌ನ ಗೋವಿಂದಪ್ಪ ಜುಟ್ಟಲ್ (18,278) ಮತ್ತು ಜನತಾ ದಳ (ಎಸ್)ನ ಆರ್.ಎನ್.ಪಾಟೀಲ್ (10,922) ನಡುವಿನ ಚತುಷ್ಕೋನ ಹೋರಾಟ ತೀವ್ರ ಕತೂಹಲ ಕೆರಳಿಸಿತ್ತು. ಪಕ್ಷೇತರ ಶಿವಳ್ಳಿ ಸಮೀಪದ ಪ್ರತಿಸ್ಪರ್ಧಿ ಅಕ್ಕಿಯವರನ್ನು 10,508 ಮತದಿಂದ ಮಣಿಸಿ ಅಸೆಂಬ್ಲಿ ಪ್ರವೇಶಿಸಿದರು! ರಾಮಕೃಷ್ಣ ಹೆಗಡೆಗೆ ನಿಷ್ಠರಾಗಿ ಉಳಿದಿದ್ದ ಮಾಜಿ ಶಾಸಕ ಎಂ.ಎಸ್.ಅಕ್ಕಿ 2004ರಲ್ಲಿ ಮತ್ತೆ ಜೆಡಿಯು ಅಭ್ಯರ್ಥಿಯಾದರೆ, ಶಾಸಕ ಶಿವಳ್ಳಿ ಪಕ್ಷೇತರನಾಗಿಯೆ ಸ್ಪರ್ಧೆ ಮಾಡಿದರು; ಕಾಂಗ್ರೆಸ್ ಮಾಜಿ ಶಾಸಕ ಎಂ.ಎಸ್.ಕಟಗಿ ಪುತ್ರ ಅರವಿಂದ ಕಟಗಿಗೆ ಟಿಕೆಟ್ ಕೊಟ್ಟಿತು. ಅಕ್ಕಿ(28,184) ಮತ್ತು ಶಿವಳ್ಳಿ (23,942) ನಡುವೆ ಏರ್ಪಟ್ಟ ನಿಕಟ ಕಾಳಗದಲ್ಲಿ ಕೊನೆಗೆ ಅಕ್ಕಿ 4,242 ಮತಗಳ ಅಂತರದಿಂದ ಶಾಸಕನಾಗಿ ನಿಟ್ಟುಸಿರುಬಿಟ್ಟರೆಂದು ಅಂದಿನ ಹಣಾಹಣಿ ಕಂಡವರು ಹೇಳುತ್ತಾರೆ.

ಸಿ.ಎಸ್.ಶಿವಳ್ಳಿ

ಕಲಘಟಗಿ ವಿಧಾನಸಭಾ ವ್ಯಾಪ್ತಿಯಲ್ಲಿದ್ದ ಹುಬ್ಬಳ್ಳಿ ತಾಲೂಕಿನ ಎರಡು ಹೋಬಳಿಗಳನ್ನು 2007ರ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆ ಪ್ರಕ್ರಿಯೆಯಲ್ಲಿ ಕುಂದಗೋಳಕ್ಕೆ ಸೇರಿಸಲಾಗಿದೆ. ಕಲಘಟಗಿಯ ಬಿಜೆಪಿ ಶಾಸಕರಾಗಿದ್ದ ಹುಬ್ಬಳ್ಳಿ ತಾಲೂಕಿನ ಎಸ್.ಐ.ಚಿಕ್ಕನಗೌಡ್ರ ತಮ್ಮ ಹಿಡಿತದಲ್ಲಿದ್ದ ಹಳ್ಳಿಗಳು ಕುಂದಗೋಳಕ್ಕೆ ಸೇರಿರುವುದರಿಂದ ಕ್ಷೇತ್ರ ಬದಲಿಸಿಕೊಂಡಿದ್ದಾರೆ. ಯಡಿಯೂರಪ್ಪ ಕುಟುಂಬದ ಜತೆ ಬೀಗತನ ಹೊಂದಿರುವ ಚಿಕ್ಕನಗೌಡ್ರ 2008ರಲ್ಲಿ ಸ್ಥಳೀಯ ಬಿಜೆಪಿ ನಿಷ್ಠಾವಂತರನ್ನೆಲ್ಲ ಬದಿಗೆ ತಳ್ಳಿ ಟಿಕೆಟ್ ಗಿಟ್ಟಿಸಿದ್ದರು; ಕಲಘಟಗಿಯಿಂದ ಜನತಾ ಪರಿವಾರದ ಶಾಸಕರಾಗಿ ಮಂತ್ರಿಯೂ ಆಗಿದ್ದ ಹುಬ್ಬಳ್ಳಿ ಮೂಲದ ಪಿ.ಸಿ.ಸಿದ್ದನಗೌಡ್ರ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಹೋರಾಟ ನಡೆದಿದ್ದು ಮಾತ್ರ ಮಾಜಿ ಶಾಸಕ-ಕಾಂಗ್ರೆಸ್ ಉಮೇದುವಾರ ಸಿ.ಎಸ್.ಶಿವಳ್ಳಿ ಮತ್ತು ಬಿಜೆಪಿಯ ಚಿಕ್ಕನಗೌಡ್ರ ನಡುವೆ. ಯಡಿಯೂರಪ್ಪರ ಸಿಎಂ ಆಗಬೇಕೆಂಬ ಪ್ರತಿಷ್ಠೆಯ ಕಾರಣಕ್ಕೆ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರು ಒಳ ಪಂಗಡ ಭೇದ ಮರೆತು ಬಿಜೆಪಿಗೆ ಏಕಗಂಟಲ್ಲಿ ಮತ ಚಲಾಯಿಸಿದ್ದರಿಂದ ಆ ಬಾರಿ ಚಿಕ್ಕನಗೌಡ್ರ 6,376 ಮತದಂತರದಿಂದ ಗೆದ್ದರೆಂಬ ಮಾತು ಕ್ಷೇತ್ರದಲ್ಲಿ ಕೇಳಿಬರುತ್ತದೆ.

2013ರಲ್ಲಿ ಶಾಸಕ ಚಿಕ್ಕನಗೌಡ್ರಗೆ ಇಲೆಕ್ಷನ್ ರಾಜಕಾರಣದಲ್ಲಿ ಪಳಗಿದ ತಂತ್ರಗಾರ ಎನ್ನಲಾಗಿರುವ ಕಾಂಗ್ರೆಸ್‌ನ ಶಿವಳ್ಳಿಯನ್ನು ಎದುರಿಸುವುದು ಕಷ್ಟವಾಯಿತು. ಲಿಂಗಾಯತರ ಓಟ್‌ಬ್ಯಾಂಕ್ ಕೆಜೆಪಿಯ ಚಿಕ್ಕನಗೌಡ್ರ (31,618), ಬಿಜೆಪಿಯ ಎಂ.ಆರ್.ಪಾಟೀಲ್(23,641) ಹಾಗು ಜೆಡಿಎಸ್‌ನ ಎಂ.ಎಸ್.ಅಕ್ಕಿ ನಡುವೆ ಹರಿದುಹಂಚಿಹೋಗಿದ್ದು ಶಿವಳ್ಳಿಗೆ ಸೆಣಸಾಟ ಸುಲಭವಾಗಿಸಿತೆಂದು ವಿಶ್ಲೇಷಿಸಲಾಗುತ್ತಿದೆ. 52,690 ಮತ ಪಡೆದ ಶಿವಳ್ಳಿ 21,072 ಮತದಂತರದಿಂದ ಸಮೀಪದ ಪ್ರತಿಸ್ಪರ್ಧಿ ಚಿಕ್ಕನಗೌಡ್ರರನ್ನು ಸೋಲಿಸಿದರು. 2018ರಲ್ಲಿ ಬಿಜೆಪಿ-ಕೆಜೆಪಿ ಒಂದಾದರೂ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರರಿಗೆ ಕಾಂಗ್ರೆಸ್‌ನ ಶಿವಳ್ಳಿಯವರನ್ನು ಮಣಿಸಲಾಗಲಿಲ್ಲ. ಕತ್ತು-ಕತ್ತಿನ ಕಾಳಗದಲ್ಲಿ ಶಿವಳ್ಳಿ (64,871) ಕೇವಲ 634 ಮತದಿಂದ ಗೆಲುವು ಕಂಡರು!

ಕುಮಾರಸ್ವಾಮಿಯ ಸಮ್ಮಿಶ್ರ ಸರಕಾರದಲ್ಲಿ ಶಿವಳ್ಳಿ ಕಾಂಗ್ರೆಸ್ ಕೋಟಾದಲ್ಲಿ ಮಂತ್ರಿಯೂ ಆದರು. ಇದು ಸಿದ್ದರಾಮಯ್ಯ ಕೃಪಾಕಟಾಕ್ಷದಿಂದ ಸಾಧ್ಯವಾಯಿತು ಎನ್ನಲಾಗುತ್ತಿದೆ. ಮಂತ್ರಿಯಾದ ಕೆಲವೆ ತಿಂಗಳಲ್ಲಿ ಶಿವಳ್ಳಿ ಅನಾರೋಗ್ಯದಿಂದ ನಿಧನದರು. ಹಾಗಾಗಿ 2019ರಲ್ಲಿ ಉಪಚುನಾವಣೆ ಎದುರಾಯಿತು. ಕಾಂಗ್ರೆಸ್ ಶಿವಳ್ಳಿ ಮಡದಿ ಕುಸುಮಾವತಿಯನ್ನು ಕಣಕ್ಕಿಳಿಸಿತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಇದ್ದುದರಿಂದ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ಡಿಕೆಶಿ-ಸಿದ್ದರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಟೊಂಕಕಟ್ಟಿ ನಿಂತರು. ಬಿಜೆಪಿ ಚಿಕ್ಕನಗೌಡ್ರನ್ನೆ ಅಭ್ಯರ್ಥಿ ಮಾಡಿತು; ಯಡಿಯೂರಪ್ಪ ಬೀಗರನ್ನು ಗೆಲ್ಲಿಸಲು ಬೆವರಿಳಿಸಿದರು. ನೇರ-ನಿಕಟ ಹಣಾಹಣಿಯಲ್ಲಿ 76,039 ಮತ ಪಡೆದ ಚಿಕ್ಕನಗೌಡ್ರನ್ನು ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ 1,421 ಮತದಂತರದಿಂದ ಸೋಲಿಸಿ ಶಾಸಕಿಯಾದರು.

ಕಷ್ಟ-ನಷ್ಟದ ಕ್ಷೇತ್ರ!

ಕುಂದಗೋಳ ನಂಜುಂಡಪ್ಪ ವರದಿಯಲ್ಲಿ ತೀರ ಹಿಂದುಳಿದ ತಾಲೂಕೆಂದು ಪರಿಗಣಿಸಲ್ಪಟ್ಟಿದೆ. ನಂಜುಂಡಪ್ಪ ವರದಿಯಲ್ಲಿ ಅಭಿವೃದ್ಧಿ ಕಾಣದ ಪ್ರದೇಶ ಎಂದು ಹೇಳಲಾಗಿದ್ದ ಹಲವು ತಾಲೂಕುಗಳು ಗಣನೀಯ ಪ್ರಗತಿ ಕಂಡಿವೆ. ಉದಾಹರಣೆಗೆ ಯಡಿಯೂರಪ್ಪರ ಶಿಕಾರಿಪುರ ಜಿಲ್ಲಾ ಕೇಂದ್ರ ಆಗುವಷ್ಟರ ಮಟ್ಟಿಗೆ ಬದಲಾಗಿದೆ. ಆದರೆ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಜನ್ಮ ಭೂಮಿ ಮಾತ್ರ ಸಮಸ್ಯೆಯ ಸುಳಿಯಲ್ಲಿ ಸಂಕಟ ಪಡುತ್ತಲೇಇದೆ.

ಒಂದು ದೊಡ್ಡ ಹಳ್ಳಿಯಂತೆ ಭಾಸವಾಗುವ ಇಡೀ ಕುಂದಗೋಳ ತಾಲೂಕಿನಲ್ಲಿ ಮೂಲ ಸೌಕರ್ಯಗಳೇ ಇಲ್ಲ! ಅತಿ ಅನಿವಾರ್ಯವಾದ ಕುಡಿಯುವ ನೀರು-ರಸ್ತೆ ಸಂಪರ್ಕ-ಶಿಕ್ಷಣ-ಆರೋಗ್ಯ-ವಸತಿಗಾಗಿ ಜನರು ಗೋಳಾಡುವುದು ಹೇಳತೀರದು. ಹೊಲಕ್ಕೆ ಹೋಗಿಬರಲು ದಾರಿ ಬೇಕು; ವಸತಿ ಯೋಜನೆಯಲ್ಲಿ ವಶೀಲಿಬಾಜಿಯ ಸಬಲರಿಗೆ ಅವಕಾಶವಾಗಿ ಅರ್ಹ ಅಸಹಾಯಕರು ವಂಚಿತರಾಗುತ್ತಿದ್ದಾರೆ. ವೃತ್ತಿಪರ ಕೋರ್ಸುಗಳ ಕಾಲೇಜು ಬಿಡಿ, ಪಿಯುಸಿ, ಐಟಿಐ ಕಾಲೇಜುಗಳೂ ಸಮರ್ಪಕವಾಗಿಲ್ಲ. ಶಿಕ್ಷಣ, ಆಸ್ಪತ್ರೆ, ಕೃಷಿ ಉತ್ಪನ್ನ ಮಾರಾಟ-ಖರೀದಿ, ಹೀಗೆ ಪ್ರತಿಯೊಂದಕ್ಕೂ ಹುಬ್ಬಳ್ಳಿ ಇಲ್ಲವೆ ಗದಗಕ್ಕೆ ಹೋಗಬೇಕು.

ಬೋರ್ ಕೊರದರೆ ಸವಳು ನೀರು ಬರುತ್ತದೆ; ಜಲ ಜೀವನ್ ಮಿಷನ್ ಯೋಜನೆ ಎಂದರೆ ದುಡ್ಡುಕೊಟ್ಟು ನೀರು ಖರೀದಿಸುವುದಾಗಿದೆ. ಎಷ್ಟೇ ಹಂಬಲಿಸಿದರೂ ಮಹದಾಯಿ ನೀರು ದಕ್ಕುತ್ತಿಲ್ಲ. ಬೆಣ್ಣಹಳ್ಳಕ್ಕೆ ಒಡ್ಡು ಕಟ್ಟಿದ್ದರೆ ಬೇಸಾಯ ಮತ್ತು ಬಳಕೆಗೆ ನೀರು ಒದಗುತ್ತಿತ್ತು. ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಕೊಡುವುದು ಮತ್ತು ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆ ಸ್ಥಾಪಿಸುವ ಮೂಲಕ ದುಡಿವ ಕೈಗೆಳಿಗೆ ಕೆಲಸ ಕೊಡುವ ಯೋಚನೆ ಅಧಿಕಾರಸ್ಥರು ಮಾಡುತ್ತಿಲ್ಲ; ಹೀಗೆ ಕ್ಷೇತ್ರದಲ್ಲಿ ಕೇಳಿಬರುವ ಅಸಮಾಧಾನದ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ!

ಚಿಕ್ಕನಗೌಡ್ರು

ಸರಕಾರದ ಅವೈಜ್ಞಾನಿಕ ಕೃಷಿ ಉತ್ಪನ್ನ ಖರೀದಿ ನೀತಿ, ವಾಣಿಜ್ಯ ಬೆಳೆ ಸಂರಕ್ಷಣೆಗೆ ಶೀತಲೀಕರಣ ವ್ಯವಸ್ಥೆ ಮಾಡದಿರುವುದು ಮತ್ತು ಸ್ಥಳೀಯ ಎಪಿಎಂಸಿಯ ಅವ್ಯವಸ್ಥೆಯಿಂದ ದಲ್ಲಾಳಿ ಮಾಫಿಯಾಕ್ಕೆ ಬಿಸಿಲು-ಮಳೆ-ಚಳಿಯೆನ್ನದೆ ವರ್ಷವಿಡೀ ಬೆವರು ಸುರಿಸುವ ಅಮಾಯಕ ರೈತರ ಶೋಷಣೆಗೆ ಅವಕಾಶವಾಗುತ್ತಿದೆ ಎಂಬುದು ಸಾಮಾನ್ಯ ತರ್ಕ. ಕುಂದಗೋಳದಲ್ಲಿ ಬಹು ಬೇಡಿಕೆಯ ಬ್ಯಾಡಗಿ ತಳಿ ಮೆಣಸು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಮೆಣಸು ಬೇಗ ಕೆಡುವುದರಿಂದ ಕೋಲ್ಡ್ ಸ್ಟೋರೇಜ್ ಬೇಕೆನ್ನುವುದು ರೈತರ ಬಹುದಿನದ ಬೇಡಿಕೆ. ಆದರೆ ಅಧಿಕಾರಸ್ಥರು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ! ಕುಂದಗೋಳದ ಎಪಿಎಂಸಿ ಯಾರ್ಡ್‌ನಲ್ಲಿ ಹತ್ತಿ ಮಾರಾಟ-ಖರೀದಿಗೆ ಅನುಕೂಲತೆಯಿಲ್ಲ. ಹಾಗಾಗಿ ರೈತರು ದೂರದ ಹುಬ್ಬಳ್ಳಿ-ಗದಗ-ಲಕ್ಷ್ಮೇಶ್ವರಕ್ಕೆ ಹತ್ತಿ ಒಯ್ಯಬೇಕಾಗಿದೆ. ಇದು ಕಷ್ಟ; ಕುಂದಗೋಳದಲ್ಲಿ ಹತ್ತಿ ಖರೀದಿ ಕೇಂದ್ರ ಮತ್ತು ಹತ್ತಿ ದಾಸ್ತಾನಿಗೆ ಗೋದಾಮನ್ನು ಸರಕಾರ ಸ್ಥಾಪಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ರೈತರು ಹೇಳುತ್ತಾರೆ.

ಸಾಮಾನ್ಯವಾಗಿ ಅಗಸ್ಟ್-ಸೆಪ್ಟೆಂಬರ್‌ನಲ್ಲಿ ಹೆಸರು, ಉದ್ದು, ತೊಗರಿ, ಮಡಕೆ ಫಸಲನ್ನು ಒಕ್ಕುತ್ತಾರೆ. ಬೆಂಬಲ ಬೆಲೆ ಖರೀದ ಕೇಂದ್ರ ಕಟಾವಿಗಿಂತ ಒಂದು ತಿಂಗಳು ಮೊದಲು ತೆರೆದರೆ ರೈತರಿಗೆ ಪ್ರಯೋಜನ ಆಗುತ್ತದೆ. ಆದರೆ ಅಧಿಕಾರಿಗಳು ಎಂಪಿ ಸಾಹೇಬರಿಗೆ, ಮಂತ್ರಿಗಳಿ ಅಥವಾ ಶಾಸಕರಿಗೆ ಖರೀದಿ ಕೇಂದ್ರ ಉದ್ಘಾಟನೆಗೆ ಬರಲು ಪುರಸೊತ್ತಿಲ್ಲ ಎಂಬಂಥ ಕ್ಷುಲ್ಲಕ ಕಾರಣ ಹೇಳಿ ರೈತರು ಒಕ್ಕಿದ ಒಂದೆರಡು ತಿಂಗಳ ನಂತರ ಖರೀದಿ ಕೇಂದ್ರ ತೆರೆಯುತ್ತಾರೆ!

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಧಾರವಾಡ: ಲಿಂಗಾಯತ ಏಕಸ್ವಾಮ್ಯದ ರಾಜಕಾರಣಕ್ಕೆ ಕೇಸರಿ ಖದರು!

ಅಲ್ಲಿಯವರೆಗೆ ಆರ್ಥಿಕ ಸಂಕಷ್ಟದಲ್ಲಿರುವ ರೈತರನ್ನು ಮಧ್ಯವರ್ತಿಗಳು ಪುಸಲಾಯಿಸಿ ತೀರಾ ಅಗ್ಗಕ್ಕೆ ಧಾನ್ಯ ಅಪಹರಿಸುತ್ತಾರೆ; ಜತೆಗೆ ರೈತರಿಂದ ಉತಾರ್ (ಆರ್‌ಟಿಸಿ) ಪಡೆದಿಟ್ಟುಕೊಳ್ಳುತ್ತಾರೆ. ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಾಗ ರೈತರ ಹೆಸರಲ್ಲಿ ಮಾರಿ ಭರ್ಜರಿ ಲಾಭ ಗಿಟ್ಟಿಸುತ್ತಾರೆ; ಇಲ್ಲವೆ ಕಾಳಸಂತೆಯಲ್ಲಿ ಮಾರುತ್ತಾರೆ. ಮುಗ್ಧ ಮಣ್ಣಿನ ಮಕ್ಕಳಿಗೆ ಮೋಸ ಮಾಡುವ ಈ ಮಾಫಿಯಾದಲ್ಲಿ ದಲ್ಲಾಳಿ-ಅಧಿಕಾರಿ-ರಾಜಕಾರಣಿಗಳಿದ್ದಾರೆ; ಇಂಥ ಹಲವು ಶೋಷಣೆ-ಅನ್ಯಾಯಗಳಿಂದ ಕುಂದಗೋಳ ಅಭಿವೃದ್ಧಿ ಆಗುತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ’ನ್ಯಾಯಪಥ’ಕ್ಕೆ ವಿವರಿಸಿದರು!!

ಹೊಸಬರಿಗೆ ಅವಕಾಶ?!

ಕುಂದಗೋಳದ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಗೊಂದಲದ ಗೂಡಾಗಿವೆ. ಎರಡೂ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಬಹುಕೋನ ಕಿತ್ತಾಟ ಜೋರಾಗುತ್ತಿದೆ. ಕಾಂಗ್ರೆಸ್‌ನ ಶಾಸಕಿ ಕುಸುಮಾವತಿ ಶಿವಳ್ಳಿ ಬಗ್ಗೆ ಕಾರ್ಯಕರ್ತರಿಗೆ ಸಮಾಧಾನವಿಲ್ಲ; ಗುದ್ದಲಿ ಪೂಜೆ-ಉದ್ಘಾಟನೆಗಷ್ಟೆ ಶಾಸಕಿಯಾಗಿರುವ ಕುಸುಮಾವತಿ ಜನರ ಜೊತೆಗೆ ಸದಾ ಸಂಪರ್ಕದಲ್ಲಿರಲು ವಿಫಲರಾಗಿದ್ದಾರೆ. ಅವರು ಹೆಸರಿಗಷ್ಟೇ ಶಾಸಕಿ; ಅವರ ದಿವಂಗತ ಪತಿ ಸಿ.ಎಸ್.ಶಿವಳ್ಳಿಯವರ ಮಿತ್ರ ಮಾಡೂರ್ ಶಾಸಕನಂತಾಡುತ್ತಾರೆ; ಹೀಗಾಗಿ ಜನರಿಗೆ ಬೇಸರ ಬಂದಿದೆ; ಮತ್ತೆ ಅವರು ಗೆಲ್ಲುವುದಿಲ್ಲ ಎಂದು ಕಾಂಗ್ರೆಸ್ಸಿಗರೆ ಹೇಳುತ್ತಾರೆ. ಆದರೆ ಸಿದ್ದರಾಮಯ್ಯರ ಕೃಪಾಕಟಾಕ್ಷದಿಂದ ಟಿಕೆಟ್ ತರುವ ಧೈರ್ಯದಲ್ಲಿ ಕುಸುಮಾವತಿಯವರಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯದ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಜಿ.ಪಂ ಮಾಜಿ ಸದಸ್ಯ ಉಮೇಶ್ ಹೆಬಸೂರು, ಮಾಜಿ ಶಾಸಕ ಬಿ.ಎ.ಉಪ್ಪಿನ್ ಪುತ್ರ ಜಗದೀಶ್ ಉಪ್ಪಿನ್ ಮತ್ತು ಕುರುಬ ಸಮುದಾಯದ ಮುಂದಾಳು ಶಿವಾನಂದ ಬೆಂತೂರ್ ತಂತಮ್ಮ ಗಾಡ್‌ಫಾದರ್‌ಗಳನ್ನು ಹಿಡಿದುಕೊಂಡು ಟಿಕೆಟ್‌ಗಾಗಿ ಕಟಿಪಿಟಿ ನಡೆಸಿದ್ದಾರೆ. ಅಂತಿಮ ಹಣಾಹಣಿ ಕುರುಬ ಸಮುದಾಯದ-ಸಿದ್ದರಾಮಯ್ಯ ಹಿಂಬಾಲಕಿ ಶಾಸಕಿ ಕುಸುಮಾವತಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬೆಂಬಲಿಗ-ಪಂಚಮಸಾಲಿ ಲಿಂಗಾಯತ ಎಂ.ಎಸ್.ಅಕ್ಕಿ ನಡುವೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತವೆ. ಹಿಂದೆರಡು ಬಾರಿ ಶಾಸಕರಾಗಿದ್ದ ಅಕ್ಕಿ ಕ್ಷೇತ್ರದ ಬೇಕುಬೇಡ ಗೊತ್ತಿರುವ ಸೌಜನ್ಯ ಮತ್ತು ಎಲ್ಲ ವರ್ಗದ ಜನಬಳಕೆಯ ನಾಯಕ; ಅಕ್ಕಿ ಕಾಂಗ್ರೆಸ್‌ನಿಂದ ನಿಂತರೆ ಗೆಲ್ಲುತ್ತಾರೆಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ.

ಬಿಜೆಪಿಯಲ್ಲು ಟಿಕೆಟ್ ಗುದುಮುರಿಗೆ ಬಿರುಸಾಗಿದೆ. ಒಮ್ಮೆ ಕೆಜೆಪಿ-ಎರಡು ಬಾರಿ ಬಿಜೆಪಿಯಿಂದ ಸೋತ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರರಿಗೆ ಮತ್ತೆ ಅವಕಾಶ ಕೊಡಕೂಡದೆಂದು ಕೇಂದ್ರಮಂತ್ರಿ ಪ್ರಹ್ಲಾದ ಜೋಶಿ ಬಣ ಪ್ರತಿರೋಧ ಒಡ್ಡುತ್ತಿದೆ. 2018ರಲ್ಲಿ ಜೋಶಿ ಶಿಷ್ಯ ಎಂ.ಆರ್.ಪಾಟೀಲ್ ತನಗೆ ಟಿಕೆಟ್ ಬೇಕೆಂದು ಹಠಹಿಡಿದು ಬಂಡಾಯದ ಬೆದರಿಕೆಯೂ ಹಾಕಿದ್ದರು. ಆದರೆ ಯಡಿಯೂರಪ್ಪ ತಮ್ಮ ಸಂಬಂಧಿ ಚಿಕ್ಕನಗೌಡ್ರರನ್ನು ಅಭ್ಯರ್ಥಿ ಮಾಡಿದರು. ಆ ಸಂದರ್ಭದಲ್ಲಿ ಎಂ.ಆರ್.ಪಾಟೀಲ್‌ಗೆ ಮುಂದಿನ ಬಾರಿ ಅವಕಾಶ ಕೊಡುವ ಭರವಸೆ ನೀಡಿ ಸುಮ್ಮನಾಗಿಸಲಾಗಿತ್ತು; ಆದರೆ 2019ರಲ್ಲಿ ಎದುರಾದ ಉಪಚುನಾವಣೆಯಲ್ಲಿ ಮತ್ತೆ ಪಾಟೀಲರಿಗೆ ಟಿಕೆಟ್ ಸಿಗದಂತೆ ಮಾಡಿದ ಯಡಿಯೂರಪ್ಪ ಚಿಕ್ಕನಗೌಡ್ರರನ್ನು ಅಖಾಡಕ್ಕೆ ಇಳಿಸಿದ್ದರು.

ಕೆರಳಿದ್ದ ಪಾಟೀಲ್ ಪ್ರಚಾರದಲ್ಲಿ ಹೆಚ್ಚು ಸಕ್ರಿಯವಾಗಿರಲಿಲ್ಲ ಎನ್ನಲಾಗಿದೆ. ಪ್ರಹ್ಲಾದ್ ಜೋಶಿ ಈ ಬಾರಿ ಟಿಕೆಟ್ ಕೊಡಿಸುವ ವಿಶ್ವಾಸದಲ್ಲಿ ಪಾಟೀಲ್ ತಾನೆ ಕೇಸರಿ ಪಾಳೆಯದ ಕಪ್ಪುಕುದುರೆಯೆಂದು ಬಿಂಬಿಸಿಕೊಂಡು ಚುನಾವಣಾ ತಯಾರಿ ನಡೆಸಿದ್ದಾರೆ ಎಂಬ ಸುದ್ದಿಗಳು ಬಿಜೆಪಿ ಬಿಡಾರದಿಂದ ಹೊರಬರುತ್ತಿವೆ. ಚಿಕ್ಕನಗೌಡ್ರ ಮತ್ತು ಪಾಟೀಲರ ಮೇಲಾಟದಲ್ಲಿ ತಮ್ಮ ಅದೃಷ್ಟ ಖುಲಾಯಿಸುವ ಕನಸು ಆರೆಸ್ಸೆಸ್ ನಂಟಿನ ಮಲ್ಲಿಕಾರ್ಜುನ ಬಾಳೆಕಾಯಿ ಮತ್ತು ಬಸವರಾಜ್ ಕುಂದಗೋಳಮಠ್ ಕಾಣುತ್ತಿದ್ದಾರೆ. ಕಳೆದ ಬಾರಿ ಜೆಡಿಯುನಿಂದ ಸ್ಪರ್ಧಿಸಿದ್ದ ಹಜರತ್ ಅಲಿ ಜೋಡಮನಿ ಈ ಸಲ ಜೆಡಿಎಸ್ ಹುರಿಯಾಳೆಂದು ಘೋಷಣೆಯೂ ಆಗಿದೆ.

ಕಾಂಗ್ರೆಸ್ ಕ್ಯಾಂಡಿಡೇಟ್ ಕುಸುಮಾವತಿಯಾದರೆ ಬಿಜೆಪಿಯಿಂದ ಯಾರು ನಿಂತರೂ ಗೆಲ್ಲುತ್ತಾರೆ; ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಎಂ.ಎಸ್.ಅಕ್ಕಿ ಗೆಲುವು ಖಾತ್ರಿ ಎಂಬ ಚರ್ಚೆ ಕುಂದಗೋಳದ ರಾಜಕೀಯ ಕಟ್ಟೆಯಲ್ಲಾಗುತ್ತಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...