Homeಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆ; ಮಾಗಡಿಯಲ್ಲಿ ಗೆಲ್ಲುವವರು ಯಾರು?

2023ರ ಕರ್ನಾಟಕ ವಿಧಾನಸಭಾ ಚುನಾವಣಾ ಸಮೀಕ್ಷೆ; ಮಾಗಡಿಯಲ್ಲಿ ಗೆಲ್ಲುವವರು ಯಾರು?

ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಾಗಡಿಯಲ್ಲಿ ಕಾಂಗ್ರೆಸ್ ಸಹ ಪ್ರಬಲ ಪೈಪೋಟಿ ನೀಡುತ್ತಿದೆ. ಕಳೆದ ಚುನಾವಣೆಯಲ್ಲಿ ಸೋಲುಂಡಿರುವ ಬಾಲಕೃಷ್ಣರವರು ಈ ಬಾರಿ ಗೆದ್ದೇ ತೀರುವ ಹಠ ತೊಟ್ಟಿದ್ದಾರೆ.

- Advertisement -
- Advertisement -

ಕೆಂಪೇಗೌಡರು ಕೋಟೆ ಕಟ್ಟಿ ಆಳಿದ ಊರು, ಸಿದ್ಧಗಂಗಾ ಶ್ರೀಗಳು ನಡೆದಾಡಿದ ಬೀಡು, ಸಾಲು ಮರದ ತಿಮ್ಮಕ್ಕ ನೆಟ್ಟಿದ ಮರಗಳ ನಾಡು ಎಂದೇ ಹೆಸರಾದ ಮಾಗಡಿ ಸದ್ಯ ಬೆಂಗಳೂರೆಂಬ ಝಗಮಗಿಸುವ ಬೃಹತ್ ದೀಪದ ಕೆಳಗಿನ ಕತ್ತಲೆಯ ಊರು ಎಂಬಂತಾಗಿರುವುದು ದುರಂತ. ಬೆಂಗಳೂರಿನ ಸುತ್ತಮುತ್ತಲ ಬಹುತೇಕ ಎಲ್ಲ ಪ್ರದೇಶಗಳು ಒಂದಿಷ್ಟು ಮಟ್ಟಿಗೆ ಅಭಿವೃದ್ಧಿ ಹೊಂದಿದರೆ ಮಾಗಡಿ ಮಾತ್ರ ನಿಂತಲೇ ನಿಂತಿರುವಂತೆ ಭಾಸವಾಗುತ್ತಿದೆ. ಸುತ್ತಲೂ ಹಸಿರುಕಾಡು, ಬೆಟ್ಟಗುಡ್ಡಗಳು, ಮೂರು ಜಲಾಶಯಗಳೊಂದಿಗೆ ಅಪಾರ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಮಾಗಡಿಯಲ್ಲಿ ಇಂದಿಗೂ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ತಾಲ್ಲೂಕು ಎಂದು ಗುರುತಿಸಿಕೊಂಡು 15 ವರ್ಷ ಕಳೆದರೂ ರೈತರಿಗಾಗಿ ಒಂದು ಎಪಿಎಂಸಿ ಇಲ್ಲಿಲ್ಲ. ಹೇಳಿಕೊಳ್ಳುವ ಆಸ್ಪತ್ರೆಯಾಗಲಿ, ಕೈಗಾರಿಕೆಗಳಾಗಲಿ ಇಲ್ಲದ ಇಲ್ಲಿ, ಸಂಸ್ಕೃತ ವಿವಿ ಸ್ಥಾಪಿಸುತ್ತೇವೆಂದು ಬಿಜೆಪಿ ಸರ್ಕಾರ ಘೋಷಿಸಿದೆ! ಅದು 100 ಎಕರೆ ಪ್ರದೇಶದಲ್ಲಿ, 359 ಕೋಟಿ ರೂ ವೆಚ್ಚದಲ್ಲಿ..

ಎಚ್.ಸಿ ಬಾಲಕೃಷ್ಣ

ರಾಜಕೀಯ ಇತಿಹಾಸ

1957ರಿಂದ ಮೂರು ಬಾರಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಇಲ್ಲಿ ಜಯಗಳಿಸಿತ್ತು. ನಂತರ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಎಚ್.ಜಿ ಚನ್ನಪ್ಪನವರು ಕಾಂಗ್ರೆಸ್‌ನಿಂದ ಒಮ್ಮೆ ಮತ್ತು ಜನತಾ ಪಕ್ಷದಿಂದ ಒಮ್ಮೆ ಜಯಗಳಿಸಿ ಮೂರು ಬಾರಿ ಎಂಎಲ್‌ಎ ಆದರು. ಅವರ ಪುತ್ರ ಎಚ್.ಸಿ ಬಾಲಕೃಷ್ಣರವರು ಆರಂಭದಲ್ಲಿ ಬಿಜೆಪಿಯಿಂದ ಒಮ್ಮೆ ನಂತರ ಜೆಡಿಎಸ್‌ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಂದರೆ ಮಾಗಡಿಯನ್ನು ಚನ್ನಪ್ಪ ಮತ್ತು ಬಾಲಕೃಷ್ಣರವರು ಸುಮಾರು 35 ವರ್ಷಗಳ ಕಾಲ ಪ್ರತಿನಿಧಿಸುತ್ತಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ, ಸದ್ಯ ಎಂಎಲ್‌ಸಿ ಆಗಿರುವ ರೇವಣ್ಣನವರು ಇಲ್ಲಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004ರಿಂದ ಇಲ್ಲಿಯವರೆಗೆ ಸತತವಾಗಿ ನಾಲ್ಕು ಬಾರಿ ಜೆಡಿಎಸ್ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದಿದೆ. ಆದರೆ ಇಲ್ಲಿಂದ ಆಯ್ಕೆಯಾದವರು ಮಾತ್ರ ಚೆನ್ನಾಗಿ ಉದ್ಧಾರ ಆಗಿದ್ದಾರೆಯೇ ಹೊರತು ಕ್ಷೇತ್ರಕ್ಕೆ ಆ ಭಾಗ್ಯ ಒಲಿದಿಲ್ಲ ಎಂದು ಈ ಕ್ಷೇತ್ರದ ಮತದಾರರ ಜೊತೆ ಮಾತಿಗಿಳಿದರೆ ಗೊತ್ತಾಗುತ್ತದೆ.

ಹಿಂದಿನ ಚುನಾವಣೆ

2004, 2008 ಮತ್ತು 2013ರ ಚುನಾವಣೆಯಲ್ಲಿ ಎಚ್.ಸಿ ಬಾಲಕೃಷ್ಣರವರು ಜೆಡಿಎಸ್‌ನಿಂದ ಜಯ ಗಳಿಸಿದ್ದರು. ಆದರೆ ಆನಂತರ ಅವರು ದೇವೇಗೌಡರ ಕುಟುಂಬದ ವಿರುದ್ಧ ಸಿಡಿದೆದ್ದು ಹಲವಾರು ಜೆಡಿಎಸ್ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಜಿಗಿದರು. ಆಗ ಕಾಂಗ್ರೆಸ್‌ನಲ್ಲಿದ್ದ ಎ.ಮಂಜುನಾಥ್‌ರವರು ಅನಿವಾರ್ಯವಾಗಿ ಜೆಡಿಎಸ್ ಸೇರಿ 2018ರ ಚುನಾವಣೆಯಲ್ಲಿ ಎಚ್.ಸಿ ಬಾಲಕೃಷ್ಣರವರ ವಿರುದ್ಧ 51,425 ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ.

ಮುಂದಿನ ಚುನಾವಣೆ

ಇತ್ತೀಚಿನ ವರ್ಷಗಳಲ್ಲಿ ಜೆಡಿಎಸ್‌ನ ಭದ್ರಕೋಟೆಯಾಗಿದ್ದ ಮಾಗಡಿಯಲ್ಲಿ ಕಾಂಗ್ರೆಸ್ ಸಹ ಪ್ರಬಲ ಪೈಪೋಟಿ ನೀಡುತ್ತಿದೆ. ಕಳೆದ ಚುನಾವಣೆಯಲ್ಲಿ ಸೋಲುಂಡಿರುವ ಬಾಲಕೃಷ್ಣರವರು ಈ ಬಾರಿ ಗೆದ್ದೇ ತೀರುವ ಹಠ ತೊಟ್ಟಿದ್ದಾರೆ. ಇತ್ತೀಚೆಗೆ ಜೆಡಿಎಸ್ ಪಕ್ಷದ ವರ್ಚಸ್ಸು ಮಾತ್ರ ಕೆಲಸ ಮಾಡುತ್ತಿರುವ ಈ ಕ್ಷೇತ್ರದಲ್ಲಿ ಅವರು ತಮ್ಮ ಸ್ವಂತ ವರ್ಚಸ್ಸು ಪ್ರದರ್ಶಿಸಲು ಮುಂದಾಗಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬರುವ ಪ್ರಮುಖ ನಗರ ಬಿಡದಿ ಮಾಗಡಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಬಿಡದಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತ ಸಾಧಿಸಿದೆ. ಒಟ್ಟು 23 ವಾರ್ಡುಗಳ ಪೈಕಿ ಜೆಡಿಎಸ್ 14 ವಾರ್ಡುಗಳಲ್ಲಿ ಗೆದ್ದರೆ, ಕಾಂಗ್ರೆಸ್ 9 ವಾರ್ಡುಗಳಲ್ಲಿ ಗೆದ್ದು ಪೈಪೋಟಿ ನೀಡಿದೆ. ಬಿಜೆಪಿ ಸ್ಪರ್ಧಿಸಿದ್ದ 12 ವಾರ್ಡುಗಳಲ್ಲಿ 12ರಲ್ಲಿಯೂ ಸೋತಿದ್ದು ಮಾತ್ರವಲ್ಲದೆ ಎಲ್ಲಾ ಕಡೆ ಠೇವಣಿ ಕಳೆದುಕೊಂಡಿತ್ತು.

ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಹಳೆ ಮೈಸೂರು ಪ್ರಾಂತ್ಯದಲ್ಲಿ ತನ್ನ ಅಸ್ತಿತ್ವ ಗಟ್ಟಿಗೊಳಿಸಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸೇರಿ ಹಲವು ಖಾತೆಗಳಿಗೆ ಮಂತ್ರಿಯಾಗಿರುವ, ರಾಮನಗರದ ಉಸ್ತುವಾರಿಯೂ ಆಗಿರುವ ಡಾ.ಸಿ.ಎನ್ ಅಶ್ವಥ ನಾರಾಯಣ್‌ಅವರು ಮಾಗಡಿ ಕ್ಷೇತ್ರದಲ್ಲಿ ಬಿಜೆಪಿ ಬೆಳೆಸಲು ಯತ್ನಿಸುತ್ತಿದ್ದಾರೆ. ಅವರು ಬೆಂಗಳೂರಿನ ಮಲ್ಲೇಶ್ವರಂ ಕ್ಷೇತ್ರದಿಂದ ಆಯ್ಕೆಯಾಗಿದ್ದರೂ ಸಹ ಅವರ ಹುಟ್ಟೂರು ಚಿಕ್ಕಕಲ್ಯ ಮಾಗಡಿ ಕ್ಷೇತ್ರಕ್ಕೆ ಸೇರುತ್ತದೆ. ಆ ಭಾಗವಾಗಿಯೇ ಇತ್ತೀಚೆಗೆ ಸಾರ್ವಜನಿಕ ಸಭೆಯಲ್ಲಿ ಡಿ.ಕೆ ಸುರೇಶ್‌ರವರನ್ನು ಟೀಕಿಸಿ, ಅರ್ಧದಲ್ಲಿಯೇ ಭಾಷಣ ನಿಲ್ಲಿಸುವಂತಾಗಿ ವಿವಾದಕ್ಕೆ ಈಡಾಗಿದ್ದರು.

ಎ.ಮಂಜುನಾಥ್‌

ಎಚ್.ಸಿ ಬಾಲಕೃಷ್ಣರವರು ಆರಂಭದಲ್ಲಿ ಬಿಜೆಪಿಯಿಂದಲೇ ಗೆದ್ದಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಾಲಕೃಷ್ಣರ ಎದುರು ಪಿ ನಾಗರಾಜುರವರು ಬಿಜೆಪಿಯಿಂದ ಸ್ಪರ್ಧಿಸಿ 50 ಸಾವಿರದಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಆದರೆ ಆನಂತರದ ವರ್ಷಗಳಲ್ಲಿ ಇಲ್ಲಿ ಬಿಜೆಪಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. 2018ರಲ್ಲಂತೂ ಬಿಜೆಪಿಗೆ 6 ಸಾವಿರ ಚಿಲ್ಲರೆ ಮತಗಳು ಮಾತ್ರ ಬಿದ್ದಿವೆ. ಇಲ್ಲಿನ ಶಾಸಕರಾದ ಎ.ಮಂಜುರವರು ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಸಹ ಅಲ್ಲಲ್ಲಿ ಹರಿದಾಡುತ್ತಿವೆ. ಆದರೆ ಅವರು ಅದನ್ನು ನಿರಾಕರಿಸಿದ್ದು ಅಶ್ವಥ್ ನಾರಾಯಣ್ ಜೊತೆ ಸ್ನೇಹವಿದೆ ಹೊರತು ಜೆಡಿಎಸ್ ತೊರೆಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ 2023ರ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಒಂದು ವೇಳೆ ಎ.ಮಂಜುರವರು ಜೆಡಿಎಸ್ ತೊರೆದಲ್ಲಿ ಪರಿಸ್ಥಿತಿ ಬದಲಾಗಬಹುದು.

ಮಾಗಡಿ ಜನರು ಎದುರಿಸುತ್ತಿರುವ ಸಮಸ್ಯೆಗಳು

ಮಾಗಡಿ ಬೆಂಗಳೂರಿನ ಪಕ್ಕದಲ್ಲಿಯೇ ಇದ್ದರೂ ಸಹ ದ್ವೀಪದಂತಾಗಿದೆ. ಅಭಿವೃದ್ಧಿ ಕಾಣದಾಗಿದೆ. ಡಿ.ಎಂ ನಂಜುಂಡಪ್ಪ ವರದಿಯ ಪ್ರಕಾರ ಹಿಂದುಳಿದ ತಾಲ್ಲೂಕುಗಳ ಪಟ್ಟಿಯಲ್ಲಿದ್ದ ಮಾಗಡಿ ಇಂದಿಗೂ ಹಿಂದುಳಿದ ಸ್ಥಿತಿಯಲ್ಲಿಯೇ ಇರುವುದು ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಯಾವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇಲ್ಲಿ ವಾಸವಿರುವುದಿಲ್ಲ, ಎಲ್ಲರೂ ಬೆಂಗಳೂರು ಸೇರಿಬಿಡುತ್ತಾರೆ, ಹಾಗಾಗಿ ನಮ್ಮ ಸಮಸ್ಯೆಗಳು ಅವರಿಗೆ ತಲುಪುವುದೇ ಇಲ್ಲ ಎಂಬುದು ಜನರ ಅಳಲು. ಇನ್ನು ಕ್ಷೇತ್ರದ ಯಾವುದೇ ಕಾಮಗಾರಿ ಕೆಲಸಗಳಿದ್ದರೂ, ಆ ಯೋಜನೆಯ ಹಣದಲ್ಲಿ ಶಾಸಕರಿಗೆ ಇಂತಿಷ್ಟು ಪಾಲು ನೀಡಲೇಬೇಕು, ಇಲ್ಲದಿದ್ದಲ್ಲಿ ಅವರು ಭೂಮಿ ಪೂಜೆಗೆ ಬರುವುದಿಲ್ಲ ಎಂಬ ಕೆಟ್ಟ ಭ್ರಷ್ಟ ಸಂಪ್ರದಾಯ ಇಲ್ಲಿದೆ.

ಮಾಗಡಿ ಸಮೀಕ್ಷೆಯ ವಿಡಿಯೋ ನೋಡಿ

ಕುಡಿಯುವ ನೀರಿನ ಸಮಸ್ಯೆ

ಜಿಲ್ಲೆಯ ಜನರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಇಲ್ಲಿನ ಬಹುಮುಖ್ಯ ಸಮಸ್ಯೆಯಾಗಿದೆ. ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಕಲುಷಿತ ನೀರು ಸಂಗ್ರಹವಾಗುತ್ತಿದ್ದು ಅದನ್ನೆ ಜನ ಕುಡಿಯಬೇಕಿದೆ. ಇದುವರೆಗೂ ಹೇಮಾವತಿ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ. ಸುಮಾರು 85 ಕೋಟಿ ರೂ ಬೆಲೆಯ ಪೈಪುಗಳು ಬಂದು ಬಿದ್ದಿವೆ, ನೀರು ಮಾತ್ರ ಬರುತ್ತಿಲ್ಲ. ನೀಲನಕ್ಷೆ ಅಂಗೀಕಾರವಾಗುವ ಮುನ್ನವೆ 283 ಕೆರೆಗಳಿಗೆ ನೀರು ತುಂಬಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಆದರೆ ಪೈಪ್‌ಲೈನ್ ಶುರುವಾದರೂ ಕ್ಷೇತ್ರದಲ್ಲಿನ ಜೆಡಿಎಸ್-ಕಾಂಗ್ರೆಸ್ ನಡುವಿನ ಫೈಟ್‌ನಲ್ಲಿ ಯೋಜನೆ ಹಳ್ಳ ಹಿಡಿದಿದೆ.

ರೈತಾಪಿವರ್ಗದ ಸಂಕಷ್ಟ

ತಿಪ್ಪಗೊಂಡನಹಳ್ಳಿ, ವೈಜಿಗುಡ್ಡ, ಮಂಚನಬೆಲೆ ಎಂಬ ಮೂರು ಜಲಾಶಯಗಳು ತಾಲ್ಲೂಕು ವ್ಯಾಪ್ತಿಯಲ್ಲಿದ್ದರೂ ರೈತರಿಗೆ ಸಮರ್ಪಕ ನೀರಾವರಿ ಯೋಜನೆ ಸಿಕ್ಕಿಲ್ಲ. ಕೆರೆಗಳಿಗೆ ನೀರು ತುಂಬಿಸಿಲ್ಲ. 6-8% ರೈತರು ಸ್ವಂತ ಹಣದಲ್ಲಿ ಕೊಳವೆ ಬಾವಿ ಹಾಕಿಕೊಂಡಿದ್ದಾರೆ. ಉಳಿದವರು ಒಣ ಬೇಸಾಯವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ರೇಷ್ಮೆ, ರಾಗಿ, ಅವರೇಕಾಳು, ತೊಗರಿ, ಭತ್ತ ಇಲ್ಲಿನ ಪ್ರಮುಖ ಬೆಳೆಗಳಾಗಿದ್ದು ಹೈನುಗಾರಿಕೆ ಉಪಕಸುಬಾಗಿದೆ. ಇನ್ನು ಕಷ್ಟಪಟ್ಟು ಬೆಳೆದ ಬೆಳೆ ಮಾರಲು ಮಾಗಡಿಯಲ್ಲಿ ಕನಿಷ್ಟ ಒಂದು ಎಪಿಎಂಸಿ ಸಹ ಇಲ್ಲ. ರಾಮನಗರ ಅಥವಾ ಯಶವಂತಪುರಕ್ಕೆ ಹೋಗಬೇಕಾದ ಕಷ್ಟದಲ್ಲಿದ್ದಾರೆ ರೈತರು.

ಇನ್ನು ಹಸು ಅಥವಾ ಆಡು-ಕುರಿಗಳಿಗೆ ಯಾವುದಾದರೂ ರೋಗ ಬಂದರೆ ಅದರ ಪರೀಕ್ಷೆಗೆ ಬೆಂಗಳೂರಿನ ಹೆಬ್ಬಾಳಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇಲ್ಲೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮಾಡಿದರೆ, ಲ್ಯಾಬ್ ಮಾಡಿದರೆ ಜನರ ಅಲೆದಾಟ ತಡೆಯಬಹುದಿತ್ತು. ಆದರೆ ಅತ್ತ ಗಮನಹರಿಸಲು ಯಾರೂ ಸಿದ್ಧರಿಲ್ಲ. ಆದರೆ ಸದರಿ ಸರ್ಕಾರ ಸಂಸ್ಕೃತ ವಿವಿಯನ್ನು ಕಟ್ಟಲು ಹೊರಟಿದೆ. ಹೊಟ್ಟೆಪಾಡಿಗೆ ಕಷ್ಟವಿರುವಾಗ ಅನುಪಯೋಗಿ ಸಂಸ್ಕೃತ ವಿವಿ ಏಕೆ ಎಂಬುದು ಹಲವು ಜನರ ಅಭಿಪ್ರಾಯ.

ಸಂಸ್ಕೃತ ವಿವಿ

ಮರೂರು ಹ್ಯಾಂಡ್‌ಪೋಸ್ಟ್‌ಅನ್ನು ಕೈಗಾರಿಕಾ ಪ್ರದೇಶ ಮಾಡುತ್ತೇವೆ ಎಂದು ಎಲ್ಲಾ ರಾಜಕಾರಣಿಗಳು ಹೇಳುತ್ತಿದ್ದರು. ಆದರೆ ಅದು ಆಗಲಿಲ್ಲ. ಬದಲಿಗೆ ಮರಡಿಗುಡ್ಡೆ ಅರಣ್ಯ ಪ್ರದೇಶದ ವಿಸ್ಕೂರು ವಲಯದ, ತಿಪ್ಪಸಂದ್ರ ಹೋಬಳಿ ಬಳಿ ಸಂಸ್ಕೃತ ವಿವಿ ನಿರ್ಮಾಣವಾಗುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 100 ಎಕರೆ ಭೂಮಿ ಮತ್ತು 359 ಕೋಟಿ ರೂ ಮಂಜೂರು ಮಾಡುವುದಾಗಿ ಘೋಷಿಸಿದೆ. ಇದರಲ್ಲಿ ಏನಿಲ್ಲ ಅಂದರೂ 150 ಕೋಟಿ ರೂಗಳು ಭ್ರಷ್ಟ ರಾಜಕಾರಣಿಗಳ ಪಾಲಾಗುತ್ತದೆ ಎಂಬುದು ಕ್ಷೇತ್ರದ ಆಳ-ಅಗಲ ಬಲ್ಲವರ ಆರೋಪ.

ಮಾಗಡಿಯಲ್ಲಿನ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಅವುಗಳ ಅಭಿವೃದ್ಧಿಗೆ ಮುಂದಾಗಬೇಕಿದೆ. ಈಗಾಗಲೇ ಹೇಳಿದಂತೆ ರೈತರಿಗೆ ಎಪಿಎಂಸಿ, ಪಶು ವಿಶ್ವವಿದ್ಯಾಲಯ, ಯುವಕ-ಯುವತಿಯರಿಗೆ ಉದ್ಯೋಗ, ಆದಿವಾಸಿಗಳಿಗೆ ಭೂಮಿ, ವಸತಿ, ಇಡೀ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರು ಬೇಕು ಎಂಬ ಆಗ್ರಹ ಕೇಳುತ್ತಿರುವ ಸಂದರ್ಭದಲ್ಲಿ ಯಾರೂ ಕೇಳದ ಸಂಸ್ಕೃತ ವಿವಿ ಏಕೆ ಎಂಬುದೇ ಜನರಿಗೆ ಅರ್ಥವಾಗುತ್ತಿಲ್ಲ.

ಸಂಸ್ಕೃತ ವಿವಿ ಬೇಕೇಬೇಕೆಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹಠ ಹಿಡಿದಿದ್ದಾರೆ. ಅದಕ್ಕೆ ಕ್ಷೇತ್ರದ ಹಾಲಿ ಶಾಸಕ ಎ.ಮಂಜುನಾಥ್ ದನಿಗೂಡಿಸಿದ್ದಾರೆ. ಸಂಸ್ಕೃತ ವಿವಿ ಇಡೀ ದೇಶಕ್ಕೆ ಬೇಕಾಗಿದೆ, ಮಾಗಡಿಯಲ್ಲಿ ಜಾಗವಿರುವುದರಿಂದ ಇಲ್ಲಿ ಕಟ್ಟುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್‌ನ ಎಚ್.ಸಿ ಬಾಲಕೃಷ್ಣರವರು 25 ಎಕರೆ ಜಾಗದಲ್ಲಿ 30 ಕೋಟಿ ರೂ ವೆಚ್ಚದಲ್ಲಿ ಸಂಸ್ಕೃತ ವಿವಿ ಬೇಕೇ ಹೊರತು, 359 ಕೋಟಿ ರೂ ವೆಚ್ಚದಲ್ಲಿ ಅಶ್ವಥ್ ನಾರಾಯಣ್‌ರನ್ನು ಮೆಚ್ಚಿಸಲು ಬೇಕಿಲ್ಲ ಎಂದು ಟೀಕಿಸಿದ್ದಾರೆ.

ಆದಿವಾಸಿಗಳ ದಾರುಣ ಸ್ಥಿತಿ

ಇರುಳಿಗರು, ಸೋಲಿಗರು, ಶಿಳ್ಳೆ ಕ್ಯಾತರು, ದೊಂಬಿದಾಸರು, ಕಾಡುಗೊಲ್ಲರು ಇಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಸಹ ಹಿಂದಿನ ಶೋಚನೀಯ ಪರಿಸ್ಥಿತಿಯಲ್ಲಿಯೇ ದಿನದೂಡುತ್ತಿದ್ದಾರೆ. ಕನಿಷ್ಟ ಮೂಲ ಸೌಲಭ್ಯಗಳಿಂದ ಅವರು ವಂಚಿತರಾಗಿದ್ದಾರೆ. ಇರುಳಿಗ ಜನಾಂಗ ಇರುವ ಹೂಜಿಗಲ್ಲು ಎಂಬ ಜಾಗಕ್ಕೆ ಬೈಕ್‌ನಲ್ಲಿ ಸಹ ಹೋಗಲು ರಸ್ತೆಯಿಲ್ಲ. ಅವರು ಇಂದಿಗೂ ಅಲ್ಲಿನ ಬಾವಿಗಳಲ್ಲಿ ಇರುವ ಕೊಳಚೆ ನೀರನ್ನು ಕುಡಿದು ಬದುಕುತ್ತಿದ್ದಾರೆ. ಕೆಲ ಊರುಗಳಲ್ಲಿ ಆ ನೀರು ಕುಡಿಯಲು ಸಹ ಬಿಡದೆ ಬೇಲಿ ಹಾಕಿ ಬಹಿರಂಗ ಅಸ್ಪೃಶ್ಯತೆ
ಆಚರಿಸಲಾಗುತ್ತಿದೆ. ಇನ್ನು ಅವರಿಗೆ ಮನೆ, ಹಕ್ಕುಪತ್ರ ಎಲ್ಲ ದೂರದ ಮಾತು. ದನಿಯಿಲ್ಲದ ಈ ಜನಾಂಗದ ಕೂಗು ಯಾರಿಗೂ ಕೇಳದಿರುವುದು ದೊಡ್ಡ ದುರಂತವಾಗಿದೆ.

ಕಿರಿದಾಗುತ್ತಿರುವ ಅರಣ್ಯ ಪ್ರದೇಶ

ಗುಡ್ಡಗಾಡು ಪ್ರದೇಶದ ಮಾಗಡಿಯಲ್ಲಿ ಹಲವಾರು ಪ್ರವಾಸಿತಾಣಗಳಿವೆ. ಆದರೆ ಪ್ರವಾಸೋದ್ಯಮ ಮಾತ್ರ ಅಭಿವೃದ್ಧಿಯಾಗಿಲ್ಲ. ಸಾವನದುರ್ಗ, ಸಿದ್ಧದೇವರ ಬೆಟ್ಟ, ಬಂಟರಕುಪ್ಪೆ ಅರಣ್ಯ, ಅದರಂಗಿ ಅರಣ್ಯದಂತಹ ಸಮೃದ್ಧ ಕಾಡು ಸಂಪತ್ತು ತಾಲ್ಲೂಕಿನಲ್ಲಿದೆ. ಒಟ್ಟು 10,600 ಎಕರೆ ಇದ್ದ ಅರಣ್ಯ ಈಗ ಕೇವಲ 6,000 ಎಕರೆಗೆ ಇಳಿದಿದೆ ಅಂದರೆ ಅಕ್ರಮ ಮರ ಸಾಗಾಣಿಕೆ, ಒತ್ತುವರಿ ಯಾವ ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ನೀವೇ ಊಹಿಸಿ. ಇಲ್ಲಿನ ಸರ್ಕಾರಿ ಭೂಮಿ ಬೆಂಗಳೂರು ಶ್ರೀಮಂತರ ಪಾಲಾಗುತ್ತಿದೆ. ಬೆಟ್ಟಗುಡ್ಡಗಳು ನಶಿಸುತ್ತಿವೆ. ಅರಣ್ಯ ನಾಶ ಎಗ್ಗಿಲ್ಲದೆ ನಡೆಯುತ್ತಿದೆ. ಸಾವಿರಾರು ಮರ ನೆಟ್ಟ ಆ ತಾಯಿ ಸಾಲುಮರದ ತಿಮ್ಮಕ್ಕನನ್ನು ಹೊಗಳುವವರೆ ಈ ಕ್ರೌರ್ಯದಲ್ಲಿ ಭಾಗಿಯಾಗಿರುವುದು ವಿಪರ್ಯಾಸ.

ಜಾತಿವಾರು ಮತಗಳು

ಮಾಗಡಿ ಕ್ಷೇತ್ರದಲ್ಲಿ ಒಕ್ಕಲಿಗರೆ ಬಹುಸಂಖ್ಯಾತರಾಗಿದ್ದು, ಸುಮಾರು 70,000 ಮತದಾರರಿದ್ದು ಅವರೆ ನಿರ್ಣಾಯಕರಾಗಿದ್ದಾರೆ. ದಲಿತರು 29,000-30,000 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಸುಮಾರು 16,000 ದಷ್ಟಿರುವ ವೀರಶೈವರು ಮೂರನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಮುಸ್ಲಿಮರಿದ್ದು (13,000) ಉಳಿದ ಮತದಾರರು ಇತರ ಹಿಂದುಳಿದ ಸಮುದಾಯಗಳಿಗೆ ಸೇರಿದ್ದಾರೆ.

ಸಾಮಾಜಿಕ ಸ್ಥಿತಿ-ಗತಿ

ಮಾಗಡಿಯಲ್ಲಿ ಹತ್ತಾರು ದೇವಾಲಯಗಳು, ಮಠಮಾನ್ಯಗಳು, ಜೈನ, ಬೌದ್ಧ, ಶೈವ, ವೈಷ್ಣವ ಶ್ರದ್ಧಾ ಕೇಂದ್ರಗಳು ಇದ್ದು ಸೌಹಾರ್ದತೆಗೆ ಹೆಸರಾಗಿದೆ. ಸರ್ವ ಧರ್ಮದ ಪ್ರಾರ್ಥನಾ ಸ್ಥಳಗಳಿವೆ. ವೀರಾಪುರ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರ ಜನ್ಮಸ್ಥಳವಾಗಿದೆ. ಆದರೆ ಅದು ಸಹ ಸಮರ್ಪಕವಾಗಿ ಅಭಿವೃದ್ಧಿ ಆಗಿಲ್ಲ. ಕಲ್ಯ ಸಾಂಸ್ಕೃತಿಕ ಕ್ಷೇತ್ರವಾಗಿದ್ದು, ಸುತ್ತಮುತ್ತ 18 ವೀರಗಲ್ಲುಗಳು, 20 ಶಾಸನಗಳು ಕಂಡುಬರುವ ಸ್ಥಳಗಳಿವೆ. ಆದರೆ ಅವುಗಳನ್ನು ಸಂರಕ್ಷಿಸುವ ಕೆಲಸ ನಡೆಯುತ್ತಿಲ್ಲ. ಇಲ್ಲಿನ ಕೆಂಪೇಗೌಡರ ಸ್ಮಾರಕಗಳು ಪಾಳು ಬೀಳುತ್ತಿವೆ. 250 ಕೋಟಿ ರೂ ವೆಚ್ಚದಲ್ಲಿ ಕೋಟೆಗೆ ಕಲ್ಲಿನ ಭದ್ರತೆ ಕೊಡಲಾಗಿತ್ತು. ಅದು ಬಿಟ್ಟರೆ ಬೇರೆ ಹೆಚ್ಚಿನ ಕೆಲಸಗಳು ನಡೆಯುತ್ತಿಲ್ಲ. ಮಾಗಡಿಯಲ್ಲಿ ಪ್ರಬಲ ಸಾಮಾಜಿಕ ಪ್ರಗತಿಪರ ಸಂಘಟನೆಗಳ ಪ್ರಭಾವ ಕಡಿಮೆ. ಹಾಗಾಗಿ ಏನಾದರೂ ಬೇಡಿಕೆಗಳಿಲ್ಲಿದ್ದಲ್ಲಿ ಕಾಂಗ್ರೆಸ್-ಬಿಜೆಪಿ ಮಾತ್ರ ಪ್ರತಿಭಟನೆ ಮಾಡಬೇಕಿದೆ ಮತ್ತು ಅವು ತಾರ್ಕಿಕ ಅಂತ್ಯ ಕಾಣುವುದು ಅಷ್ಟರಲ್ಲಿಯೇ ಇದೆ ಎನ್ನುತ್ತಾರೆ ಜನ.


ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರಗಳ ಸಮೀಕ್ಷೆ: ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಎಂಟ್ರಿಗೆ ವೇದಿಕೆ ಸಜ್ಜು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...