Homeಮುಖಪುಟಸಿಎಎ ವಿರೋಧಿ ಹೋರಾಟಗಾರರಿಗೆ ದಂಡ: ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

ಸಿಎಎ ವಿರೋಧಿ ಹೋರಾಟಗಾರರಿಗೆ ದಂಡ: ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

"ಈ ಪ್ರಕ್ರಿಯೆಗಳನ್ನು ಹಿಂತೆಗೆದುಕೊಳ್ಳಿ ಅಥವಾ ಈ ನ್ಯಾಯಾಲಯವು ನಿಗದಿಪಡಿಸಿದ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಪ್ರಕ್ರಿಯೆಯನ್ನು ರದ್ದುಗೊಳಿಸುತ್ತೇವೆ" ಎಂದು ಕೋರ್ಟ್ ತಿಳಿಸಿದೆ.

- Advertisement -
- Advertisement -

2019ರ ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನಾಕಾರರಿಂದ ಆಸ್ತಿ ಜಪ್ತಿ ಮಾಡುವುದಕ್ಕೆ ಉತ್ತರ ಪ್ರದೇಶ ಸರ್ಕಾರ ಯತ್ನಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

“ಈ ಸಂಬಂಧ ಪ್ರಕ್ರಿಯೆಯನ್ನು  ಹಿಂಪಡೆಯಲು ರಾಜ್ಯಕ್ಕೆ ಒಂದು ಅಂತಿಮ ಅವಕಾಶವನ್ನು ನೀಡಲಾಗುವುದು. ಅಥವಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕ್ರಿಯೆಯನ್ನು ರದ್ದುಗೊಳಿಸಲಾಗುವುದು” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

“ನೀವು ಕಾನೂನಿನ ಅಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು. ದಯವಿಟ್ಟು ಇದನ್ನು ಪರಿಶೀಲಿಸಿ, ನಾವು ಫೆಬ್ರವರಿ 18 ರವರೆಗೆ ಒಂದು ಅವಕಾಶವನ್ನು ನೀಡುತ್ತೇವೆ” ಎಂದು ನ್ಯಾಯಾಲಯ ಗಡುವು ನೀಡಿದೆ.

ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಸುತ್ತಾ ಉತ್ತರ ಪ್ರದೇಶ ಸರ್ಕಾರವು “ದೂರುದಾರ, ತೀರ್ಪುಗಾರ ಮತ್ತು ಪ್ರಾಸಿಕ್ಯೂಟರ್” ಎಲ್ಲವೂ ಆಗಿ ವರ್ತಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

“ನೀವು ದೂರುದಾರರಾಗಿದ್ದೀರಿ, ನೀವು ನ್ಯಾಯಾಧೀಶರಾಗಿದ್ದೀರಿ ಮತ್ತು ನಂತರ ನೀವು ಆರೋಪಿಯ ಆಸ್ತಿಯನ್ನು ಜಪ್ತಿ ಮಾಡುತ್ತಿದ್ದೀರಿ” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಯುಪಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರಿಗೆ ಹೇಳಿದ್ದಾರೆ. “ನ್ಯಾಯಾಂಗ ಅಧಿಕಾರಿಯಿಂದ ತೀರ್ಪು ನೀಡಬೇಕು ಎಂದು ನಾವು ನಿರ್ದೇಶಿಸಿರುವಾಗ ಎಡಿಎಂ ಹೇಗೆ ವಿಚಾರಣೆ ನಡೆಸುತ್ತಿದ್ದಾರೆ?” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಪ್ರಶ್ನಿಸಿದ್ದಾರೆ.

“ಈ ಪ್ರಕ್ರಿಯೆಗಳನ್ನು ಹಿಂತೆಗೆದುಕೊಳ್ಳಿ ಅಥವಾ ಈ ನ್ಯಾಯಾಲಯವು ನಿಗದಿಪಡಿಸಿದ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ನಾವು ಪ್ರಕ್ರಿಯೆಯನ್ನು ರದ್ದುಗೊಳಿಸುತ್ತೇವೆ” ಎಂದು ಕೋರ್ಟ್ ತಿಳಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿ ಆಂದೋಲನದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಆ ನಷ್ಟವನ್ನು ವಸೂಲಿ ಮಾಡುವುದಾಗಿ ಜಿಲ್ಲಾಡಳಿತವು ಪ್ರತಿಭಟನಾಕಾರರಿಗೆ ಕಳುಹಿಸಿರುವ ನೋಟಿಸ್ ರದ್ದುಗೊಳಿಸುವಂತೆ ಕೋರಿ ಪರ್ವೈಜ್ ಆರಿಫ್ ಟಿಟು ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸರ್ವಾಧಿಕಾರಿಗಳಂತೆ ನೋಟಿಸ್‌ಗಳನ್ನು ಕಳುಹಿಸಲಾಗಿದೆ ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ. ಆರು ವರ್ಷಗಳ ಹಿಂದೆ 94ನೇ ವಯಸ್ಸಿನಲ್ಲಿ ಸಾವನ್ನಪ್ಪಿದ ವ್ಯಕ್ತಿಗೆ, 90 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ವ್ಯಕ್ತಿಗಳು ಸೇರಿದಂತೆ ಹಲವರಿಗೆ ನೋಟಿಸ್ ಕಳುಹಿಸಿರುವ ನಿದರ್ಶನಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

833 ಹೋರಾಟಗಾರರ ವಿರುದ್ಧ 106 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 274 ವಸೂಲಿ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಗರಿಮಾ ಪ್ರಸಾದ್ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

“274 ನೋಟಿಸ್‌ಗಳಲ್ಲಿ 236 ನೋಟಿಸ್‌ಗಳು ವಸೂಲಾತಿ ಆದೇಶಗಳನ್ನು ಹೊಂದಿವೆ. ಅಲ್ಲದೇ 38 ಪ್ರಕರಣಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ” ಎಂದು ಯುಪಿ ಸರ್ಕಾರದ ವಕೀಲರು ತಿಳಿಸಿದ್ದಾರೆ.

ನ್ಯಾಯಾಂಗ ಅಧಿಕಾರಿಗಳನ್ನು ಕ್ಲೈಮ್ಸ್‌‌ ಟ್ರಿಬ್ಯೂನಲ್‌ಗಳಲ್ಲಿ ನೇಮಿಸಬೇಕು ಎಂದು ನ್ಯಾಯಪೀಠವು 2009 ಮತ್ತು 2018ರಲ್ಲಿ ಎರಡು ತೀರ್ಪುಗಳನ್ನು ನೀಡಿದೆ. ಆದರೆ ನೀವು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳನ್ನು (ಎಡಿಎಂ) ನೇಮಿಸಿದ್ದೀರಿ ಎಂದು ಪೀಠ ಆಕ್ಷೇಪ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಸೂರ್ಯ ಕಾಂತ್ ಮಾತನಾಡಿ, “ಮೇಡಂ ಪ್ರಸಾದ್‌, ಇದು ಕೇವಲ ಸಲಹೆಯಾಗಿದೆ. 2019ರಲ್ಲಿನ ಆಂದೋಲನಕ್ಕೆ ಸಂಬಂಧಿಸಿದಂತೆ ಕಳುಹಿಸಲಾದ ನೋಟಿಸ್‌ಗಳಿಗೆ ಸಂಬಂಧಿಸಿದ ಮನವಿ ಇದಾಗಿದೆ. ಯುಪಿಯಂತಹ ದೊಡ್ಡ ರಾಜ್ಯದಲ್ಲಿ 236 ನೋಟಿಸ್‌ಗಳು ದೊಡ್ಡ ವಿಷಯವಲ್ಲ. ನೀವು ಆಲಿಸದಿದ್ದರೆ, ನಂತರದ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ಸುಪ್ರೀಂ ಕೋರ್ಟ್‌‌ನ ತೀರ್ಪುಗಳನ್ನು ಹೇಗೆ ಅನುಸರಿಸಬೇಕು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ನ್ಯಾಯಾಂಗ ಅಧಿಕಾರಿಯೇ ತೀರ್ಪು ನೀಡಬೇಕು ಎಂದು ನ್ಯಾಯಾಲಯ ಸೂಚಿಸಿರುವಾಗ ಎಡಿಎಂಗಳು ಏಕೆ ಕಲಾಪ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕ್ಲೈಮ್ಸ್‌‌ ನ್ಯಾಯಮಂಡಳಿಗಳು 2011ರಲ್ಲಿ ನೀಡಿದ ಸೂಚನೆಯಂತೆ ಹೊರಡಿಸಲಾದ ಸರ್ಕಾರಿ ಆದೇಶಗಳನ್ನು ಉತ್ತರ ಪ್ರದೇಶ ಸರ್ಕಾರದ ವಕೀಲರು ಉಲ್ಲೇಖಿಸಿದರು. ಇದನ್ನು ಹೈಕೋರ್ಟ್ ತನ್ನ ನಂತರದ ಆದೇಶಗಳಲ್ಲಿ ಅನುಮೋದಿಸಿದೆ ಎಂದು ವಾದಿಸಿದರು.

ನ್ಯಾಯಮೂರ್ತಿ ಚಂದ್ರಚೂಡ್, “ನಾವು ಇತರ ಪ್ರಕ್ರಿಯೆಗಳಿಗೆ ಸಂಬಂಧಿಸಿಲ್ಲ. ಸಿಎಎ ಪ್ರತಿಭಟನೆಗಳ ಸಂದರ್ಭದಲ್ಲಿ ಡಿಸೆಂಬರ್ 2019ರಲ್ಲಿ ಕಳುಹಿಸಲಾದ ನೋಟಿಸ್‌ಗಳಿಗೆ ಮಾತ್ರ ನಾವು ಕಾಳಜಿ ವಹಿಸುತ್ತೇವೆ. ನಮ್ಮ ಆದೇಶಗಳನ್ನು ನೀವು ಬೈಪಾಸ್ ಮಾಡಲು ಸಾಧ್ಯವಿಲ್ಲ. ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ನಾವು ಹೇಳಿರುವಾಗ ನೀವು ಎಡಿಎಂಗಳನ್ನು ಹೇಗೆ ನೇಮಿಸಬಹುದು. ಡಿಸೆಂಬರ್ 2019ರಲ್ಲಿ ಯಾವುದೇ ಪ್ರಕ್ರಿಯೆಗಳನ್ನು ನಡೆಸಲಾಗಿದ್ದರೂ ನ್ಯಾಯಾಲಯವು ನಿಗದಿಪಡಿಸಿದ ಕಾನೂನಿಗೆ ಪ್ರಕ್ರಿಯೆಯು ವಿರುದ್ಧವಾಗಿದೆ” ಎಂದು ತಿಳಿಸಿದ್ದಾರೆ.


ಇದನ್ನೂ ಓದಿರಿ: ಹಿಜಾಬ್‌ಗೆ ಬೆಂಬಲ; ರಾಜ್ಯ ಸರ್ಕಾರವನ್ನು ‘ಸರ್ವಾಧಿಕಾರಿ’ ಎಂದ ಎನ್‌ಸಿಪಿ ಸಂಸದೆ  ಸುಪ್ರಿಯಾ ಸುಲೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಜಯಪುರ: ಗೋ ಸಾಗಾಟಗಾರನ ಮೇಲೆ ಬಜರಂಗದಳದಿಂದ ಥಳಿತ

0
ರಾಜ್ಯದಲ್ಲಿ ಮತ್ತೆ ಗೂಂಡಾಗಿರಿ ವರದಿಯಾಗಿದ್ದು, ದನ-ಕರುಗಳನ್ನು ಸಾಗಾಟ ಮಾಡುವಾಗ ವಾಹನ ತಡೆದು ಯುವಕನಿಗೆ ಬಜರಂಗದಳ ಕಾರ್ಯಕರ್ತರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲ್ಲೂಕಿನ ಸಾರವಾಡ ಬ್ರಿಡ್ಜ್ ಬಳಿ ನಡೆದಿದೆ. ಬಂದೇನವಾಝ್‌...